ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುರುಬರಿಗೆ ಟಿಕೆಟ್‌ ಕೊಡಿಸದ ಈಶ್ವರಪ್ಪ ರಾಜಕೀಯ ಸನ್ಯಾಸತ್ವ ಪಡೆಯಲಿ: ಸಿದ್ದರಾಮಯ್ಯ

Last Updated 20 ಏಪ್ರಿಲ್ 2019, 11:01 IST
ಅಕ್ಷರ ಗಾತ್ರ

ತ್ಯಾವಣಿಗೆ(ದಾವಣಗೆರೆ ಜಿಲ್ಲೆ): ‘ಇಷ್ಟು ಉದ್ದದ ನಾಲಿಗೆ ಹೊರ ಬಿಡುವ ಶಾಸಕ ಕೆ.ಎಸ್. ಈಶ್ವರಪ್ಪನಿಂದ ಒಬ್ಬ ಕುರುಬನಿಗೂ ಬಿಜೆಪಿ ಟಿಕೆಟ್‌ ಕೊಡಿಸಲು ಸಾಧ್ಯವಾಗಿಲ್ಲ. ಆತ ರಾಜಕೀಯ ಸನ್ಯಾಸತ್ವ ಪಡೆಯಲಿ’ ಎಂದು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್‌–ಜೆಡಿಎಸ್ ಪಕ್ಷಗಳ ಮೈತ್ರಿ ಅಭ್ಯರ್ಥಿ ಎಚ್‌.ಬಿ. ಮಂಜಪ್ಪ ಪರ ತ್ಯಾವಣಿಗೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ರಾಜ್ಯದಲ್ಲಿ ಬಿಜೆಪಿ 27 ಕಡೆ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ. ಆದರೆ ಹಿಂದುಳಿದ, ಅಲ್ಪಸಂಖ್ಯಾತರಿಗೆ ಒಂದೇ ಒಂದು ಟಿಕೆಟ್‌ ಕೊಟ್ಟಿಲ್ಲ. ಮೀಸಲಾತಿ ಇರುವುದರಿಂದ ಎಸ್‌.ಸಿ ಹಾಗೂ ಎಸ್‌.ಟಿ.ಗೆ ಜನರಿಗೆ ಟಿಕೆಟ್‌ ಕೊಟ್ಟಿದ್ದಾರೆ. ಮೀಸಲಾತಿ ಇಲ್ಲದಿದ್ದರೆ ಅದನ್ನೂ ನೀಡುತ್ತಿರಲಿಲ್ಲ. ಕಾಂಗ್ರೆಸ್‌-ಜೆಡಿಎಸ್ ಮೈತ್ರಿ ಪಕ್ಷಗಳು ಹಿಂದುಳಿದ ವರ್ಗದ ಎಂಟು ಜನರಿಗೆ ಟಿಕೆಟ್‌ ಕೊಟ್ಟಿವೆ. ಅದರಲ್ಲಿ ಮೂವರು ಕುರುಬರೂ ಇದ್ದಾರೆ. ಒಬ್ಬ ಕುರುಬ, ಹಿಂದುಳಿದ ವರ್ಗದವರಿಗೆ ಟಿಕೆಟ್‌ ಕೊಡಿಸಲು ಸಾಧ್ಯವಾಗದೇ ಇದ್ದ ಮೇಲೆ ಈಶ್ವರಪ್ಪ ರಾಜಕೀಯ ಪಕ್ಷದಲ್ಲಿ ಇರಬೇಕಾ? ಹಿಂದುಳಿದ ವರ್ಗದವರಿಗೆ ಟಿಕೆಟ್‌ ಕೊಡಿಸಲು ಆಗದ ಇವನೊಬ್ಬ ಲೀಡರಾ? ಮಾನ–ಮರ್ಯಾದೆ ಇದ್ದರೆ ರಾಜಕೀಯ ಸನ್ಯಾಸತ್ವ ಪಡೆಯಲಿ’ ಎಂದು ಕುಟುಕಿದರು.

‘ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರು, ದಲಿತರಲ್ಲಿ ಕೈಮುಗಿದು ಪ್ರಾರ್ಥಿಸುತ್ತೇನೆ; ಒಂದೇ ಒಂದು ಮತವನ್ನೂ ಈ ಬಾರಿ ಬಿಜೆಪಿಗೆ ಹಾಕಬೇಡಿ. ಎಲ್ಲಾ ಜಾತಿಯ ಬಡವರೂ ಕಾಂಗ್ರೆಸ್‌ಗೆ ಆಶೀರ್ವಾದ ಮಾಡಬೇಕು’ ಎಂದು ಮನವಿ ಮಾಡಿದರು.

‘ಕೆಲಸಕ್ಕೆ ಕೂಲಿ ಕೊಡಿ’

‘ನಾವು ಎಲ್ಲಾ ಜನಾಂಗದವರಿಗೂ ಹಲವು ಭಾಗ್ಯಗಳು ಹಾಗೂ ಜನಪರ ಯೋಜನೆಗಳನ್ನು ರೂಪಿಸಿದ್ದೇವೆ. ಹೀಗಿದ್ದರೂ ವಿಧಾನಸಭೆ ಚುನಾವಣೆಯಲ್ಲಿ ನಮ್ಮನ್ನು ಏಕೆ ನೀವು ಕೈಬಿಟ್ಟಿರಿ? ಈಗಲೂ ನಮ್ಮ ಕೈ ಬಿಡುತ್ತೀರಾ? ಕೆಲಸ ಮಾಡಿದವರಿಗೆ ಕೂಲಿ ಕೊಡಬೇಕಲ್ಲವಾ’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದಾಗ, ‘ಕೈಬಿಡಲ್ಲ’ ಎಂದು ಘೋಷಣೆ ಹಾಕಿದ ಜನ ‘ಹೌದು’ ಎಂದು ಗೋಣು ಅಲ್ಲಾಡಿಸಿದರು.

‘ಕೆರೆ ತುಂಬಿಸುವ ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆಗಳನ್ನು ಯಾರು ಮಾಡಿದರು? ಚನ್ನಗಿರಿ ಕ್ಷೇತ್ರಕ್ಕೇ ₹ 2,000 ಕೋಟಿಗೂ ಹೆಚ್ಚು ಅನುದಾನ ಕೊಟ್ಟಿದ್ದೇವೆ. ಎಸ್‌.ಎಸ್‌. ಮಲ್ಲಿಕಾರ್ಜುನ ಎಷ್ಟೊಂದು ಕೆಲಸ ಮಾಡಿದ್ದರು. ಕೆಲಸ ಮಾಡುವವರನ್ನೆಲ್ಲ ನೀವು ಕೈ ಬಿಟ್ಟರೆ ನಾವು ಏನು ಮಾಡಬೇಕು? ಹಿಂದಿನ ಎರಡು ಲೋಕಸಭೆ ಚುನಾವಣೆಗಳಲ್ಲೂ ಅಲ್ಪ ಮತಗಳಿಂದ ಸೋತಿದ್ದ ಮಲ್ಲಿಕಾರ್ಜುನ ಬೇಸರಗೊಂಡು ಈ ಬಾರಿ ಚುನಾವಣೆಗೆ ನಿಲ್ಲಲು ಒಪ್ಪಲಿಲ್ಲ. ಫೋನ್‌ ಮಾಡಿದರೂ ಸಿಗುತ್ತಿರಲಿಲ್ಲ’ ಎಂದು ಸಿದ್ದರಾಮಯ್ಯ, ಮತದಾರರ ತೀರ್ಪಿಗೆ ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT