ಶನಿವಾರ, ಜನವರಿ 18, 2020
23 °C
ಹೆಬ್ಬಾಳು ಟೋಲ್‌: 20 ದಿನಗಳಲ್ಲಿ ಸುಧಾರಿತ ಉಪಕರಣ ಅಳವಡಿಕೆ

ಫಾಸ್ಟ್ಯಾಗ್ ವಂಚನೆಗೆ ಹೊಸ ದಾರಿ!

ಡಿ.ಕೆ.ಬಸವರಾಜು Updated:

ಅಕ್ಷರ ಗಾತ್ರ : | |

ದಾವಣಗೆರೆ: ಕಾರಿನ ಫಾಸ್ಟ್ಯಾಗ್ ಲೇಬಲ್ ಖರೀದಿಸಿ ಲಾರಿಯಲ್ಲಿ ಸಂಚಾರ ಮಾಡುವ ಮೂಲಕ ಫಾಸ್ಟ್ಯಾಗ್‌ನಲ್ಲಿ ವಂಚಿಸುತ್ತಿರುವ ಪ್ರಕರಣಗಳು ಇಲ್ಲಿನ ಹೆಬ್ಬಾಳು ಟೋಲ್‌ನಲ್ಲಿ ಕಂಡುಬಂದಿವೆ.

‘ಈ ರೀತಿ ವಂಚನೆಯನ್ನು ಪತ್ತೆಹಚ್ಚಲು ಆಟೊಮ್ಯಾಟಿಕ್ ವೆಹಿಕಲ್‌ ಕ್ಲಾಸಿಫಿಕೇಷನ್‌ (ಎವಿಸಿ) ಕ್ಯಾಮೆರಾಗಳು ಬರಲಿವೆ. ಒಂದು ವೇಳೆ ಈ ರೀತಿ ಸಂಚರಿಸಿದರೆ ಕೂಡಲೇ ವಾಹನದ ಮುಖ ಹಾಗೂ  ಮಾಡೆಲ್ ಅನ್ನು ಕಂಡುಹಿಡಿದು ತಕ್ಷಣ ಕಂಪ್ಯೂಟರ್‌ಗೆ ರವಾನಿಸುತ್ತದೆ. ಆಗ ಕಂಪ್ಯೂಟರ್ ಪರದೆಯಲ್ಲಿ ‘ಇನ್‌ವ್ಯಾಲಿಡ್ ಟ್ಯಾಗ್‌’ ಎಂಬ ಸಂಕೇತ ಬರುತ್ತದೆ’ ಎಂದು ಹೆಬ್ಬಾಳು ಟೋಲ್ ಮ್ಯಾನೇಜರ್ ಟಿ.ಉಮಾಕಾಂತ್‌ ತಿಳಿಸಿದರು.

‘ನಮ್ಮ ಟೋಲ್‌ನಲ್ಲಿ ಇರುವ ಉಪಕರಣಗಳು ಹಳತಾಗಿದ್ದು, ಇದಕ್ಕಾಗಿ ವಿಳಂಬವಾಗುತ್ತಿದೆ. ಇದನ್ನು ತಪ್ಪಿಸುವ ಉದ್ದೇಶದಿಂದ ₹1.50 ಕೋಟಿ ವೆಚ್ಚದಲ್ಲಿ ಆಟೊಮ್ಯಾಟಿಕ್ ವೆಹಿಕಲ್ ಕ್ಲಾಸಿಫಿಕೇಷನ್ (ಎವಿಸಿ) ಕ್ಯಾಮೆರಾ, ಬೂಮರ್‌ ಹಾಗೂ ಕಂಪ್ಯೂಟರ್‌ಗಳನ್ನು 20 ದಿನಗಳಲ್ಲಿ ಅಳವಡಿಸಲಾಗುವುದು’ ಎಂದು ಟಿ.ಉಮಾಕಾಂತ್ ಮಾಹಿತಿ ನೀಡಿದರು.

‘ಆರ್ಯ ಇನ್ಫೋಟೆಕ್ ಕಂಪನಿಯವರು ಉಪಕರಣಗಳ ಅಳವಡಿಕೆ ಕಾರ್ಯ ಮಾಡಲಿದ್ದು, ಚಳಗೇರಿ ಟೋಲ್‌ನಲ್ಲಿ ಇಂದಿನಿಂದ ಜೋಡಣೆ ಕಾರ್ಯ ಆರಂಭವಾಗಿದೆ. ಇದು ಮುಗಿದ ಕೂಡಲೇ ಹೆಬ್ಬಾಳು ಟೋಲ್‌ಗೆ ಬಂದು ಅಳವಡಿಕೆ ಕಾರ್ಯದಲ್ಲಿ ತೊಡಗುತ್ತಾರೆ. ಒಂದು ತಿಂಗಳಲ್ಲಿ ಸಂಚಾರ ಸಲೀಸು ಆಗಲಿದೆ’ ಎಂದು ಹೇಳಿದರು.

ಫಾಸ್ಟ್ಯಾಗ್‌ಗೆ ನಿರಾಸಕ್ತಿ: ಈವರೆಗೆ ಶೇ 58ರಷ್ಟು ಮಾತ್ರ ಫಾಸ್ಟ್ಯಾಗ್ ಖರೀದಿಸಲಾಗಿದ್ದು, ಜನರು ನಿರಾಸಕ್ತಿ ಹೊಂದಿರುವುದೇ ಸಂಚಾರ ವಿಳಂಬಕ್ಕೆ ಕಾರಣ. ಪ್ರಸ್ತುತ ಎರಡು ದಾರಿಯಲ್ಲಿ ನಗದು ಸಂಗ್ರಹಿಸುವ ವ್ಯವಸ್ಥೆ ಇದೆ. ಸುಧಾರಿತ ಉಪಕರಣಗಳು ಬಂದ ನಂತರ ಎಲ್ಲಾ ದಾರಿಗಳು ಫಾಸ್ಟ್ಯಾಗ್‌ಗೆ ಮುಕ್ತಗೊಳಿಸಲಾಗುವುದು’ ಎನ್ನುತ್ತಾರೆ ಉಮಾಕಾಂತ್‌.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು