ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಎಸ್ಪಿ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ ಸೃಷ್ಟಿಸಿ ಹಣಕ್ಕೆ ಬೇಡಿಕೆ

Last Updated 15 ಮಾರ್ಚ್ 2021, 5:06 IST
ಅಕ್ಷರ ಗಾತ್ರ

ದಾವಣಗೆರೆ: ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಅವರ ಹೆಸರಿನಲ್ಲಿ ನಕಲಿ ಫೇಸ್‌ಬುಕ್‌ ಖಾತೆಯನ್ನು ತೆರೆಯಲಾಗಿದೆ.

ಉತ್ತರಪ್ರದೇಶದ ವ್ಯಕ್ತಿಯೊಬ್ಬ ‘ಹನುಮಂತರಾಯ ಹೊಸ್‌ಪೇಟ್’ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ತಮ್ಮ ಪತ್ನಿಯಿಂದ ವಿಷಯ ತಿಳಿದ ಎಸ್‌ಪಿಯವರು ನಕಲಿ ಖಾತೆಯನ್ನು ಬ್ಲಾಕ್ ಮಾಡಿಸಿ, ಡಿಲೀಟ್ ಮಾಡಿಸಿದ್ದಾರೆ. ಅಲ್ಲದೇ ಟಿಟ್ಟರ್, ವಾಟ್ಸ್ಆ್ಯಪ್ ಗ್ರೂಪ್ ಸ್ನೇಹಿತರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

‘ನನ್ನ ಫೇಸ್‌ಬುಕ್‌ ಖಾತೆಯ ಮನವಿಗಳಿಗೆ ಯಾರೂ ಪ್ರತಿಕ್ರಿಯಿಸಬೇಡಿ. ನಕಲಿ ಖಾತೆ ಸೃಷ್ಟಿಸಿರುವ ವ್ಯಕ್ತಿಯ ನಂಬರ್ ಪತ್ತೆಯಾಗಿದ್ದು, ಸೂಕ್ತ ಕ್ರಮಗಳನ್ನು ಕೈಗೊಳ್ಳುವುದಾಗಿ ಹನುಮಂತರಾಯ ಎಚ್ಚರಿಕೆ ನೀಡಿದ್ದಾರೆ.

ಸೈಬರ್ ಅಪರಾಧ ಬಗ್ಗೆ ಸಾರ್ವನಿಕರಿಗೆ ಜಾಗೃತಿ ಮೂಡಿಸಲು ಶೀಘ್ರ ಜಾಗೃತಿ ಅಭಿಯಾನ ಕೈಗೊಳ್ಳುವುದಾಗಿ ಮಾಹಿತಿ ನೀಡಿದ್ದಾರೆ.

ಶಾಸಕ ಮಾಡಾಳ್ ತೋಟದಲ್ಲಿ ಶ್ರೀಗಂಧ ಮರಗಳ ಕಳ್ಳತನ
ಚನ್ನಗಿರಿ:
ತಾಲ್ಲೂಕಿನ ಚನ್ನೇಶಪುರ (ಮಾಡಾಳ್) ಗ್ರಾಮದಲ್ಲಿರುವ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಅವರ ತೋಟದಲ್ಲಿ ಶುಕ್ರವಾರ ತಡರಾತ್ರಿ 6 ಶ್ರೀಗಂಧದ ಮರಗಳನ್ನು ಕಳ್ಳರು ಕತ್ತರಿಸಿಕೊಂಡು ಹೋಗಿದ್ದಾರೆ.

ವಿರೂಪಾಕ್ಷಪ್ಪ ಅವರ ಅಡಿಕೆ ಕೇಣಿ ಮನೆಯ ಹಿಂಭಾಗದಲ್ಲಿರುವ 1.5 ಎಕರೆ ಪ್ರದೇಶದಲ್ಲಿ 300 ಶ್ರೀಗಂಧದ ಮರಗಳನ್ನು ಬೆಳೆಸಲಾಗಿದೆ. ಇದರಲ್ಲಿ 6 ಮರಗಳನ್ನು ಕಳ್ಳರು ಶುಕ್ರವಾರ ಕತ್ತರಿಸಿಕೊಂಡು ಹೋಗಿದ್ದಾರೆ. ಚನ್ನಗಿರಿ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಸ್ಥಳಕ್ಕೆ ಸಿಪಿಐ ಆರ್.ಆರ್. ಪಾಟೀಲ್, ಪಿಎಸ್‌ಐಗಳಾದ ಜಗದೀಶ್, ಶಿವರುದ್ರಪ್ಪ ಎಸ್. ಮೇಟಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬೆಂಕಿ: ಮೇವು ಭಸ್ಮ
ಉಚ್ಚಂಗಿದುರ್ಗ:
ಗ್ರಾಮದ ಪಾದಗಟ್ಟೆ ಮುಂಭಾಗದಲ್ಲಿರುವ ಕಣದಲ್ಲಿ ಸಂಗ್ರಹಿಸಿಟ್ಟಿದ್ದ ಅವಳಿ ಅಂಕಳ ಬಸಪ್ಪ ಎಂಬುವವರಿಗೆ ಸೇರಿದ ಮೇವಿನ ಬಣವೆಗೆ ಭಾನುವಾರ ಆಕಸ್ಮಿಕವಾಗಿ ಬೆಂಕಿ ತಗುಲಿ ಸುಟ್ಟುಹೋಗಿದೆ.

ಬೆಳಿಗ್ಗೆ 8ರ ಸುಮಾರಿಗೆ ಬಣವೆಗೆ ಬೆಂಕಿ ತಗುಲಿ ಹೊಗೆಯಾಡುತ್ತಿರುವ ಸುದ್ದಿ ತಿಳಿದ ಗ್ರಾಮಸ್ಥರು ಬಿಂದಿಗೆ, ಬಕೆಟ್ ಹಿಡಿದು ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರು. ಆದರೆ, ಬೆಂಕಿಯ ತೀವ್ರತೆ ಹೆಚ್ಚಿದ್ದರಿಂದ ರಾಗಿ ಹುಲ್ಲು, ಮೆಕ್ಕೆಜೋಳ ಸಿಪ್ಪೆ ಬೆಂಕಿಗೆ ಅಹುತಿಯಾಗಿದೆ. ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ.

‘ಜಾನುವಾರಿಗಾಗಿ ₹ 50 ಸಾವಿರ ಕೊಟ್ಟು ಮೇವನ್ನು ಖರೀದಿಸಲಾಗಿತ್ತು. ಆದರೆ, ಬೆಂಕಿಗೆ ಅಹುತಿಯಾಗಿದೆ. ಮೇವಿನ ಬೆಲೆ ಏರಿಕೆಯಾಗಿದ್ದು, ಜಾನುವಾರನ್ನು ಸಾಕುವುದು ಕಷ್ಟವಾಗಿದೆ’ ಎಂದು ರೈತ ಅವಳಿ ಅಂಕಳ ಬಸಪ್ಪ ಅಳಲು ತೋಡಿಕೊಂಡರು. ಗ್ರಾಮದಿಂದ ಹರಪನಹಳ್ಳಿ 30 ಕಿ.ಮೀ ದೂರದಲ್ಲಿದೆ. ಅಗ್ನಿಶಾಮಕ ಸಿಬ್ಬಂದಿ ಬರುವ ವೇಳೆಗೆ ಬೆಂಕಿಯ ತೀವ್ರತೆ ಹೆಚ್ಚಿರುತ್ತದೆ. ಹೋಬಳಿ ಮಟ್ಟದಲ್ಲಿ ಅಗ್ನಿಶಾಮಕ ವಾಹನದ ವ್ಯವಸ್ಥೆ ಕಲ್ಪಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT