ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸದುರ್ಗ: 3 ಹೋಬಳಿಗೆ ಅನುಕೂಲ ಕಲ್ಪಿಸುವ ಸೇತುವೆ, ರಸ್ತೆ

ಸೇತುವೆ ನಿರ್ಮಾಣವಾದರೆ ಕಡಿಮೆ ಅವಧಿಯಲ್ಲೇ ಜಿಲ್ಲಾ ಕೇಂದ್ರ ತಲುಪಬಹುದು
Last Updated 2 ಜೂನ್ 2022, 8:55 IST
ಅಕ್ಷರ ಗಾತ್ರ

ಹೊಸದುರ್ಗ: ಜಿಲ್ಲಾ ಕೇಂದ್ರಕ್ಕೆ ಹೋಗಬೇಕೆಂದರೆ ಶ್ರೀರಾಂಪುರ, ಮತ್ತೋಡು ಮತ್ತು ಮಾಡದಕೆರೆ ಹೋಬಳಿಯ ಜನತೆ ನಿತ್ಯ 60 ಕಿ.ಮೀಗೂ ಹೆಚ್ಚು ದೂರ ಸುತ್ತಿ ಬರಬೇಕು. ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಚೇರಿಗಳಿಗೆ ಬಂದು ಕೆಲಸ ಮುಗಿಸಿಕೊಂಡು ಹೋಗಲು ಹರಸಾಹಸ ಪಡಬೇಕು. ಒಂದು ಕೆಲಸಕ್ಕಾಗಿ ಇಡೀ ದಿನ ವ್ಯಯಿಸಬೇಕಾಗಿದೆ. ಆದರೆ ಇಲ್ಲಿಯ ವೇದಾವತಿ ಹಿನ್ನೀರಿನಲ್ಲಿ ಸೇತುವೆ ನಿರ್ಮಾಣವಾದರೆ ಕಡಿಮೆ ಅವಧಿಯಲ್ಲೇ ಜಿಲ್ಲಾ ಕೇಂದ್ರ ತಲುಪಬಹುದು.

ಈ ಹೋಬಳಿಯ ಜನರು ಸುಗಮವಾಗಿ ಸಂಚರಿಸಲು ಅನುಕೂಲವಾಗುವಂತೆ ಮಾಡದಕೆರೆ ಹೋಬಳಿಯ ಬೇವಿನಾಳಮ್ಮ ದೇವಸ್ಥಾನದಿಂದ ಮತ್ತೋಡು ಹೋಬಳಿ ಹಿಂಡಿದೇವರಹಟ್ಟಿಯವರೆಗೂ ಬೃಹತ್ ಸಂಪರ್ಕ ಸೇತುವೆ ಮತ್ತು ರಸ್ತೆ ನಿರ್ಮಾಣ ಕಾರ್ಯಕ್ಕೆ ಶಂಕುಸ್ಥಾಪನೆ ಮಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೂನ್‌ 4 ರಂದು ಹೊಸದುರ್ಗಕ್ಕೆ ಬರಲಿದ್ದಾರೆ.

1905ರಲ್ಲಿ ವೇದಾವತಿ ನದಿಗೆ ಅಡ್ಡಲಾಗಿ ವಾಣಿವಿಲಾಸ ಡ್ಯಾಂ ನಿರ್ಮಿಸಲಾಗಿತ್ತು. ಇದು ಹೊಸದುರ್ಗದಿಂದ 32 ಕಿ.ಮೀ ಅಂತರದಲ್ಲಿದೆ. ಡ್ಯಾಂ ಹಿರಿಯೂರು ತಾಲ್ಲೂಕಿನ ವ್ಯಾಪ್ತಿಯಲ್ಲಿದ್ದು, ನೀರು ಸಂಗ್ರಹಣಾ ಭಾಗವು ಹೊಸದುರ್ಗ ತಾಲ್ಲೂಕಿನಲ್ಲೇ ಹೆಚ್ಚು. ಹೀಗಾಗಿ ಮಾಡದಕೆರೆ ಶ್ರೀರಾಂಪುರ ಹಾಗೂ ಮತ್ತೋಡು ಹೋಬಳಿಗಳನ್ನು ಸಂಪರ್ಕಿಸಲು 45-50 ಕಿ.ಮೀ ಹೆಚ್ಚಾಗುತ್ತದೆ. ಇದನ್ನು ತಪ್ಪಿಸಿ, ಜನರಿಗೆ ಅನುಕೂಲವಾಗಲೆಂದು ಸರ್ಕಾರ ₹ 136.5 ಕೋಟಿ ಅನುದಾನ ನೀಡಿ, ಸಂಪರ್ಕ ಸೇತುವೆ ಮತ್ತು ರಸ್ತೆ ನಿರ್ಮಿಸಲು ಅವಕಾಶ ಮಾಡಿಕೊಟ್ಟಿದೆ. 2019ರಲ್ಲಿ ಅಂದಿನ ನೀರಿನ ಮಟ್ಟಕ್ಕೆ ಅನುಗುಣವಾಗಿ ಬಿ.ಎಸ್ ಯಡಿಯೂರಪ್ಪ ₹ 86 ಕೋಟಿ ಹಣ ಬಿಡುಗಡೆ ಮಾಡಿದ್ದರು. ತಾಲ್ಲೂಕಿನಲ್ಲಿ ಅಧಿಕ ಮಳೆಯಾಗಿದ್ದ ಕಾರಣ ಭದ್ರಾ ಒಳಹರಿವು ಹೆಚ್ಚಾಗಿ ನೀರಿನ ಸಂಗ್ರಹ ಹೆಚ್ಚಾಯಿತು. ಕಾರಣ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪುನಃ ₹ 50 ಕೋಟಿ ಹಣ ನೀಡಿದ್ದಾರೆ. ಇದರಿಂದಾಗಿ ಸುಮಾರು 46 ಗ್ರಾಮಗಳ 48,800 ಜನರಿಗೆ ಅನುಕೂಲವಾಗಲಿದೆ. ಈ ಕಾಮಗಾರಿ ಅನುಷ್ಠಾನದಿಂದ 100 ವರ್ಷಗಳಿಂದ ಸಂಪರ್ಕ ಸಮಸ್ಯೆ ಎದುರಿಸುತ್ತಿದ್ದ ತಾಲ್ಲೂಕಿನ 3 ಹೋಬಳಿಗಳ ಜನರಿಗೆ ಅನುಕೂಲವಾಗಲಿದೆ.

ಈ ಕಾಮಗಾರಿಯನ್ನು ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ ಇಲಾಖೆಯು ನಿರ್ವಹಿಸುತ್ತಿದೆ. ಕಾಮಗಾರಿಯ ಟೆಂಡರ್‌ ಕರೆಯ
ಲಾಗಿದ್ದು, ಪ್ರಸ್ತುತ ಸಂಪರ್ಕ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ. ರಸ್ತೆ ಮತ್ತು ಸೇತುವೆ ಕಾಮಗಾರಿ 4,684 ಮೀಟರ್‌ ಉದ್ದವಿದ್ದು, ಇದು ಬೇವಿನಹಳ್ಳಿಯಿಂದ ಆರಂಭವಾಗಿ ಹಿಂಡಿದೇವರಹಟ್ಟಿ ಯವರೆಗೂ ನಡೆಯುತ್ತದೆ. ಬೇವಿನಹಳ್ಳಿ ಕಡೆ ಅರೋಚ್‌ ರಸ್ತೆ 650 ಮೀ ಉದ್ದ, ಬ್ರಿಡ್ಜ್‌ 1,140 ಮೀ, ಹಿಂಡಿದೇವರಹಟ್ಟಿ ಕಡೆಯ ರಸ್ತೆಯ ಉದ್ದ 2,894 ಮೀ ಇದೆ. 7.5 ಮೀಟರ್‌ ಅಗಲದ ಸೇತುವೆ ನಿರ್ಮಾಣವಾಗಲಿದೆ.

ಪಂಡಿತಾರಾಧ್ಯ ಸ್ವಾಮೀಜಿ ಹೆಸರು: 2019ರಂದು ಅಂದಿನ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಸಾಣೇಹಳ್ಳಿಗೆ ಭೇಟಿ ನೀಡಿದಾಗ, ಸಾಣೇಹಳ್ಳಿ ಸ್ವಾಮೀಜಿ ಎದುರು ಶಾಸಕ ಗೂಳಿಹಟ್ಟಿ ಡಿ. ಶೇಖರ್‌ ಬೃಹತ್‌ ಸೇತುವೆಯ ನಿರ್ಮಾಣದ ಪ್ರಸ್ತಾಪವೆತ್ತಿದ್ದರು. ಅವರು ಅಂದೇ ಸೇತುವೆ ನಿರ್ಮಾಣಕ್ಕೆ ಅನುದಾನ ನೀಡುವುದಾಗಿ ಭರವಸೆ ನೀಡಿದ್ದರು. ಇದರ ನೆನಪಿಗಾಗಿ ಹಾಗೂ ಸಾಣೇಹಳ್ಳಿ ಸ್ವಾಮೀಜಿಯವರ ಹೆಸರು ಅಜರಾಮರವಾಗಿರಲಿ ಎಂಬ ಕಾರಣಕ್ಕೆ ಈ ಸೇತುವೆಗೆ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರ
ಹೆಸರಿಡಲಾಗುತ್ತಿದೆ.

ಸೇತುವೆಗೆ ನೀರು ತಾಗದಂತೆ ನಿರ್ಮಾಣ
ಈ ಬೃಹತ್‌ ಸಂಪರ್ಕ ಸೇತುವೆಯಿಂದ ಸಾವಿರಾರು ಜನರಿಗೆ ಅನುಕೂಲವಾಗಲಿದೆ. ವೇದಾವತಿ ನದಿಯ ನೀರು ಹೆಚ್ಚು ಸಂಗ್ರಹವಾಗಿ ಕೋಡಿ ಬಿದ್ದರೂ ಈ ಸೇತುವೆಗೆ ನೀರು ತಾಗದಂತೆ ಎತ್ತರವಾಗಿ ನಿರ್ಮಿಸಲಾಗುವುದು. ಮಧ್ಯ ಕರ್ನಾಟಕದಲ್ಲೇ ಅತ್ಯುತ್ತಮವಾದ ಸಂಪರ್ಕ ಸೇತುವೆ ಇದಾಗಲಿದೆ. ಪ್ರವಾಸೋದ್ಯಮಕ್ಕೂ ಸಹಕಾರಿಯಾಗಲಿದೆ. ಜೊತೆಗೆ ಜಿಲ್ಲಾ ಕೇಂದ್ರಕ್ಕೆ ತೆರಳಲು ಈ ಭಾಗದ ಜನರಿಗೆ ಬಹಳಷ್ಟು ಉಪಯೋಗವಾಗುತ್ತದೆ.
– ಗೂಳಿಹಟ್ಟಿ ಡಿ. ಶೇಖರ್‌, ಹೊಸದುರ್ಗ ಶಾಸಕ

*

122 ವರ್ಷಗಳ ಕನಸು–ನನಸು
ಸಂಪರ್ಕ ಸೇತುವೆಯಿಂದ ಚಿತ್ರದುರ್ಗ, ಹಿರಿಯೂರು ಹಾಗೂ ಬೆಂಗಳೂರಿಗೆ ಹೋಗುವವರಿಗೆ ಅನುಕೂಲವಾಗಲಿದೆ. ಈ ಮೊದಲು ಆಸ್ಪತ್ರೆಗೆ ಹೋಗುವುದಾದರೆ ಹೊಸದುರ್ಗಕ್ಕೆ ಬಂದು ನಂತರ ಚಿತ್ರದುರ್ಗಕ್ಕೆ ಹೋಗಬೇಕು. ಈ ಭಾಗದಲ್ಲಿ ಅತಿ ಹೆಚ್ಚು ಹತ್ತಿ ಬೆಳೆಯಲಾಗುತ್ತದೆ. ಹತ್ತಿಯ ಮಾರುಕಟ್ಟೆ ಚಿತ್ರದುರ್ಗಕ್ಕೆ ಹೋಗಲು ಈ ಸೇತುವೆ ಸಹಕಾರಿಯಾಗಲಿದೆ.
ಎನ್.ಎಚ್‌ 4ಗೆ ಬಹುಬೇಗ ಸುಲಭವಾಗಿ ಸಂಪರ್ಕಿಸಬಹುದು. ಬೇವಿನಹಳ್ಳಿಯ ಬೇವಿನಾಳಮ್ಮ ಹಾಗೂ ಹುಣಸೆಕಟ್ಟೆ ಬೇವಿನಾಳಮ್ಮ ದೇವಿಯವರನ್ನು ಸಂಪರ್ಕಿಸಲೂ ಇದು ಉತ್ತಮ ಮಾಧ್ಯಮ. 122 ವರ್ಷಗಳ ಕನಸನ್ನು ಶಾಸಕ ಗೂಳಿಹಟ್ಟಿ ಡಿ. ಶೇಖರ್‌ ಈಡೇರಿಸಿದ್ದಾರೆ.
– ಪಶುಪತಿ, ಅಗಸರಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT