ಕಾಂಡಕೊರಕ ಹುಳುಬಾಧೆಗೆ ಕಂಗೆಟ್ಟ ರೈತರು

7

ಕಾಂಡಕೊರಕ ಹುಳುಬಾಧೆಗೆ ಕಂಗೆಟ್ಟ ರೈತರು

Published:
Updated:
ಮಾಯಕೊಂಡ ಹೋಬಳಿಯಲ್ಲಿ ಮೆಕ್ಕೆಜೋಳದ ಬೆಳೆಗೆ ಕಾಂಡಕೊರಕ ಹುಳು ಬಿದ್ದಿರುವುದನ್ನು ಕೃಷಿ ಅಧಿಕಾರಿ ಎಂ.ಡಿ. ಶ್ರೀಧರಮೂರ್ತಿ ಮಂಗಳವಾರ ಪರಿಶೀಲಿಸಿದರು.

ಮಾಯಕೊಂಡ: ದುಬಾರಿ ಬೀಜ, ಗೊಬ್ಬರ ಹಾಕಿ ಬಿತ್ತಿದ ಮೆಕ್ಕಜೋಳಕ್ಕೆ ಎರಗಿರುವ ಕಾಂಡಕೊರೆಯುವ ಹುಳುಬಾಧೆ ಅನ್ನದಾತರನ್ನು ಕಂಗಾಲಾಗಿಸಿದೆ.

ಮೆಕ್ಕೆಜೋಳ ಬಿತ್ತನೆ ಮಾಡಿ, ತಿಂಗಳು ಕಳೆಯುತ್ತ ಬಂದರೂ ಮಳೆ ಬಂದಿಲ್ಲ. ಮುಂದೇನು ಗತಿ ಎಂದು ಅನ್ನದಾತ ಚಿಂತಿಸುತ್ತಿರುವಾಗಲೇ ಕಾಂಡಕೊರಕ ಹುಳುಬಾಧೆ ಕಾಣಿಸಿಕೊಂಡಿದೆ.

ಮೆಕ್ಕೆಜೋಳ ಬೆಳೆ ಅಲ್ಲಲ್ಲಿ ಒಣಗುತ್ತಿದೆ. ದಂಟನ್ನು ಸುಲಿದು ನೋಡಿದಾಗ ಸುಳಿಯ ತಳದಲ್ಲಿ ಹುಳುಗಳು ಸಸಿಯ ಕಾಂಡ ತಿನ್ನುತ್ತಿರುವುದು ಕಂಡುಬಂದಿದೆ. ಬೆಳೆ ಹಾಳಾಗುತ್ತಿರವುದನ್ನು ಕಂಡು ರೈತರು ದಿಗಿಲುಗೊಂಡಿದ್ದಾರೆ. ಮಳೆ ಬಾರದೇ ಮುಗಿಲು ನೋಡುತ್ತಿದ್ದ ರೈತರು ಈಗ ಹುಳುವಿನ ಕಾಟದಿಂದ ನೆಲವನ್ನೂ ನೋಡುವಂತಾಗಿದೆ. ಹೋಬಳಿಯ ಎಚ್. ಬಸವಾಪುರ, ಮಾಯಕೊಂಡ, ನಲಕುಂದ ಮತ್ತಿತರ ಕಡೆ ಈ ಹುಳುವಿನ ಬಾಧೆ ಕಾಣಿಸಿಕೊಂಡಿದೆ.

ಕೃಷಿ ಅಧಿಕಾರಿ ಎಂ.ಡಿ. ಶ್ರೀಧರ ಮೂರ್ತಿ ಅವರು ತರಳಬಾಳು ಕೃಷಿ ವಿಜ್ಞಾನ ಕೇಂದ್ರ ವಿಜ್ಞಾನಿ ಬಸವನಗೌಡ, ಉಪ ತಹಶೀಲ್ದಾರ್ ರಾಮಸ್ವಾಮಿ ಅವರೊಂದಿಗೆ ರೋಗ ಪೀಡಿತ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಮಾಯಕೊಂಡದ ದಾಸಪ್ಪರ ವೆಂಕಟೇಶಪ್ಪ ಅವರ ಜಮೀನಿನಲ್ಲಿ ಔಷಧಿ ಸಿಂಪರಣಾ ಪ್ರಾತ್ಯಕ್ಷಿಕೆ ನಡೆಸಿದರು.

‘ದುಬಾರಿ ಬೀಜ ಗೊಬ್ಬರ ಹಾಕಿ ಮೆಕ್ಕೆಜೊಳದ ಬಿತ್ತನೆ ಮಾಡಿದ್ದೇವೆ. ಮೆಕ್ಕೆಜೋಳ ಬಿತ್ತಿದ ಮೇಲೆ ಮಳೆ ಬಿದ್ದಿಲ್ಲ. ಮಳೆಗೆ ಕಾಯುತ್ತಿದ್ದೇವೆ. ಆದರೆ, ಈಗ ಕಾಂಡ ಕೊರೆಯುವ ಹುಳುವಿನ ಬಾಧೆಯಿಂದ ಕಂಗೆಟ್ಟಿದ್ದೇವೆ. ಇಲಾಖೆ ಇದಕ್ಕೆ ಉಚಿತ ಕೀಟನಾಶಕ ನೀಡಬೇಕು. ಮೆಕ್ಕೆಜೋಳಕ್ಕೆ ಔಷಧಿ ಹೊಡೆಯುತ್ತಿರಲಿಲ್ಲ. ಆದರೆ ಇನ್ನುಮುಂದೆ ಮೆಕ್ಕೆಜೋಳಕ್ಕೂ ಔಷಧಿ ಸಿಂಪಡಿಸಬೇಕಾಗಿದೆ. ಹೀಗಾದರೆ ರೈತರು ಉಳಿಯಲು ಹೇಗೆ ಸಾಧ್ಯ’ ಎಂದು ಮಾಯಕೊಂಡದ ರೈತರಾದ ದಾಸಪ್ಪರ ವೆಂಕಟೇಶಪ್ಪ, ಸಂಡೂರು ರಾಮಣ್ಣ, ಮಲ್ಲಪ್ಪ, ಲಕ್ಷ್ಮಣ ಅಳಲು ತೋಡಿಕೊಂಡರು.

‘ರಿಯಾಯಿತಿ ದರದಲ್ಲಿ ಔಷಧ ಲಭ್ಯ’

ಹೋಬಳಿಯಲ್ಲಿ 20ರಿಂದ 25 ದಿನಗಳ ಪ್ರಾಯದ ಮೆಕ್ಕೆಜೋಳಕ್ಕೆ ‘ಸ್ಪೋಡಾಪ್ಟರಾ’ ಮತ್ತು ‘ಕಾಂಡಕೊರಕ’ ಹುಳುಬಾಧೆ ಕಂಡುಬಂದಿದೆ. ಕಾಂಡಕೊರಕ ಹುಳು ನಿಯಂತ್ರಿಸಲು ಸಾಮೂಹಿಕ ನಿಯಂತ್ರಣ ಕ್ರಮಕೈಗೊಂಡರೆ ಒಳಿತು. 1 ಲೀಟರ್‌ ನೀರಿಗೆ 2 ಎಂ.ಎಲ್‌ ಕ್ಲೋರೋಫೈರಿಫೋಸ್ ಔಷಧ ಬೆರೆಸಿ ಸಿಂಪಡಿಸಬೇಕು. ಔಷಧ ಮಿಶ್ರಿತ ದ್ರಾವಣ ಸುಳಿಯಲ್ಲಿ ಇಳಿಯುವಂತೆ ಸಿಂಪಡಿಸಬೇಕು. ಔಷಧ ರೈತ ಸಂಪರ್ಕ ಕೇಂದ್ರದಲ್ಲಿ ರಿಯಾಯಿತಿ ದರದಲ್ಲಿ ಲಭ್ಯವಿದೆ ಎಂದು ಕೃಷಿ ಅಧಿಕಾರಿ ಡಿ.ಎಮ್. ಶ್ರೀಧರಮೂರ್ತಿ ಮಾಹಿತಿ ನೀಡಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !