ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲರ ಮನಸ್ಸಲ್ಲಿ ‘ನಮ್ಮ ಜಲ ನಮ್ಮ ನೆಲ’ ಬರಲಿ

ಜಲಾಮೃತ ಕಾರ್ಯಕ್ರಮದಡಿ ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಶಿವಮೂರ್ತಿ
Last Updated 23 ಜುಲೈ 2019, 20:06 IST
ಅಕ್ಷರ ಗಾತ್ರ

ದಾವಣಗೆರೆ: ನಗರದ ಜನರಲ್ಲಿ ‘ನಮ್ಮ ಜಲ ನಮ್ಮ ನೆಲ’ ಎಂಬ ಭಾವನೆ ಬೆಳೆಯಬೇಕು. ಇಂತಹ ಸಮಾಜಮುಖಿ ಕಾರ್ಯಗಳಲ್ಲಿ ಸಂಘ, ಸಂಸ್ಥೆಗಳು ತೊಡಗಿಸಿಕೊಳ್ಳಬೇಕು. ಆಗ ಜಿಲ್ಲೆ ಹಸಿರಾಗಲಿದೆ ಎಂದು ಜಿಲ್ಲಾಧಿಕಾರಿ ಜಿ.ಎನ್. ಶಿವಮೂರ್ತಿ ಹೇಳಿದರು.

ಜಲಾಮೃತ ಕಾರ್ಯಕ್ರಮ ಮತ್ತು ಜಲಶಕ್ತಿ ಅಭಿಯಾನದಡಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಸಾಮಾಜಿಕ ಅರಣ್ಯ ಇಲಾಖೆ, ಪ್ರಾದೇಶಿಕ ಅರಣ್ಯ ವಿಭಾಗ, ವಿವಿಧ ಇಲಾಖೆಗಳಿಂದ ಮಂಗಳವಾರ ನಗರದ ಕುಂದವಾಡ ಕೆರೆಯ ಸುತ್ತಮುತ್ತ ಸಸಿಗಳನ್ನು ನೆಡುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಗಿಡ ನೆಟ್ಟು ಪರಿಸರವನ್ನು ಹಸಿರಾಗಿಸುವ ಕಾರ್ಯಗಳು ನಗರದಲ್ಲಿ ನಿರಂತರವಾಗಿ ನಡೆಯಬೇಕು ಎಂಬುದು ಜಿಲ್ಲಾಡಳಿತದ ಅಭಿಲಾಷೆ. ನಗರದ ವ್ಯಾಪಾರಿಗಳು, ವ್ಯಾಣಿಜ್ಯೋದ್ಯಮಿಗಳಿಗೂ ಹಸಿರೀಕರಣಗೊಳಿಸಲು ಆಹ್ವಾನ ನೀಡಲಾಗಿದೆ. ಈಗಾಗಲೇ ಕೆಲವು ಖಾಸಗಿ ಸಂಸ್ಥೆಗಳು ಕೆರೆಯ ಸ್ವಚ್ಛತೆ, ಕಾರಂಜಿ ಅಭಿವೃದ್ಧಿ ಮತ್ತು ನಿರ್ವಹಣೆಗೆ ಮುಂದೆ ಬಂದಿವೆ. ನಗರದ ಪ್ರಮುಖ ಪ್ರವಾಸಿ ತಾಣವಾಗಿರುವ ಕುಂದವಾಡ ಕೆರೆಯ ಸುತ್ತಮುತ್ತ ರಸ್ತೆ ಅಭಿವೃದ್ಧಿ, ಯೋಗ ಶಿಬಿರ, ಪುಷ್ಪೋದ್ಯಾನ (ಫ್ಲವರಿಂಗ್) ಹಾಗೂ ಇಲ್ಲಿ ವಾಯುವಿಹಾರಕ್ಕೆ ಬರುವ ಜನರಿಗೆ ಆಹ್ಲಾದಕರ ವಾತಾವರಣ ನಿರ್ಮಾಣಕ್ಕೆ ಒತ್ತು ನೀಡಲಾಗುವುದು ಎಂದು ತಿಳಿಸಿದರು.

ಕುಂದವಾಡ ಕೆರೆಯನ್ನು ಪ್ರವಾಸಿ ತಾಣವಾಗಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಪ್ರವಾಸೋದ್ಯಮ ಇಲಾಖೆಯಿಂದಲೂ ಅನುದಾನ ಪಡೆದು ಅಭಿವೃದ್ಧಿ ಕಾರ್ಯಗಳಿಗೆ ವೆಚ್ಚ ಮಾಡಲಾಗುವುದು ಎಂದು ವಿವರಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಎಚ್. ಬಸವರಾಜೇಂದ್ರ, ‘ಜಲಾಮೃತ ಕಾರ್ಯಕ್ರಮದಡಿ ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಜಿಲ್ಲಾ ಪಂಚಾಯಿತಿಯಿಂದ ಅರಿವು ಮೂಡಿಸಲಾಗುತ್ತಿದೆ. ಈಗಾಗಲೇ ಒಂದು ಲಕ್ಷ ಸಸಿಗಳನ್ನು ನೆಡಲಾಗಿದೆ. ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಒಂದನೇ ಅಥವಾ ಮೂರನೇ ಶನಿವಾರ ಸ್ವಚ್ಛತೆ ಕಾರ್ಯ ನಡೆಸುವಂತೆ ಸೂಚಿಸಲಾಗಿದೆ. ಜಲಾಮೃತ ಯೋಜನೆಯನ್ನು ಜಿಲ್ಲೆಯಾದ್ಯಂತ ಯಶಸ್ವಿಯಾಗಿಸಲು ಶ್ರಮವಹಿಸಲಾಗುವುದು’ ಎಂದು ತಿಳಿಸಿದರು.

ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಚಂದ್ರಶೇಖರ್ ನಾಯ್ಕ್, ‘ಕುಂದುವಾಡ ಕೆರೆಯ ಸುತ್ತಮುತ್ತ ಬೇವು, ತೇಗ, ತಪಸಿ, ಆಲ, ಅರಳಿ, ಹೊಂಗೆ ಸೇರಿ 150ಕ್ಕೂ ಹೆಚ್ಚಿನ ಸಸಿಗಳನ್ನು ನೆಡಲಾಗುತ್ತಿದೆ. ಅವುಗಳ ಸಂರಕ್ಷಣೆಗೆ ಬೇಕಾದ ಕ್ರಮ ಕೈಗೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಸಿಗಳನ್ನು ನೆಡಲಾಗುವುದು’ ಎಂದರು.

ಈ ವೇಳೆ ದೂಡಾ ಆಯುಕ್ತ ಆದಪ್ಪ, ಪಾಲಿಕೆ ಆಯುಕ್ತ ಮಂಜುನಾಥ್ ಬಳ್ಳಾರಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ನಜ್ಮಾ, ಸ್ಮಾರ್ಟ್‌ಸಿಟಿ ಎಂ.ಡಿ ಶರೀಫ್, ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕ ಸಪಾರೆ ಶ್ರೀನಿವಾಸ್, ಮೀನುಗಾರಿಕೆ ಇಲಾಖೆಯ ಡಿ.ಡಿ. ಉಮೇಶ್, ಯುವಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀನಿವಾಸ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಎನ್.ಜೆ. ಬಣಕಾರ್, ವಿಶೇಷ ಭೂ ಸ್ವಾಧಿನಾಧಿಕಾರಿ ರೇಷ್ಮಾ ಹಾನಗಲ್, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT