ಮಂಗಳವಾರ, ಸೆಪ್ಟೆಂಬರ್ 22, 2020
20 °C

ಬೆಂಕಿ: ಹೊತ್ತಿ ಉರಿದ ಕಾರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕಾರಿನ ಎಂಜಿನ್‌ ಬಿಸಿಯಾಗಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ.

ಬೆಂಗಳೂರಿನಿಂದ ದಾವಣಗೆರೆ ಬರುತ್ತಿರುವಾಗ ಹೆಬ್ಬಾಳು ಟೋಲ್ ಗೇಟ್ ಬಳಿ ಚಲಿಸುತ್ತಿದ್ದ ಟಾಟಾ ಜೆಸ್ಟ್ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ಕಾರಿನಲ್ಲಿದ್ದ ಚಾಲಕ ಕಾರಿನ ಬಾಗಿಲು ತೆರೆದು ಹೊರ ಬಂದಿದ್ದಾರೆ.

ದಾವಣಗೆರೆಯ ದೊಡ್ಡ ಬಾತಿ ಗ್ರಾಮದ ಮಾರುತಿ ಅವರಿಗೆ ಸೇರಿದ ಕಾರು ಇದಾಗಿದ್ದು, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಬಸವಪ್ರಭು ಶರ್ಮ ನೇತೃತ್ವದಲ್ಲಿ ಸಿಬ್ಬಂದಿ ಬೆಂಕಿ ನಂದಿಸಿದರು. ದಾವಣಗೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೀಗ ಮುರಿದು ಕಳ್ಳತನ

ದಾವಣಗೆರೆ: ಇಲ್ಲಿನ ಕೆಟಿಜೆ ನಗರದ ಚಿರಂಜೀವಿ ಸ್ಕೂಲ್ ಬಳಿಯ ಮನೆಯೊಂದರ ಇಂಟರ್‌ಲಾಕ್ ಮುರಿದಿರುವ ಕಳ್ಳರು ಬೀರುವಿನಲ್ಲಿಟ್ಟದ ₹24 ಸಾವಿರ ಮೌಲ್ಯದ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದಾರೆ.

ಬಡಾವಣೆಯ ಅಜ್ಜಪ್ಪ ಅವರ ಪತ್ನಿ ಸಿದ್ದಮ್ಮ ಅವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಇವರ ಪುತ್ರಿ ಸೌಮ್ಯ ದಾವಣಗೆರೆ ತಾಲ್ಲೂಕಿನ ವಡ್ಡಿಹಳ್ಳಿಗೆ ಹೋಗಿದ್ದಾಗ ಮನೆ ಬಾಗಿಲ ಇಂಟರ್ ಲಾಕ್ ಅನ್ನು ಕಬ್ಬಿಣದ ಆಯುಧಿಂದ ಮುರಿದು ಒಳನುಗ್ಗಿದ ಕಳ್ಳರು ಬೆಡ್ ರೂಂನಲ್ಲಿದ್ದ ಬೀರುವಿನ ಬಾಗಿಲು ಮುರಿದು 9 ಗ್ರಾಂ ತೂಕದ ಒಂದು ಜೊತೆ ಬಂಗಾರದ ಜುಮುಕಿ ಬೆಂಡೋಲೆ, 4 ಗ್ರಾಂನ ಒಂದು ಜೊತೆ ಬಂಗಾರದ ಕಿವಿಯೋಲೆ, 40 ಗ್ರಾಂ ತೂಕದ 2 ಬೆಳ್ಳಿ ಕುಂಕುಮ ಬಟ್ಟಲು ಹಾಗೂ ಒಂದು ಜೊತೆ ಬೆಳ್ಳಿ ಕಾಲು ಚೈನ್ ಕಳ್ಳತನ ಮಾಡಿದ್ದಾರೆ. ಕೆಟಿಜೆ ನಗರ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ಮಾಂಗಲ್ಯ ಸರ ಕಿತ್ತುಕೊಂಡು ಪರಾರಿ

ಹೊನ್ನಾಳಿಯ ದುರ್ಗಿಗುಡಿ ಬಡಾವಣೆಯಲ್ಲಿ  ಮಹಿಳೆಯ ಮಾಂಗಲ್ಯ ಸರವನ್ನು ಕಿತ್ತುಕೊಂಡು ಕಳ್ಳನೊಬ್ಬ ಪರಾರಿಯಾಗಿದ್ದಾನೆ.

ಪಟ್ಟಣದ ಗೀತಾ ಬಸವರಾಜ್ ಸರ ಕಳೆದುಕೊಂಡವರು. ರಾತ್ರಿ ಕಿರಾಣಿ ಬಾಗಿ ಮುಚ್ಚಿಕೊಂಡು ಬರುತ್ತಿರುವ ವೇಳೆ ಹಿಂಬದಿಯಿಂದ ಬರುತ್ತಿದ್ದ ಕಳ್ಳ ಮಹಿಳೆಯ ಬಾಯನ್ನು ಮುಚ್ಚಿ ನೆಲಕ್ಕೆ ಕೆಡವಿ ಕುತ್ತಿಗೆಗೆ ಕೈ ಹಾಕಿದ್ದಾನೆ. ಇದನ್ನು ಅರಿತ ಗೀತಾ ಅವರು ಎಡಗೈಯಲ್ಲಿ ಸರವನ್ನು ಗಟ್ಟಿಯಾಗಿ ಹಿಡಿದಿದ್ದಾರೆ. ಆಗ ಅರ್ಧ ಸರವನ್ನೇ ಕಿತ್ತುಕೊಂಡು ಹೋಗಿದ್ದಾನೆ.

40 ಗ್ರಾಂ ಮೌಲ್ಯದ ಈ ಸರದಲ್ಲಿ 20 ಗ್ರಾಂ ಅಂದರೆ ₹40ಸಾವಿರ ಬೆಲೆ ಬಾಳುತ್ತದೆ. ಹೊನ್ನಾಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಮೀನರ ಮೇಲೆ ಹಲ್ಲೆ ಮಾಡಿದವನಿಗೆ ನ್ಯಾಯಾಂಗ ಬಂಧನ

ಚನ್ನಗಿರಿ ನ್ಯಾಯಾಲಯದಲ್ಲಿ ಅಮೀನರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮನೋಹರ ಎಂಬುವರ ಮೇಲೆ ಹಲ್ಲೆ ಮಾಡಿದ ಆರೋ‍ಪದ ಮೇರೆಗೆ ವ್ಯಕ್ತಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಸಂಗಾಹಳ್ಳಿ ಗ್ರಾಮಕ್ಕೆ ನೋಟಿಸ್ ಜಾರಿ ಮಾಡಲು ಗ್ರಾಮಕ್ಕೆ ಹೋದಾಗ ಮಂಜಪ್ಪ ಎಂಬಾತ ಕೊರಳಪಟ್ಟಿ ಹಿಡಿದು ಹಲ್ಲೆ ಮಾಡಿದ್ದಾನೆ. ಆಗ ಚನ್ನಗಿರಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಚಂದ್ರಶೇಖರ್ ಅವರು ಜಾಮೀನು ರಹಿತ ವಾರಂಟ್‌ ಜಾರಿ ಮಾಡಿದ್ದಾರೆ. ಬಸವಾಪಟ್ಟಣ ಪೊಲೀಸರು ಆರೋಪಿಯನ್ನು ನ್ಯಾಯಾಧೀಶರ ಮನೆಯ ಮುಂದೆ ಹಾಜರುಪಡಿಸಿದಾಗ ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.