ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಜಿನ ಮನೆಯಲ್ಲಿ ಹೆಚ್ಚಿದ ಧಗೆ: ಮಾವು ಮೇಳದಲ್ಲಿ ಉಳಿದ ನಾಲ್ಕೇ ಮಳಿಗೆಗಳು

ಗ್ರಾಹಕರ ಹಿಂದೇಟು
Last Updated 21 ಮೇ 2019, 19:42 IST
ಅಕ್ಷರ ಗಾತ್ರ

ದಾವಣಗೆರೆ: ರೈತರಿಂದ ನೇರವಾಗಿ ಗ್ರಾಹಕರಿಗೆ ಯೋಗ್ಯ ಬೆಲೆಯಲ್ಲಿ ತಲುಪಿಸುವ ಉದ್ದೇಶದಿಂದ ಆರಂಭವಾದ ಮಾವು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ನಗರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಗಾಜಿನ ಮನೆಯಲ್ಲಿ ಆಯೋಜಿಸಿದ್ದ ಈ ಮೇಳದಲ್ಲಿ ಬಿಸಿಲಿನ ತಾಪದಿಂದಾಗಿ ಜನರು ಬರುತ್ತಿಲ್ಲ. ಅಲ್ಲದೇ ಮಳಿಗೆ ಇಟ್ಟುಕೊಂಡಿದ್ದ ರೈತರು ಹೇಳದೇ ಖಾಲಿ ಮಾಡಿದ್ದಾರೆ. ಆರಂಭದಲ್ಲಿ 26 ಮಳಿಗೆಗಳಿದ್ದವು. ಈಗ ಕೇವಲ ನಾಲ್ಕು ಮಳಿಗೆಗಳಿವೆ. ಬಿಸಿಲಿನ ತಾಪ ತಾಳಲಾರದೆ ಫ್ಯಾನ್ ಹಾಕಿಕೊಂಡು ಕುಳಿತಿದ್ದಾರೆ. ಮಾವು ಮಾರಾಟದ ಜೊತೆಗೆ ಮಾವಿನ ಹಣ್ಣಿನ ಜ್ಯೂಸ್ ಮಾರಾಟ ಮಾಡುತ್ತಿದ್ದಾರೆ.

‘ಗ್ಲಾಸ್‌ ಹೌಸ್‌ನಲ್ಲಿ ತಾಪಮಾನ ಹೆಚ್ಚು ಇರುವುದರಿಂದ ಹೆಚ್ಚಿನ ಜನರು ಇಲ್ಲಿಗೆ ಬರುತ್ತಿಲ್ಲ. ಧಗೆಯಿಂದ ನಾವು ಫ್ಯಾನ್‌ ಹಾಕಿಕೊಂಡು ಕುಳಿತ್ತಿದ್ದೇವೆ. ಪಿ.ಬಿ. ರಸ್ತೆಯಲ್ಲಿ ಮಾವು ಮೇಳ ಮಾಡಿದ್ದರೆ ಚೆನ್ನಾಗಿತ್ತು. ಅಲ್ಲಿ ಹೆಚ್ಚಿನ ವ್ಯಾಪಾರವಾಗುತ್ತಿತ್ತು. ಇಲ್ಲಿಗೆ ಜನರು ಬರಬೇಕು ಎಂದರೆ ಆಟೊಗೆ ₹100 ಕೊಡಬೇಕು. ಅಷ್ಟು ಹಣ ಕೊಟ್ಟು ಇಲ್ಲಿಗೆ ಯಾರು ಬರುತ್ತಾರೆ’ ಎಂದು ಪ್ರಶ್ನಿಸುತ್ತಾರೆ ವ್ಯಾಪಾರಿ ಬಿಲಾಲ್‌.

‘ಶನಿವಾರ ಹಾಗೂ ಭಾನುವಾರ ವ್ಯಾಪಾರ ಚೆನ್ನಾಗಿತ್ತು. ಉಳಿದ ದಿನಗಳಲ್ಲಿ ವ್ಯಾಪಾರ ಅಷ್ಟಕಷ್ಟೇ. ಬಿಸಿಲಿಗೆ ಹಣ್ಣುಗಳು ಕೊಳೆತು ಹೋಗುತ್ತವೆ. ಸಂಜೆಯ ವೇಳೆ 5ರಿಂದ 6 ಗಂಟೆಯವರೆಗೆ ವ್ಯಾಪಾರ ಸ್ವಲ್ಪ ಚೆನ್ನಾಗಿರುತ್ತದೆ’ ಎಂದು ಹೇಳುತ್ತಾರೆ.

‘ಬಿಸಿಲು ಹೆಚ್ಚಾಗಿರುವುದರಿಂದ ಹಣ್ಣನ್ನು ರಕ್ಷಿಸಿ ಇಡುವುದೇ ಕಷ್ಟವಾಗಿದೆ. ಆದ್ದರಿಂದ ವ್ಯಾಪಾರ ಕಡಿಮೆಯಾಗಿದೆ. ಬೇರೆ ಕಡೆ ಮಾವು ಮೇಳ ಮಾಡಿದ್ದರೆ ಚೆನ್ನಾಗಿರುತ್ತಿತ್ತು’ ಎನ್ನುತ್ತಾರೆ ಹರಪನಹಳ್ಳಿ ತಾಲ್ಲೂಕು ಕಂಚಿಕೆಗೆ ಗ್ರಾಮದ ವ್ಯಾಪಾರಿ ಸಾಜಿದ್.

‘ಈ ಬಾರಿ ಹೆಚ್ಚು ಬಿಸಿಲು ಇರುವುದರಿಂದ ಜನರು ಗಾಜಿನ ಮನೆಗೆ ಬರುವುದು ಕಡಿಮೆಯಾಗಿದೆ. ವಿವಿಧ ಮೇಳಗಳನ್ನು ಆಯೋಜಿಸುವ ಉದ್ದೇಶದಿಂದ ಗಾಜಿನ ಮನೆಯನ್ನು ನಿರ್ಮಾಣ ಮಾಡಲಾಗಿದೆ. ಆದರೆ ಉದ್ದೇಶ ಸಫಲವಾಗುತ್ತಿಲ್ಲ. ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಉಷ್ಣಾಂಶ ದಾಖಲಾಗಿದೆ. ಆದ್ದರಿಂದ ಜನರು ಮನೆಯಿಂದ ಹೊರಬರುತ್ತಿಲ್ಲ’ ಎನ್ನುತ್ತಾರೆ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಮಂಜನಾಯ್ಕ.

‘ರಾಮನಗರ, ಕೋಲಾರ, ಹಾವೇರಿ, ಹರಪನಹಳ್ಳಿ, ಹೊನ್ನಾಳಿ ಹಾಗೂ ಚನ್ನಗಿರಿಯಿಂದ ವ್ಯಾಪಾರಿಗಳು ಬಂದಿದ್ದರು. ಆದರೆ ಅವರು ನಮಗೆ ಹೇಳದೇ ಖಾಲಿ ಮಾಡಿದ್ದಾರೆ. ಮಾವಿನ ಹಣ್ಣಿನ ಸೀಜನ್ ಮುಗಿದಿದೆ. ಉಳಿದ ಅಲ್ಪಸ್ವಲ್ಪ ಹಣ್ಣುಗಳನ್ನು ಸ್ಥಳೀಯವಾಗಿ ಮಾರಾಟ ಮಾಡಿಕೊಳ್ಳುತ್ತಾರೆ’ ಎಂದು ಅವರು ಹೇಳುತ್ತಾರೆ.

‘ಸಾಮಾನ್ಯವಾಗಿ ಏಪ್ರಿಲ್‌ ಕೊನೆಯ ವಾರ ಇಲ್ಲವೇ ಮೇ ಮೊದಲ ವಾರದಲ್ಲಿ ಮಾವಿನ ಹಣ್ಣುಗಳ ಋತು (ಸೀಸನ್) ಆರಂಭವಾಗುತ್ತದೆ. ಆದರೆ ಈ ವರ್ಷ ಬಿಸಿಲು ಹೆಚ್ಚಾಗಿರುವುದರಿಂದ ಡಿಸೆಂಬರ್ ವೇಳೆಗೆ ಮಾವಿನ ಮರಗಳು ಹೂ ಬಿಡಲು ಆರಂಭಿಸಿದ್ದವು. ಮಾರ್ಚ್‌ ಕೊನೆಯ ವಾರದಿಂದಲೇ ಸೀಸನ್ ಆರಂಭವಾಗಿದೆ. ಬಾದಾಮಿ, ಮಲ್ಲಿಕಾ ಹಾಗೂ ದಶರಿ ಹಣ್ಣುಗಳು ಮುಗಿಯುವ ಹಂತಕ್ಕೆ ಬಂದಿವೆ’ ಎಂಬುದು ಅವರ ವಾದ.

ತೋತಾಪುರಿ, ನೀಲಂ ಹಣ್ಣುಗಳಲ್ಲಿ ನಾರಿನ ಅಂಶ ಹೆಚ್ಚಾಗಿರುವುದರಿಂದ ಜ್ಯೂಸ್‌ ಹಾಗೂ ಸ್ಲೈಸ್ ತಯಾರಿಕೆಗಾಗಿ ಮುಂಬೈಗೆ ಹೋಗುತ್ತವೆ. ಕಳೆದ ವರ್ಷ ಪಿ.ಬಿ. ರಸ್ತೆಯ ಬಳಿ ಇದ್ದ ಹಳೆಯ ಕಚೇರಿಯ ಬಳಿ ಮಾವು ಮಾರಾಟ ಮೇಳ ಆಯೋಜಿಸಿದ್ದೆವು. ಗ್ಲಾಸ್ ಹೌಸ್‌ಗೆ ಹೆಚ್ಚಿನ ಜನರು ಭೇಟಿ ನೀಡುವುದರಿಂದ ಈ ವರ್ಷ ಇಲ್ಲಿ ಮಾವಿನ ಮೇಳ ಆಯೋಜಿಸಿದೆವು. ಆದರೆ ಉದ್ದೇಶ ಈಡೇರಿಲ್ಲ’ ಎನ್ನುತ್ತಾರೆ ಅವರು.

ಅಂಕಿ ಅಂಶ

₹ 50 ಲಕ್ಷಮೇಳದಲ್ಲಿ ನಡೆದ ವಹಿವಾಟು

30 ಟನ್ ಮಾರಾಟವಾಗಿರುವ ಹಣ್ಣುಗಳ ಪ್ರಮಾಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT