ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಸರ್ಕಾರದ ಸಾಧನೆ ಬಿಂಬಿಸುವ ಚಿತ್ರಗಳ ಪ್ರದರ್ಶನ

Last Updated 19 ಸೆಪ್ಟೆಂಬರ್ 2021, 5:03 IST
ಅಕ್ಷರ ಗಾತ್ರ

ದಾವಣಗೆರೆ: ಬಿಜೆಪಿ ರಾಜ್ಯ ಕಾರ್ಯಕಾರಿಣಿ ನಡೆಯುವ ಇಲ್ಲಿನ ತ್ರಿಶೂಲ್ ಕಲಾಭವನದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಾಧನೆಗಳನ್ನು ಬಿಂಬಿಸುವ ಚಿತ್ರಗಳು ಗಮನ ಸೆಳೆದವು.

ಕಲಾಭವನದ ಒಂದು ಬದಿಯಲ್ಲಿ ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದು, ಮತ್ತೊಂದು ಬದಿಯಲ್ಲಿ ಪೋಸ್ಟರ್ ಹಾಗೂ ಬಿತ್ತಿಚಿತ್ರಗಳ ಮೂಲಕ ಸರ್ಕಾರದ ಕಾರ್ಯಕ್ರಮಗಳನ್ನು ಪರಿಚಯಿಸಲಾಗಿತ್ತು. ತ್ರಿಶೂಲ್ ಕಲಾಭವನ ಪ್ರವೇಶಿಸುತ್ತಿದ್ದ ಮುಖಂಡರು ಬಲ ಬದಿಯಲ್ಲಿ ಇಟ್ಟಿದ್ದ ಭಾರತಾಂಬೆಯ ಭಾವಚಿತ್ರಕ್ಕೆ ನಮಿಸಿ ಒಳಹೋಗುತ್ತಿದ್ದರು. ಮತ್ತೊಂದು ಕಡೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಭಾವಚಿತ್ರ ಇಟ್ಟಿದ್ದು, ‘ಭಾರತ ಭಾಗ್ಯವಿದಾತ’ ಎಂಬ ಒಕ್ಕಣೆಯು ಇತ್ತು.

ಪ್ರಧಾನಿ ನರೇಂದ್ರ ಮೋದಿಯವರ ‘ಆತ್ಮನಿರ್ಭರ ಭಾರತ’, ‘ಮೋದಿ ಅಭಿವೃದ್ಧಿಯ ಮೋಡಿ’ ಶೀರ್ಷಿಕೆಯೊಂದಿಗೆ ಚತುಷ್ಫಥ ಯೋಜನೆಗಳನ್ನು ಬಿಂಬಿಸುವ ಚಿತ್ರಗಳು ಗಮನ ಸೆಳೆದವು. ಕೊರೊನಾ ಹಿಮ್ಮೆಟ್ಟಿಸಿದ ಕೇಂದ್ರ ಸರ್ಕಾರ, ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ, ಜಲಜೀವನ್ ಮಿಷನ್ ಹಾಗೂ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಆರಂಭಿಸಿರುವ ಕ್ಷಿಪ್ರ ಕಾರ್ಯಪಡೆ ಬೆಟಾಲಿಯನ್ ಸ್ಥಾಪನೆಯ ಚಿತ್ರಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.

ಆರ್ಟಿಕಲ್ 370 ರದ್ಧತಿ, ಪ್ರಧಾನಮಂತ್ರಿ ಆವಾಜ್ ಯೋಜನೆ, ಸ್ತ್ರೀ ಆದ್ಯತೆ, ಖೇಲೊ ಇಂಡಿಯಾ, ದೀನದಯಾಳ್ ಅಂತ್ಯೋದಯ ಯೋಜನೆಗಳು, ಅನಿಲಭಾಗ್ಯ, ಸುಕನ್ಯಾ ಸಮೃದ್ಧಿ, ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆ ಬಿಂಬಿಸುವ ಚಿತ್ರಗಳನ್ನು ವೀಕ್ಷಿಸಿದ ಪಕ್ಷದ ಮುಖಂಡರು ಅವುಗಳ ಜೊತೆ ಸೆಲ್ಫಿ ತೆಗೆದುಕೊಂಡರು.ಯಡಿಯೂರಪ್ಪ ಅವರ ಸಾಧನೆಗಳನ್ನು ಬಿಂಬಿಸುವ ಕಲಾಕೃತಿಗಳೇ ಹೆಚ್ಚಾಗಿ ಪ್ರದರ್ಶನಕ್ಕೆ ಇಡಲಾಗಿತ್ತು.

ಸಭಾಂಗಣ ಪ್ರವೇಶಿಸಲು ತಳ್ಳಾಟ, ನೂಕಾಟ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿ.ಎಸ್. ಯಡಿಯೂರಪ್ಪ, ನಳಿನ್‌ಕುಮಾರ್ ಕಟೀಲ್ ಹಾಗೂ ಅರುಣ್ ಸಿಂಗ್ ಸೇರಿದಂತೆ ಬಿಜೆಪಿ ನಾಯಕರು ತ್ರಿಶೂಲ್ ಕಲಾಭವನ ಪ್ರವೇಶಿಸಿದ ಬಳಿಕ ಪ್ರವೇಶದ್ವಾರದಲ್ಲಿ ತಳ್ಳಾಟ, ನೂಕಾಟ ಶುರುವಾಯಿತು. ಧೂಡಾ ಅಧ್ಯಕ್ಷ ದೇವರಮನಿ ಶಿವಕುಮಾರ್, ಮಾಜಿ ಅಧ್ಯಕ್ಷ ಯಶವಂತ್‌ರಾವ್ ಜಾಧವ್, ವಿಧಾನ ಪರಿಷತ್ ಸದಸ್ಯೆ ತೇಜಸ್ವಿನಿ ಗೌಡ ಸೇರಿದಂತೆ ಬಿಜೆಪಿಯ ನಾಯಕರು ಒಳ ಹೋಗಲು ಪರದಾಡಬೇಕಾಯಿತು.

ಕೆಲ ನಾಯಕರು ಒಳಪ್ರವೇಶಿಸಲು ಯತ್ನಿಸಿದರು. ಪ್ರವೇಶ ದ್ವಾರದಲ್ಲಿದ್ದವರು ಒಳಬಿಡಲಿಲ್ಲ‌. ಸ್ಥಳಕ್ಕೆ ಬಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಪರಿಸ್ಥಿತಿ ನಿಯಂತ್ರಿಸಿದರು‌. ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರು ಬಂದು ತೇಜಸ್ವಿನಿ ಗೌಡ ಅವರಿಗೆ ಹೋಗಲು ಅನುವು ಮಾಡಿಕೊಟ್ಟರು. ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಅವರು ಕೈಮುಗಿದು ‘ಏಕೆ ಹಿಂಗೆಲ್ಲಾ‌ ಮಾಡುತ್ತೀರಾ? ಹಾಗೆಲ್ಲಾ ಮಾಡಬೇಡಿ’ ಎಂದರು.

ಸೆಲ್ಫಿ ಕ್ರೇಜ್: ತ್ರಿಶೂಲ್ ಕಲಾಭವನದಲ್ಲಿ ಕಾರ್ಯಕ್ರಮಕ್ಕೆ ಹೋಗುವ ಮುನ್ನ ಬಿಜೆಪಿ ಮಹಿಳಾ ಮೋರ್ಚಾದ ಕಾರ್ಯಕರ್ತೆಯರು ಹೆಸರು ನೋಂದಣಿ ಮಾಡಿಕೊಂಡು ಒಳಗೆ ಕಳುಹಿಸುತ್ತಿದ್ದರು. ಅಲ್ಲಿಗೆ ಬಂದ ನಾಯಕರ ಜೊತೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದುದು ಕಂಡುಬಂತು.

ಕುಂದದ ಯಡಿಯೂರಪ್ಪ ವರ್ಚಸ್ಸು

ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದರೂ ಬಿ.ಎಸ್‌. ಯಡಿಯೂರಪ್ಪ ವರ್ಚಸ್ಸು ಕಡಿಮೆಯಾಗಿಲ್ಲ ಎಂಬುದ‌ಕ್ಕೆ ಕಾರ್ಯಕರ್ತರ ಘೋಷಣೆಗಳು ಸಾಕ್ಷಿಯಾದವು.

‘ರಾಜಾಹುಲಿಗೆ ಜೈ’ ‘ಯಡಿಯೂರಪ್ಪ ಜಿಂದಾಬಾದ್’ ಎಂಬುದಾಗಿ ಘೋಷಣೆ ಕೇಳಿ ಬಂದವು. ಜೈಕಾರದ ಜೊತೆ ಕೊಂಬು ಕಹಳೆಯ ನಾದಗಳು ಹೊರಹೊಮ್ಮಿದವು.

ರಾತ್ರಿ 7ಕ್ಕೆ ನಗರದ ತ್ರಿಶೂಲ್ ಕಲಾಭವನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಬಿ.ಎಸ್‌. ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ಒಟ್ಟಾಗಿಯೇ ಬಂದರು. ಈ ವೇಳೆ ಕಾರ್ಯಕರ್ತರು ಹೆಚ್ಚಾಗಿ ಯಡಿಯೂರಪ್ಪ ಅವರಿಗೆ ಜೈಕಾರ ಕೂಗಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಅಲ್ಲೋ ಇಲ್ಲೋ ಕೇಳುವಂತೆ ಜೈಕಾರ ಹಾಕಿದರೆ, ಸಂಸದ ಜಿ.ಎಂ. ಸಿದ್ದೇಶ್ವರ ಅವರಿಗೂ ಜೈಕಾರ ಘೋಷಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT