ಮಂಗಳವಾರ, ಮಾರ್ಚ್ 2, 2021
19 °C
ಸದೃಢ ಮಕ್ಕಳನ್ನಷ್ಟೇ ದತ್ತು ಪಡೆಯುವ ಭಾರತೀಯರು

ವಿಶೇಷ ಮಕ್ಕಳಿಗೆ ವಿದೇಶಿಯರ ಆದ್ಯತೆ

ಬಾಲಕೃಷ್ಣ ‍ಪಿ.ಎಚ್‌. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಮಕ್ಕಳನ್ನು ದತ್ತು ಪಡೆಯುವ ವಿಚಾರದಲ್ಲಿ, ವಿದೇಶಿಯರು ವಿಶೇಷ ಆರೈಕೆ ಅಗತ್ಯ ಇರುವ ಮಕ್ಕಳನ್ನು ದತ್ತು ಪಡೆಯಲು ಆದ್ಯತೆ ನೀಡಿದರೆ, ಭಾರತೀಯರು ಮಾತ್ರ ಆರೋಗ್ಯವಂತ ಮಗುವನ್ನೇ ಬಯಸುತ್ತಾರಂತೆ.

ದತ್ತು ತೆಗೆದುಕೊಳ್ಳುವುದು ಈಗ ಒಂದು ರಾಜ್ಯ ಅಥವಾ ಒಂದು ದೇಶಕ್ಕೆ ಸೀಮಿತವಾಗಿಲ್ಲ. ಜಗತ್ತಿನ ಯಾವುದೇ ದೇಶದವರು ಇನ್ಯಾವುದೋ ದೇಶದ ಮಗುವನ್ನು ದತ್ತು ತೆಗೆದುಕೊಳ್ಳಲು ಅವಕಾಶ ಇದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವಾಗ ದತ್ತು ತೆಗೆದುಕೊಳ್ಳುವವರ ಕಾಲಂನಲ್ಲಿ ಭಾರತೀಯರು, ಅನಿವಾಸಿ ಭಾರತೀಯರು ಮತ್ತು ವಿದೇಶಿಯರು ಎಂಬ ಮೂರು ವಿಭಾಗಗಳಿವೆ. ಯಾವ ಮಗುವನ್ನು ಎಂಬ ಪ್ರಶ್ನೆಗೆ ಭಾರತೀಯರು ಮೊದಲು ಆರೋಗ್ಯವಂತ ಗಂಡು ಮಗುವಿಗೆ ಆದ್ಯತೆ ನೀಡುತ್ತಾರೆ. ಗಂಡು ಮಗು ಇಲ್ಲ ಅಂದ್ರೆ ಆರೋಗ್ಯವಂತ ಹೆಣ್ಣು ಮಗುವಿಗೆ ಆದ್ಯತೆ ನೀಡುತ್ತಾರೆ. ದೈಹಿಕವಾಗಿ ನ್ಯೂನತೆ ಇರುವ ಮಗುವನ್ನು ಬಯಸುವುದೇ ಇಲ್ಲ. ಆದರೆ, ವಿದೇಶಿಯರು ಹೆಣ್ಣು, ಗಂಡು ಎಂದು ನೋಡದೇ ವಿಶೇಷ ಆರೈಕೆ ಅಗತ್ಯ ಇರುವ ಮಕ್ಕಳನ್ನೇ ಆಯ್ಕೆ ಮಾಡುತ್ತಾರೆ ಎನ್ನುತ್ತಾರೆ ಮಕ್ಕಳ ‌ಹಕ್ಕು ರಕ್ಷಣಾಲಯದ ಉಪನಿರ್ದೇಶಕ ಕೆ.ಎಚ್‌. ವಿಜಯಕುಮಾರ್‌.

ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಇರುವ ‘ಕಾರಾ’ (ಸೆಂಟ್ರಲ್‌ ಅಡಾಪ್ಶನ್‌ ರಿಸೋರ್ಸ್‌ ಸೆಂಟರ್‌) ಸಂಸ್ಥೆಯು ಈ ದತ್ತು ಪ್ರಕ್ರಿಯೆ ಹೇಗಿರಬೇಕು ಎಂದು ನಿಯಮಾವಳಿಯನ್ನು ರೂಪಿಸಿದೆ. ಅದರಂತೆ ಭಾರತದ ಮಗುವನ್ನು ಬೇರೆ ದೇಶದವರು ಹಾಗೂ ಬೇರೆ ದೇಶದ ಮಗುವನ್ನು ಭಾರತೀಯರು ದತ್ತು ಸ್ವೀಕರಿಸಲು ಅವಕಾಶ ಇದೆ. ಒಮ್ಮೆ ದತ್ತು ತೆಗೆದುಕೊಂಡರೆ ಅಲ್ಲಿ ಕೆಲಸ ಮಾಡುವ ‘ಕಾರಾ’ದ ಏಜೆನ್ಸಿ ಸಂಸ್ಥೆಗಳು ಅಲ್ಲಿ ನಿಗಾ ಇಡುತ್ತವೆ. ಆರಂಭದಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ, ಬಳಿಕ ಆರು ತಿಂಗಳಿಗೊಮ್ಮೆ, ಮುಂದೆ ವರ್ಷಕ್ಕೊಮ್ಮೆ ಪರಿಶೀಲಿಸುತ್ತವೆ. ಅಲ್ಲದೇ ದತ್ತು ಸ್ವೀಕರಿಸಿದವರು ವಿಡಿಯೊ ಮಾಡಿ ಕಳುಹಿಸುತ್ತಾ ಇರಬೇಕು. ಇದೇ ರೀತಿ ಐದು ವರ್ಷ ಕಳೆದ ಮೇಲೆ ನಿಗಾ ಸಡಿಲಗೊಳ್ಳುತ್ತದೆ. ಬಳಿಕ ಎರಡು ಮೂರು ವರ್ಷಗಳಿಗೊಮ್ಮೆ ಮಗುವಿನ ಬಗ್ಗೆ ತಿಳಿದುಕೊಳ್ಳುತ್ತಾರೆ ಎಂದು ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ದಾವಣಗೆರೆಯ ಅಮೂಲ್ಯ (ಜಿ) ಮಕ್ಕಳ ದತ್ತು ಕೇಂದ್ರದಿಂದ ಈವರೆಗೆ ವಿಶೇಷ ಆರೈಕೆ ಅಗತ್ಯ ಇರುವ ಮೂರು ಗಂಡು, ನಾಲ್ಕು ಹೆಣ್ಣು ಮಕ್ಕಳನ್ನು ವಿದೇಶಿಯರು ದತ್ತು ಪಡೆದಿದ್ದಾರೆ. ಅದರಲ್ಲಿ ನಾಲ್ಕು ಮಕ್ಕಳು ಅಮೆರಿಕಕ್ಕೆ, ಎರಡು ಮಕ್ಕಳು ಮಾಲ್ಟಾಕ್ಕೆ, ಒಂದು ಮಗು ಸ್ಪೇನ್‌ಗೆ ಹೋಗಿದೆ. ಭಾರತದ ಒಳಗೆ ದಾವಣಗೆರೆಯಿಂದ 35 ಮಕ್ಕಳನ್ನು ದತ್ತು ತೆಗೆದುಕೊಳ್ಳಲಾಗಿದೆ. ಎಲ್ಲವೂ ಆರೋಗ್ಯವಂತ ಮಕ್ಕಳೇ ಎಂಬುದು ಅವರ ವಿವರಣೆ.

ಮನಃಸ್ಥಿತಿ ಕಾರಣ

ವಿಶೇಷ ಮಕ್ಕಳನ್ನು ಪಡೆದು ಸಾಕುವುದನ್ನು ಪಾಶ್ಚಾತ್ಯ ದೇಶದವರು ಸೇವೆ ಎಂದು ಪರಿಗಣಿಸುತ್ತಾರೆ. ಅವರಲ್ಲಿ ಹಣದ ಕೊರತೆ ಇರುವುದಿಲ್ಲ. ಚೆನ್ನಾಗಿ ನೋಡಿಕೊಳ್ಳುತ್ತಾರೆ. ಭಾರತೀಯರು ಸೇವೆ ಎಂದು ಪರಿಗಣಿಸುವುದಿಲ್ಲ. ವಂಶೋದ್ಧಾರಕರು ಇಲ್ಲ ಎಂಬ ಕಾರಣಕ್ಕೆ ತೆಗೆದುಕೊಳ್ಳುತ್ತಾರೆ. ಈ ಮನಃಸ್ಥಿತಿಯಿಂದಾಗಿಯೇ ಹೆಚ್ಚು ಆರೈಕೆ ಬಯಸುವ ಮಕ್ಕಳನ್ನು ಭಾರತೀಯರು ಬಯಸುವುದಿಲ್ಲ ಎಂದು ವಿಜಯಕುಮಾರ್ ವಿಶ್ಲೇಷಿಸುತ್ತಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು