ದಾವಣಗೆರೆ: ‘ಕಾಂಗ್ರೆಸ್ ಪಕ್ಷದಿಂದ ನಾನು ಎಲ್ಲಿಯೂ ಗುರುತಿಸಿಕೊಳ್ಳುತ್ತಿಲ್ಲ, ಪಕ್ಷದಲ್ಲಿ ಉಳಿಯುವ ಅಭಿಲಾಷೆಯೂ ಇಲ್ಲ. ನಾನಾಗಿಯೇ ರಾಜೀನಾಮೆ ನೀಡಲ್ಲ, ಪಕ್ಷದಿಂದ ಉಚ್ಛಾಟಿಸಿದರೂ ತಲೆ ಕೆಡಿಸಿಕೊಳ್ಳುವುದಿಲ್ಲ’ ಎಂದು ‘ಸ್ವಾಭಿಮಾನಿ ಬಳಗ’ದ ಮುಖಂಡ ಜಿ.ಬಿ.ವಿನಯಕುಮಾರ್ ತಿಳಿಸಿದರು.
‘ಜಿಲ್ಲೆಯಲ್ಲಿ ಅಸಮಾನತೆ ಇದೆ. ಇಲ್ಲಿಯವರೆಗೂ ಅಧಿಕಾರ ನಡೆಸಿರುವ ಕಾಂಗ್ರೆಸ್, ಬಿಜೆಪಿ ಶಾಸಕರು, ಸಚಿವರು ಮತ್ತು ಸಂಸದರೇ ಇದಕ್ಕೆ ಕಾರಣವಾಗಿದ್ದಾರೆ. ಹೀಗಾಗಿ ಬದಲಾವಣೆ ತರುವ ನಿಟ್ಟಿನಲ್ಲಿ ಶೋಷಿತರು ಮತ್ತು ಹಿಂದುಳಿದವರಲ್ಲಿ ರಾಜಕೀಯ ಪ್ರಜ್ಞೆ ಜಾಗೃತಗೊಳಿಸಲು ಪ್ರಯತ್ನಿಸುತ್ತಿದ್ದೇನೆ’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
‘ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಬಿ. ಮಂಜಪ್ಪ ಈಚೆಗೆ ಒಂದು ಕುಟುಂಬದ ಪರವಾಗಿ ಮಾತನಾಡಿದ್ದಾರೆ. ಆದರೆ, ನಾನು ಹಿಂದುಳಿದವರು ಮತ್ತು ಶೋಷಿತರಿಗೆ ಅನ್ಯಾಯವಾಗಿರುವ ಬಗ್ಗೆ ಧ್ವನಿ ಎತ್ತಿದ್ದೇನೆ. ನಾನು ರಾಜಕೀಯವಾಗಿ ಬೆಳೆದರೆ ಅವರಿಗೆ ಮುಳುವಾಗಬಹುದು ಎಂಬ ಅಭದ್ರತೆಯಲ್ಲಿ ನನ್ನ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.
‘ಜಿಲ್ಲೆಗೆ ನಾನು ಅತಿಥಿಯಲ್ಲ, ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರವಾಸ ಮಾಡುತ್ತಿದ್ದೇನೆ. ಶಾಸಕರು, ಸಂಸದರು ಎಷ್ಟು ದಿನ ಕ್ಷೇತ್ರದಲ್ಲಿ ಇರುತ್ತಾರೆ. ಹಿಂದುಳಿದವರ ಮುಂದೆ ಇಂತಹ ಪ್ರಶ್ನೆ ಇಡುತ್ತಾರೆ. ಆದರೆ, ಬೆಳೆದು ನಿಂತವರಿಗೆ ಕೇಳಲ್ಲ’ ಎಂದು ಹೇಳಿದರು.