ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವ ಹಕ್ಕು ರಕ್ಷಣೆಗೆ ಸಮಾನತೆ, ಸ್ವಾತಂತ್ರ್ಯ, ಸಹೋದರತ್ವ ಮೂಲಾಧಾರ

ಮಾನವ ಹಕ್ಕುಗಳ ದಿನಾಚರಣೆಯಲ್ಲಿ ಪ್ರತಿಜ್ಞಾ ವಿಧಿ ಬೋಧಿಸಿದ ಜಿ.ಪಂ. ಸಿಇಒ ಡಾ. ಎ. ಚನ್ನಪ್ಪ
Last Updated 11 ಡಿಸೆಂಬರ್ 2022, 6:54 IST
ಅಕ್ಷರ ಗಾತ್ರ

ದಾವಣಗೆರೆ: ಸಮಾನತೆ, ಸ್ವಾತಂತ್ರ್ಯ ಹಾಗೂ ಸಹೋದರತ್ವ ಇವು ಮಾನವ ಹಕ್ಕುಗಳ ರಕ್ಷಣೆಯ ಮೂಲಾಧಾರ. ಇವುಗಳನ್ನು ನಮ್ಮ ಸಂವಿಧಾನ ಎಲ್ಲರಿಗೂ ನೀಡಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ. ಎ. ಚನ್ನಪ್ಪ ತಿಳಿಸಿದರು.

ಜಿಲ್ಲಾಡಳಿತ ವತಿಯಿಂದ ಜಿಲ್ಲಾ ಆಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಮಾನವ ಹಕ್ಕುಗಳ ದಿನಾಚರಣೆಯಲ್ಲಿ ಅಧ್ಯಕ್ಷತೆ ವಹಿಸಿ, ಪ್ರತಿಜ್ಞಾ ವಿಧಿ ಬೋಧಿಸಿ ಅವರು ಮಾತನಾಡಿದರು.

ಸಂವಿಧಾನದ ಮೂಲಭೂತ ತತ್ವಗಳನ್ನು ಆಧರಿಸಿಯೇ ನಮ್ಮ ದೇಶದಲ್ಲಿ ಎಲ್ಲರಿಗೂ ಹಕ್ಕುಗಳು ಮತ್ತು ಕರ್ತವ್ಯಗಳನ್ನು ನಿಗದಿಪಡಿಸಲಾಗಿದೆ. ಮಗುವಿನ ಹುಟ್ಟಿನಿಂದ ಮೊದಲುಗೊಳ್ಳುವ ಹಕ್ಕುಗಳು, ಮರಣ ಕಾಲದವರೆಗೆ ಜೀವನದುದ್ದಕ್ಕೂ ಹಕ್ಕುಗಳನ್ನು ನಮ್ಮ ಸಂವಿಧಾನ ದಯಪಾಲಿಸಿದೆ. ಮನುಷ್ಯ ಘನತೆಯಿಂದ ಬದುಕು ಸಾಗಿಸಲು ಬೇಕಿರುವ ಮೂಲಭೂತ ಅವಶ್ಯಕತೆಗಳನ್ನು ಪಡೆಯುವುದು ಆತನ ಹಕ್ಕು ಎಂದು ಹೇಳಿದರು.

ಮಾನವ ಜೀವಿಗಳು ಈ ಪ್ರಪಂಚದಲ್ಲಿ ಮುಕ್ತರಾಗಿ ಮತ್ತು ಭೇದ-ಭಾವವಿಲ್ಲದೇ ಬದುಕುವ ಹಕ್ಕು ಹೊಂದಿದ್ದಾರೆ. ಯಾರ ಗುಲಾಮಗಿರಿಯಲ್ಲೂ ಇರದೇ ಸ್ವಂತತ್ರರಾಗಿ ಜೀವಿಸಬೇಕು. ಹಿಂಸೆ ಮತ್ತು ಅಮಾನವೀಯವಾಗಿ ಬೇರೊಬ್ಬರಿಂದ ಶಿಕ್ಷೆಗೆ ಒಳಗಾಗದಂತೆ ಜೀವಿಸಬೇಕು ಎಂಬುದು ಸೇರಿದಂತೆ ಹಲವು ಉದ್ದೇಶಗಳಿವೆ ಎಂದರು.

ಸಮಯಕ್ಕೆ ಸರಿಯಾಗಿ ನ್ಯಾಯ ಸಿಗದಿದ್ದರೂ ಸಹ, ಮಾನವ ಹಕ್ಕುಗಳ ಉಲ್ಲಂಘನೆ ಆದಂತೆ. ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಯೂ ಮಾನವ ಹಕ್ಕುಗಳ ಉಲ್ಲಂಘನೆಗೆ ಪ್ರಮುಖ ಕಾರಣವಾಗಿದೆ ಎಂದು ತಿಳಿಸಿದರು.

ವಕೀಲ ಎಲ್.ಎಚ್. ಅರುಣ ಕುಮಾರ್ ವಿಶೇಷ ಉಪನ್ಯಾಸ ನೀಡಿ, ‘ಎರಡನೇ ಮಹಾಯುದ್ಧ ಸಂದರ್ಭದಲ್ಲಿ ಜಾಗತಿಕವಾಗಿ ನಡೆದ ಸಾಮೂಹಿಕ ಹತ್ಯೆ, ಅನಾಗರಿಕ ಕೃತ್ಯಗಳ ಪರಿಣಾಮವಾಗಿ 1948 ಡಿ. 10 ರಲ್ಲಿ ವಿಶ್ವಸಂಸ್ಥೆ ಮಾನವ ಹಕ್ಕುಗಳ ರಕ್ಷಣೆಗಾಗಿ ನೀತಿಯನ್ನು ಘೋಷಣೆ ಮಾಡಿತು. ಅಂದಿನಿಂದ ಈವರೆಗೂ ಮಾನವ ಹಕ್ಕುಗಳ ರಕ್ಷಣೆ ವಿಷಯ ಹಲವು ಮಜಲುಗಳನ್ನು ಕಂಡಿದೆಯಾದರೂ ಈಗಲೂ ಮಾನವ ಹಕ್ಕುಗಳ ಉಲ್ಲಂಘನೆ ನಿತ್ಯ ನಡೆಯುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಬಾಲಕಾರ್ಮಿಕ ಪದ್ಧತಿ, ಜೀತಪದ್ಧತಿ, ಮಾನವ ಕಳ್ಳಸಾಗಣೆ, ಲೈಂಗಿಕ ಕಿರುಕುಳ, ಎಚ್‍ಐವಿ ಸೋಂಕಿತರಿಗೆ ಮಾಡಲಾಗುವ ತಾರತಮ್ಯ ಇವೆಲ್ಲವೂ ಮಾನವ ಹಕ್ಕುಗಳ ಉಲ್ಲಂಘನೆಯೇ ಆಗಿದೆ ಎಂದರು.

ಕಾರ್ಯಕ್ರಮದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಉಪನಿರ್ದೇಶಕಿ ನಜ್ಮಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ವಾಸಂತಿ ಉಪ್ಪಾರ್, ಕಾನೂನು ಸಲಹೆಗಾರರದ ಹಾಲಪ್ಪ, ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT