ಗುರುವಾರ , ಅಕ್ಟೋಬರ್ 29, 2020
28 °C
7ರಿಂದ ಮಾಯಕೊಂಡ ಹೋಬಳಿಯಲ್ಲಿ ಅನಿರ್ದಿಷ್ಟ ಧರಣಿ ಸತ್ಯಾಗ್ರಹ

ದಾವಣಗೆರೆ: ಖರೀದಿ ಕೇಂದ್ರಕ್ಕೆ ಆಗ್ರಹ, ರೈತರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ:  ಜಿಲ್ಲೆಯಲ್ಲಿ ಮೆಕ್ಕೆಜೋಳ, ಭತ್ತ ಮತ್ತು ಅಡಿಕೆ ಖರೀದಿ ಕೇಂದ್ರ ತೆರೆಯಲು ವಿಳಂಬ ಧೋರಣೆ ಅನುಸರಿಸುತ್ತಿರುವ ಸರ್ಕಾರದ ನಿರ್ಲಕ್ಷ‌್ಯ ಖಂಡಿಸಿ ಇಲ್ಲಿನ ತಾಲ್ಲೂಕು ಕಚೇರಿ ಎದುರು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಶುಕ್ರವಾರ ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ ನಡೆಸಲಾಯಿತು.

ತಾಲ್ಲೂಕು ಕಚೇರಿ ಎದುರು ಗಾಂಧಿ ಭಾವಚಿತ್ರ ಇಟ್ಟು ಧರಣಿ ನಡೆಸಿದ ರೈತ ಮುಖಂಡರು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಖರೀದಿ ಕೇಂದ್ರ ತೆರೆಯುವವರೆಗೂ ಪ್ರತಿಭಟನೆ ಮುಂದುವರಿಸುವುದಾಗಿ ಎಚ್ಚರಿಸಿದರು.

ಬಳಿಕ ಮಾತನಾಡಿದ ರೈತ ಸಂಘದ ರಾಜ್ಯ ಕಾರ್ಯದರ್ಶಿ ಬಲ್ಲೂರು ರವಿಕುಮಾರ, ‘ಜಿಲ್ಲೆಯಲ್ಲಿ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಇಂತಹ ಸಮಯದಲ್ಲಿ ರೈತರ ನೆರವಿಗೆ ಸರ್ಕಾರ ಧಾವಿಸಬೇಕು. ಮೆಕ್ಕೆಜೋಳ, ಭತ್ತ ಮತ್ತು ಅಡಿಕೆ ಖರೀದಿ ಕೇಂದ್ರ ತೆರೆಯುವಂತೆ ಹಲವು ಬಾರಿ ಮನವಿ ಮಾಡಿದ್ದರೂ ಕ್ರಮ ಕೈಗೊಂಡಿಲ್ಲ. ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ’ ಎಂದರು.

ಇಂದು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದ್ದು, ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

‘ಅ.7ರಿಂದ ಮಾಯಕೊಂಡ ಹೋಬಳಿಯಲ್ಲಿ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು. ದಾವಣಗೆರೆ ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳ ಎದುರು ಒಂದೊಂದು ದಿನ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ಇದಕ್ಕೂ ಸರ್ಕಾರ ಸ್ಪಂದಿಸದಿದ್ದರೆ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳ ಎದುರು ರೈತರು ಪ್ರತಿಭಟನೆ ನಡೆಸುವ ಕುರಿತು ಶೀಘ್ರ ನಿರ್ಧಾರ ಕೈಗೊಳ್ಳುತ್ತೇವೆ. ಖರೀದಿ ಕೇಂದ್ರ ತೆರೆಯುವವರೆಗೂ ಹೋರಾಟ ಮುಂದುವರಿಯಲಿದೆ’ ಎಂದು ಅವರು ತಿಳಿಸಿದರು.

ಮುಖಂಡರಾದ ಕಬ್ಬಳ ಪ್ರಸಾದ್, ಬಲ್ಲೂರು ಪರಶುರಾಮರೆಡ್ಡಿ, ಆವರಗೆರೆ ಇಟಗಿ ಬಸವರಾಜಪ್ಪ, ಲಿಂಗರಾಜ ಪಾಮೇನಹಳ್ಳಿ, ಆರ್.ಜಿ. ಬಸವರಾಜ ರಾಂಪುರ, ಮಾಯಕೊಂಡದ ಸಿ.ಟಿ. ನಿಂಗಪ್ಪ, ಮಾಯಕೊಂಡದ ಗೌಡ್ರ ಅಶೋಕ, ಆಲೂರು ಪರಮೇಶ್ವರಪ್ಪ, ಎನ್.ಟಿ. ಜಯನಾಯ್ಕ ನಾಗರಕಟ್ಟೆ, ಅಲೂರು ಮಂಜಪ್ಪ, ಬಲ್ಲೂರು ಅಣ್ಣಪ್ಪ, ಅಣಬೇರು ಕುಮಾರಸ್ವಾಮಿ, ಆವರಗೆರೆ ಕಲ್ಲಪ್ಪ, ಬೂದಾಳ್ ಮಹೇಶ್, ಐ.ಆರ್. ಕರುಣಾ, ಮಾಯಕೊಂಡ ಪ್ರತಾಪ್ ಭಾಗವಹಿಸಿದ್ದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು