ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಶಾನಗಳನ್ನೇ ಕಾಡುತ್ತಿದೆ ಒತ್ತುವರಿ ‘ಭೂತ’

Last Updated 8 ಜುಲೈ 2022, 2:47 IST
ಅಕ್ಷರ ಗಾತ್ರ

ಚನ್ನಗಿರಿ: ತಾಲ್ಲೂಕಿನಲ್ಲಿ ಸ್ಮಶಾನ ಜಾಗಗಳ ಒತ್ತುವರಿ ಜಾಸ್ತಿಯಾಗಿದೆ. ಹೊದಿಗೆರೆ, ತೆಗ್ಗಿನಮಠ ಸೇರಿದಂತೆ 10 ಗ್ರಾಮಗಳಲ್ಲಿ ಸ್ಮಶಾನಗಳ ಜಾಗವನ್ನು ಕಬಳಿಸಲು ಯತ್ನಿಸುತ್ತಿರುವುದು ಅಂತ್ಯ ಸಂಸ್ಕಾರಕ್ಕೆ ತೊಡಕಾಗಿದೆ.

ಹಲವು ಗ್ರಾಮಗಳ ಸ್ಮಶಾನಗಳಲ್ಲಿ ಗಿಡಗಂಟಿಗಳು ಬೆಳೆದಿದ್ದು, ಅಲ್ಲಿಯೇ ಜನರು ಶವಗಳನ್ನು ಹೂಳುತ್ತಿದ್ದಾರೆ. ಸ್ಮಶಾನ ಭೂಮಿ ಮಂಜೂರು ಮಾಡಿಸಿಕೊಳ್ಳಲು ಆಯಾ ಸಮಾಜದವರು ಜನಪ್ರತಿನಿಧಿಗಳಿಗೆ ಮನವಿ ಮಾಡುತ್ತಿದ್ದಾರೆ. ಸಮಾಜಕ್ಕೊಂದು ಸ್ಮಶಾನ ಭೂಮಿ ನೀಡುವುದು ತಾಲ್ಲೂಕು ಆಡಳಿತಕ್ಕೆ ಸವಾಲಿನ ಕೆಲಸವಾಗಿದೆ. ಬಹುತೇಕ ಗ್ರಾಮಗಳಲ್ಲಿ ಸರ್ಕಾರಿ ಗೋಮಾಳದಲ್ಲಿ ಸ್ಮಶಾನ ಭೂಮಿಗಾಗಿ ಜಮೀನನ್ನು ನೀಡಲಾಗಿದೆ.

ಚನ್ನಗಿರಿಯು ಜಿಲ್ಲೆಯಲ್ಲಿಯೇ ಎರಡನೇ ಅತಿ ದೊಡ್ಡ ತಾಲ್ಲೂಕಾಗಿದ್ದು, 61 ಗ್ರಾಮ ಪಂಚಾಯಿತಿಗಳನ್ನು ಹೊಂದಿದೆ. ತಾಲ್ಲೂಕಿನ 201 ಗ್ರಾಮಗಳಿಗೂ ತಾಲ್ಲೂಕು ಆಡಳಿತ ಸ್ಮಶಾನಕ್ಕೆ ಭೂಮಿ ಒದಗಿಸಿದೆ. ತಾಲ್ಲೂಕಿನ ಉಬ್ರಾಣಿ ಹೋಬಳಿಯ ಮಾಚನಾಯಕನಹಳ್ಳಿಗೆ ಮಾತ್ರ ಈವರೆಗೆ ಸ್ಮಶಾನ ಭೂಮಿ ಮಂಜೂರಾಗಿಲ್ಲ. ಸ್ಮಶಾನಕ್ಕಾಗಿ ಮೀಸಲಿಡಲು ಜಮೀನಿನ ಹುಡುಕಾಟ ನಡೆದಿದೆ. ಶೀಘ್ರವೇ ಈ ಗ್ರಾಮಕ್ಕೂ ಸ್ಮಶಾನಕ್ಕೆ ಜಾಗ ಒದಗಿಸಲಾಗುವುದು’ ಎಂದು ತಾಲ್ಲೂಕು ಆಡಳಿತ ಸ್ಪಷ್ಟಪಡಿಸಿದೆ.

‘ಉಳ್ಳವರು ಸ್ವಂತ ಜಮೀನು ಹಾಗೂ ತೋಟಗಳಲ್ಲಿಯೇ ಶವಸಂಸ್ಕಾರ ನೆರವೇರಿಸುತ್ತಿದ್ದಾರೆ. ಆದರೆ, ಜಮೀನುರಹಿತರ ಪಾಡು ಹೇಳತೀರದ್ದಾಗಿದೆ. ರಸ್ತೆ ಬದಿಯಲ್ಲಿ ಶವವನ್ನು ಹೂಳುತ್ತಿದ್ದು, ತಾಲ್ಲೂಕು

ಆಡಳಿತ ಗ್ರಾಮಕ್ಕೆ ಸ್ಮಶಾನ ಭೂಮಿಯನ್ನು ನೀಡುವ ಮೂಲಕ ಜನರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಬೇಕು’ ಎಂಬುದು ಮಾಚನಾಯಕನ ಹಳ್ಳಿ ಗ್ರಾಮದ ಭರತ್‌ ಅವರ ಆಗ್ರಹ.

ತಾಲ್ಲೂಕಿನಲ್ಲಿ 249 ಗ್ರಾಮ ಗಳಿದ್ದು, ಅವು ಗಳಲ್ಲಿ ‘ಕಂದಾಯ ಗ್ರಾಮ’ದ ಮಾನ್ಯತೆ ಪಡೆಯಬೇಕಿರುವ ಇನ್ನೂ 47 ಗ್ರಾಮಗಳಿವೆ. ಜನವಸತಿ ಇರುವ 202 ಗ್ರಾಮಗಳ ಪೈಕಿ 201 ಗ್ರಾಮಗಳಲ್ಲಿ ಸ್ಮಶಾನಗಳು ಇವೆ. ಕೆಲವೆಡೆ ಸ್ವಚ್ಛತೆ, ನಿರ್ವಹಣೆ ಕೊರತೆ ಇದೆ. ಚನ್ನಗಿರಿ ತಾಲ್ಲೂಕಿನಲ್ಲಿ ಮಾಯಕೊಂಡ ಹಾಗೂ ಚನ್ನಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳಿದ್ದು, ಎರಡೂ ಕ್ಷೇತ್ರಗಳ ಗ್ರಾಮಗಳಿಗೆ ಯಾವುದೇ ತಾರತಮ್ಯ ಇಲ್ಲದೇ,ಸಮವಾಗಿ ಸ್ಮಶಾನ ಭೂಮಿಗಳನ್ನು ಆಯಾ ತಾಲ್ಲೂಕು ಆಡಳಿತಗಳು ನೀಡಿದೆ.

‘ಉದ್ಯೋಗಖಾತ್ರಿ ಯೋಜನೆ ಅಡಿ ಸ್ಮಶಾನ ಅಭಿವೃದ್ಧಿ’: ಕೆಲವೊಂದು ಗ್ರಾಮಗಳಲ್ಲಿ ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ್ಯ ಖಾತ್ರಿ ಯೋಜನೆಯಡಿ ಸ್ಮಶಾನ ಭೂಮಿಗಳನ್ನು ಅಭಿವೃದ್ಧಿಪಡಿಸಿಕೊಂಡಿದ್ದರೆ, ಇನ್ನು ಹಲವು ಗ್ರಾಮಗಳು ಸ್ಮಶಾನಗಳ ಅಭಿವೃದ್ಧಿಗೆ ಸರ್ಕಾರದ ಅನುದಾನಕ್ಕಾಗಿ ಮೊರೆಹೋಗಿವೆ. ಸಂತೇಬೆನ್ನೂರು ಗ್ರಾಮದ ಸ್ಮಶಾನವನ್ನು ಉದ್ಯೋಗ ಖಾತ್ರಿ ಯೋಜನೆ ಅಡಿ ₹ 20 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ರುದ್ರಭೂಮಿಯಲ್ಲಿ ಎಲ್ಲ ಸೌಕರ್ಯಗಳನ್ನು ಒದಗಿಸಲಾಗಿದೆ.

‘ಕ್ಷೇತ್ರದಲ್ಲಿನ ಎಲ್ಲ ಗ್ರಾಮ ಗಳಿಗೂ ಸ್ಮಶಾನಗಳಿಗೆ ಭೂಮಿಯನ್ನು ಒದಗಿಸಲಾಗಿದೆ. ಮಾಚನಾಯಕನ ಹಳ್ಳಿಗೆ ಶೀಘ್ರವೇ ಸ್ಮಶಾನ ಭೂಮಿ ಕಲ್ಪಿಸುವಂತೆ ತಾಲ್ಲೂಕು ಆಡಳಿತಕ್ಕೆ ಸೂಚಿಸಲಾಗಿದೆ. ಕೆಲವೊಂದು ಗ್ರಾಮಗಳ ಜನ ಸ್ಮಶಾನ ಭೂಮಿ ಅಭಿವೃದ್ಧಿಗಾಗಿ ಅನುದಾನ ಮಂಜೂರು ಮಾಡುವಂತೆ ಸಲ್ಲಿಸಿದ ಮನವಿಯ ಮೇರೆಗೆ 4 ವರ್ಷಗಳ ಅವಧಿಯಲ್ಲಿ ಸ್ಮಶಾನ ಭೂಮಿಗಳ ಅಭಿವೃದ್ಧಿಗೆ ಶಾಸಕರ ಅನುದಾನದಲ್ಲಿ ₹ 50 ಲಕ್ಷ ಅನುದಾನ ನೀಡಿದ್ದೇನೆ’ ಎಂದು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ತಿಳಿಸಿದರು.

ಶೀಘ್ರ ಒತ್ತುವರಿ ತೆರವು: ತಹಶೀಲ್ದಾರ್

‘ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಸ್ಮಶಾನ ಜಾಗಗಳನ್ನು ಒತ್ತುವರಿ ಮಾಡಿಕೊಂಡಿರುವ ದೂರುಗಳು ಬರುತ್ತಿದ್ದು, ಮುಂದಿನ ದಿನಗಳಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಮಾಚನಾಯಕನಹಳ್ಳಿ ಗ್ರಾಮಕ್ಕೆ ಸ್ಮಶಾನ ಸೌಲಭ್ಯ ಕಲ್ಪಿಸಲು ಜಾಗದ ಪರಿಶೀಲನೆ ಕಾರ್ಯ ನಡೆದಿದೆ. ಶೀಘ್ರ ಈ ಗ್ರಾಮಕ್ಕೂ ಸ್ಮಶಾನಕ್ಕೆ ಭೂಮಿ ನೀಡಲಾಗುವುದು. ಜತೆಗೆ ಬಹುತೇಕ ಗ್ರಾಮಗಳಲ್ಲಿ ಪರಿಶಿಷ್ಟ ಜಾತಿಯವರು ಸ್ಮಶಾನಕ್ಕೆಪ್ರತ್ಯೇಕ ಭೂಮಿಗಾಗಿ ಮನವಿ ಮಾಡುತ್ತಿದ್ದು, ಯಾವ ಗ್ರಾಮದಲ್ಲಿ ಸರ್ಕಾರಿ ಗೋಮಾಳವಿದೆಯೋ ಆ ಗ್ರಾಮಗಳಲ್ಲಿ ಪರಿಶಿಷ್ಟ ಜಾತಿಯವರಿಗೆ ಪ್ರತ್ಯೇಕ ಸ್ಮಶಾನಕ್ಕೆ ಭೂಮಿ ನೀಡಲಾಗುವುದು’ ಎಂದು ತಹಶೀಲ್ದಾರ್ ಡಾ.ಪಟ್ಟರಾಜಗೌಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT