ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನ್ನದಾತನ ಗಾಯಕ್ಕೆ ‘ಮನ್ನಾ’ ಮುಲಾಮು

₹ 2 ಲಕ್ಷದವರೆಗೆ ಸಾಲ ಮನ್ನಾ ಘೋಷಿಸಿದ ರಾಜ್ಯ ಸರ್ಕಾರ
Last Updated 5 ಜುಲೈ 2018, 17:19 IST
ಅಕ್ಷರ ಗಾತ್ರ

ದಾವಣಗೆರೆ: ಸಂಪೂರ್ಣ ಸಾಲ ಮನ್ನಾ ನಿರೀಕ್ಷೆಯಲ್ಲಿದ್ದ ರೈತರ ‘ಸಾಲದ ಬರೆ’ಯ ಗಾಯಕ್ಕೆ ರಾಜ್ಯ ಸರ್ಕಾರ ಒಂದಿಷ್ಟು ಮುಲಾಮು ಹಚ್ಚಲು ಮುಂದಾಗಿದೆ. ಗುರುವಾರ ಮಂಡಿಸಿದ ಬಜೆಟ್‌ನಲ್ಲಿ ಕೆಲವು ಷರತ್ತುಗಳನ್ನು ವಿಧಿಸಿ ₹ 2 ಲಕ್ಷದವರೆಗಿನ ಬೆಳೆ ಸಾಲ ಮನ್ನಾ ಮಾಡಿದೆ. ಇದು ಹಲವು ರೈತರಲ್ಲಿ ಸ್ವಲ್ಪ ಮಟ್ಟಿಗೆ ಸಮಾಧಾನ ತಂದಿದೆಯಾದರೂ, ರೈತ ಮುಖಂಡರಿಗೆ ತೃಪ್ತಿ ತಂದಿಲ್ಲ.

ಜಿಲ್ಲೆಯಲ್ಲಿ ಸಹಕಾರ ಬ್ಯಾಂಕ್‌, ಗ್ರಾಮೀಣ ಬ್ಯಾಂಕ್‌, ರಾಷ್ಟ್ರೀಕೃತ ಹಾಗೂ ಖಾಸಗಿ ಬ್ಯಾಂಕ್‌ಗಳಲ್ಲಿ ಸದ್ಯಕ್ಕೆ 2.59 ಲಕ್ಷ ರೈತರಿಂದ ಅಂದಾಜು ₹ 2,716.72 ಕೋಟಿ ಸಾಲ ಬಾಕಿ ಇದೆ. ಸಂಪೂರ್ಣ ಸಾಲ ಮನ್ನಾ ಮಾಡಿದ್ದರೆ ಈ ಎಲ್ಲ ರೈತರ ಇಷ್ಟೂ ಮೊತ್ತದ ಸಾಲ ಮನ್ನಾ ಆಗುತ್ತಿತ್ತು. ಆದರೆ, ಸರ್ಕಾರ ಕೆಲವು ನಿಯಮಾವಳಿಗಳನ್ನು ರೂಪಿಸಿದೆ. ಹೀಗಾಗಿ ಎಷ್ಟು ಪ್ರಮಾಣದ ಸಾಲದ ಮೊತ್ತ ಮನ್ನಾ ಆಗಲಿದೆ ಎಂಬ ಮಾಹಿತಿ ಸದ್ಯಕ್ಕೆ ಲಭ್ಯವಾಗಿಲ್ಲ ಎನ್ನುತ್ತಾರೆ ಲೀಡ್‌ ಬ್ಯಾಂಕ್‌ನ ವ್ಯವಸ್ಥಾಪಕ ಎನ್‌.ಟಿ. ಎರ್ರಿಸ್ವಾಮಿ.

2017ರ ಡಿಸೆಂಬರ್‌ 31ಕ್ಕೆ ಬ್ಯಾಂಕ್‌ನ ದಾಖಲೆಯಲ್ಲಿ ಸಾಲ ಇದ್ದ ರೈತರಿಗೆ ಗರಿಷ್ಠ ₹ 2 ಲಕ್ಷದವರೆಗಿನ ಬೆಳೆ ಸಾಲ ಮನ್ನಾ ಆಗಲಿದೆ. ಆದಾಯ ತೆರಿಗೆ ಪಾವತಿಸುವ ರೈತರಿಗೆ, ಕಳೆದ ಬಾರಿ ಸಾಲ ಮನ್ನಾ ಯೋಜನೆಯ ಸೌಲಭ್ಯ ಪಡೆದವರಿಗೆ ಈ ಯೋಜನೆಯ ಲಾಭ ಸಿಗುವುದಿಲ್ಲ. ಸಕಾಲದಲ್ಲಿ ಸಾಲ ಮರುಪಾವತಿಸಿದ್ದ ರೈತರಿಗೆ ಗರಿಷ್ಠ ₹ 25 ಸಾವಿರ ಪ್ರೋತ್ಸಾಹಧನವನ್ನು ಸರ್ಕಾರ ಘೋಷಿಸಿದೆ.

‘ಸಾಲ ಮನ್ನಾ ಆಗುವುದೋ, ಇಲ್ಲವೋ ಎಂದುಕೊಂಡು ಬ್ಯಾಂಕಿನ ಬಡ್ಡಿಯ ಹೊರೆ ಜಾಸ್ತಿಯಾಗುವುದನ್ನು ತಪ್ಪಿಸಿಕೊಳ್ಳಲು ಹೇಗೋ ಹೊಂದಾಣಿಕೆ ಮಾಡಿ ಸಾಲ ಮರುಪಾವತಿಸಿದ್ದೆ. ಜಮೀನು ಅಭಿವೃದ್ಧಿಗಾಗಿ ಬಂಗಾರ ಅಡವಿಟ್ಟು ₹ 1.50 ಲಕ್ಷ ಸಾಲವನ್ನೂ ಪಡೆದಿದ್ದೆ. ರೈತರ ಸಂಪೂರ್ಣ ಸಾಲ ಮನ್ನಾ ಮಾಡದೇ ಇರುವುದರಿಂದ ಪ್ರಾಮಾಣಿಕವಾಗಿ ಸಾಲದ ಕಂತು ಪಾವತಿಸಿದ ನಮ್ಮಂಥ ರೈತರಿಗೆ ಇದರಿಂದ ಹೆಚ್ಚಿನ ಪ್ರಯೋಜನ ಸಿಗುತ್ತಿಲ್ಲ’ ಎಂದು ಎಲೆಬೇತೂರಿನ ರೈತ ಬಿ.ಕೆ. ಬಸಪ್ಪ ಬೇಸರ ವ್ಯಕ್ತಪಡಿಸಿದರು.

₹ 73 ಲಕ್ಷ ಬಾಕಿ:

ಹಲವು ರೈತರು ಕಳೆದ ಬಾರಿಯ ₹ 50 ಸಾವಿರ ಸಾಲ ಮನ್ನಾ ಯೋಜನೆಯ ಲಾಭ ಪಡೆದುಕೊಂಡಿದ್ದಾರೆ. ಸಾಲ ಮರುಪಾವತಿಸಿ ಹೊಸದಾಗಿ ಬೆಳೆ ಸಾಲ ಪಡೆದುಕೊಂಡಿದ್ದಾರೆ. ಸಹಕಾರ ಬ್ಯಾಂಕ್‌ಗಳಲ್ಲಿ 2017ರ ಡಿಸೆಂಬರ್‌ 31ಕ್ಕೆ ಅಂತ್ಯಗೊಂಡಂತೆ 182 ರೈತರಿಂದ ಕೇವಲ ₹ 73 ಲಕ್ಷ ಸಾಲ ಬಾಕಿ ಇದೆ. ಸರ್ಕಾರದಿಂದ ಸುತ್ತೋಲೆ ಬಂದ ಬಳಿಕ ಎಷ್ಟು ರೈತರಿಗೆ ಲಾಭ ಸಿಗಲಿದೆ ಎಂಬುದು ಗೊತ್ತಾಗಲಿದೆ ಎಂದು ಡಿಸಿಸಿ ಬ್ಯಾಂಕ್‌ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.

ಸದ್ಯ ಡಿಸಿಸಿ ಬ್ಯಾಂಕ್‌ನಲ್ಲಿ 67,800 ರೈತರ ₹ 218.92 ಕೋಟಿ ಸಾಲ ಇದೆ. ಇದರಲ್ಲಿ ಬಹುತೇಕ ಮಂದಿ ಹಳೆಯ ಸಾಲ ತೀರಿಸಿ, ಹೊಸದಾಗಿ ಸಾಲ ಪಡೆದುಕೊಂಡಿದ್ದಾರೆ. ಇವರಿಗೆ ಈಗ ಮತ್ತೆ ಸಾಲ ಮನ್ನಾ ಭಾಗ್ಯ ಸಿಗುತ್ತದೆಯೋ ಕಾದು ನೋಡಬೇಕು ಎಂದು ತಿಳಿಸಿದ್ದಾರೆ.

2017ರ ಯೋಜನೆಯ ಲಾಭ ಪಡೆದ ಸಹಕಾರ ಬ್ಯಾಂಕಿನಲ್ಲಿ ಸಾಲ ಪಡೆದ ರೈತರಿಗಿಂತಲೂ ಹೆಚ್ಚಾಗಿ 2018ರ ಯೋಜನೆಯು ರಾಷ್ಟ್ರೀಕೃತ, ಖಾಸಗಿ ಹಾಗೂ ಗ್ರಾಮೀಣ ಬ್ಯಾಂಕ್‌ಗಳಲ್ಲಿ ಸಾಲ ಬಾಕಿ ಉಳಿಸಿಕೊಂಡವರಿಗೆ ಹೆಚ್ಚಿನ ಲಾಭ ಸಿಗಲಿದೆ ಎನ್ನಲಾಗುತ್ತಿದೆ.

ಇದು ಚುನಾವಣೆ ಗಿಮಿಕ್‌

‘ರೈತರ ಸಂಪೂರ್ಣ ಸಾಲ ಮನ್ನಾ ಮಾಡುತ್ತೇವೆ ಎಂದು ಹೇಳಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಈಗ ಕೆಲವು ಷರತ್ತುಗಳನ್ನು ವಿಧಿಸಿ ಗರಿಷ್ಠ ₹ 2 ಲಕ್ಷದವರೆಗೆ ಮಾತ್ರ ಸಾಲ ಮನ್ನಾ ಮಾಡಿರುವುದು ಚುನಾವಣಾ ಗಿಮಿಕ್‌ ಆಗಿದೆ. ದುಡಿಯುವ ರೈತರ ಬಗ್ಗೆ ಅಸಡ್ಡೆ ತೋರಿಸಿದ್ದಾರೆ’ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ (ಕೋಡಿಹಳ್ಳಿ ಚಂದ್ರಶೇಖರ್‌ ಬಣ) ರಾಜ್ಯ ಕಾರ್ಯದರ್ಶಿ ಹೊನ್ನೂರು ಮುನಿಯಪ್ಪ ಪ್ರತಿಕ್ರಿಯಿಸಿದ್ದಾರೆ.

ಸಾಲ ಮರುಪಾವತಿಸಿ ಹೊಸದಾಗಿ ಪಡೆದವರಿಗೆ ಮನ್ನಾ ಮಾಡುವುದಿಲ್ಲ ಹಾಗೂ ಸಾಲ ನವೀಕರಿಸಿಕೊಂಡವರಿಗೆ ಗರಿಷ್ಠ ₹ 25 ಸಾವಿರ ಪ್ರೋತ್ಸಾಹಧನ ನೀಡುವುದಾಗಿ ಸರ್ಕಾರ ಹೇಳಿದೆ. ಕಟ್ಟಿದವರಿಗೆ ಒಂದು ನ್ಯಾಯ, ಕಳ್ಳರಿಗೆ– ಸುಳ್ಳುಗಾರರಿಗೆ ಒಂದು ನ್ಯಾಯ ಮಾಡಿದಂತಾಗುತ್ತದೆ. ಮಾತು ಕೊಟ್ಟಂತೆ ಎಲ್ಲರ ಸಾಲ ಮನ್ನಾ ಮಾಡಬೇಕಿತ್ತು. ಶುಕ್ರವಾರ ಬೆಂಗಳೂರಿನಲ್ಲಿ ಸಂಘದ ಸಭೆ ನಡೆಸಿ ಮುಂದಿನ ಹೋರಾಟದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಊಟದ ಬದಲು ಉಪ್ಪಿನಕಾಯಿ

‘ರೈತರಿಗೆ ಊಟ ಕೊಡಬೇಕಿತ್ತು. ಆದರೆ, ಸರ್ಕಾರ ಉಪ್ಪಿನಕಾಯಿ ಕೊಟ್ಟಿದೆ. ಇದರಿಂದ ಹೊಟ್ಟೆ ತುಂಬಲು ಸಾಧ್ಯವಿಲ್ಲ’ ಎಂದು ರೈತ ಸಂಘ ಹಾಗೂ ಹಸಿರು ಸೇನೆಯ (ಪುಟ್ಟಣ್ಣಯ್ಯ ಬಣ) ರಾಜ್ಯ ಕಾರ್ಯದರ್ಶಿ ಬಲ್ಲೂರು ರವಿಕುಮಾರ್‌, ಸಾಲ ಮನ್ನಾ ಯೋಜನೆ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಸರ್ಕಾರದ ತೀರ್ಮಾನ ಅಲ್ಪ ತೃಪ್ತಿ ತಂದಿದೆ. ನಾವು ಜೂನ್‌ 30ರವರೆಗಿನ ಸಾಲವನ್ನು ಮನ್ನಾ ಮಾಡಲು ಕೋರಿದ್ದೆವು. ರೈತರು ಮಾಡಿದ್ದ ಸಾಲವು ಆಹಾರ ಭದ್ರತೆಗಾಗಿ ಠೇವಣಿ ಇಟ್ಟ ಹಣ ಇದ್ದಂತೆ. ಇದನ್ನು ತೀರಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ. ಮುಂದಿನ ಹೋರಾಟದ ಬಗ್ಗೆ ಇದೇ 9ರಂದು ನಡೆಯುವ ರಾಜ್ಯ ಸಮಿತಿ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

‘ರೈತರ ಸಾಲ ಮನ್ನಾ ಮಾಡುತ್ತಿರುವ ಬಗ್ಗೆ ಬಹಳ ಚರ್ಚೆಯಾಗುತ್ತಿದೆ. ಆದರೆ, ಕೇಂದ್ರ ಸರ್ಕಾರ 2017–18ನೇ ಸಾಲಿನಲ್ಲಿ 100 ಉದ್ಯಮಿಗಳ ₹ 1.14 ಲಕ್ಷ ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದು, 10 ಬಹುದೊಡ್ಡ ಉದ್ಯಮಿಗಳು ₹ 3,000 ಕೋಟಿಯಿಂದ ₹ 18,919 ಕೋಟಿ ಸಾಲ ಪಡೆದು ಕಟ್ಟದೇ ಇರುವ ಬಗ್ಗೆ ಚರ್ಚೆಯೇ ಆಗಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರ, ಶಾಸಕರು ಹಾಗೂ ಸಂಸದರ, ಸಚಿವರ ಸಂಬಳ ಹೆಚ್ಚಳವಾಗುತ್ತಿರುವುದೂ ಚರ್ಚೆಯಾಗುತ್ತಿಲ್ಲ. ರೈತರನ್ನು ಮಾತ್ರ ಭಿಕ್ಷುಕರಂತೆ ನೋಡುತ್ತಿರುವುದು ಸರಿಯಲ್ಲ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT