ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪರೀಕ್ಷೆ, ತರಗತಿ ನಡೆಯುತ್ತವೆ; ಆತಂಕ ಬೇಡ’

Last Updated 24 ಏಪ್ರಿಲ್ 2020, 14:43 IST
ಅಕ್ಷರ ಗಾತ್ರ

ದಾವಣಗೆರೆ: ಪದವಿ ಹಾಗೂ ಸ್ನಾತಕೋತ್ತರ ಪದವಿ ತರಗತಿಗಳು ಮತ್ತೆ ಯಾವಾಗ ಆರಂಭವಾಗುತ್ತವೆ. ಪರೀಕ್ಷೆಗಳು ನಡೆಯುತ್ತವೆಯೋ, ಇಲ್ಲವೋ? ಯಾವಾಗ ಪರೀಕ್ಷೆ ನಡೆಯಲಿದೆ. ಪರೀಕ್ಷೆಗೆ ಓದಲು ಸಮಯಾವಕಾಶ ಸಿಗಲಿದೆಯೇ? ಆನ್‌ಲೈನ್ ತರಗತಿಯ ಪಾಠ ಕೇಳಲು ಹಳ್ಳಿಗಳಲ್ಲಿ ಇಂಟರ್‌ನೆಟ್‌ ಸೌಲಭ್ಯ ಸಮರ್ಪಕವಾಗಿ ಸಿಗುತ್ತಿಲ್ಲ, ಏನು ಮಾಡುವುದು... ಇಂತಹ ಹಲವು ಪ್ರಶ್ನೆಗಳು ಶುಕ್ರವಾರ ನಡೆದ ‘ಪ್ರಜಾವಾಣಿ ಫೋನ್‌ ಇನ್‌’ನಲ್ಲಿ ಕೇಳಿಬಂದವು.

ವಿದ್ಯಾರ್ಥಿಗಳು, ಪೋಷಕರು, ಉಪನ್ಯಾಸಕರು, ಪ್ರಾಚಾರ್ಯರು ಹೀಗೆ ಎಲ್ಲರೂ ತಮ್ಮ ಗೊಂದಲ, ಸಮಸ್ಯೆಗಳನ್ನು ತೆರೆದಿಟ್ಟರು. ಎಲ್ಲರ ಪ್ರಶ್ನೆಗಳಿಗೆ ಉತ್ತರಿಸಿದ ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ, ಕುಲಸಚಿವ ಪ್ರೊ. ಬಸವರಾಜ ಬಣಕಾರ, ಪರೀಕ್ಷಾಂಗ ಕುಲಸಚಿವರಾದ ಪ್ರೊ. ಎಚ್‌.ಎಸ್‌. ಅನಿತಾ, ಹಣಕಾಸು ಅಧಿಕಾರಿ ಪ್ರೊ. ಗೋಪಾಲ ಎಂ. ಅಡವಿರಾವ್‌ ವಿದ್ಯಾರ್ಥಿಗಳ ಆತಂಕ ನಿವಾರಿಸುವ ಪ್ರಯತ್ನ ಮಾಡಿದರು.

* ವಿಜ್ಞಾನ ವಿಷಯಗಳ ಪ್ರಾಕ್ಟಿಕಲ್‌ ತರಗತಿಗಳು ನಡೆಯಲಿವೆಯೇ?
– ಪ್ರಿಯಾ, ಭೂಮಿಕಾ ಬಿಎಸ್‌ಸಿ ವಿದ್ಯಾರ್ಥಿನಿಯರು, ದಾವಣಗೆರೆ; ಮೇಘನಾ, ಚಿತ್ರದುರ್ಗ; ಶಶಾಂಕ್‌, ದಾವಣಗೆರೆ

ಪ್ರೊ. ಶರಣಪ್ಪ ಹಲಸೆ:ವಿಜ್ಞಾನ ವಿಷಯಗಳಿಗೆ ಸಂಬಂಧಿಸಿದಂತೆ ಲ್ಯಾಬ್‌ ಪರೀಕ್ಷೆಗಳೂ ನಡೆಯುತ್ತವೆ.ಪ್ರಾಕ್ಟಿಕಲ್ ತರಗತಿಗಳು ನಡೆಯುತ್ತವೆ.ಲಾಕ್‌ಡೌನ್‌ ಮುಗಿದ ಬಳಿಕ 3 ವಾರಗಳ ಅವಕಾಶ ನೀಡಲಾಗುವುದು. ಆ ಅವಧಿಯಲ್ಲಿ ಎಲ್ಲ ಸಿಲಬಸ್‌ಗಳನ್ನು ಪೂರ್ಣಗೊಳಿಸಲಾಗುವುದು. ಪರೀಕ್ಷೆಗೆ ಸಿದ್ಧರಾಗಲು ಒಂದು ವಾರ ಸಮಯಾವಕಾಶ ನೀಡಲಾಗುವುದು.

* ಪ್ರಾಜೆಕ್ಟ್‌ ಮುಗಿದಿಲ್ಲ. ಆಂತರಿಕ ಪರೀಕ್ಷೆ ಬಾಕಿ ಇದೆ. ಪ್ರಾಯೋಗಿಕ ತರಗತಿ ಶೇ 50ರಷ್ಟು ಮಾತ್ರ ಆಗಿದೆ. ಏನು ಮಾಡುವುದು?
–ನಾಗೇಶ್‌,ಚಳ್ಳಕೆರೆ; ರುದ್ರೇಶ್‌, ಚನ್ನಗಿರಿ

ಡಾ. ಬಸವರಾಜ ಬಣಕಾರ: ಈಗಲೇ ಸಿದ್ಧತೆ ಮಾಡಿಕೊಳ್ಳಿ. ಗೈಡ್‌ ಜೊತೆ ಪ್ರಾಜೆಕ್ಟ್‌ ಬಗ್ಗೆ ಚರ್ಚೆ ಮಾಡಿ.ಪ್ರಾಜೆಕ್ಟ್ ಪೂರ್ಣಗೊಳಿಸಲು 3 ವಾರಗಳ ಅವಧಿ ನೀಡಲಾಗುವುದು. ಪ್ರಾಯೋಗಿಕ ತರಗತಿ ನಂತರ ನಡೆಯಲಿದೆ. ಸದ್ಯ ಥಿಯರಿ ಓದಿ.

* ಆನ್‌ಲೈನ್‌ ತರಗತಿಗಳು ಎಷ್ಟರಮಟ್ಟಿಗೆ ಪರಿಣಾಮಕಾರಿ ಆಗಲಿವೆ?
– ಚಿದಾನಂದ, ಮಸ್ಕಲ್, ಹಿರಿಯೂರು

ಡಾ. ಬಸವರಾಜ ಬಣಕಾರ: ಜೂಮ್‌ ಆ್ಯಪ್‌‌ ಹಾಗೂ ಆನ್‌ಲೈನ್‌ ಮೂಲಕ ತರಗತಿ ನಡೆಯುತ್ತಿದ್ದು, ಎಲ್ಲರಿಗೂ ಅನುಕೂಲವಾಗಿದೆ. ವಾಟ್ಸ್‌ಆ್ಯಪ್‌ನಲ್ಲಿ ಪಠ್ಯದ ಸಾಮಗ್ರಿ ತಲುಪುಸುತ್ತಿದ್ದೇವೆ. ಹಳ್ಳಿಯಲ್ಲೂ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯುತ್ತಿದ್ದಾರೆ.

* ಪರೀಕ್ಷೆ ಯಾವಾಗ ನಡೆಯುತ್ತದ ಸರ್‌? ಸಿಲಬಸ್‌ ಮುಗಿದಿಲ್ಲ. ಕೆಲವರು ಪರೀಕ್ಷೆ ಇರುವುದಿಲ್ಲ ಎನ್ನುತ್ತಿದ್ದಾರೆ. ತರಗತಿ ಯಾವಾಗ ನಡೆಯುತ್ತವೆ?

ಚೌಡಪ್ಪ, ಆಕಾಶ್‌, ಸಹನಾ, ಇಂದಿರಾ, ದಾವಣಗೆರೆ; ಹೈದರ್‌ ಅಲಿಖಾನ್‌, ಶ್ರೀನಿವಾಸ ಚನ್ನಗಿರಿ; ನಾಗರಾಜ್‌, ಜಗಳೂರು; ಪವಿತ್ರಾ, ಹರಪನಹಳ್ಳಿ; ರಮೇಶ್, ಶ್ಯಾಮ್‌ ಭಾರ್ಗವ್‌ ಚಳ್ಳಕೆರೆ, ಮಲ್ಲಿಕಾರ್ಜುನ, ಹೊಸನಾಯಕನಹಳ್ಳಿ; ಶಿವರಾಂ‌, ಅರಸಿಕೆರೆ; ಶ್ರೀನಿವಾಸ್‌, ಜಗಳೂರು; ಬಸವರಾಜಪ್ಪ ಪೋಷಕರು, ಹೊನ್ನಾಳಿ, ಉತ್ಕಲಾ ದಾವಣಗೆರೆ.

ಪ್ರೊ. ಶರಣಪ್ಪ ಹಲಸೆ: ಪರೀಕ್ಷೆಗಳೂ ನಡೆಯುತ್ತವೆ. ಈ ಬಗ್ಗೆ ವಿದ್ಯಾರ್ಥಿಗಳಲ್ಲಿ ಆತಂಕ, ಗೊಂದಲ ಬೇಡ. ಲಾಕ್‌ಡೌನ್‌ ಮುಗಿದ ಬಳಿಕ 3 ವಾರಗಳ ಕಾಲ ತರಗತಿ ನಡೆಸಲು ಅವಕಾಶ ನೀಡಲಾಗುವುದು. ಆ ಅವಧಿಯಲ್ಲಿ ಎಲ್ಲ ಸಿಲಬಸ್‌ಗಳನ್ನು ಪೂರ್ಣಗೊಳಿಸುವಂತೆ ಉಪನ್ಯಾಸಕರಿಗೆ ಸೂಚಿಸಲಾಗಿದೆ. ಪರೀಕ್ಷೆಗೆ ಸಿದ್ಧರಾಗಲು ಒಂದು ವಾರಗಳ ಸಮಯಾವಕಾಶ ನೀಡಲಾಗುವುದು. ಈ ಬಗ್ಗೆ ವೇಳಾಪಟ್ಟಿಯನ್ನೂ ನೀಡಲಾಗುವುದು.

* ಎಂ.ಕಾಂ ಅಂತಿಮ ವರ್ಷದಲ್ಲಿ ಓದುತ್ತಿದ್ದು, ಒಂದು ಆಂತರಿಕ ಪರೀಕ್ಷೆ ಮಾತ್ರ ನಡೆದಿದೆ. ಡೆಸರ್ಟೇಷನ್‌ ಪೂರ್ಣಗೊಳಿಸಲು ಆಕರಗಳು ಸಿಗುತ್ತಿಲ್ಲ.
– ಮಧುನಾಯ್ಕ್‌, ಚನ್ನಗಿರಿ

ಪ್ರೊ. ಶರಣಪ್ಪ ಹಲಸೆ: ಎಲ್ಲದಕ್ಕೂ 3 ವಾರಗಳ ಅವಕಾಶ ನೀಡಲಾಗುವುದು. ಆಂತರಿಕ ಪರೀಕ್ಷೆಗಳನ್ನೂ ನಡೆಸುತ್ತೇವೆ.

* ಲಾಕ್‌ಡೌನ್‌ ಇರುವ ಕಾರಣ ಹಳ್ಳಿಗೆ ಬಂದಿದ್ದೇನೆ. ಇಂಟರ್‌ನೆಟ್‌ ಸೌಲಭ್ಯ ಇಲ್ಲದ ಕಾರಣ ಡೆಸರ್ಟೇಷನ್‌ ಪೂರ್ಣಗೊಳಿಸಲು ಆಕರ ಗ್ರಂಥಗಳು ಸಿಗುತ್ತಿಲ್ಲ.
– ಸಚಿನ್‌, ಎಂ.ಕಾಂ ವಿದ್ಯಾರ್ಥಿ,ದಾವಣಗೆರೆ

ಪ್ರೊ. ಶರಣಪ್ಪ ಹಲಸೆ: ಯಾವುದೇ ಆತಂಕಪಡುವ ಅಗತ್ಯ ಇಲ್ಲ. ಎಲ್ಲದಕ್ಕೂ ಸಮಯಾವಕಾಶ ನೀಡಲಾಗುವುದು. ಬಳಿಕವೇ ಪರೀಕ್ಷೆಗಳು ನಡೆಯಲಿವೆ.

*ಹಳ್ಳಿಯಲ್ಲಿದ್ದೇನೆ. ಇಂಟರ್‌ನೆಟ್‌ ಸಮಸ್ಯೆಯಿಂದ ಆನ್‌ಲೈನ್‌ ತರಗತಿಗಳನ್ನು ಅಟೆಂಡ್‌ ಮಾಡಲು ಆಗುತ್ತಿಲ್ಲ.
– ಶಶಾಂಕ್‌, ಚಳ್ಳಕೆರೆ; ವಿಶ್ವನಾಥ, ಹರಿಹರ; ವರುಣ್,‌ ಮೊಳಕಾಲ್ಮುರು; ಚೈತ್ರಾ, ದಾವಣಗೆರೆ

ಪ್ರೊ. ಶರಣಪ್ಪ ಹಲಸೆ, ಪ್ರೊ. ಬಸವರಾಜ ಬಣಕಾರ: ಇಂಟರ್‌ನೆಟ್‌ ಸೌಲಭ್ಯ ಲಭ್ಯವಿದ್ದಾಗ ಆನ್‌ಲೈನ್‌ನಲ್ಲಿ ಪಾಠ ಕೇಳಿ. ಲಾಕ್‌ಡೌನ್‌ ಮುಗಿದ ಬಳಿಕ ಅಭ್ಯಾಸಕ್ಕೆ ಸಮಯಾವಕಾಶ ಇರಲಿದೆ. ಇ–ಮೇಲ್‌ನಲ್ಲಿ ಪಠ್ಯದ ಸಾಮಗ್ರಿ ಕಳುಹಿಸಿದ್ದೇವೆ. ಪಠ್ಯಪುಸ್ತಕವನ್ನು ಓದಿ.

* ಸಹೋದರಿ ಬಿ.ಕಾಂ ಓದುತ್ತಿದ್ದು, ಪರೀಕ್ಷೆಗಳು ಯಾವಾಗ ನಡೆಯುತ್ತವೆ?
ಮಂಜುನಾಥ, ಬೆಲಗೂರು, ಚಿತ್ರದುರ್ಗ

ಪ್ರೊ. ಶರಣಪ್ಪ ಹಲಸೆ: ಈ ಬಗ್ಗೆ ಸಂಬಂಧಿಸಿದ ಕಾಲೇಜುಗಳಿಗೆ ವೇಳಾಪಟ್ಟಿ ನೀಡಲಾಗುವುದು.

* ಬಿ.ಇಡಿ ಪರೀಕ್ಷೆಗಳು ಯಾವಾಗ ನಡೆಯುತ್ತವೆ? ಸಿಲಬಸ್‌ಗಳು ಶೇ 30ರಷ್ಟು ಮಾತ್ರ ಮುಗಿದಿವೆ.
– ಯಶೋದಾ, ಹೊನ್ನಾಳಿ; ದಯಾನಂದ, ಹಿರಿಯೂರು; ಗಿರೀಶ್‌, ಭಾಗ್ಯ, ಶಶಿಕಲಾ, ಚಿತ್ರದುರ್ಗ; ಶ್ರೀನಿವಾಸ, ದಾವಣಗೆರೆ

ಪ್ರೊ. ಶರಣಪ್ಪ ಹಲಸೆ: ಬಿ.ಇಡಿ ತರಗತಿಗಳು ತಡವಾಗಿ ಆರಂಭವಾದ ಕಾರಣ ಲಾಕ್‌ಡೌನ್‌ ಮುಗಿದ ಬಳಿಕ 6ರಿಂದ 8 ವಾರಗಳ ಅವಕಾಶ ನೀಡಲಾಗುವುದು. ಈ ಅವಧಿಯಲ್ಲಿ ಎಲ್ಲ ಪಾಠ ಮುಗಿಸಲು ಸೂಚಿಸಲಾಗುವುದು. ಬಳಿಕ ಪರೀಕ್ಷೆಗಳು ನಡೆಯಲಿವೆ.

* ಡಿ.ಇಡಿಗೂ ಆನ್‌ಲೈನ್‌ ತರಗತಿ ಮಾಡಿದರೆ ಅನುಕೂಲವಾಗಲಿದೆ.
– ಸಮ್ರಿನ್‌, ಡಿಇಡಿ ವಿದ್ಯಾರ್ಥಿನಿ, ಹಿರಿಯೂರು

ಡಾ. ಬಸವರಾಜ ಬಣಕಾರ: ಈ ಬಗ್ಗೆ ಕಾಲೇಜಿನ ಪ್ರಾಂಶುಪಾಲರ ಜೊತೆಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು.

* ವಿದ್ಯಾರ್ಥಿಗಳಿಗೆ ಪ್ರಥಮ ಆಂತರಿಕ ಪರೀಕ್ಷೆ ಮಾತ್ರ ಆಗಿದೆ. ಶೇ 90ರಷ್ಟು ಸಿಲಬಸ್‌ ಪೂರ್ಣಗೊಳಿಸಿದ್ದೇವೆ. ಪ್ರಾಕ್ಟಿಕಲ್‌ ಪರೀಕ್ಷೆಗಳನ್ನು ಮಾಡಬೇಕೋ ಬೇಡವೋ ತಿಳಿಸಿ.
– ರಾಕೇಶ್‌, ಭೌತಶಾಸ್ತ್ರ ಉಪನ್ಯಾಸಕ, ಜಗಳೂರು

ಪ್ರೊ. ಶರಣಪ್ಪ ಹಲಸೆ: ಪರೀಕ್ಷೆಗಳು ನಡೆಯಲಿವೆ. ಈ ಬಗ್ಗೆ ಸಂಬಂಧಿಸಿದ ಕಾಲೇಜು ಪ್ರಾಚಾರ್ಯರಿಗೆ ಸುತ್ತೋಲೆ ಕಳುಹಿಸಲಾಗುವುದು.

* ದೊಡ್ಡ ಸಮಸ್ಯೆಯ ಪ್ರಶ್ನೆಗಳಿಗೆ ಆನ್‌ಲೈನ್‌ ತರಗತಿಯಲ್ಲಿ ಸಮರ್ಪಕ ಉತ್ತರ ಸಿಗುತ್ತಿಲ್ಲ.
– ಪ್ರಶಾಂತ್‌, ಹೊನ್ನಾಳಿ

ಡಾ. ಬಸವರಾಜ ಬಣಕಾರ: ಅಂತಹ ಸಮಸ್ಯೆ ಇದ್ದರೆ ನೇರವಾಗಿ ಶಿಕ್ಷಕರ ಜೊತೆ ಚರ್ಚಿಸಿ.

* ಪದವಿಯಲ್ಲಿ 2 ವಿಷಯ ಬಾಕಿ ಉಳಿದಿದೆ. ಪರೀಕ್ಷೆಗೆ ಕಟ್ಟಿದ್ದೇನೆ. ಯಾವಾಗ ನಡೆಯಲಿದೆ?
– ಇಂದಿರಾ, ಹಿರಿಯೂರು

ಡಾ. ಬಸವರಾಜ ಬಣಕಾರ: ಜೂನ್‌ನಲ್ಲಿ ಪರೀಕ್ಷೆ ನಡೆಯಬಹುದು.

* ಆನ್‌ಲೈನ್‌ ತರಗತಿ ಒಂದು ವಾರದಿಂದ ನಡೆಯುತ್ತಿಲ್ಲ.
– ಮನುರಾಜ್‌, ಬಿಕಾಂ. ವಿದ್ಯಾರ್ಥಿ,ದಾವಣಗೆರೆ

ಪ್ರೊ. ಶರಣಪ್ಪ ಹಲಸೆ, ಪ್ರೊ. ಬಸವರಾಜ ಬಣಕಾರ: ಸದ್ಯ ನಿಂತಿದೆ. ಆತಂಕ ಬೇಡ ಪಾಠ ಮುಗಿಸಿಯೇ ಪರೀಕ್ಷೆ ನಡೆಸಲಾಗುವುದು.

* ಲಾಕ್‌ಡೌನ್‌ ಬಳಿಕ ತರಗತಿ ನಡೆಯಲಿದೆಯೇ? ರೆಡ್‌ ಝೋನ್‌ ಪ್ರದೇಶದ ವಿದ್ಯಾರ್ಥಿಗಳು ಬಂದು ಪರೀಕ್ಷೆ ಬರೆಯುವುದು ಹೇಗೆ?
– ಗಾಯತ್ರಿ, ಬಿಎಸ್‌ಸಿ ವಿದ್ಯಾರ್ಥಿನಿ, ಚಿತ್ರದುರ್ಗ

ಡಾ. ಬಸವರಾಜ ಬಣಕಾರ: ಲಾಕ್‌ಡೌನ್‌ ಬಳಿಕ ಸರ್ಕಾರದ ನಿರ್ದೇಶನದ ಪ್ರಕಾರ ತರಗತಿ ನಡೆಯುತ್ತವೆ. ಪರೀಕ್ಷೆಗೆ ಸಮಯಾವಕಾಶ ಇರಲಿದೆ. ಹೊರ ಜಿಲ್ಲೆಯಿಂದ ಬರುವವರಿಗೂ ಯಾವುದೇ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು.

* ಆನ್‌ಲೈನ್‌ ತರಗತಿ ಎಲ್ಲರಿಗೂ ಸಿಗುತ್ತಿಲ್ಲ. ನೋಟ್ಸ್‌ ಹೆಚ್ಚಿಗೆ ನೀಡಲಾಗುತ್ತಿದೆ. ಬರೆಯಲು ಆಗುತ್ತಿಲ್ಲ.
– ನಿವೇದಿತಾ, ಚಿತ್ರದುರ್ಗ,ರಾಕೇಶ್‌ಕುಮಾರ್‌

ಡಾ. ಬಸವರಾಜ ಬಣಕಾರ: ಇ–ಮೇಲ್‌ ಮೂಲಕ ಪಠ್ಯದ ಸಾಮಗ್ರಿ ಕಳುಹಿಸಿದ್ದೇವೆ. ಯಾವ ರೀತಿ ಪ್ರಶ್ನೆ ಬರಬಹುದು ಎಂಬುದನ್ನು ನೀವೇ ನೋಟ್‌ ಮಾಡಿಕೊಳ್ಳಿ. ಲಾಕ್‌ಡೌನ್‌ ಬಳಿಕ ತರಗತಿ ನಡೆಯಲಿವೆ.

* ಪರೀಕ್ಷೆಗಳು ಯಾವಾಗ ಆರಂಭವಾಗುತ್ತವೆ?
ಗೋಪಿ, ಎಂ.ಎಸ್ಸಿ ವಿದ್ಯಾರ್ಥಿ

ಪ್ರೊ. ಎಚ್.ಎಸ್. ಅನಿತಾ: ಲಾಕ್‌ಡೌನ್‌ ತೆರವುಗೊಳಿಸದ ಮೇಲೆ ಮೂರರಿಂದ ನಾಲ್ಕು ವಾರಗಳ ಕಾಲ ಸಮಯದಲ್ಲಿ ಥಿಯರಿ ಹಾಗೂ ಪ್ರಾಯೋಗಿಕ ಪಾಠಗಳನ್ನು ನಡೆಸಲಾಗುತ್ತದೆ. ಸೆಕೆಂಡ್ ಇಂಟರ್‌ನಲ್ಸ್‌, ಟೆಸ್ಟ್‌ಗಳು ಮುಗಿದ ಮೇಲೆ ಓದುವುದಕ್ಕೆ ಒಂದು ವಾರಗಳ ಕಾಲಾವಕಾಶ ನೀಡಿ ನಂತರ ಪರೀಕ್ಷೆ ನಡೆಸಲಾಗುತ್ತದೆ. ಲಾಕ್‌ಡೌನ್ ವೇಳೆಯಲ್ಲಿ ಪ್ರಾಜೆಕ್ಟ್‌ ವರ್ಕ್‌ಗಳನ್ನು ಮನೆಯಲ್ಲಿಯೇ ಮಾಡಿ. ವಿವಿಧ ಆ್ಯಪ್‌ಗಳಲ್ಲಿ ಶಿಕ್ಷಕರು ಆನ್‌ಲೈನ್‌ನಲ್ಲಿ ಪಾಠ ಮಾಡುತ್ತಿದ್ದು, ಅವುಗಳನ್ನು ಕೇಳಿದೆ. ಬರವಣಿಗೆಯ ಕೆಲಸಗಳನ್ನು ಮುಗಿಸಿಕೊಳ್ಳಿ.

* ಆನ್‌ಲೈನ್‌ನಲ್ಲಿ ಸ್ಟಡಿ ಮೆಟಿರೀಯಲ್ಸ್ ಸಿಗುತ್ತಿವೆಯೇ?
– ಸಿದ್ದೇಶ್, ಬಿ.ಕಾಂ ವಿದ್ಯಾರ್ಥಿ, ದಾವಣಗೆರೆ; ಉಮಾದೇವಿ, ಅರಸೀಕರೆ

ಪ್ರೊ. ಎಚ್.ಎಸ್. ಅನಿತಾ: ಓದುವುದಕ್ಕೆ ಆನ್‌ಲೈನ್‌ನಲ್ಲಿ ನಿಮಗೆ ಸಾಕಷ್ಟು ಸ್ಟಡಿ ಮಟಿರಿಯಲ್‌ಗಳು ಸಿಗುತ್ತವೆ. ಶಿಕ್ಷಕರು ಜೂಮ್‌, ಗೂಗಲ್‌ ಕ್ಲಾಸ್‌ನಲ್ಲಿ ಪಾಠ ಮಾಡುತ್ತಿದ್ದು, ಪಿಡಿಎಫ್‌, ಆಡಿಯೊ ಹಾಗೂ ವಿಡಿಯೊಗಳನ್ನು ಅಪ್‌ಲೋಡ್‌ ಮಾಡುತ್ತಿದ್ದಾರೆ. ಸ್ಟೂಡೆಂಟ್ ಪೋರ್ಟಲ್‌ಗೆ ಹೋದರೆ ಸಿಗುತ್ತವೆ. ನಿಮ್ಮ ಶಿಕ್ಷಕರನ್ನು ಸಂಪರ್ಕಿಸಿ ನೋಟ್ಸ್‌ ಅಪ್‌ಡೇಟ್‌ ಮಾಡಿಕೊಳ್ಳಿ. ಮನೆಯಲ್ಲಿ ಸುಮ್ಮನೆ ಕೂರುವ ಬದಲು ಓದಿಕೊಳ್ಳಿ. ಲಾಕ್‌ಡೌನ್ ತೆರವುಗೊಳಿಸಿದ ನಂತರ ಪರೀಕ್ಷೆ ನಡೆಯುತ್ತದೆ. ಓದುವುದಕ್ಕೆ ಸಮಯ ಸಿಗುತ್ತದೆ.

* ‍ಪರೀಕ್ಷೆಯಲ್ಲಿ ಒಂದು ವಿಷಯಕ್ಕೂ ಮತ್ತೊಂದಕ್ಕೂ ನಡುವೆ ಅಂತರ ಇರುತ್ತದೆಯೇ?
– ಪವಿತ್ರಾ, ಎಂ.ಕಾಂ ವಿದ್ಯಾರ್ಥಿನಿ, ಚಿತ್ರದುರ್ಗ; ಅರ್ಪಿತಾ, ಹಿರಿಯೂರು

ಪ್ರೊ. ಎಚ್.ಎಸ್.ಅನಿತಾ: ಸರ್ಕಾರ ಯಾವ ರೀತಿ ನಿರ್ಧಾರ ತೆಗೆದುಕೊಳ್ಳುತ್ತದೆಯೋ ಅದನ್ನು ಅವಲಂಬಿಸಿದೆ. ಎಂ.ಕಾಂಗೆ ಸಂಬಂಧಪಟ್ಟಂತೆ ಸಾಕಷ್ಟು ಸ್ಟಡಿ ಮಟಿರಿಯಲ್‌ಗಳನ್ನು ಸಾಫ್ಟ್‌ವೇರ್‌ಗೆ ಅಪ್‌ಲೋಡ್ ಮಾಡುತ್ತಿದ್ದೇವೆ. ಎಲ್ಲಾ ಶಿಕ್ಷಕರು ಅದನ್ನು ಹಾಕಿದ್ದಾರೆ. ಅದನ್ನು ಬಳಸಿಕೊಳ್ಳಿ. ಪರೀಕ್ಷಾ ಪೂರ್ವ ತಯಾರಿಗೆ ಕಾಲಾವಕಾಶ ಕೊಡುತ್ತೇವೆ.

* ಪ್ರಾಯೋಗಿಕ ತರಗತಿಗಳು ಬಾಕಿ ಇವೆ. ಅವುಗಳನ್ನು ನಡೆಸುವಿರಾ?
–ಸುಷ್ಮಾ, ದಾವಣಗೆರೆ

ಪ್ರೊ. ಗೋಪಾಲ ಎಂ. ಅಡವಿರಾವ್: ಲಾಕ್‌ಡೌನ್ ತೆರವಿನ ನಂತರ ಉಳಿದಿರುವ ಪ್ರಾಯೋಗಿಕ ತರಗತಿಗಳನ್ನು ಮುಗಿಸಿದ ನಂತರವೇ ಪರೀಕ್ಷೆ ನಡೆಸಲಾಗುವುದು. ನಿಮ್ಮ ಪ್ರಾಂಶುಪಾಲರಿಗೆ ಸರ್ಕ್ಯುಲರ್ ಬರುತ್ತದೆ.

* ಈಚೆಗೆ ಪ್ರಕಟವಾದ ಪಿಎಚ್‌.ಡಿ ಪ್ರವೇಶಾತಿ ಅಧಿಸೂಚನೆಯಲ್ಲಿ ರಾಜ್ಯಶಾಸ್ತ್ರ ವಿಷಯ ಇಲ್ಲ. ಯಾವಾಗ ಸೇರ್ಪಡೆಯಾಗುತ್ತದೆ?

ರಘು, ಚನ್ನಗಿರಿ

ಪ್ರೊ. ಗೋಪಾಲ ಎಂ. ಅಡವಿರಾವ್: ಜೂನ್‌ ತಿಂಗಳಲ್ಲಿ ಹೊಸದಾಗಿ ನೋಟಿಫಿಕೇಷನ್ ಆದ ನಂತರ ರಾಜ್ಯಶಾಸ್ತ್ರ ವಿಷಯವನ್ನು ಸೇರಿಸಲಾಗುವುದು. ಆಗ ನೀವು ಅರ್ಜಿ ಸಲ್ಲಿಸಬಹುದು.

*ಪರೀಕ್ಷೆ ಇಲ್ಲದೆ ಪಾಸ್‌ ಮಾಡುತ್ತೀರಾ?: 1ರಿಂದ 9ರವರಗಿನ ವಿದ್ಯಾರ್ಥಿಗಳನ್ನು ಪಾಸ್ ಮಾಡಿದ್ದಾರೆ. ಪದವಿ ವಿದ್ಯಾರ್ಥಿಗಳನ್ನೂ ಆ ರೀತಿ ಪರೀಕ್ಷೆ ಇಲ್ಲದೆ ಪಾಸ್‌ ಮಾಡುತ್ತೀರಾ?
–ಶಿವಕುಮಾರಿ, ಅರಸಿಕೆರೆ

ಡಾ. ಬಸವರಾಜ ಬಣಕಾರ: ಇಲ್ಲ. ಆ ರೀತಿ ಪಾಸ್‌ ಮಾಡಲು ಆಗದು. ಪರೀಕ್ಷೆ ಖಂಡಿತ ನಡೆಯಲಿದೆ. ಲಾಕ್‌ಡೌನ್‌ ಬಳಿಕ ಜೂನ್‌ನಲ್ಲಿ ಪರೀಕ್ಷೆ ನಡೆಯುವ ಸಾಧ್ಯತೆ ಇದೆ. ಪರೀಕ್ಷೆ ವೇಳಾಪಟ್ಟಿಗೆ ವಿಶ್ವವಿದ್ಯಾಲಯದ ವೆಬ್‌ಸೈಟ್‌ ನೋಡಿ.

* ಲಾಕ್‌ಡೌನ್‌ನಲ್ಲಿ ವಿದ್ಯಾರ್ಥಿವೇತನ ಸಿಗುತ್ತಿಲ್ಲ. ನಂತರ ಸಿಗುತ್ತದೆಯೇ?
– ಮೇಘಾ, ಎಂಎಸ್ಸಿ ವಿದ್ಯಾರ್ಥಿನಿ, ಚಳ್ಳಕೆರೆ

ಪ್ರೊ. ಶರಣಪ್ಪ ಹಲಸೆ: ಲಾಕ್‌ಡೌನ್ ಇರುವುದರಿಂದ ಈಗ ಸ್ಥಗಿತಗೊಂಡಿದೆ. ತೆರವುಗೊಳಿಸಿದ ನಂತರ ವಿದ್ಯಾರ್ಥಿವೇತನ ಪ್ರಕ್ರಿಯೆ ಆರಂಭಗೊಳ್ಳಲಿದೆ.ಸರ್ಕಾರದಿಂದ ಬಂದ ವಿದ್ಯಾರ್ಥಿವೇತನವನ್ನು ಅರ್ಹ ಎಲ್ಲ ವಿದ್ಯಾರ್ಥಿಗಳಿಗೂ ನೀಡಲಾಗುವುದು. ಈ ಬಗ್ಗೆ ಯಾವುದೇ ಆತಂಕ ಬೇಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT