ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಪನಿಗಳ ಗುಲಾಮರಾಗಲಿರುವ ಕೃಷಿಕರು

ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಎಚ್ಚರಿಕೆ
Last Updated 26 ಫೆಬ್ರುವರಿ 2021, 2:26 IST
ಅಕ್ಷರ ಗಾತ್ರ

ದಾವಣಗೆರೆ: ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿರುವ ಮೂರು ಕಾಯ್ದೆಗಳಿಂದಾಗಿ ಕೃಷಿಕರು ಕಂಪನಿಗಳ ಗುಲಾಮರಾಗಲಿದ್ದಾರೆ ಎಂದು ರಾಜ್ಯಸಭಾ ವಿರೋಧಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಎಚ್ಚರಿಸಿದರು.

ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ಮಂಡಿ ನಾಶವಾಗಲಿದೆ. ಒಮ್ಮೆ ಎಪಿಎಂಸಿ ಧ್ವಂಸವಾದರೆ ರೈತರು ತಮ್ಮ ಬೆಳೆ ಮಾರಾಟ ಮಾಡಲು ಶ್ರೀಮಂತರ, ಕಂಪನಿಗಳ ಬಾಗಿಲಲ್ಲಿ ಕಾಯಬೇಕಾಗುತ್ತದೆ. ಭಾರತದಲ್ಲಿ ಶೇ 86.4ರಷ್ಟು ರೈತರು ಎರಡು ಹೆಕ್ಟೇರ್‌ಗಿಂತ ಕಡಿಮೆ ಭೂಮಿ ಹೊಂದಿದ್ದಾರೆ. ಅದರಲ್ಲಿ ಕೃಷಿ ಮಾಡಿಕೊಂಡು ತಮ್ಮ ಕಾಲ ಮೇಲೆ ಸ್ವಾಭಿಮಾನದಿಂದ ನಿಂತು ಜೀವನ ಮಾಡುತ್ತಿದ್ದಾರೆ. ದೇಶದಲ್ಲಿ ಆಹಾರಧಾನ್ಯ ಬೇಕಾದಷ್ಟು ಇರಲು ಈ ಕೃಷಿಕರು ಕಾರಣ. ಗುತ್ತಿಗೆ ಆಧಾರದ ಕೃಷಿಯಿಂದ ಇವರಿಗೆಲ್ಲ ಏಟು ಬೀಳಲಿದೆ. ಅಷ್ಟೇ ಅಲ್ಲ ಆಹಾರ ಭದ್ರತಾ ಕಾಯ್ದೆಗೂ ತೊಂದರೆಯಾಗಲಿದೆ ಎಂದು ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

ಅಗತ್ಯ ವಸ್ತುಗಳ ಕಾಯ್ದೆಗೆ ತಿದ್ದುಪಡಿ ತರುವವ ಮೂಲಕ ಯಾರೂ ಎಷ್ಟೂ ಆಹಾರ ಧಾನ್ಯಗಳನ್ನು ಸಂಗ್ರಹಿಸಲು ಅವಕಾಶ ಮಾಡಿಕೊಡಲಾಗಿದೆ. ಇದರಿಂದ ಕಡಿಮೆ ಬೆಲೆ ಇರುವಾಗ ಖರೀದಿಸಿ ತಮ್ಮ ಗೋಡೌನ್‌ಗಳಲ್ಲಿ ಇಟ್ಟುಕೊಂಡು ಮಾರುಕಟ್ಟೆಯಲ್ಲಿ ಕೊರತೆಯಾಗಿ ಬೆಲೆ ಏರಿಕೆಯಾದಾಗ ಮಾರಾಟ ಮಾಡುವ ವ್ಯವಸ್ಥೆ ಇದಾಗಿದೆ. ಆಹಾರದ ಹಕ್ಕಿಗೆ ಹೊಡೆತ ಬೀಳಲಿದೆ. ಜನಸಾಮಾನ್ಯರು ಪಡೆಯುವ ಪಡಿತರಕ್ಕೆ ತೊಂದರೆಯಾಗಲಿದೆ ಎಂದು ಮಾಹಿತಿ ನೀಡಿದರು.
ಹಿಂದೆ ಪೆಟ್ರೋಲಿಯಂಗೆ 190 ಡಾಲರ್‌ನಿಂದ 140 ಡಾಲರ್‌ವರೆಗೆ ಇದ್ದಾಗಲೂ ಲೀಟರ್‌ಗೆ ₹ 75 ದಾಟದಂತೆ ಪೆಟ್ರೋಲ್‌, ₹ 65 ದಾಟದಂತೆ ಡೀಸೆಲ್‌ ನೀಡಲಾಗಿತ್ತು. ಈಗ ಬ್ಯಾರಲ್‌ಗೆ ₹ 65 ಡಾಲರ್‌ ಇದ್ದರೂ ಪೆಟ್ರೋಲ್‌ ಗೆ ₹ 100 ದಾಟಿದೆ. ಮಹಿಳೆಯರಿಗೆ ಗ್ಯಾಸ್‌ ಉಚಿತವಾಗಿ ಕೊಡುತ್ತೇವೆ ಎಂದು ಪ್ರಚಾರ ಮಾಡಿ ಈಗ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ ಎಂದರು.

ಜಿಡಿಪಿ ಮೈನಸ್‌ 13ಕ್ಕೆ ಕುಸಿದಿದೆ. ಶೇ 7 ಹಣದುಬ್ಬರವಾಗಿದೆ. ಇದ್ದಕ್ಕಿದ್ದಂತೆ ನೋಟ್‌ ಅಮಾನ್ಯ ಮಾಡಿದಂತೆ ಲಾಕ್‌ಡೌನ್‌ ಕೂಡ ಮಾಡಲಾಯಿತು. ಲಕ್ಷಾಂತರ ಜನ ಬೀದಿಗೆ ಬಿದ್ದರು, ಊರಿಗೆ ನಡೆಯುತ್ತ ಹೋಗಬೇಕಾಯಿತು. ಹಲವರು ದಾರಿ ಮಧ್ಯೆಯೇ ಮೃತಪಟ್ಟರು. ಬಿಜೆಪಿ ಕೆಲವು ಕಡೆ ಗೆದ್ದಿತು. ಹಲವು ಕಡೆ ಐಟಿ, ಇಡಿ, ಸಿಬಿಐ ತೋರಿಸಿ ಶಾಸಕರನ್ನು ಖರೀದಿಸಿ ಸರ್ಕಾರಗಳನ್ನು ಕೆಡವಿತು. ಪಾಂಡಿಚೇರಿ, ಗೋವಾ, ಮಧ್ಯಪ್ರದೇಶ, ಮಣಿಪುರ, ಅರುಣಾಚಲ, ಕರ್ನಾಟಕ ಮುಂತಾದ ರಾಜ್ಯಗಳು ಅದಕ್ಕೆ ಉದಾಹರಣೆ. ಇರುವ ಸರ್ಕಾರವನ್ನು ಅತಂತ್ರ ಮಾಡಿ, ಸ್ವತಂತ್ರ ಸರ್ಕಾರ ಮಾಡುವುದು ದೇಶಕ್ಕೆ, ಪ್ರಜಾಪ್ರಭುತ್ವಕ್ಕೆ, ಲೋಕತಂತ್ರಕ್ಕೆ ಅಪಾಯಕಾರಿಯಾದುದು. ಸಂವಿಧಾನ ಬಾಹಿರವಾದುದು. ಈ ಎಲ್ಲದರ ಬಗ್ಗೆಯೂ ಜಾಗೃತಿ ಮೂಡಿಸುವ ಕೆಲಸ ಮಾಡುತ್ತೇವೆ. ಆದರೂ ಬೆಲೆ ಏರಿಕೆಯೇ ಸರಿ, ಹಣದುಬ್ಬರವೇ ಸರಿ, ಅವರು ಮಾಡಿದ್ದೆಲ್ಲ ಸರಿ ಎಂದು ಜನ ಅವರಿಗೇ ಮತ ನೀಡುತ್ತಾರೆಯಾದರೆ ಅದಕ್ಕೆ ಏನೂ ಮಾಡಲಾಗುವುದಿಲ್ಲ ಎಂದರು.

ವಿಧಾನ ಪರಿಷತ್‌ ಸದಸ್ಯರಾದ ಕೆ.ಸಿ. ಕೊಂಡಯ್ಯ, ಮೋಹನ್‌ ಕೊಂಡಜ್ಜಿ. ಮಲ್ಲಿಕಾರ್ಜುನ ನಾಗಪ್ಪ, ಕೆಪಿಸಿಸಿ ಮಾಜಿ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ, ಮುಖಂಡರಾದ ಡಿ. ಬಸವರಾಜ್‌, ದಿನೇಶ್‌ ಶೆಟ್ಟಿ, ಎ.ನಾಗರಾಜ್‌, ಮಲ್ಲಿಕಾರ್ಜುನ, ಅಯೂಬ್‌ ಪೈಲ್ವಾನ್‌, ನವೀನ್‌ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT