ವೈದ್ಯಕೀಯ ತ್ಯಾಜ್ಯ, ಜೈವಿಕ ಮಾದರಿ ಪತ್ತೆ

7
ಕರೂರು ಕೈಗಾರಿಕಾ ಪ್ರದೇಶದ ಬಳಿ ಮೂಟೆಗಟ್ಟಲೆ ತ್ಯಾಜ್ಯ

ವೈದ್ಯಕೀಯ ತ್ಯಾಜ್ಯ, ಜೈವಿಕ ಮಾದರಿ ಪತ್ತೆ

Published:
Updated:
ದಾವಣಗೆರೆಯ ಕರೂರು ಕೈಗಾರಿಕಾ ಪ್ರದೇಶದ ಬಳಿ ಖಾಲಿ ನಿವೇಶನದಲ್ಲಿ ಎಸೆದಿರುವ ಅಪಾರ ಪ್ರಮಾಣದ ಔಷಧ ಬಾಟಲಿ ಹಾಗೂ ಜೈವಿಕ ಮಾದರಿಗಳಿರುವ ಬಾಟಲಿಗಳು

ದಾವಣಗೆರೆ: ಜಿಲ್ಲಾಧಿಕಾರಿ ಕಚೇರಿ ಸಮೀಪದ ಕರೂರು ಕೈಗಾರಿಕಾ ಪ್ರದೇಶದ ಬಳಿ ರಸ್ತೆ ಪಕ್ಕದ ಖಾಲಿ ನಿವೇಶನಗಳಲ್ಲಿ ಭಾರಿ ಪ್ರಮಾಣದಲ್ಲಿ ವೈದ್ಯಕೀಯ ತ್ಯಾಜ್ಯ ಹಾಗೂ ಜೈವಿಕ ಮಾದರಿಗಳು ಪತ್ತೆಯಾಗಿದ್ದು, ನಾಗರಿಕರಲ್ಲಿ ಆತಂಕ ಮೂಡಿಸಿದೆ.

ಸಾವಿರಾರು ಸಂಖ್ಯೆಯಲ್ಲಿ ಸಿರಿಂಜ್‌, ನೀಡಲ್‌, ಔಷಧ ಬಾಟಲಿಗಳನ್ನು ಸುಮಾರು 10 ಕಡೆ ರಸ್ತೆಯ ಪಕ್ಕದಲ್ಲಿ ದಾಸ್ತಾನು ಮಾಡಲಾಗಿದೆ. ವೈದ್ಯಕೀಯ ಪರೀಕ್ಷೆಗಾಗಿ ಕಳುಹಿಸಿರುವ ಸ್ಯಾಂಪಲ್‌ಗಳಿರುವ (ಜೈವಿಕ ಮಾದರಿಗಳು) ಪುಟ್ಟ ಪುಟ್ಟ ಬಾಕ್ಸ್‌ಗಳೂ ಒಂದು ಕಡೆ ಪತ್ತೆಯಾಗಿವೆ. ಇವನ್ನು ಕಂಡ ದಾರಿಹೋಕರು ಸಾಮಾಜಿಕ ಕಾರ್ಯಕರ್ತರಿಗೆ ಮಾಹಿತಿ ನೀಡಿದ್ದಾರೆ.

‘ವೈದ್ಯಕೀಯ ತ್ಯಾಜ್ಯ ಎಸೆದಿರುವ ಬಗ್ಗೆ ಭಾನುವಾರ ಬೆಳಿಗ್ಗೆ ಮಾಹಿತಿ ಬಂದ ತಕ್ಷಣವೇ ಸ್ಥಳಕ್ಕೆ ಹೋಗಿ ನೋಡಿದಾಗ ದಿಗ್ಭ್ರಮೆಯಾಯಿತು. 10 ಕಡೆ ಸುಮಾರು ಅರ್ಧ ಟನ್‌ನಷ್ಟು ವೈದ್ಯಕೀಯ ತ್ಯಾಜ್ಯವನ್ನು ಹಾಕಲಾಗಿದೆ. ಇದರ ನಡುವೆ ಒಂದು ಪ್ಲಾಸ್ಟಿಕ್‌ ಚೀಲದಲ್ಲಿ ಸುಮಾರು 20 ಬಾಕ್ಸ್‌ಗಳಲ್ಲಿ ಫಾರ್ಮಲಿನ್‌ ಲಿಕ್ವಿಡ್‌ನಲ್ಲಿ ಜೈವಿಕ ಮಾದರಿಗಳನ್ನು ಹಾಕಿಟ್ಟಿರುವುದು ಕಂಡುಬಂತು’ ಎಂದು ಸಾಮಾಜಿಕ ಕಾರ್ಯಕರ್ತ ಎಂ.ಜಿ. ಶ್ರೀಕಾಂತ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಶಸ್ತ್ರಚಿಕಿತ್ಸೆ ನಡೆಸಿ ತೆಗೆದ ಗೆಡ್ಡೆ, ಪ್ರಯೋಗಾಲಯಕ್ಕೆ ಕಳುಹಿಸಿದ್ದ ಅಂಗಾಂಶಗಳಂತೆ ಮೇಲ್ನೋಟಕ್ಕೆ ಕಂಡುಬರುತ್ತಿವೆ. ಇವನ್ನು ಹೀಗೆ ಮುಕ್ತವಾಗಿ ಎಸೆಯುವುದರಿಂದ ರೋಗ–ರುಜಿನಗಳು ಹರಡುವ ಸಾಧ್ಯತೆ ಇದೆ. ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಡಿಎಚ್‌ಒಗೆ ವಾಟ್ಸ್‌ಆ್ಯಪ್‌ ಮೂಲಕ ಫೋಟೊಗಳನ್ನು ಕಳುಹಿಸಿ, ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದೇನೆ’ ಎಂದು ಹೇಳಿದರು.

ವೈದ್ಯಕೀಯ ತ್ಯಾಜ್ಯವನ್ನು ನಗರದಲ್ಲಿ ರಸ್ತೆ ಪಕ್ಕ ಎಸೆಯುತ್ತಿರುವುದು ಮೇಲಿಂದ ಮೇಲೆ ಪತ್ತೆಯಾಗುತ್ತಿದೆ. ಇದರ ಹಿಂದಿನ ಸತ್ಯವನ್ನು ಭೇದಿಸಲು ಸಿಐಡಿ ತನಿಖೆ ನಡೆಸಬೇಕು ಎಂದು ಶ್ರೀಕಾಂತ್‌ ಒತ್ತಾಯಿಸಿದರು.

ಜೂನ್‌ 22ರಂದು ಗಾಂಧಿನಗರದ ಹಿಂದೂ ರುದ್ರಭೂಮಿ ಸಮೀಪದ ಗುಜರಿ ಅಂಗಡಿಯೊಂದರಲ್ಲಿ ವೈದ್ಯಕೀಯ ತ್ಯಾಜ್ಯದ ರಾಶಿ ಪತ್ತೆಯಾಗಿತ್ತು. ನಗರದಲ್ಲಿ ವೈದ್ಯಕೀಯ ತ್ಯಾಜ್ಯದ ಮರುಬಳಕೆ ದಂಧೆ ನಡೆಯುತ್ತಿದೆಯೇ ಎಂಬ ಶಂಕೆ ವ್ಯಕ್ತವಾಗಿತ್ತು. ಜುಲೈ 3ರಂದು ಜಿಲ್ಲಾ ಆರೋಗ್ಯಾಧಿಕಾರಿ ನೇತೃತ್ವದ ತಂಡ ನಗರದ ಹಲವು ಖಾಸಗಿ ಆಸ್ಪತ್ರೆ ಹಾಗೂ ಲ್ಯಾಬ್‌ಗಳ ಮೇಲೆ ದಾಳಿ ನಡೆಸಿದಾಗ ವೈದ್ಯಕೀಯ ತ್ಯಾಜ್ಯವನ್ನು ಸರಿಯಾಗಿ ವಿಂಗಡಣೆ ಮಾಡದೇ ಇರುವುದು ಕಂಡುಬಂದಿತ್ತು.

ತನಿಖೆ ನಡೆಸಿ ಕ್ರಮ: ಡಿಎಚ್‌ಒ
‘ಇಷ್ಟೊಂದು ಭಾರಿ ಪ್ರಮಾಣದ ವೈದ್ಯಕೀಯ ತ್ಯಾಜ್ಯ ಆಸ್ಪತ್ರೆಗಳಲ್ಲಿ ಏಕಾಏಕಿ ಉತ್ಪತ್ತಿಯಾಗಲು ಸಾಧ್ಯವಿಲ್ಲ. ದುರ್ವಾಸನೆ ಬೀರುವುದರಿಂದ ಆಸ್ಪತ್ರೆಯಲ್ಲಿ ತ್ಯಾಜ್ಯವನ್ನು ಬಹಳ ದಿನಗಳ ಕಾಲ ಇಟ್ಟುಕೊಳ್ಳಲೂ ಆಗುವುದಿಲ್ಲ. ಆಸ್ಪತ್ರೆಯವರು ತ್ಯಾಜ್ಯವನ್ನು ಏಜೆನ್ಸಿಯವರಿಗೆ ನೀಡುತ್ತಿದ್ದಾರೆ. ಇದು ಎಲ್ಲಿಂದ ಬಂತು ಎಂಬ ಬಗ್ಗೆ ತನಿಖೆ ನಡೆಸುವಂತೆ ಈಗಾಗಲೇ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ದೂರು ನೀಡಲಾಗಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ತ್ರಿಪುಲಾಂಭ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಯ ಗಮನಕ್ಕೂ ತರಲಾಗಿದೆ. ಡ್ರಗ್ಸ್‌ ಕಂಪನಿಯವರು ಅವಧಿ ಮೀರಿದ ಸಿರಿಂಜ್‌, ಔಷಧಿಗಳನ್ನು ತಂದು ಹಾಕುತ್ತಿದ್ದಾರೆಯೇ ಎಂಬ ಸಂಶಯವೂ ಬರುತ್ತಿದೆ. ತನಿಖೆ ನಡೆಸಿದ ಬಳಿಕವೇ ಸತ್ಯ ಗೊತ್ತಾಗಲಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !