ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಇಟಿ ಸುಗಮ; ಜೀವವಿಜ್ಞಾನಕ್ಕೆ 935, ಗಣಿತಕ್ಕೆ 525 ವಿದ್ಯಾರ್ಥಿಗಳು ಗೈರು

Last Updated 29 ಏಪ್ರಿಲ್ 2019, 15:24 IST
ಅಕ್ಷರ ಗಾತ್ರ

ದಾವಣಗೆರೆ: ಎಂಜಿನಿಯರಿಂಗ್‌ ಸೇರಿ ಕೆಲ ವೃತ್ತಿಪರ ಕೋರ್ಸ್‌ಗಳಿಗಾಗಿ ಮೊದಲ ದಿನದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಗರದ 16 ಕೇಂದ್ರಗಳಲ್ಲಿ ಮಂಗಳವಾರ ಸುಗಮವಾಗಿ ನಡೆಯಿತು.

ಜಿಲ್ಲೆಯಲ್ಲಿ ಒಟ್ಟು 7,938 ವಿದ್ಯಾರ್ಥಿಗಳು ಸಿಇಟಿಗೆ ಹೆಸರು ನೋಂದಣಿ ಮಾಡಿಕೊಂಡಿದ್ದರು. ಬೆಳಿಗ್ಗೆ 10.30ರಿಂದ 11.50ವರೆಗೆ ನಡೆದ ಜೀವವಿಜ್ಞಾನ ಪರೀಕ್ಷೆಗೆ 935 ವಿದ್ಯಾರ್ಥಿಗಳು ಗೈರಾಗಿದ್ದರು. ಮಧ್ಯಾಹ್ನ 2.30ರಿಂದ 3.50ರವರೆಗೆ ನಡೆದ ಗಣಿತ ಪರೀಕ್ಷೆಯಲ್ಲಿ 525 ವಿದ್ಯಾರ್ಥಿಗಳು ಗೈರಾಗಿದ್ದರು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಚ್‌.ಜಿ. ಶೇಖರಪ್ಪ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ನಗರದ 16 ಕೇಂದ್ರಗಳಲ್ಲೂ ಪರೀಕ್ಷೆ ಯಾವುದೇ ತೊಂದರೆ ಇಲ್ಲದೆ ಸುಗಮವಾಗಿ ನಡೆದಿದೆ. ಬೆಳಿಗ್ಗೆ ಕೆಲ ಕಡೆ ಆನ್‌ಲೈನ್‌ನಲ್ಲಿ ಅಟೆಂಡೆನ್ಸ್‌ ಅಪ್‌ಲೋಡ್‌ ಮಾಡುವಾಗ ಕೆಲ ಕಾಲ ಸಮಸ್ಯೆ ಉದ್ಭವಿಸಿತ್ತು. ಬಳಿಕ ಸರಿಹೋಯಿತು. ಪರೀಕ್ಷೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಮಂಗಳವಾರ ಬೆಳಿಗ್ಗೆ 10.30ರಿಂದ ಭೌತವಿಜ್ಞಾನ ಹಾಗೂ ಮಧ್ಯಾಹ್ನ 2.30ರಿಂದ ರಸಾಯನ ವಿಜ್ಞಾನ ಪರೀಕ್ಷೆಗಳು ನಡೆಯಲಿವೆ’ ಎಂದು ಅವರು ತಿಳಿಸಿದರು.

ಕನಸು ಹೊತ್ತು ಬಂದರು...: ಎಂಜಿನಿಯರಿಂಗ್‌, ಬಿಎಸ್ಸಿ ಎಗ್ರಿ, ಪಶು ವೈದ್ಯಕೀಯ ಪದವಿ ಪಡೆದು ಭವಿಷ್ಯ ರೂಪಿಸಿಕೊಳ್ಳುವ ಕನಸು ಹೊತ್ತು ವಿದ್ಯಾರ್ಥಿಗಳು ಮಂಗಳವಾರ ಬೆಳಿಗ್ಗೆ ಸಿಇಟಿ ಬರೆಯಲು ಪರೀಕ್ಷಾ ಕೇಂದ್ರಗಳಿಗೆ ಬಂದಿದ್ದರು. ಬೆಳಿಗ್ಗೆ 10 ಗಂಟೆಯೊಳಗೆ ಪರೀಕ್ಷಾ ಕೇಂದ್ರಗಳಿಗೆ ಬಂದು ತಮ್ಮ ನೋಂದಣಿ ಸಂಖ್ಯೆ ಯಾವ ಕೊಠಡಿಯಲ್ಲಿದೆ ಎಂದು ಹುಡುಕುತ್ತಿದ್ದರು. ಕೆಲವರು ಆವರಣದಲ್ಲಿ ಕುಳಿತು ಸಹಪಾಠಿಗಳೊಂದಿಗೆ ಪುಸ್ತಕ ತಿರುವಿ ಹಾಕುತ್ತ ಕೊನೆ ಕ್ಷಣದ ತಯಾರಿ ನಡೆಸುತ್ತಿದ್ದರು. ಕೆಲವರ ಮೊಗದಲ್ಲಿ ಭೀತಿ–ದುಗುಡವೂ ಕಂಡು ಬರುತ್ತಿತ್ತು.

ವಿದ್ಯಾರ್ಥಿಗಳೊಂದಿಗೆ ಬಂದಿದ್ದ ಪೋಷಕರು ಹಾಗೂ ಸಬಂಧಿಕರು ಪರೀಕ್ಷಾ ಕೇಂದ್ರದ ಹೊರಗೆ ಕುಳಿತು ಮಕ್ಕಳ ಭವಿಷ್ಯದ ಕುರಿತು ಲೆಕ್ಕಾಚಾರ ಹಾಕುತ್ತಿದ್ದರು.

‘ಪರೀಕ್ಷೆಯಲ್ಲಿ ಯಾವುದೇ ಗೊಂದಲಗಳಿರಲಿಲ್ಲ. ಪರೀಕ್ಷೆ ಸುಲಭ ಇತ್ತು. ಹೆಚ್ಚು ಅಂಕ ಬರುವ ನಿರೀಕ್ಷೆ ಇದೆ’ ಎಂದು ಎವಿಕೆ ಕಾಲೇಜಿನ ಸಿಇಟಿ ಕೇಂದ್ರದಲ್ಲಿ ಪರೀಕ್ಷೆ ಬರೆದು ಬಂದು ವಿದ್ಯಾರ್ಥಿನಿಯರಾದ ಅಣಬೇರು ಗ್ರಾಮದ ನೂರ್‌ ಎ. ಮುಜಾಸಂ ಹಾಗೂ ವಿನೋಬನಗರದ ಸಲೀನಾ ಖಾನಂ ಅನುಭವ ಹಂಚಿಕೊಂಡರು.

ಚನ್ನಗಿರಿ ತಾಲ್ಲೂಕಿನ ಅಕ್ಕಳಕಟ್ಟೆ ಗ್ರಾಮದ ರೈತ ಮಹದೇವಪ್ಪ ಅವರು ಮಗಳನ್ನು ಎವಿಕೆ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಕರೆದುಕೊಂಡು ಬಂದಿದ್ದರು. ‘ಸರ್ಕಾರಿ ಸೀಟು ಸಿಕ್ಕರೆ ಎಂಜಿನಿಯರಿಂಗ್‌ ಮಾಡಿಸುತ್ತೇನೆ. ಇಲ್ಲದಿದ್ದರೆ ಬಿಎಸ್ಸಿ ಓದಿಸುತ್ತೇನೆ’ ಎಂದು ಹೇಳಿದರು.

ಪರೀಕ್ಷಾ ಕೇಂದ್ರದ ಹೊರಗೆ ಕುಳಿದಿದ್ದ ಬ್ಯಾಡಗಿಯ ಶಿಕ್ಷಕ ಎನ್‌.ಎಂ. ಸಣ್ಣಮನಿ ಅವರು ಮಗಳಿಗೆ ಬಿಎಸ್ಸಿ ಎಗ್ರಿ ಮಾಡಿಸುವ ಕನಸು ಕಾಣುತ್ತಿದ್ದರು. ‘ನನ್ನ ಅಜ್ಜ–ತಂದೆ ಎಲ್ಲರೂ ರೈತರಾಗಿದ್ದರು. ಮಗಳಿಗೂ ಕೃಷಿ ಬಗ್ಗೆ ಆಸಕ್ತಿ ಇದೆ. ಹೀಗಾಗಿ ಬಿಎಸ್ಸಿ ಎಗ್ರಿ ಕೋರ್ಸ್‌ ತೆಗೆದುಕೊಳ್ಳುವ ಯೋಚನೆ ಇದೆ’ ಎಂದು ಹೇಳಿದರು.

ಮೋತಿ ವೀರಪ್ಪ ಕಾಲೇಜಿನ ಪರೀಕ್ಷಾ ಕೇಂದ್ರದ ಹೊರಗೆ ಕುಳಿತಿದ್ದ ರಾಣೆಬೆನ್ನೂರಿನ ಶಿಕ್ಷಕ ಹೇಮರೆಡ್ಡಿ ವೆಂಕಟೇಶ್ವರ ದುನ್ನೂರ ಅವರು ಮಗಳನ್ನು ಪಶುವೈದ್ಯರನ್ನಾಗಿ ಮಾಡುವ ಕುರಿತು ಚರ್ಚಿಸುತ್ತಿದ್ದರು.

ಹೊಳಲ್ಕೆರೆ ತಾಲ್ಲೂಕಿನ ಸಾಸಲು ಗ್ರಾಮದ ರೈತ ಓಂಕಾರಪ್ಪ, ‘ಮಗಳು ‘ನೀಟ್‌’ ಹಾಗೂ ಸಿಇಟಿ ಎರಡನ್ನೂ ತೆಗೆದುಕೊಂಡಿದ್ದಾಳೆ. ‘ನೀಟ್‌’ನಲ್ಲಿ ಒಳ್ಳೆಯ ರ‍್ಯಾಂಕಿಂಗ್‌ ಬಂದು ಸರ್ಕಾರಿ ಕೋಟಾದಡಿ ಸೀಟು ಸಿಕ್ಕರೆ ಮೆಡಿಕಲ್‌ ಓದಿಸುತ್ತೇನೆ. ಇಲ್ಲದಿದ್ದರೆ ಸಿಇಟಿ ರ‍್ಯಾಂಕಿಂಗ್‌ ನೋಡಿಕೊಂಡು ಯಾವುದಾದರೂ ವೃತ್ತಿಪರ ಕೋರ್ಸ್‌ ಆಯ್ಕೆ ಮಾಡಿಕೊಳ್ಳಲಾಗುವುದು’ ಎಂದು ಹೇಳಿದರು.

‘ಇಂದು ಮಕ್ಕಳನ್ನು ಓದಿಸುವುದು ಬಹಳ ದುಬಾರಿಯಾಗಿದೆ. ಒಂದು ತಿಂಗಳಿಗೆ ₹ 25 ಸಾವಿರ ಶುಲ್ಕ ನೀಡಿ ಸಿಇಟಿ ಹಾಗೂ ನೀಟ್‌ಗೆ ತರಬೇತಿ ಕೊಡಿಸಿದ್ದೇನೆ’ ಎಂದು ಓಂಕಾರಪ್ಪ ತಮ್ಮ ಸಂಕಟವನ್ನೂ ಹೇಳಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT