ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಗೋದಾಮು ಇದ್ದರೂ ಇಲ್ಲ ಬಳಕೆ.. ಡ್ರೈಯರ್‌ಗಳ ಕನವರಿಕೆ...

ರೈತರ ನಿರಾಸಕ್ತಿ, ಗ್ರಾಮ ಮಟ್ಟದಲ್ಲೇ ಗೋದಾಮು ನಿರ್ಮಾಣಕ್ಕೆ ಒತ್ತಾಯ
Last Updated 26 ಸೆಪ್ಟೆಂಬರ್ 2022, 4:28 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲೆಯ ಹಲವೆಡೆ ಕೃಷಿ ಉತ್ಪನ್ನಗಳ ಸಂಗ್ರಹಕ್ಕಾಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ)ಯಿಂದ ಗೋದಾಮುಗಳನ್ನು ನಿರ್ಮಿಸಲಾಗಿದೆ. ಆದರೆ, ಅವುಗಳ ಬಳಕೆಗೆ ರೈತರು ಉತ್ಸಾಹ ತೋರುತ್ತಿಲ್ಲ.

ಹೆಚ್ಚಿನ ಗೋದಾಮುಗಳನ್ನು ದಲ್ಲಾಳಿಗಳು ಹಾಗೂ ಇತರ ಸಂಸ್ಥೆಗಳ ಉತ್ಪನ್ನಗಳ ಬಳಕೆಗೆ ನೀಡಲಾಗಿದೆ.

ಇಲ್ಲಿನ ಎಪಿಎಂಸಿ ಪ್ರಾಂಗಣದಲ್ಲಿ 5 ಗೋದಾಮುಗಳನ್ನು ನಿರ್ಮಿಸಲಾಗಿದೆ. ಅವುಗಳನ್ನು ಸದ್ಯ ಬಾಡಿಗೆ ಆಧಾರದಲ್ಲಿ ಆಹಾರ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ನೀಡಲಾಗಿದೆ.

‘ಸಾಲದ ಕಾರಣ ರೈತರು ತಾವು ಬೆಳೆದ ಉತ್ಪನ್ನಗಳನ್ನು ತಕ್ಷಣಕ್ಕೆ ಮಾರಾಟ ಮಾಡುತ್ತಾರೆ. ಗೋದಾಮುಗಳ ಬದಲಿಗೆ, ಖರೀದಿ ಕೇಂದ್ರ ತೆರೆದರೆ ರೈತರಿಗೆ ಅನುಕೂಲ ಆಗಲಿದೆ’ ಎಂದರು ಜಿಗಳಿಯ ರೈತ ಮಂಜುನಾಥ ಕೆ.ಎನ್‌.

ಖರೀದಿ ಕೇಂದ್ರದಲ್ಲೂ ಹಲವು ಸಮಸ್ಯೆಗಳಿವೆ. ತೇವಾಂಶ ಪರೀಕ್ಷೆ, ಮುಂಗಡ ನೋಂದಣಿ, ಸಾಗಣೆ ವೆಚ್ಚ, ಖರೀದಿ ಮೇಲೆ ಮಿತಿ ಹೇರುವುದು ಸೇರಿ ಹಲವು ತೊಡಕುಗಳಿವೆ. ಇದರಿಂದ ಹೆಚ್ಚಿನ ರೈತರು ಅತ್ತ ಸುಳಿಯುವುದಿಲ್ಲ.ಎಲ್ಲರೂ ಜಿಲ್ಲಾ, ತಾಲ್ಲೂಕು, ಹೋಬಳಿ ಕೇಂದ್ರಕ್ಕೇ ಹೋಗಲು ಆಗುವುದಿಲ್ಲ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗೋದಾಮು ನಿರ್ಮಿಸಬೇಕು ಎಂದು ಅವರು ಒತ್ತಾಯಿಸಿದರು.

‘ಅನೇಕ ರೈತರು ಭತ್ತ, ಮೆಕ್ಕೆಜೋಳದಸಂಗ್ರಹಕ್ಕೆ ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂಬ ಕಾರಣಕ್ಕೆ ಬೇಗನೆ ಮಾರಾಟ ಮಾಡುತ್ತಾರೆ. ಬೆಂಬಲಬೆಲೆ ಯೋಜನೆ ಅಡಿ ಕೃಷಿ ಉತ್ಪನ್ನ ಖರೀದಿಸಿದಾಗ ಸಂಗ್ರಹಿಸಲು ಉಪಯೋಗವಾಗಲಿ ಎಂದೇ ಗೋದಾಮುಗಳನ್ನು ನಿರ್ಮಿಸಲಾಗಿದೆ. ಆದರೆ, ಸರ್ಕಾರ ಈಗ ಬೆಂಬಲಬೆಲೆ ಅಡಿ ಖರೀದಿ ಮಾಡುತ್ತಿಲ್ಲ. ಹೀಗಾಗಿ ಅವು ಉಪಯೋಗವಾಗುತ್ತಿಲ್ಲ’ ಎಂದರು ರೈತ ಮುಖಂಡ ಹುಚ್ಚವ್ವನಹಳ್ಳಿ ಮಂಜುನಾಥ್.

‘ಎಪಿಎಂಸಿಯಲ್ಲಿನ ಗೋದಾಮುಗಳನ್ನು ಆಹಾರ ನಿಗಮಕ್ಕೆ ನೀಡಲಾಗಿದೆ. ಕುಕ್ಕವಾಡ, ತುರ್ಚಘಟ್ಟ ಸೇರಿ ಹಲವೆಡೆ ಎಪಿಎಂಸಿಯಿಂದ ನಿರ್ಮಿಸಲಾಗಿದೆ. ಈ ಭಾಗದಲ್ಲಿ ಪ್ರಮುಖವಾಗಿ ರೈತರು ಭತ್ತ, ಮೆಕ್ಕೆಜೋಳ ಬೆಳೆಯುತ್ತಾರೆ. ಕೊಯ್ಲಿನ ನಂತರ ಸಂಗ್ರಹಿಸಿದರೂ ಉತ್ತಮ ದರ ಸಿಗುವ ನಿರೀಕ್ಷೆ ಇಲ್ಲದ ಕಾರಣ ತಕ್ಷಣ ಮಾರಾಟ ಮಾಡುತ್ತಾರೆ’ ಎಂದು ಎಪಿಎಂಸಿ ವರ್ತಕ ಪ್ರತಿನಿಧಿ ದೊಗ್ಗಳ್ಳಿ ಬಸವರಾಜ್ ವಿವರಿಸಿದರು.

ಎಪಿಎಂಸಿಯಿಂದ ನಿರ್ಮಿಸಲಾದ ಗೋದಾಮುಗಳನ್ನು ಆಹಾರ ನಿಗಮಕ್ಕೆ ನೀಡಲಾಗಿದೆ. ಕೆಲ ಗ್ರಾಮಗಳಲ್ಲಿ ಗೋದಾಮುಗಳನ್ನು ನಿರ್ಮಿಸಲಾಗಿದೆ. ಕೆಲವನ್ನು ಗ್ರಾಮ ಪಂಚಾಯಿತಿ ಹಾಗೂ ಸಹಕಾರ ಸಂಘಗಳು ನಿರ್ವಹಿಸುತ್ತಿವೆ. ಎಪಿಎಂಸಿಗೆ ಬರುವ ಉತ್ಪನ್ನಗಳ ಶೇಖರಣೆಗೆ ಕ್ರಮ ವಹಿಸಲಾಗಿದೆ ಎಂದು ಎಪಿಎಂಸಿ ಕಾರ್ಯದರ್ಶಿ ಕೆ.ಸಿ. ದೊರೆಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ಹೆಚ್ಚಿನ ರೈತರು ಹೊಲಕ್ಕೆ ಬರುವ ವ್ಯಾಪಾರಿಗಳಿಗೆ ಬೆಳೆ ಮಾರಾಟ ಮಾಡುತ್ತಾರೆ. ಭತ್ತ ಮತ್ತು ಮೆಕ್ಕೆಜೋಳವನ್ನು ಸಂಗ್ರಹಿಸುವ ಅಗತ್ಯ ಕಂಡುಬರುವುದಿಲ್ಲ. ದೊಡ್ಡ ಮಟ್ಟದ ಕೃಷಿಕರು ಗೋದಾಮುಗಳ ಉಪಯೋಗ ಪಡೆಯುತ್ತಾರೆ. ಮೆಕ್ಕೆಜೋಳವನ್ನು ಸ್ಥಳೀಯ ಕಾರ್ಖಾನೆ, ಇಲ್ಲವೇ ಕೋಳಿ ಫಾರಂಗಳಿಗೆ ನೀಡುತ್ತಾರೆ. ಗ್ರಾಮೀಣ ಪ್ರದೇಶದಲ್ಲಿ 6 ಹಾಗೂ ಎಪಿಎಂಸಿ ಪ್ರಾಂಗಣದಲ್ಲಿ ವಿವಿಧ ಮೆಟ್ರಿಕ್‌ ಟನ್‌ ಸಾಮರ್ಥ್ಯದ 5 ಗೋದಾಮುಗಳನ್ನು ನಿರ್ಮಿಸಲಾಗಿದೆ ಎಂದು ಅವರು ತಿಳಿಸಿದರು.

ಡ್ರೈಯರ್‌ಗಳನ್ನು ಸ್ಥಾಪಿಸಿ

ಆರ್ಥಿಕವಾಗಿ ಸಬಲರಲ್ಲದ ರೈತರುಕೃಷಿ ಉತ್ಪನ್ನಗಳನ್ನು ಸಂಗ್ರಹಿಸುವುದು ಕಡಿಮೆ. ಹೆಚ್ಚಿನವರು ಮಳೆಗಾಲದಲ್ಲಿ ಉತ್ಪನ್ನಗಳನ್ನು ಸಂಗ್ರಹಿಸಲು ಉತ್ಸುಕತೆ ತೋರುತ್ತಾರೆ. ಆಗ ಗೋದಾಮುಗಳಿಗಿಂತ ಉತ್ಪನ್ನಗಳನ್ನು ಒಣಗಿಸುವ (ಡ್ರೈಯರ್‌ಗಳ) ಅಗತ್ಯ ಹೆಚ್ಚು. ಆದರೆ ಜಿಲ್ಲೆಯಲ್ಲಿ ಡ್ರೈಯರ್‌ಗಳ ಸೌಲಭ್ಯ ಇಲ್ಲ ಎನ್ನುತ್ತಾರೆ ರೈತ ಮುಖಂಡ ತೇಜಸ್ವಿ ವಿ. ಪಟೇಲ್‌.

ಯಾವ ಮಟ್ಟದ ತೇವಾಂಶ ಇರಬೇಕು ಎಂಬುದನ್ನು ಆಧರಿಸಿ ಡ್ರೈಯರ್‌ಗಳನ್ನು ಬಳಸಬೇಕು. ಹೋಬಳಿ ಮಟ್ಟದಲ್ಲಿಡ್ರೈಯರ್‌ಗಳನ್ನು ಸ್ಥಾಪಿಸಿದರೆ ರೈತರಿಗೆ ಅನುಕೂಲವಾಗಲಿದೆ. ಗೋದಾಮುಗಳು ಸದ್ಯ ರೈತರಿಗಿಂತ ಖರೀದಿದಾರರಿಗೇ ಹೆಚ್ಚು ಉಪಯೋಗವಾಗುತ್ತಿದೆ.ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗೋದಾಮುಗಳನ್ನು ನಿರ್ಮಿಸಬೇಕು ಎಂದು ಅವರು ಒತ್ತಾಯಿಸಿದರು.

ಒಮ್ಮೆ ಕೃಷಿ ಉತ್ಪನ್ನಗಳನ್ನು ಮಾರಾಟಕ್ಕೆ ತಂದರೆ ಮತ್ತೆ ವಾಪಸ್‌ ಒಯ್ಯಲು ರೈತರು ಮನಸ್ಸು ಮಾಡುವುದಿಲ್ಲ. ಅದು ವೆಚ್ಚದಾಯಕ ಎಂಬ ಕಾರಣಕ್ಕೆ ಹಲವು ರೈತರು ಸಿಕ್ಕ ದರಕ್ಕೆ ಮಾರುತ್ತಾರೆ. ಈಗ ಸಾರಿಗೆ ವೆಚ್ಚವೂ ಅಧಿಕ ಎಂಬ ಕಾರಣ ಸಂಗ್ರಹಕ್ಕೆ ಮುಂದಾಗುವುದಿಲ್ಲ.ಬೆಂಬಲಬೆಲೆ ಯೋಜನೆಯಡಿ ಪ್ರಾಂತ್ಯವಾರು ಖರೀದಿ ಕೇಂದ್ರ ತೆರೆದರೆ ಗೋದಾಮುಗಳ ಬಳಕೆಯಾಗಲಿದೆ ಎಂದು ಅವರು ಹೇಳಿದರು.

ಅಡಿಕೆ ಸಂಗ್ರಹಣೆಗೆ ಬೇಕಿದೆ ಗೋದಾಮು

ಎಚ್‌.ವಿ. ನಟರಾಜ್‌

ಚನ್ನಗಿರಿ:ಪಟ್ಟಣದಲ್ಲಿ ಕೃಷಿ ಉತ್ಪನ್ನ ಸಂಗ್ರಹಿಸಿಡಲು ಎಪಿಎಂಸಿಯಿಂದ 2,000 ಮೆಟ್ರಿಕ್ ಟನ್ ಸಾಮರ್ಥ್ಯದ 2 ಗೋದಾಮು ಹಾಗೂ 1,000 ಮೆಟ್ರಿಕ್ ಟನ್ ಸಾಮರ್ಥ್ಯದ 3 ಗೋದಾಮುಗಳನ್ನು ಸಂತೇಬೆನ್ನೂರಿನಲ್ಲಿ ನಿರ್ಮಿಸಲಾಗಿದೆ.

ಪಟ್ಟಣದಲ್ಲಿನ ಒಂದು ಗೋದಾಮನ್ನು ಆಹಾರ ಇಲಾಖೆಗೆ ಬಾಡಿಗೆಗೆ ನೀಡಲಾಗಿದ್ದು, ಇನ್ನೊಂದನ್ನು ಎಪಿಎಂಸಿ ನಿರ್ವಹಿಸುತ್ತಿದೆ. ಉಳಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ 50 ಹಾಗೂ 20 ಮೆಟ್ರಿಕ್ ಟನ್ ಸಾಮರ್ಥ್ಯದ 36 ಗೋದಾಮುಗಳನ್ನು ಎಪಿಎಂಸಿಯಿಂದ ನಿರ್ಮಿಸಲಾಗಿದೆ.

ತಾಲ್ಲೂಕಿನಲ್ಲಿ ಪ್ರಮುಖವಾಗಿ ಅಡಿಕೆ ಬೆಳೆಯುತ್ತಿರುವುದರಿಂದ ಅಡಿಕೆ ಸಂಗ್ರಹಣೆಗೆ ಗೋದಾಮುಗಳ ಅಗತ್ಯ ಇದೆ. ಅಧಿಕ ಸಾಮರ್ಥ್ಯದ ಗೋದಾಮು ನಿರ್ಮಾಣಕ್ಕೆ ಅಗತ್ಯ ಅನುದಾನ ಬಿಡುಗಡೆಗಾಗಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಹೊಸ ಗೋದಾಮುಗಳನ್ನು ನಿರ್ಮಿಸಲು ಜಾಗದ ಕೊರತೆ ಇದೆ. ಗೋದಾಮು ನಿರ್ಮಾಣಕ್ಕೆ ಜಾಗವನ್ನು ನೀಡಬೇಕು ಎಂಬ ಬೇಡಿಕೆಯೂ ಸಲ್ಲಿಕೆಯಾಗಿದೆ ಎಂದು ಎಪಿಎಂಸಿ ಕಾರ್ಯದರ್ಶಿ ಸೋಮಶೇಖರ್ ಮಾಹಿತಿ ನೀಡಿದರು.

ಗೋದಾಮುಗಳು ಬಳಕೆಯಾಗಲಿ

ಇನಾಯತ್‌ ಉಲ್ಲಾ ಟಿ.

ಹರಿಹರ: ತಾಲ್ಲೂಕಿನ ಎಪಿಎಂಸಿ ಆವರಣದಲ್ಲಿ 11,600 ಮೆಟ್ರಿಕ್ ಟನ್ ಸಾಮರ್ಥ್ಯದ ಗೋದಾಮುಗಳಿವೆ. ಆದರೆ ಅವುಗಳಲ್ಲಿ
ಬಹುತೇಕ ಖಾಲಿ ಇವೆ. ಇನ್ನು ಗ್ರಾಮೀಣ ಭಾಗದಲ್ಲಿ 23 ಗೋದಾಮುಗಳನ್ನು ನಿರ್ಮಿಸಲಾಗಿದೆ. ಅವೂ ಬಳಕೆಯಾಗುತ್ತಿಲ್ಲ ಎಂಬ ದೂರು ಇದೆ.

ತಾಲ್ಲೂಕಿನಲ್ಲಿ ಭತ್ತ ಮತ್ತು ಮೆಕ್ಕೆಜೋಳ ಪ್ರಧಾನ ಬೆಳೆಯಾಗಿದ್ದು, ಬಹುತೇಕ ರೈತರು ತಕ್ಷಣ ಮಾರಾಟ ಮಾಡುತ್ತಾರೆ. ಹೀಗಾಗಿ ಅವು ಬಳಕೆಯಾಗುತ್ತಿಲ್ಲ. ಕೋಟಿಗಟ್ಟಲೆ ಅನುದಾನ ಬಳಸಿ ನಿರ್ಮಿಸಿದ ಗೋದಾಮುಗಳು ಖಾಲಿ ಉಳಿದಿರುವುದು ವಿಪರ್ಯಾಸ ಎನ್ನುತ್ತಾರೆ ಎಪಿಎಂಸಿ ಮಾಜಿ ಅಧ್ಯಕ್ಷ ಮಂಜುನಾಥ ಪಟೇಲ್.

ಭಾನುವಳ್ಳಿ ಗ್ರಾಮದಲ್ಲಿರುವ ಗೋದಾಮನ್ನು ಹೊಲಿಗೆ ತರಬೇತಿಗೆ ನೀಡಲಾಗಿತ್ತು. ಅದರ ಚಟುವಟಿಕೆಯೂ ನಿಂತಿದೆ. ರೈತರಿಗೆ ನೀಡಿದರೆ ಬಳಕೆಯಾಗುತ್ತದೆ ಎನ್ನುತ್ತಾರೆ ಕರ್ನಾಟಕ ರೈತ ಸಂಘ (ಪುಟ್ಟಣ್ಣಯ್ಯ ಬಣ)ದ ತಾಲ್ಲೂಕು ಘಟಕ ಅಧ್ಯಕ್ಷ ಕೊಟ್ರೇಶ್ ಎಚ್.ಬಿ.

ಬಾಡಿಗೆಗೆ ಮೀಸಲಾದ ಗೋದಾಮು

ಎನ್‌.ಕೆ. ಆಂಜನೇಯ

ಹೊನ್ನಾಳಿ: ತಾಲ್ಲೂಕಿನಲ್ಲಿ2,000 ಮೆಟ್ರಿಕ್ ಟನ್ ಸಂಗ್ರಹ ಸಾಮರ್ಥ್ಯದ ಒಂದು ಗೋದಾಮು, 1,000 ಮೆಟ್ರಿಕ್ ಟನ್ ಸಾಮರ್ಥ್ಯದ ಒಂದು ಗೋದಾಮು, 400 ಮೆಟ್ರಿಕ್ ಟನ್ ಸಾಮರ್ಥ್ಯದ ಒಂದು ಗೋದಾಮು ಇದೆ. ಆಹಾರ ನಿಗಮದ ಧಾನ್ಯ ಸಂಗ್ರಹಿಸಲು ಎರಡು ಗೋದಾಮುಗಳನ್ನು ಮೀಸಲಿಡಲಾಗಿದೆ.

ಎಪಿಎಂಸಿ ಆವರಣದಲ್ಲಿ 8 ಚಿಕ್ಕ ಗೋದಾಮುಗಳಿವೆ. 7 ಗೋದಾಮುಗಳನ್ನು ಬಾಡಿಗೆಗೆ ನೀಡಲಾಗಿದೆ. ಒಂದು ಗೋದಾಮು ಮಾತ್ರ ಖಾಲಿ ಇದೆ ಎಂದು ಎಪಿಎಂಸಿ ಸಹಾಯಕ ನಿರ್ದೇಶಕ ಜೆ.ಪ್ರಭು ಮಾಹಿತಿ ನೀಡಿದರು.

ರೈತರು ಮನೆಗಳಲ್ಲಿಯೇ ಅಡಿಕೆ, ಆಹಾರ ಧಾನ್ಯಗಳನ್ನು ಸಂಗ್ರಹ ಮಾಡಿಕೊಳ್ಳುತ್ತಾರೆ. ಹೆಚ್ಚಿನವರು ಗೋದಾಮು ಬಳಸುವುದಿಲ್ಲ ಎಂದು ಅವರು ಹೇಳುತ್ತಾರೆ.

ಡ್ರೈಯರ್‌ ಘಟಕ ಸ್ಥಾಪಿಸುವ ಯೋಜನೆ ಸದ್ಯಕ್ಕಿಲ್ಲ. ಶೀತಲೀಕರಣ ಘಟಕ ಸ್ಥಾಪಿಸಲು ಜಾಗವನ್ನು ಗುರುತಿಸಲಾಗಿದೆ. ಅನುದಾನ ಬಂದ ಕೂಡಲೇ ಸ್ಥಾಪಿಸಲಾಗುವುದು.

–ಕೆ.ಸಿ. ದೊರೆಸ್ವಾಮಿ, ಎಪಿಎಂಸಿ ಕಾರ್ಯದರ್ಶಿ

ಕೃಷಿ ಉತ್ಪನ್ನಗಳಿಗೆ ಗೋದಾಮುಗಳನ್ನು ನಿರ್ಮಿಸಿದ್ದರೂ ರೈತರಿಗೆ ಪ್ರಯೋಜನವಾಗುತ್ತಿಲ್ಲ. ಅವುಉಳ್ಳವರ ಪಾಲಾಗಿದೆ. 500 ಮನೆಗಳಿರುವ, 2000 ಎಕರೆ ಪ್ರದೇಶದ ಜಮೀನು ಇರುವ ಗ್ರಾಮಗಳಲ್ಲಿ ಸರ್ಕಾರ ಗೋದಾಮುಗಳನ್ನು ನಿರ್ಮಿಸಿದರೆ ಅನುಕೂಲವಾಗಲಿದೆ.

–ಬಲ್ಲೂರು ರವಿಕುಮಾರ್‌, ರಾಜ್ಯ ಕಾರ್ಯದರ್ಶಿ, ರೈತ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT