ಅರಣ್ಯರೋದನವಾದ ರೈತರ, ಕಾರ್ಮಿಕರ ಸಮಸ್ಯೆ

ಶನಿವಾರ, ಏಪ್ರಿಲ್ 20, 2019
29 °C
ಲೋಕಸಭಾ ಚುನಾವಣೆಯಲ್ಲಿ ಪ್ರತಿಧ್ವನಿಸುತ್ತಿರುವ ರಾಷ್ಟ್ರೀಯ ನಾಯಕತ್ವ, ಜಾತಿ ಸಮೀಕರಣ

ಅರಣ್ಯರೋದನವಾದ ರೈತರ, ಕಾರ್ಮಿಕರ ಸಮಸ್ಯೆ

Published:
Updated:
Prajavani

ದಾವಣಗೆರೆ: ಪ್ರಜಾತಂತ್ರದ ಹಬ್ಬವಾದ ಲೋಕಸಭಾ ಚುನಾವಣೆಯಲ್ಲಿ ಬರೀ ರಾಷ್ಟ್ರೀಯ ನಾಯಕತ್ವ, ಜಾತಿ ಸಮೀಕರಣ, ಹಣಬಲದಂತಹ ವಿಷಯಗಳೇ ಪ್ರತಿಧ್ವನಿಸುತ್ತಿವೆ. ರೈತರ, ಕಾರ್ಮಿಕರ ಹಾಗೂ ನಾಗರಿಕರ ಸ್ಥಳೀಯ ಸಮಸ್ಯೆಗಳ ಪಾಡು ಅರಣ್ಯರೋದನವಾಗಿವೆ.

ಮತದಾನಕ್ಕೆ ಎರಡು ವಾರಗಳು ಮಾತ್ರ ಬಾಕಿ ಉಳಿದಿವೆ. ಪ್ರಜಾತಂತ್ರದ ಜಾತ್ರೆಗೆ ಆಯೋಜಿಸಿರುವ ಚುನಾವಣೆ ಎಂಬ ಕುಸ್ತಿ ಸ್ಪರ್ಧೆಯ ಅಖಾಡದಲ್ಲಿ 25 ಪೈಲ್ವಾನರು (ಅಭ್ಯರ್ಥಿಗಳು) ತೊಡೆ ತಟ್ಟುತ್ತಿದ್ದಾರೆ. ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳು ರಾಷ್ಟ್ರೀಯ ನಾಯಕರ ‘ಮುಖವಾಡ’ ಹಾಕಿಕೊಂಡು ಹೂಂಕರಿಸುತ್ತಿದ್ದಾರೆ. ಪರಸ್ಪರ ಆರೋಪ–ಪ್ರತ್ಯಾರೋಪಗಳ ಮಳೆ ಸುರಿಸಲು ಆರಂಭಿಸಿದ್ದಾರೆ. ಪ್ರಾದೇಶಿಕ ಪಕ್ಷ ಹಾಗೂ ಪಕ್ಷೇತರ ಅಭ್ಯರ್ಥಿಗಳು ಇನ್ನೂ ‘ಸದ್ದು’ ಮಾಡುತ್ತಿಲ್ಲ.

ಪ್ರಚಾರದಲ್ಲಿ ಮುಂಚೂಣಿಯಲ್ಲಿರುವ ಬಿಜೆಪಿ, ಕಾಂಗ್ರೆಸ್‌ ಪಕ್ಷಗಳ ಅಭ್ಯರ್ಥಿಗಳು ಜಿಲ್ಲೆಯನ್ನು ಅಭಿವೃದ್ಧಿಪಡಿಸುವ ಬಗ್ಗೆ ದೂರದೃಷ್ಟಿಯುಳ್ಳ ಸಮಗ್ರ ಯೋಜನೆಯನ್ನು ಮತದಾರರ ಮುಂದೆ ಇಡುವ ಬದಲು ‘ಗಾಳಿ ಗುಳ್ಳೆ’ಗಳನ್ನು ಹಾರಿಸಿ ಬಿಡುತ್ತಿದ್ದಾರೆ. ಜಿಲ್ಲೆಯ ಏಳ್ಗೆಗಾಗಿ ತಾವು ಏನು ಮಾಡುತ್ತೇವೆ ಎಂಬುದನ್ನು ಹೇಳುವ ಬದಲು ರಾಷ್ಟ್ರೀಯ ನಾಯಕತ್ವವೇ ಚರ್ಚೆಯ ವಿಷಯವನ್ನಾಗಿ ಮಾಡಿಕೊಂಡಿದ್ದಾರೆ ಎಂಬ ಅಸಮಾಧಾನದ ಮಾತುಗಳು ಕೇಳಿಬರುತ್ತಿವೆ.

ರೈತರ ಸಮಸ್ಯೆಗಿಲ್ಲ ಮನ್ನಣೆ: ‘ಜಿಲ್ಲೆಯಲ್ಲಿ ರೈತರ ಅನೇಕ ಸಮಸ್ಯೆಗಳಿದ್ದರೂ ಜನಪ್ರತಿನಿಧಿಗಳಿಂದ ಅವುಗಳಿಗೆ ಪರಿಹಾರ ಸಿಗುತ್ತಿಲ್ಲ. ಅಕ್ರಮ ಪಂಪ್‌ಸೆಟ್‌ಗಳಿಂದಾಗಿ ಕಾಲುವೆಯ ಕೊನೆಯ ಭಾಗಕ್ಕೆ ನೀರು ಹರಿಯದೇ ಇರುವುದರಿಂದ ರೈತರ ಬೆಳೆಗಳು ಒಣಗುತ್ತಿವೆ. ವಿದ್ಯುತ್‌ ಸಮಸ್ಯೆಯಿಂದಾಗಿ ಬೆಳೆಗೆ ನೀರುಣಿಸಲು ರೈತರು ತೊಂದರೆ ಅನುಭವಿಸುವಂತಾಗಿದೆ. ಎಪಿಎಂಸಿಗಳಲ್ಲಿ ರೈತರ ಬೆಳೆಗಳಿಗೆ ವೈಜ್ಞಾನಿಕವಾಗಿ ಬೆಲೆ ಸಿಗುತ್ತಿಲ್ಲ’ ಎಂದು ಜಿಲ್ಲಾ ಪಂಚಾಯಿತಿ ಪಕ್ಷೇತರ ಸದಸ್ಯ, ರೈತ ಮುಖಂಡ ತೇಜಸ್ವಿ ಪಟೇಲ್‌ ಬೇಸರ ವ್ಯಕ್ತಪಡಿಸಿದರು.

‘ಸೂಳೆಕೆರೆಯಲ್ಲಿ ಅಕ್ರಮ ಪಂಪ್‌ಸೆಟ್‌, ಪೈಪ್‌ಲೈನ್‌ಗಳು ವರ್ಷದಿಂದ ವರ್ಷಕ್ಕೆ ಜಾಸ್ತಿಯಾಗುತ್ತಿವೆ. ಕುಡಿಯುವ ನೀರಿನ ಬಳಕೆ ಹೆಚ್ಚಾಗುತ್ತಿದೆ. ಆದರೆ, ಕೆರೆ ತುಂಬಿಸುವ ಕೆಲಸ ನಡೆಯುತ್ತಿಲ್ಲ. ಸಿದ್ದರಾಮಯ್ಯ ಸರ್ಕಾರದಲ್ಲಿ ಹರಪನಹಳ್ಳಿ ತಾಲ್ಲೂಕಿನ ಗರ್ಭಗುಡಿ ಏತ ನೀರಾವರಿ ಯೋಜನೆ ಘೋಷಿಸಲಾಯಿತು. ಅದು ಕಾರ್ಯರೂಪಕ್ಕೆ ಬಂದಿಲ್ಲ. ದಾವಣಗೆರೆಯ 22 ಕೆರೆಗಳ ಯೋಜನೆಯೂ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇಂಥ ಯಾವ ವಿಚಾರಗಳೂ ಚರ್ಚೆಗೆ ಬರುತ್ತಿಲ್ಲ’ ಎಂದರು.

‘ಕೃಷಿ ಆಧಾರಿತ ಕೈಗಾರಿಕೆಗಳನ್ನು ಸ್ಥಾಪಿಸುವ ಕುರಿತು ನಮ್ಮ ಬೇಡಿಕೆ ಇನ್ನೂ ಈಡೇರಿಲ್ಲ. ಹರಿಹರದ ಬಳಿ ಕಾರ್ಗಿಲ್‌ ಫ್ಯಾಕ್ಟರಿ ಆರಂಭಿಸಿದ್ದರೂ ಅಕ್ಕ–ಪಕ್ಕದ ರೈತರ ಮೆಕ್ಕೆಜೋಳವನ್ನೇ ಖರೀದಿಸುವುದಿಲ್ಲ. ಸ್ಥಳೀಯ ರೈತರ ಉತ್ಪನ್ನ ಖರೀದಿಸಬೇಕು ಎಂಬ ಷರತ್ತು ಹಾಕಬೇಕು. ಖಾಸಗಿ–ಸಾರ್ವಜನಿಕ ಸಹಭಾಗಿತ್ವ (ಪಿ.ಪಿ.ಪಿ) ಮಾದರಿಯಲ್ಲಾದರೂ ಕಾರ್ಖಾನೆಗಳನ್ನು ಆರಂಭಿಸಿದರೆ ರೈತರ ಉತ್ಪನ್ನಗಳಿಗೆ ಒಳ್ಳೆಯ ಬೆಲೆ ಸಿಗಲು ಸಾಧ್ಯ. ಈ ನಿಟ್ಟಿನಲ್ಲಿ ಅಭ್ಯರ್ಥಿಗಳು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು’ ಎಂದು ತೇಜಸ್ವಿ ಪಟೇಲ್‌ ಪ್ರತಿಪಾದಿಸಿದರು.

ಉದ್ಯೋಗ ಸೃಷ್ಟಿಗಿಲ್ಲ ಒತ್ತು: ‘ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸಲು ತಮ್ಮ ಬಳಿ ಯಾವ ಯೋಜನೆ ಇದೆ ಎಂಬುದನ್ನು ಯಾವ ಅಭ್ಯರ್ಥಿಗಳೂ ಹೇಳುತ್ತಿಲ್ಲ. ಕೈಕಾರಿಕೆಗಳನ್ನು ಸ್ಥಾಪಿಸಿದರೆ ಉದ್ಯೋಗ ಸೃಷ್ಟಿಯಾಗಿ ಜಿಲ್ಲೆಯ ಆರ್ಥಿಕತೆಯೂ ಸುಧಾರಿಸಲಿದೆ. ಚುನಾವಣೆಯಲ್ಲಿ ಈ ವಿಷಯವೇ ಮಹತ್ವ ಪಡೆಯುತ್ತಿಲ್ಲ’ ಎಂದು ಕಾರ್ಮಿಕ ಮುಖಂಡ ಎಚ್‌.ಕೆ. ರಾಮಚಂದ್ರಪ್ಪ ದೂರಿದರು.

‘ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ವಿಮಾನ ನಿಲ್ದಾಣ ನಿರ್ಮಿಸಿದ್ದರೆ ಈ ಭಾಗವೂ ಅಭಿವೃದ್ಧಿ ಹೊಂದುತ್ತಿತ್ತು. ದಾವಣಗೆರೆಗೆ ಮಂಜೂರಾಗಿದ್ದ ‘ಜವಳಿ ಪಾರ್ಕ್‌’ ಜನಪ್ರತಿನಿಧಿಗಳ ನಿಷ್ಕಾಳಜಿಯಿಂದಾಗಿ ಶಿವಮೊಗ್ಗಕ್ಕೆ ಹೋಯಿತು. ಅದನ್ನು ಇಲ್ಲಿಯೇ ಉಳಿಸಿಕೊಂಡಿದ್ದರೆ ನಾಲ್ಕೈದು ಸಾವಿರ ಜನರಿಗೆ ಉದ್ಯೋಗ ಸಿಗುತ್ತಿತ್ತು. ಹದಿನೈದು ವರ್ಷಗಳ ಕಾಲ ಸಂಸದರಾಗಿದ್ದ ಜಿ.ಎಂ. ಸಿದ್ದೇಶ್ವರ ಅವರು ಕೇಂದ್ರದ ಕೈಗಾರಿಕಾ ಸಚಿವರಾಗಿದ್ದರೂ ಜಿಲ್ಲೆಗೆ ಕೈಗಾರಿಕೆ ತರುವಲ್ಲಿ ವಿಶೇಷ ಕಾಳಜಿ ವಹಿಸಲಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ದಾವಣಗೆರೆಯಲ್ಲಿ ಏಳು ಕಾಟನ್‌ ಮಿಲ್‌ಗಳು ಮುಚ್ಚಿರುವುದರಿಂದ ಎಂಟು ಸಾವಿರಕ್ಕೂ ಹೆಚ್ಚು ಜನ ಕೆಲಸ ಕಳೆದುಕೊಂಡಿದ್ದಾರೆ. ದಾವಣಗೆರೆ ಕಾಟನ್‌ ಮಿಲ್‌ (ಡಿಸಿಎಂ) ಒಂದರಲ್ಲೇ ಎರಡೂವರೆ ಸಾವಿರ ಜನ ಕೆಲಸ ಮಾಡುತ್ತಿದ್ದರು. ಸದ್ಯ ಆಂಜನೇಯ ಮಿಲ್‌ ಮಾತ್ರ ಕಾರ್ಯನಿರ್ವಹಿಸುತ್ತಿದೆ. ಸಂಸದರಾಗುವವರು ಜಿಲ್ಲೆಯಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಸುವ ಬೃಹತ್‌ ಕೈಗಾರಿಕೆ ಸ್ಥಾಪನೆಗೆ ಬದ್ಧತೆ ತೋರಬೇಕು’ ಎಂದು ರಾಮಚಂದ್ರಪ್ಪ ಒತ್ತಾಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !