ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನ್ನ ನೀಡುವ ರೈತ ಸರ್ವಶ್ರೇಷ್ಠ

ಸರ್ಕಾರಿ ಶಾಲಾ ಕೊಠಡಿ ಉದ್ಘಾಟಿಸಿದ ಕೃಷಿ ಸಚಿವ ಬಿ.ಸಿ. ಪಾಟೀಲ
Last Updated 12 ಜೂನ್ 2022, 4:10 IST
ಅಕ್ಷರ ಗಾತ್ರ

ಮಾಯಕೊಂಡ: ದೇಶಕ್ಕೆ ಅನ್ನ ನೀಡುವ ಶಕ್ತಿ ರೈತನಿಗಿದೆಯೇ ಹೊರತು ಅಂಬಾನಿ, ಆದಾನಿಗೆ ಇಲ್ಲ. ಹಾಗಾಗಿ ದೇಶದ ರೈತ ಸರ್ವಶ್ರೇಷ್ಠ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ನುಡಿದರು.

ಸಮೀಪದ ನಲ್ಕುಂದ ಗ್ರಾಮದ ದಯಾನಂದ ಓ.ಎಸ್. ಅವರು ತಮ್ಮ ತಂದೆ ದಿ.ಓಬೇನಹಳ್ಳಿ ಶಿವಲಿಂಗಪ್ಪ ಅವರ ಸ್ಮರಣಾರ್ಥ ಸರ್ಕಾರಿ ಶಾಲೆಗೆ ಕಟ್ಟಿಸಿಕೊಟ್ಟಿರುವ ನೂತನ ಕೊಠಡಿಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ದೇವಸ್ಥಾನ ನಿರ್ಮಾಣಕ್ಕೆ ದೇಣಿಗೆ ಕೇಳಲು ಶಾಸಕರ ಬಳಿ ಬರುವವರಿದ್ದಾರೆ. ಶಾಲೆಗಳ ನಿರ್ಮಾಣಕ್ಕೆ ದೇಣಿಗೆ ಕೇಳುವವರು ವಿರಳ. ಭವಿಷ್ಯದ ನಾಯಕರನ್ನು ರೂಪಿಸುವುದು ಶಾಲೆ. ಅಂತಹ ಶಾಲಾ ಕೊಠಡಿಗಳನ್ನು ಕಟ್ಟಿಕೊಟ್ಟಿರುವ ದಯಾನಂದ ಅವರ ತಾಯಿ ಧನ್ಯರು ಎಂದರು.

ಶಾಸಕ ಎಸ್.ಎ. ರವೀಂದ್ರನಾಥ್ ಮಾತನಾಡಿ, ‘ಶಿಕ್ಷಣ ಪಡೆಯುವುದು ಪ್ರತಿಯೊಬ್ಬರ ಹಕ್ಕು. ಪೋಷಕರು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ರೈತರ ಬೆಳೆಗಳು ಬೆಂಬಲ ಬೆಲೆ ಅಡಿ ಖರೀದಿಯಾಗಬೇಕು. ಪ್ರತಿ ಕ್ಷೇತ್ರಕ್ಕೆ ಸಬ್ಸಿಡಿ ದರದಲ್ಲಿ ಕನಿಷ್ಠ 25 ಟ್ರ್ಯಾಕ್ಟರ್ ನೀಡುವ ಯೋಜನೆ ಜಾರಿಯಾಗಬೇಕು’ ಎಂದು ಒತ್ತಾಯಿಸಿದರು.

ಶಾಸಕ ಪ್ರೊ.ಎನ್. ಲಿಂಗಣ್ಣ ಮಾತನಾಡಿ, ‘ಮನೆ ಕಟ್ಟುವ ಕೆಲಸ ಬಿಟ್ಟು ಶಾಲಾ ಕೊಠಡಿ ಕಟ್ಟಿಸಿರುವುದು ಶ್ಲಾಘನೀಯ. ಒಂದೆರಡು ಕೊಠಡಿಗಳ ನಿರ್ಮಾಣಕ್ಕೆ ನಾನು ಅನುದಾನ ನೀಡುತ್ತೇನೆ. ರೈತರು ಸರ್ಕಾರದ ಯೋಜನೆಗಳನ್ನು ಬಳಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು’ ಎಂದರು.

ಮಾಜಿ ಶಾಸಕ ಬಸವರಾಜನಾಯ್ಕ ಮಾತನಾಡಿ, ‘ರೈತರು ಸಾವಯವ ಕೃಷಿಯತ್ತ ಗಮನಹರಿಸಬೇಕು’ ಎಂದು ಹೇಳಿದರು.

ಶಾಲಾ ಕೊಠಡಿ ದಾನಿ ದಯಾನಂದ ಮಾತನಾಡಿ, ‘ಗ್ರಾಮದ ಶಾಲಾ ಶಿಕ್ಷಕರ ಸಲಹೆ ಮೇರೆಗೆ ಶಾಲೆ ವೀಕ್ಷಿಸಿದಾಗ ಸ್ಥಿತಿ ಕಂಡು ನೂತನ ಕೊಠಡಿಗಳನ್ನು ನಿರ್ಮಿಸಲು ಮುಂದಾದೆ. ಇನ್ನೂ ನಾಲ್ಕು ಕೊಠಡಿಗಳ ಅಗತ್ಯವಿದ್ದು, ಶಾಸಕರು ಅನುದಾನ ನೀಡಬೇಕು’ ಎಂದು ಮನವಿ ಮಾಡಿದರು.

ಜಿಕೆವಿಕೆಯ ವಿದ್ಯಾರ್ಥಿಗಳು ರೈತ ಗೀತೆ ಹಾಡಿದರು. ಮುಖಂಡ ಧನಂಜಯ್ ಕಡ್ಲೆಬಾಳು ಸ್ವಾಗತಿಸಿದರು. ಶಿಕ್ಷಕ ಸಂತೋಷ್ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿವೃತ್ತ ಯೋಧರಾದ ರಾಜಪ್ಪ ಮತ್ತು ರೇವಣಸಿದ್ದಪ್ಪ ಅವರನ್ನು ಗೌರವಿಸಲಾಯಿತು.

ದಯಾನಂದ ಅವರ ತಾಯಿ ಸುನಂದಮ್ಮ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಮೀಲ ಬಾನು, ಬಯಲು ಸೀಮೆ ಅಭಿವದ್ಧಿ ಮಂಡಳಿ ಅಧ್ಯಕ್ಷ ಅಣಬೇರು ಜೀವನಮೂರ್ತಿ, ಧಾರವಾಡ ಕೃಷಿ ವಿ.ವಿ. ಅಜಗಣ್ಣನವರ್, ಕೃಷಿ ಜಂಟಿ ನಿರ್ದೇಶಕ ಶ್ರೀನಿವಾಸ ಚಿಂತಾಲ್, ಪ್ಯಾಟೆ ಹನುಮಂತಪ್ಪ, ಬೆಂಗಳೂರು ಕೃಷಿ ವಿವಿಯ ಸುರೇಶ್, ಬಿಇಒ ನಿರಂಜನಮೂರ್ತಿ ಸುನಂದಮ್ಮ, ಎಂಸಿಎಫ್‌ನ ಶಿವರಾಂರೆಡ್ಡಿ ನಲ್ಕುಂದ ಹಾಗೂ ಗ್ರಾಮಸ್ಥರು ಇದ್ದರು.

ಯೋಗ, ಯೋಗ್ಯತೆ ಇದ್ದವರು ಸಿ.ಎಂ. ಆಗ್ತಾರೆ’

ದಾವಣಗೆರೆ: ಯಾರಿಗೆ ಯೋಗ ಇದೆಯೋ ಅವರು ರಾಜ್ಯದ ಮುಖ್ಯಮಂತ್ರಿ ಆಗುತ್ತಾರೆ. ಯೋಗದ ಜೊತೆಗೆ ಯೋಗ್ಯತೆಯೂ ಇರಬೇಕು ಎಂದು ಕೃಷಿ ಸಚಿವ ಬಿ.‌ಸಿ. ಪಾಟೀಲ ಹೇಳಿದರು.

ಬಿ.ವೈ. ವಿಜಯೇಂದ್ರ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಚರ್ಚೆಯ ಕುರಿತು ನಲ್ಕುಂದ ಗ್ರಾಮದಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಮುಖ್ಯಮಂತ್ರಿ ಆಗಲು ಜನರ ಹಾಗೂ ಹೈಕಮಾಂಡ್ ಆಶೀರ್ವಾದ ಬೇಕು. ನಾಳೆ ರವಿ ಅಣ್ಣ (ಎಸ್‌.ಎ. ರವೀಂದ್ರನಾಥ್) ಅವರೂ ಮುಖ್ಯಮಂತ್ರಿ ಆಗಬಹುದು’ ಎಂದು ಹೇಳಿದರು.

‘ನೂಪುರ್ ಶರ್ಮಾ ಹೇಳಿಕೆ ನೀಡಿ 15 ದಿನಗಳಾಗಿವೆ. ಈಗ ಪ್ರತಿಭಟನೆ ಮಾಡುತ್ತಿದ್ದಾರೆ. ಯಾರೋ ದುರುದ್ದೇಶದಿಂದ ಈ ರೀತಿ ಮಾಡಿದ್ದಾರೆ. ಈ ದೇಶದಲ್ಲಿ ಕಾನೂನಿದೆ, ಅಲ್ಲಿ ಪ್ರಶ್ನೆ ಮಾಡಬಹುದಿತ್ತು. ಪ್ರತಿಭಟನೆ ನಡೆಸಿ ಸಾರ್ವಜನಿಕ ಆಸ್ತಿ ನಷ್ಟ ಮಾಡುವುದು ಸರಿಯಲ್ಲ’ ಎಂದು ಸಚಿವ ಪಾಟೀಲ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT