ಸೋಮವಾರ, ನವೆಂಬರ್ 18, 2019
28 °C
ಪಕ್ಷಕ್ಕೆ ಮುಳುವಾದ ನಾಯಕರ ಅವಕಾಶವಾದಿ ರಾಜಕಾರಣ

6ರಿಂದ ಸೊನ್ನೆಗಿಳಿದ ಜೆಡಿಎಸ್‌ಗೆ ಪುಟದೇಳುವ ನಿರೀಕ್ಷೆ

Published:
Updated:
Prajavani

ದಾವಣಗೆರೆ: ಪಾಲಿಕೆಯ ಮೊದಲ ಚುನಾವಣೆಯಲ್ಲಿ 6 ಸ್ಥಾನಗಳಿಸಿದ್ದ ಜೆಡಿಎಸ್‌ 2ನೇ ಚುನಾವಣೆಯಲ್ಲಿ ಸೊನ್ನೆಗೆ ಬಂದು ನಿಂತಿತ್ತು. ಜೆಡಿಎಸ್‌ ನಾಯಕರ ಅವಕಾಶವಾದಿ ರಾಜಕಾರಣವೇ ಈ ಹಿನ್ನಡೆಗೆ ಕಾರಣವಾಗಿತ್ತು. ಈ ಬಾರಿ ಮತ್ತೆ ಪುಟಿದೇಳುವ ನಿರೀಕ್ಷೆಯನ್ನು ಪಕ್ಷ ಇಟ್ಟುಕೊಂಡಿದೆ.

ಸ್ಪರ್ಧಿಸಲಷ್ಟೇ ಜೆಡಿಎಸ್‌: 1999ರಿಂದ 2013ರವರೆಗೆ ದಕ್ಷಿಣ ಕ್ಷೇತ್ರದಿಂದ ವಿಧಾನಸಭೆಗೆ ಜೆಡಿಎಸ್‌ನಿಂದ ಸ್ಪರ್ಧಿಸಿದ ಅಷ್ಟೂ ಅಭ್ಯರ್ಥಿಗಳು ಚುನಾವಣೆ ಮುಗಿದ ಬಳಿಕ ಪಕ್ಷ ತೊರೆದು ಹೋಗಿದ್ದಾರೆ. ಕಾಂಗ್ರೆಸ್‌ನಿಂದ ಸೈಯದ್‌ ಸೈಫುಲ್ಲ, ಮೋತಿ ವೀರಣ್ಣ ಸ್ಪರ್ಧೆಯ ಬಳಿಕ ಕಾಂಗ್ರೆಸ್‌ಗೆ ಮರಳಿದರೆ, ಎಚ್‌.ಎಸ್‌. ನಾಗರಾಜ್‌ ಬಿಜೆಪಿಗೆ ಹೋದರು. ಅಷ್ಟೇ ಅಲ್ಲ 2008ರಲ್ಲಿ 6 ಕಡೆ ಜೆಡಿಎಸ್‌ ಪಡೆದಿತ್ತಲ್ಲ 2013ರ ಚುನಾವಣೆಯ ವೇಳೆಗೆ ರಹಮತ್‌ ಉಲ್ಲಾ ಒಬ್ಬರು ಮೃತಪಟ್ಟಿದ್ದರು. ಉಳಿದ ಐವರೂ ಕಾಂಗ್ರೆಸ್‌ ಸೇರಿಬಿಟ್ಟಿದ್ದರು.

‘ಜೆಡಿಎಸ್‌ ಎಂಬುದು ಉಳಿದ ಪಕ್ಷಗಳ ಅತೃಪ್ತರ, ಪಕ್ಷಾಂತರಿಗಳ ತಾಣವಷ್ಟೇ. ಅದಕ್ಕೆ ಗಟ್ಟಿಯಾದ ನೆಲೆ ಇಲ್ಲ ಎಂಬುದನ್ನು ಈ ಪಕ್ಷಾಂತರಗಳು ಸೃಷ್ಟಿಸಿಬಿಟ್ಟವು. ಈ ಗೊಂದಲ ಕಾರ್ಯಕರ್ತರನ್ನು ವಿಚಲಿತರನ್ನಾಗಿ ಮಾಡಿತು. ಈಗ ಮತ್ತೆ ಪಕ್ಷವನ್ನು ಕಟ್ಟುವ ಕೆಲಸವನ್ನು ಮಾಡುತ್ತಿದ್ದೇವೆ. ದಕ್ಷಿಣ ಕ್ಷೇತ್ರದಲ್ಲಿರುವ 20 ವಾರ್ಡ್‌ಗಳಲ್ಲಿ ಕನಿಷ್ಠ 10 ಸ್ಥಾನ ಗೆಲ್ಲಲಿದ್ದೇವೆ’ ಎಂಬುದು ಜೆಡಿಎಸ್‌ ದಕ್ಷಿಣ ಕ್ಷೇತ್ರದ ಅಧ್ಯಕ್ಷ ಜೆ.ಅಮಾನುಲ್ಲಾ ಖಾನ್‌ ಅವರ ವಿಶ್ವಾಸ.

2013ರ ಚುನಾವಣೆಯ ಹೊತ್ತಿಗೆ ಜೆಡಿಎಸ್‌ನಲ್ಲಿ ಗಟ್ಟಿ ನಾಯಕತ್ವ ಇರಲಿಲ್ಲ. ಹಾಗಾಗಿ ಹಿನ್ನಡೆಯಾಯಿತು. ಈ ಬಾರಿ ಮಾಜಿ ಶಾಸಕ ಎಚ್‌.ಎಸ್‌. ಶಿವಶಂಕರಪ್ಪ, ನನ್ನ ಮತ್ತು ಅಮಾನುಲ್ಲಾ ಖಾನ್‌ ನೇತೃತ್ವದಲ್ಲಿ ಚುನಾವಣೆಗೆ ತಯಾರಿ ನಡೆಸುತ್ತಿದ್ದೇವೆ. ಈ ಬಾರಿ ದಕ್ಷಿಣ ಕ್ಷೇತ್ರದಲ್ಲಿ 8ರಿಂದ 10 ಸ್ಥಾನ ಗೆಲ್ಲುವುದು ನಿಶ್ಚಿತ. ಉತ್ತರ ಕ್ಷೇತ್ರದಲ್ಲಿಯೂ ಕೆಲವು ಸ್ಥಾನಗಳನ್ನು ಪಡೆಯುವ ಪ್ರಯತ್ನ ಮಾಡುತ್ತಿದ್ದೇವೆ’ ಎನ್ನುತ್ತಾರೆ ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಚಿದಾನಂದಪ್ಪ.

ರಾಜ್ಯದಲ್ಲಿ 20–20 ಸರ್ಕಾರದಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರು. ಅವರ ಅವಧಿ ಮುಗಿದ ಬಳಿಕ ಬಿಜೆಪಿಗೆ ಅಧಿಕಾರ ಹಸ್ತಾಂತರಿಸದ ವಿವಾದವೂ ಆಗ ಜೆಡಿಎಸ್‌ಗೆ ಅಂಟಿಕೊಂಡಿತ್ತು. ಅದೆಲ್ಲ ಕಾರಣದಿಂದ 2013ರಲ್ಲಿ ಸೊನ್ನೆ ಸುತ್ತಿದ್ದ ಜೆಡಿಎಸ್‌ ಈ ಬಾರಿ ಫಿನಿಕ್ಸ್‌ನಂತೆ ಮತ್ತೆ ಮೇಲೆದ್ದು ಬರಲಿದೆ ಎಂಬುದು ಮುಖಂಡರ ಅಭಿಪ್ರಾಯ.

ಪ್ರತಿಕ್ರಿಯಿಸಿ (+)