ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಲು, ಗೆಲುವಿನ ಚರ್ಚೆ; ಬೆಟ್ಟಿಂಗ್ ಭರಾಟೆ

ಚುನಾವಣೆ ಪ್ರಚಾರ ಮುಕ್ತಾಯ– ಜಾಲತಾಣಗಳಲ್ಲಿ ಹರಿದಾಡಿದ ಸುಳ್ಳು ಸುದ್ದಿಗಳು
ಅಕ್ಷರ ಗಾತ್ರ

ಮಂಗಳೂರು: ಚುನಾವಣೆ ಪ್ರಚಾರದ ಭರಾಟೆ ಮುಕ್ತಾಯವಾಗುತ್ತಿದ್ದಂತೆಯೇ ಶುಕ್ರವಾರ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಬೆಟ್ಟಿಂಗ್‌ ದಂಧೆ ಸದ್ದಿಲ್ಲದೇ ಆರಂಭವಾಗಿದೆ.

ಸಾಮಾನ್ಯವಾಗಿ ಮತ ಎಣಿಕೆಯ ದಿನ ಬೆಟ್ಟಿಂಗ್‌ ಭರಾಟೆ ಹೆಚ್ಚಾಗಿರುತ್ತದೆ. ಆದರೆ ಜಿಲ್ಲೆಯಲ್ಲಿ ಎಂಟು ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಬಿಜೆಪಿ ಹೊಸ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಿದ್ದು, ಚುನಾವಣೆಯ ಸಾಂಪ್ರದಾಯಿಕ ನಡೆ ಮುರಿದು ಬಿದ್ದಿದೆ. ಆದ್ದರಿಂದ ಈ ಬಾರಿ ಸೋಲು ಗೆಲುವಿನ ಬಗ್ಗೆ ಹೆಚ್ಚು ಚರ್ಚೆ ನಡೆಯುತ್ತಿದೆ. ಇದೇ ಚರ್ಚೆ ಬೆಟ್ಟಿಂಗ್‌ಗೆ ಎಡೆ ಮಾಡಿಕೊಟ್ಟಿದೆ.

ಬೆಳ್ತಂಗಡಿಯಲ್ಲಿ ಹೊಸ ಮುಖ ಚುನಾವಣಾ ಕಣದಲ್ಲಿ ಇದ್ದರೆ, ಮೂಡುಬಿದಿರೆಯಲ್ಲಿ ಈ ಬಾರಿ ಹಣಾಹಣಿ ಜೋರಾಗಿದೆ ಎಂಬ ಅಭಿಪ್ರಾಯವನ್ನು ಆಧರಿಸಿ ಬೆಟ್ಟಿಂಗ್‌ನಲ್ಲಿ ಹಣ ಕಟ್ಟುತ್ತಿದ್ದಾರೆ. ಬೆಳ್ತಂಗಡಿಯಲ್ಲಿ 9 ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿರುವ ವಸಂತ ಬಂಗೇರ ಒಂದೆಡೆಯಾದರೆ, ಜಿಲ್ಲೆಯಲ್ಲಿ ಚುನಾವಣಾ ಕಣದಲ್ಲಿರುವ ಕಿರಿಯ ಅಭ್ಯರ್ಥಿ ಎಂಬ ವಿಶೇಷಣ ಪಡೆದಿರುವ ಹರೀಶ್ ಪೂಂಜಾ ಮತ್ತೊಂದು ಕಡೆ.

ಬೆಟ್ಟಿಂಗ್‌ನಲ್ಲಿ ಬಂಟ್ವಾಳ ಕ್ಷೇತ್ರವೂ ಹಿಂದೆ ಬಿದ್ದಿಲ್ಲ. ಮತದಾರರ ಒಲವು ಯಾರ ಕಡೆಗೆ ಇದೆ ಎನ್ನುವುದಕ್ಕಿಂತಲೂ, ರಾಜ್ಯ ಮಟ್ಟದಲ್ಲಿ ಈ ಕ್ಷೇತ್ರ ಗಮನಾರ್ಹ ಎಂಬ ಕಾರಣಕ್ಕೆ ಬೆಟ್ಟಿಂಗ್‌ ನಡೆಯುತ್ತಿದೆ. ರಾಮ ರಹೀಮನ ಹೆಸರಲ್ಲಿ ನಡೆಯುವ ಚುನಾವಣೆ ಎಂಬ ಹೇಳಿಕೆಯಿಂದಾಗಿ ಬಂಟ್ವಾಳ ಕ್ಷೇತ್ರ ರಾಜ್ಯದ ಗಮನ ಸೆಳೆಯುತ್ತಿದ್ದು, ಶುಕ್ರವಾರ ರಾತ್ರಿ ಬೆಟ್ಟಿಂಗ್‌ನ ಭರಾಟೆಯೂ ಜೋರಾಗಿದೆ.

‘ಪುತ್ತೂರಿನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ನೇರ ಹಣಾಹಣಿ ಎಂಬ ನಿರೀಕ್ಷೆ ಇದ್ದುದರಿಂದ ಬೆಟ್ಟಿಂಗ್‌ ಆಗಲಿಕ್ಕಿಲ್ಲ ಅಂದುಕೊಂಡಿದ್ದೆವು. ಆದರೆ ಪಕ್ಷೇತರರಾಗಿ ನಿಂತವರೂ ದೊಡ್ಡ ಸಂಖ್ಯೆಯ ಮತಗಳನ್ನು ಸೆಳೆಯುವ ನಿರೀಕ್ಷೆ ಇದ್ದುದರಿಂದ ಬೆಟ್ಟಿಂಗ್‌ಗೆ ಪುತ್ತೂರಿನಲ್ಲಿಯೂ ಅವಕಾಶ ಹೆಚ್ಚಿದಂತಾಗಿದೆ’ ಎನ್ನುತ್ತಾರೆ ಪುತ್ತೂರಿನ ನಿವಾಸಿಯೊಬ್ಬರು.

ಕಳೆದ ಬಾರಿ ನಡೆದ ಚುನಾವಣೆಯಲ್ಲೋ ಅಥವಾ ಕಂಬಳ, ಕ್ರಿಕೆಟ್‌ ಸಂದರ್ಭದಲ್ಲಿಯೋ ಹಣ ಕಳೆದುಕೊಂಡವರು ಈಗ ಬೆಟ್ಟಿಂಗ್‌ನ ಹುಯೆಲಿಬ್ಬಿಸುತ್ತಾರೆ. ಬೆಟ್ಟಿಂಗ್‌ ನಡೆಸುವುದು ಕಾನೂನು ಬಾಹಿರ ಎಂಬುದು ಗೊತ್ತಿದ್ದರೂ ಗುಪ್ತವಾಗಿ ಅದಕ್ಕೆ ಕುಮ್ಮಕ್ಕು ನೀಡಲಾಗುತ್ತದೆ. ಸುಖಾ ಸುಮ್ಮನೆ ಹಣ ಕಳೆದುಕೊಳ್ಳುವ ಈ ದಂಧೆಗೆ ಜನ ಬಲಿಯಾಗಬಾರದು ಎಂದು ಹಿರಿಯರು ಕಿವಿಮಾತು ಹೇಳುತ್ತಾರೆ.

ಮತದಾನಕ್ಕೆ ಮುನ್ನಾದಿನ ನಡೆಯುವ ಬೆಟ್ಟಿಂಗ್‌, ಮತದಾನದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಅಂದರೆ ಒಂದು ಪಕ್ಷದ ಪರ ಬೆಟ್ಟಿಂಗ್‌ ಮಾಡಿದವರು, ಇಂತಹ ಪಕ್ಷಕ್ಕೇ ವೋಟ್‌ ಮಾಡಿ ಎಂದು ತಮ್ಮ ಬಂಧು ಬಳಗದವರನ್ನು ಒತ್ತಾಯಿಸುವ ಸಂಭವ ಇದೆ. ಇದು ಒಟ್ಟು ಮತದಾನದ ಮೇಲೆ ಪರಿಣಾಮ ಬೀರಲೂಬಹುದು ಎನ್ನುವ ಅಭಿಪ್ರಾಯ ಪಕ್ಷಗಳ ಕಾರ್ಯಕರ್ತರಲ್ಲಿದೆ.

ಜಿಲ್ಲೆಯ ವಿವಿಧೆಡೆಗಳಲ್ಲಿ ಬೆಟ್ಟಿಂಗ್‌ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ಇದರಲ್ಲಿ ಭಾಗವಹಿಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠ ಡಾ. ಬಿ.ಆರ್‌.ರವಿಕಾಂತೇಗೌಡ ಎಚ್ಚರಿಸಿದ್ದಾರೆ.

ಸುಳ್ಳು ಸುದ್ದಿಯ ಸರಮಾಲೆ:

ಫೇಸ್‌ಬುಕ್‌ ಮತ್ತು ವಾಟ್ಸ್‌ಆ್ಯಪ್‌ಗಳಲ್ಲಿ ಶುಕ್ರವಾರ ಸುಳ್ಳುಸುದ್ದಿಗಳು ಹೆಚ್ಚಿನ ಪ್ರಮಾಣದಲ್ಲಿ ಹರಿದಾಡಿದವು. ಮತ ಯಂತ್ರವನ್ನು ಮತದಾರರೇ ಆನ್‌ ಮಾಡಬೇಕು ಎಂಬ ಸುಳ್ಳು ಮಾಹಿತಿ ಹೆಚ್ಚು ಸದ್ದು ಮಾಡಿತು. ಹೇಳಬೇಕಾದ ತರ್ಕವೊಂದನ್ನು ಹೇಳಿ, ಬಳಿಕ ಸುಳ್ಳು ಸುದ್ದಿ ಎಂದೇ ಅದನ್ನು ಪ್ರಚಾರ ಮಾಡುತ್ತಿರುವ ಮತ್ತೊಂದು ವಿದ್ಯಮಾನ ಕೂಡ ಗೋಚರಿಸಿದೆ.

ಬಂಟರ ಯಾನೆ ನಾಡವರ ಸಂಘದ ವತಿಯಿಂದ ಪ್ರಕಟಣೆ ರೂಪದ ಬರಹ ಹರಿದಾಡುತ್ತಿದ್ದು, ಇದು ಸುಳ್ಳು ಸುದ್ದಿ ಎಂಬ ಪ್ರಕಟಣೆಯನ್ನು ಬಂಟರ ಸಂಘದಿಂದ ಬಿಡುಗಡೆ ಮಾಡಲಾಗಿದೆ.

ತಮ್ಮ ಪಕ್ಷದ ಪಾರಮ್ಯವನ್ನು ಒತ್ತಿ ಹೇಳುವ ವಿವಿಧ ರೀತಿಯ ವಿಡಿಯೊಗಳು, ಹಾಡುಗಳು, ತಮ್ಮ ನಾಯಕನನ್ನು ಹೊಗಳುವ ಯೂ ಟ್ಯೂಬ್‌ ಲಿಂಕ್‌ಗಳು ವಿವಿಧ ವಾಟ್ಸ್‌ಆ್ಯಪ್‌ ಗ್ರೂಪ್‌ಗಳಲ್ಲಿ ಹರಿದಾಡಿದವು. ಕೊನೆಯ ಕ್ಷಣದಲ್ಲಿ ಮತದಾರರನ್ನು ತಮ್ಮೆಡೆಗೆ ಸೆಳೆದುಕೊಳ್ಳಲು ಎಲ್ಲ ರೀತಿಯ ಪ್ರಯತ್ನಗಳನ್ನೂ ಪಕ್ಷಗಳು, ಅಭ್ಯರ್ಥಿಗಳು ಮತ್ತು ಅನುಯಾಯಿಗಳು ಮಾಡುತ್ತಿದ್ದಾರೆ.

**
ಬೆಟ್ಟಿಂಗ್‌ ಎಂದರೆ ಜೂಜಿನ ಮತ್ತೊಂದು ಮುಖ. ಇದು ಕಾನೂನು ಬಾಹಿರವಾಗಿದ್ದು, ಈ ಕೃತ್ಯ ನಡೆಸುತ್ತಿರುವ ಗುಂಪುಗಳ ಮೇಲೆ ಪೊಲೀಸರು ನಿಗಾ ಇರಿಸಲಿದ್ದಾರೆ
- ಡಾ. ಬಿ.ಆರ್‌.ರವಿಕಾಂತೇಗೌ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT