ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವಜಲಕ್ಕೆ ಪರಿತಪಿಸುತ್ತಿರುವ ವನ್ಯಜೀವಿ

ನಾಡಿಗೆ ಬಂದು ಜೀವ ಕಳೆದುಕೊಳ್ಳುತ್ತಿವೆ ಜಿಂಕೆಗಳು: ದಾರಿ ತಪ್ಪುತ್ತಿರುವ ಒಂಟಿ ಸಲಗ
Last Updated 27 ಮಾರ್ಚ್ 2018, 11:03 IST
ಅಕ್ಷರ ಗಾತ್ರ

ಮುಂಡಗೋಡ: ಆಹಾರ, ನೀರಿಗಾಗಿ ಪರಿತಪಿಸುತ್ತಿರುವ ಕಾಡುಪ್ರಾಣಿಗಳು ಗ್ರಾಮದ ಸನಿಹ ಬಂದು ಜೀವ ಬಿಡುತ್ತಿವೆ.

ಮತ್ತೊಂದೆಡೆ ಅರಣ್ಯದಲ್ಲಿ ಬೀಳುತ್ತಿರುವ ಬೆಂಕಿಯಿಂದ ಹಾಗೂ ಬಿದಿರಿನ ಕೊರತೆಯಿಂದ ಕಾಡಾನೆಗಳು ಇನ್ನೂ ತನಕ ದಾಂಡೇಲಿ ಅಭಯಾರಣ್ಯದತ್ತ ಮುಖ ಮಾಡದೇ, ತಾಲ್ಲೂಕಿನ ಅರಣ್ಯ ಪ್ರದೇಶಗಳಲ್ಲಿ ಕಂಡುಬರುತ್ತಿವೆ.

ಎರಡು ವರ್ಷಗಳ ಹಿಂದೆ ಬರಗಾಲದ ಛಾಯೆ ಆವರಿಸಿ, ಕಾಡಿನ ಕೆರೆಕಟ್ಟೆಗಳು ಬರಿದಾಗಿ, ಕಾಡುಪ್ರಾಣಿಗಳು ಜನವಸತಿ ಪ್ರದೇಶತ್ತ ಮುಖ ಮಾಡಿದ್ದವು. ಆಗ ಜಿಂಕೆಗಳು ಹೆಚ್ಚಿನ ಸಂಖ್ಯೆಯಲ್ಲಿ ನಾಯಿಗಳ ದಾಳಿಗೆ, ವಾಹನಗಳ ಅಪಘಾತಕ್ಕೆ ಬಲಿಯಾಗಿದ್ದವು.

ಕಾಡುಪ್ರಾಣಿಗಳ ದುರಂತ ಸಾವನ್ನು ನೋಡಲಾರದೇ, ಕೆಲವು ಪ್ರಾಣಿಪ್ರಿಯರು ಹಾಗೂ ಅರಣ್ಯ ಇಲಾಖೆಯವರು ಕಾಡಿನ ಅಲ್ಲಲ್ಲಿ ಕೃತಕ ನೀರಿನ ತೊಟ್ಟಿಗಳನ್ನು ನಿರ್ಮಿಸಿ, ಕಾಡುಪ್ರಾಣಿಗಳ ಬಾಯಾರಿಕೆ ಇಂಗಿಸುವ ಪ್ರಯತ್ನ ಮಾಡಿದ್ದರು. ಈ ವರ್ಷವೂ ಏರುತ್ತಿರುವ ಬಿಸಿಲಿನ ತಾಪಕ್ಕೆ ಜಲಮೂಲಗಳು ಬರಿದಾಗಿರುವುದರಿಂದ ಮೂಕ ಪ್ರಾಣಿಗಳು ಮತ್ತೆ ನಾಡಿನತ್ತ ಬರುತ್ತಿವೆ.

ಕಳೆದ ಹದಿನೈದು ದಿನಗಳಲ್ಲಿ ಮುಂಡಗೋಡ ಅರಣ್ಯ ವಲಯದಲ್ಲಿ ಮೂರು ಜಿಂಕೆಗಳು ನಾಯಿ ದಾಳಿಗೆ ಬಲಿಯಾಗಿವೆ.

ಎರಡು ಜಿಂಕೆಗಳನ್ನು ರಕ್ಷಿಸಿ ಮರಳಿ ಕಾಡಿಗೆ ಬಿಡಲಾಗಿದೆ. ಸನವಳ್ಳಿ, ಕುಸೂರ, ಅತ್ತಿವೇರಿ, ಹುನಗುಂದ, ಚವಡಳ್ಳಿ, ಪಟ್ಟಣದ ಕಂಬಾರಗಟ್ಟಿ ಸೇರಿದಂತೆ ವಿವಿಧ ಕಡೆಗಳಲ್ಲಿ ಜಿಂಕೆಗಳು ಗ್ರಾಮಕ್ಕೆ ಬಂದು ಕೆಲವು ಜೀವ ಉಳಿಸಿಕೊಂಡರೆ, ಕೆಲವು ಪ್ರಾಣ ಕಳೆದುಕೊಂಡಿವೆ.

ಪ್ರತ್ಯಕ್ಷಗೊಂಡ ಕಾಡಾನೆಗಳು: ತಾಲ್ಲೂಕಿನ ಯರೇಬೈಲ್‌ ಅರಣ್ಯ ಪ್ರದೇಶದ ಕೆರೆಯೊಂದರಲ್ಲಿ ಆನೆಯೊಂದು ಭಾನುವಾರ ಪ್ರತ್ಯಕ್ಷವಾಗಿದೆ. ನಡೆಯಲು ತೊಂದರೆ ಪಡುತ್ತಿರುವಂತೆ ಕಂಡುಬಂದಿರುವ ಆನೆಗೆ, ಸೂಕ್ತ ಚಿಕಿತ್ಸೆ ಕೊಡಿಸುವ ಪ್ರಯತ್ನ ಮಾಡಿದರೂ ಸಾಧ್ಯವಾಗಿಲ್ಲ. ಕೆಲವು ಗಂಟೆಗಳ ಕಾರ್ಯಾಚರಣೆ ನಡೆದಿದೆ.

ನಂತರ ಧಾರವಾಡ ಅರಣ್ಯ ಪ್ರದೇಶದತ್ತ ಆನೆ ತೆರಳಿದೆ. ಸಂಜೆಯ ವೇಳೆಗೆ ಉಗ್ಗಿನಕೇರಿ–ಕೆಂದಲಗೇರಿ ಸನಿಹ ಮರಿ ಆನೆಯೊಂದು ಬಾಳೆತೋಟದಲ್ಲಿ ಕಂಡುಬಂದಿದೆ. ಅದನ್ನು ಸಹ ಕಾಡಿಗೆ ಕಳಿಸಲಾಗಿದೆ ಎಂದು ಮುಂಡಗೋಡ ವಲಯ ಅರಣ್ಯಾಧಿಕಾರಿ ಸುರೇಶ ಕುಲ್ಲೋಳ್ಳಿ ಹೇಳಿದರು.

ಕಿರವತ್ತಿ ಸನಿಹ ಹೆದ್ದಾರಿ ಬದಿಯಲ್ಲಿ ಒಂಟಿಸಲಗವೊಂದು ಸಂಚಾರ ನಡೆಸಿರುವುದು ಕಂಡುಬಂದಿದೆ. ವಾಹನಸವಾರರು ಮೊಬೈಲ್‌ನಲ್ಲಿ ಸೆಲ್ಫಿ ತೆಗೆದುಕೊಂಡಿರುವ ಚಿತ್ರ ಮೊಬೈಲ್‌ಗಳಲ್ಲಿ ಹರಿದಾಡುತ್ತಿದೆ.

**

ಕೃತಕ ತೊಟ್ಟಿ ನಿರ್ಮಾಣಕ್ಕೆ ಆಗ್ರಹ

ಕಾಡಿನ ಜಲಮೂಲಗಳು ಬತ್ತಿರುವುದರಿಂದ ಪ್ರಾಣಿಗಳ ಬಾಯಾರಿಕೆಯನ್ನು ಇಂಗಿಸಲು ಕೃತಕ ನೀರಿನ ಗುಂಡಿಗಳನ್ನು ನಿರ್ಮಿಸಿ, ನೀರು ತುಂಬಿಸುವ ಕೆಲಸ ತುರ್ತಾಗಿ ಆಗಬೇಕಾಗಿದೆ. ಬರಿದಾಗಿರುವ ಕಾಡು, ಬತ್ತಿರುವ ಕೆರೆಯಿಂದ ಪ್ರಾಣಿಗಳನ್ನು ರಕ್ಷಿಸಲು ಇಲಾಖೆಯವರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪ್ರಾಣಿಪ್ರಿಯ ಸುಧೀಂದ್ರರಾವ್‌ ಒತ್ತಾಯಿಸಿದರು.‌

‘ಜಿಂಕೆಗಳು ಸೂಕ್ಷ್ಮತೆಯನ್ನು ಹೊಂದಿರುತ್ತವೆ. ಅವುಗಳನ್ನು ಹಿಡಿಯುವುದಾಗಲಿ, ಕಟ್ಟಿ ಹಾಕುವುದಾಗಲಿ ಮಾಡಿದರೆ ಹೃದಯಾಘಾತಕ್ಕೆ ಒಳಗಾಗಿ ಮೃತಪಡುವ ಸಾಧ್ಯತೆ ಹೆಚ್ಚಿರುತ್ತದೆ. ನಾಯಿಗಳ ದಾಳಿಯಿಂದ ಜಿಂಕೆಗಳನ್ನು ರಕ್ಷಿಸಿದಾಗ, ಅವುಗಳನ್ನು ಹಿಡಿದು ಕಟ್ಟದೇ, ಅವುಗಳ ಪಾಡಿಗೆ ಬಿಟ್ಟರೆ ಕಾಡಿಗೆ ಹೋಗಿ ಬದುಕುಳಿಯುತ್ತವೆ. ಇಲ್ಲಿಯವರೆಗೆ ಮೂರು ಜಿಂಕೆಗಳು ಮೃತಪಟ್ಟಿರುವುದನ್ನು ಪರೀಕ್ಷಿಸಲಾಗಿದೆ’ ಎಂದು ಪಶುವೈದ್ಯ ಡಾ.ಜಯಚಂದ್ರ ಕೆಂಪಶಿ ‘ಪ್ರಜಾವಾಣಿ’ಗೆ ತಿಳಿಸಿದರು.

**

ಪ್ರಾಣಿಗಳಿಗೆ ಕಾಡಿನಲ್ಲಿ ನೀರಿನ ವ್ಯವಸ್ಥೆ ಮಾಡಲಾಗುವುದು. ಜಿಂಕೆಗಳ ರಕ್ಷಣೆಗೆ ಇಲಾಖೆಯಿಂದ ಕ್ರಮ ಕೈಗೊಳ್ಳಲಾಗುವುದು.

-ಜಿ.ಆರ್‌.ಶಶಿಧರ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ

**

-ಶಾಂತೇಶ ಬೆನಕನಕೊಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT