ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾರ್ಮಿಕರಿಗೆ ಫುಡ್ ಕಿಟ್ ವಿತರಣೆಯಲ್ಲಿ ಅವ್ಯವಹಾರವಾಗಿದ್ದರೆ ಸಾಬೀತುಪಡಿಸಲಿ‘

ಶಾಂತನಗೌಡಗೆ ಶಾಸಕ ರೇಣುಕಾಚಾರ್ಯ ಸವಾಲು
Last Updated 25 ಆಗಸ್ಟ್ 2021, 9:17 IST
ಅಕ್ಷರ ಗಾತ್ರ

ಹೊನ್ನಾಳಿ: ‘ಕಟ್ಟಡ ಕಾರ್ಮಿಕರಿಗೆ ಸರ್ಕಾರದಿಂದ ಬಂದಿರುವ ಫುಡ್ ಕಿಟ್ ಸಂಗ್ರಹಣೆ ಮತ್ತು ವಿತರಣೆಯಲ್ಲಿ ಅವ್ಯವಹಾರ ನಡೆದಿದೆ, ಎಪಿಎಂಸಿ ಗೋದಾಮಿನಲ್ಲಿ ನಾನು ಅಕ್ರಮವಾಗಿ ನಾಟಾ ಸಂಗ್ರಹಿಸಿಟ್ಟಿದ್ದೇನೆ ಎಂಬ ಆರೋಪಗಳನ್ನು ಮಾಜಿ ಶಾಸಕ ಡಿ.ಜಿ. ಶಾಂತನಗೌಡ ಅವರು ಸಾಬೀತುಪಡಿಸಲಿ’ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಸವಾಲು ಹಾಕಿದರು.

ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಶಾಂತನಗೌಡ ಅವರು ಹೇಳಿರುವ ಗೋದಾಮು ನಮ್ಮವರಿಗೆ ಸೇರಿದ್ದಲ್ಲ. ಅದು ಕಾಂಗ್ರೆಸ್ ಮುಖಂಡರಿಗೆ ಸೇರಿದ್ದು, ನಾನಾಗಲಿ, ನನ್ನ ಕುಟುಂಬದವರಾಗಲಿ ಆ ಗೋದಾಮಿಗೆ ಇದೂವರೆಗೂ ಹೋಗಿಲ್ಲ. ಗೋದಾಮು ಬಿಜೆಪಿಯವರಿಗೆ ಸೇರಿದ್ದು ಎಂದು ಅವರು ಆರೋಪಿಸಿದ್ದಾರೆ. ಆದರೆ, ಅದು ಅವರ ಪಕ್ಷದ ಮುಖಂಡರಿಗೆ ಸೇರಿದ್ದು’ ಎಂದರು.

‘ಶಾಂತನಗೌಡ ಅವರು ಶಾಸಕರಾಗಿದ್ದಾಗ ತಮ್ಮ ರೈಸ್‌ಮಿಲ್‌ನಲ್ಲಿ ವಿದ್ಯುತ್ ಕಳವು ಮಾಡಿಸಿ, ಕಳ್ಳತನವನ್ನು ಅವರ ಮುಸ್ಲಿಂ ಚಾಲಕನ ಮೇಲೆ ಹೊರಿಸಿದ್ದರು. ಶಾಮನೂರು ಶಿವಶಂಕರಪ್ಪ ಅವರಿಗೆ ಸೇರಿದ ಶ್ಯಾಮ್‍ಸನ್ ಡಿಸ್ಟಿಲರಿಯಿಂದ ತಮ್ಮ ಜಾವಾ ಬೈಕ್‌ನಲ್ಲಿ ಲಿಕ್ಕರ್ ತಂದು ಪರವಾನಗಿ ಇಲ್ಲದೆ ಮಾರಾಟ ಮಾಡಿದ್ದು ಸುಳ್ಳಾ? ರೈಸ್‌ಮಿಲ್‌ನಿಂದ ಅನ್ನಭಾಗ್ಯದ ಅಕ್ಕಿ ತಂದು ಮರುಪಾಲಿಶ್ ಮಾಡಿಸಿ ಮಾರಾಟ ಮಾಡಲಿಲ್ಲವೇ’ ಎಂದು ಪ್ರಶ್ನಿಸಿದರು.

‘ಕಾಂಗ್ರೆಸ್ ಮುಖಂಡ ಜೀನಹಳ್ಳಿ ಈಶ್ವರಪ್ಪ ಅವರ ತೋಟದಲ್ಲಿದ್ದ 55 ತ್ಯಾಗದ ಮರಗಳನ್ನು ದುಡ್ಡು ಕೊಟ್ಟು ಖರೀದಿಸಿದ್ದೇನೆ. ಅದಕ್ಕೆ ಪರ್ಮಿಟ್ ಹಾಕಿಸಿದ್ದೇನೆ. ಅದೇ ರೀತಿ ಗಂಗಾ ಸಾಮಿಲ್‌ನಲ್ಲಿ ₹ 20 ಲಕ್ಷ ಮೌಲ್ಯದ ನಾಟಾ ಇಟ್ಟಿದ್ದೇನೆ. ಇದಕ್ಕೆಲ್ಲ ಪರವಾನಗಿ ಇದೆ. ಕಳ್ಳತನದ್ದಲ್ಲ. ಆದರೆ ಶಾಂತನಗೌಡರು ತಮ್ಮ ಬೆಂಬಲಿಗರೊಬ್ಬರ ಮೂಲಕ ಈ ನಾಟಾ ಕಳ್ಳ ಮಾಲು ಎಂದು ಪೊಲೀಸರಿಗೆ ದೂರು ಕೊಡಿಸಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆಣೆ ಪ್ರಮಾಣಕ್ಕೆ ಮಠಕ್ಕೆ ಬರಲಿ: ‘ಶಾಂತನಗೌಡ ಅವರು ಹಿರೇಕಲ್ಮಠಕ್ಕೆ ಬರಲಿ. ನಾನೂ ಮಠಕ್ಕೆ ಬರುತ್ತೇನೆ. ನಾನು ಫುಡ್‌ಕಿಟ್‌ನಲ್ಲಿ ಅವ್ಯವಹಾರ ನಡೆಸಿದ್ದೇನೆ, ಅಕ್ರಮವಾಗಿ ನಾಟಾ ಸಂಗ್ರಹಿಸಿದ್ದೇನೆ ಎಂದು ಅವರು ಗದ್ದುಗೆ ಮುಟ್ಟಿ ಪ್ರಮಾಣ ಮಾಡಲಿ. ಅಕ್ರಮ ಮಾಡಿಲ್ಲ ಎಂದು ನಾನೂ ಪ್ರಮಾಣ ಮಾಡುತ್ತೇನೆ’ ಎಂದು ಹೇಳಿದರು.

‘ಮಾಜಿ ಶಾಸಕರ ಆರೋಪಗಳ ಸಂಬಂಧ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅವರಿಗೆ ನಾನೇ ಖುದ್ದಾಗಿ ದೂರವಾಣಿ ಕರೆ ಮಾಡಿ ತನಿಖೆ ನಡೆಸುವಂತೆ ಒತ್ತಾಯಿಸಿದ್ದೇನೆ. ಈ ಬಗ್ಗೆ ತನಿಖೆಯಾಗಿ ಸತ್ಯಾಂಶ ಹೊರಬರಲಿ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT