ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಿಗೂ ಬಾಲ್ಯ ಅನುಭವಿಸುವ ಹಕ್ಕಿದೆ- ನ್ಯಾಯಾಧೀಶ ಪ್ರವೀಣ್ ನಾಯಕ್

ಜಾಗೃತಿ ಜಾಥಾಕ್ಕೆ ಚಾಲನೆ
Last Updated 7 ಜನವರಿ 2022, 13:51 IST
ಅಕ್ಷರ ಗಾತ್ರ

ದಾವಣಗೆರೆ: ‘ಸಂವಿಧಾನದ ಆಶಯದಂತೆ ಎಲ್ಲಾ ಮಕ್ಕಳಿಗೂ ಬಾಲ್ಯ ಅನುಭವಿಸುವ ಹಕ್ಕಿದೆ. ಅದನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರವೀಣ್ ನಾಯಕ್ ಹೇಳಿದರು.

ಜಿಲ್ಲಾ ಕಾರ್ಮಿಕ ಅಧಿಕಾರಿ ಕಚೇರಿ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬಾಲ ಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ (ನಿಷೇಧ ಹಾಗೂ ನಿಯಂತ್ರಣ) ಕಾಯ್ದೆ ಕುರಿತ ಸಂಚಾರಿ ರಥದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಸಂವಿಧಾನದ 21ನೇ ವಿಧಿಯಲ್ಲಿ ವ್ಯಕ್ತಿಗೆ ಜೀವಿಸುವ ಹಕ್ಕು ಮತ್ತು ಸ್ವಾತಂತ್ರ್ಯದ ಹಕ್ಕು ಇದೆ. ಅದರಂತೆ ಎಲ್ಲಾ ಮಕ್ಕಳಿಗೂ ಬಾಲ್ಯವನ್ನು ಅನುಭವಿಸುವ ಅಧಿಕಾರ ಇದೆ. ಇದನ್ನು ರಕ್ಷಿಸುವ ನಿಟ್ಟಿನಲ್ಲಿ ಸರ್ಕಾರ ವಿವಿಧ ಕಾನೂನುಗಳನ್ನು ಜಾರಿಗೊಳಿಸಿದೆ. 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕಡ್ಡಾಯ ಉಚಿತ ಶಿಕ್ಷಣ, ಸೂಕ್ತ ಆಹಾರ ನೀಡುವಲ್ಲಿ ನಿರಂತರ ಕಾರ್ಯ ನಿರ್ವಹಿಸುತ್ತಿದೆ’ ಎಂದರು.

ಬಾಲ್ಯಾವಸ್ಥೆ ಮತ್ತು ಕಿಶೋರಾವಸ್ಥೆ ಕಾರ್ಮಿಕ ಪದ್ಧತಿ ನಿರ್ಮೂಲನಾ ಸಂಚಾರ ಜಾಗೃತಿ ಜಾಥಾ ಜಿಲ್ಲೆಯಾದ್ಯಂತ ಜ.14ರವರೆಗೆ ಸಂಚರಿಸಲಿದೆ. ಎಲ್ಲರೂ ಈ ಕಾರ್ಯಕ್ರಮಕ್ಕೆ ಕೈಜೋಡಿಸಬೇಕು ಎಂದು ಪ್ರವೀಣ್ ನಾಯಕ್ ಹೇಳಿದರು.

ಕಲಬುರಗಿ ಪ್ರಾದೇಶಿಕ ಉಪ ಕಾರ್ಮಿಕ ಆಯಕ್ತ ಡಿ.ಜಿ ನಾಗೇಶ್, ‘ಪ್ರಪಂಚದ ಎಲ್ಲಾ ದೇಶಗಳು ಆರ್ಥಿಕ, ಸಾಮಾಜಿಕವಾಗಿ ಮುನ್ನಡೆಯುತ್ತಿವೆ. ಇಂದು ಮಾನವ ಹಕ್ಕುಗಳು ಅತಿ ಪ್ರಮುಖವಾಗಿದೆ. ದಕ್ಷಿಣ ಏಷ್ಯಾ, ಆಫ್ರಿಕಾದಂತಹ ಖಂಡಗಳಲ್ಲಿ ಭಾರತ ಸೇರಿ ಸಾಕಷ್ಟು ರಾಷ್ಟ್ರಗಳಲ್ಲಿ ಇನ್ನೂ ಬಾಲಕಾರ್ಮಿಕ ಪದ್ಧತಿ ಜೀವಂತವಿದೆ. ಸಾಮಾಜಿಕ ವ್ಯವಸ್ಥೆಗೆ ಕೊಡುಗೆಯಾಗಿ ಮಾರ್ಪಡಬೇಕಾದಂತಹ ಸಂದರ್ಭದಲ್ಲಿ ಮಕ್ಕಳು ಕೂಲಿಯಾಳುಗಳಾಗಿ ಹಣಕ್ಕಾಗಿ ದುಡಿಯುವಂತಹದ್ದು ಅತ್ಯಂತ ಕೆಟ್ಟ ಪದ್ಧತಿ. ಇದನ್ನು ಕೊನೆಗಾಣಿಸಲು ಬಾಲ್ಯಾವಸ್ಥೆ ಮತ್ತು ಕೀಶೊರಾವಸ್ಥೆಯಲ್ಲಿ ಶೈಕ್ಷಣಿಕವಾಗಿ ಪ್ರಗತಿಗೊಳಿಸುವ ಮೂಲಕ ಆರೋಗ್ಯವಾದ ವಾತಾವರಣ ನಿರ್ಮಿಸಬೇಕು’ ಎಂದರು.

‘ಇತ್ತೀಚಿನ ಸಮೀಕ್ಷೆಯ ಪ್ರಕಾರ ದಾವಣಗೆರೆಯಲ್ಲಿ 54 ಬಾಲಕಾರ್ಮಿಕ ಮಕ್ಕಳನ್ನು ಗುರುತಿಸಲಾಗಿದೆ. ಕಳೆದ ವರ್ಷ 6 ಮತ್ತು ಈ ವರ್ಷ 1 ಪ್ರಕರಣ ದಾಖಲಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಸ್ಫೂರ್ತಿ ಸ್ವಯಂ ಸೇವಾ ಸಂಸ್ಥೆಯ ಅಧ್ಯಕ್ಷ ರೂಪ್ಲಾ ನಾಯ್ಕ್, ‘ಕೋವಿಡ್ ಬಂದ ನಂತರ ಹಲವು ಮಕ್ಕಳು ಬೀದಿ ಬೀದಿಗಳಲ್ಲಿ ಭಿಕ್ಷೆ ಬೇಡುವುದು, ಹೋಟೆಲ್, ಗ್ಯಾರೇಜ್ ಹಾಗೂ ಇತರೆಡೆ ಬಾಲಕಾರ್ಮಿಕರಾಗಿ ದುಡಿಯುವವರ ಸಂಖ್ಯೆ ಹೆಚ್ಚಾಗಿದೆ. ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿರುವುದು ವಿಷಾದನೀಯ ಸಂಗತಿ’ ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ತಿಪ್ಪೇಶಪ್ಪ ಜಿ.ಆರ್., ಬಳ್ಳಾರಿ ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತೆ ಎಸ್.ಆರ್‌. ವೀಣಾ, ಕಾರ್ಮಿಕ ಅಧಿಕಾರಿ ಜಿ.ಇಬ್ರಾಹಿಂ ಸಾಬ್, ಪೀಪಲ್ ಸ್ವಯಂ ಸೇವಾ ಸಂಸ್ಥೆಯ ಕಾರ್ಯದರ್ಶಿ ಮಂಜುನಾಥ ಹಾಗೂ ಕಾರ್ಮಿಕ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು. ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ (ನಿಷೇಧ ಹಾಗೂ ನಿಯಂತ್ರಣ) ಕಾಯ್ದೆ ಕುರಿತ ಭಿತ್ತಿ ಪತ್ರವನ್ನು ಗಣ್ಯರು ಬಿಡುಗಡೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT