ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನಗಿರಿಯಿಂದ ಕರೆದೊಯ್ದು ಶಿವಮೊಗ್ಗದ ಜೈಲಲ್ಲಿಟ್ಟಿದ್ದರು: ಎಂ. ಶಿವಪ್ಪ

ಸ್ವಾತಂತ್ರ್ಯ ಯೋಧ ನೀತಿಗೆರೆ ಶಿವಪ್ಪನವರ ಹೋರಾಟದ ಮೆಲುಕು
Last Updated 11 ಆಗಸ್ಟ್ 2022, 6:23 IST
ಅಕ್ಷರ ಗಾತ್ರ

ದಾವಣಗೆರೆ: ‘ಕ್ವಿಟ್‌ ಇಂಡಿಯಾ ಚಳವಳಿ ಆರಂಭವಾಗಿತ್ತು. ಹಿರಿಯರೆಲ್ಲ ಸತ್ಯಾಗ್ರಹ ಆರಂಭಿಸಿದ್ದರು. ನಾವೆಲ್ಲ ಇನ್ನೂ ಚಿಕ್ಕವರಾದರೂ ಅವರನ್ನು ಬೆಂಬಲಿಸಿ ಸತ್ಯಾಗ್ರಹದಲ್ಲಿ ಪಾಲ್ಗೊಂಡೆವು. ಬ್ರಿಟಿಷರ ಮಿಲಿಟ್ರಿ ಮತ್ತು ಪೊಲೀಸರು ನಮ್ಮೆಲ್ಲರನ್ನೂ ಬಂಧಿಸಿ ಶಿವಮೊಗ್ಗದ ಜೈಲಿನಲ್ಲಿ ಇಟ್ಟರು’.

1942ರಲ್ಲಿ 15ರ ತರುಣನಾಗಿ ಸ್ವಾತಂತ್ರ್ಯದ ಸಂಗ್ರಾಮಕ್ಕೆ ಧುಮುಕಿ, ಎಳೆಯ ಪ್ರಾಯದಲ್ಲೇ ಜೈಲುವಾಸ ಅನುಭವಿಸಿದ್ದ ಚನ್ನಗಿರಿ ತಾಲ್ಲೂಕು ನೀತಿಗೆರೆಯ ಎಂ. ಶಿವಪ್ಪ ಅವರು ತಮ್ಮ ಹೋರಾಟದ ದಿನಗಳನ್ನು ‘ಪ್ರಜಾವಾಣಿ’ ಜತೆಗೆ ಮೆಲುಕು ಹಾಕಿದರು. ಅವರಿಗೆ ಈಗ 95 ವರ್ಷ.

‘ಕ್ವಿಟ್‌ ಇಂಡಿಯಾ ಚಳವಳಿಗೆ ಗಾಂಧೀಜಿ ಕರೆ ಕೊಟ್ಟಿದ್ದರು.ಆ ಕಾರಣಕ್ಕಾಗಿಯೇ ಅವರನ್ನು ಬಂಧಿಸಿದ್ದರು. ಗಾಂಧೀಜಿಯವರ ಕರೆಗಿಂತಲೂ ಗಾಂಧೀಜಿಯ ಬಂಧನವೇ ಹೆಚ್ಚು ಪರಿಣಾಮ ಬೀರಿತ್ತು. ದೇಶದಾದ್ಯಂತ ಸ್ವಾತಂತ್ರ್ಯದ ಕಿಚ್ಚು ಹತ್ತಿಕೊಂಡಿತು. ಗಾಂಧೀಜಿ ಬಿಡುಗಡೆ ಆದ ಕೆಲವು ದಿನಗಳ ಬಳಿಕ ನಮ್ಮನ್ನೂ ಬಿಡುಗಡೆ ಮಾಡಿದರು’ ಎಂದು ಅವರು ನೆನಪಿಸಿಕೊಂಡರು.

‘ನಾವು ನೇರವಾಗಿ ಭಾಗಿಯಾಗುವ ಬದಲು ಕವಲುಬೇರು ಆಗಿ ಹೋರಾಟದಲ್ಲಿ ಭಾಗಿಯಾಗಿದ್ದೆವು. ಸ್ವಾತಂತ್ರ್ಯ ಹೋರಾಟಗಾರರು ಜೈಲು ಸೇರಿದಾಗ ಅವರಿಗೆ ಊಟ ತಲುಪಿಸುವುದು ಅಷ್ಟೇನೂ ಕಷ್ಟದ ಕೆಲಸವಾಗಿರಲಿಲ್ಲ. ಅವರು ಭೂಗತರಾಗಿದ್ದಾಗ ಊಟದ ಸಹಿತ ಬೇಕಾದುದನ್ನೆಲ್ಲವನ್ನೂ ತಲುಪಿಸುವುದು ಕಷ್ಟದ ಕೆಲಸವಾದರೂ ಅದನ್ನೆಲ್ಲ ಮಾಡುತ್ತಿದ್ದೆವು. ಮದ್ಯಪಾನ ನಿಷೇಧಕ್ಕೆ ಗಾಂಧೀಜಿ ಕರೆಕೊಟ್ಟಾಗ ಇಲ್ಲಿನ ಹೆಂಡ ಮಾರುವವರು ಅದಕ್ಕೆ ಒಪ್ಪಿರಲಿಲ್ಲ. ಹೋರಾಟಗಾರರು ಹೋಗಿ ಮೊದಲು ಅವರ ಮನವೊಲಿಸಲು ಪ್ರಯತ್ನಿಸಿದರು. ಒಪ್ಪದಿದ್ದಾಗ ಸಾಯಿಸಿಯೇ ಬಿಟ್ಟರು. ಅದರಿಂದ ನಾವೂ ಭೂಗತರಾಗಬೇಕಾಯಿತು’ ಎಂದು ಮತ್ತೊಬ್ಬ ಸ್ವಾತಂತ್ರ್ಯ ಹೋರಾಟಗಾರ ನೀತಿಗೆರೆ ವೀರಪ್ಪ ನೆನಪು ಹಂಚಿಕೊಂಡರು.

‘ನಾವು ಎಳೆಯ ಪ್ರಾಯದವರು. ಸ್ವಾತಂತ್ರ್ಯ ಅಂದರೆ ಏನು ಎಂಬುದು ಗೊತ್ತಾಗುವ ಮೊದಲೇ ಹಿರಿಯರ ಜತೆಗೆ ಹೋರಾಟದಲ್ಲಿ ನುಗ್ಗಿದ್ದೆವು. ಹಿರಿಯ ಹೋರಾಟಗಾರರು ಏನು ಹೇಳುತ್ತಾರೋ ಅದನ್ನು ಮಾಡುವುದು ನಮ್ಮ ಕೆಲಸವಾಗಿತ್ತು. ಸ್ವಾತಂತ್ರ್ಯದ ಅರಿವು ಮೂಡಿಸುವ ನಿಟ್ಟಿನಲ್ಲಿ ಅಲ್ಲಲ್ಲಿ ಭಿತ್ತಿಪತ್ರ ಅಂಟಿಸಿ ಅಂದರೆ ಅಂಟಿಸುತ್ತಿದ್ದೆವು. ಕಲ್ಲು ಬಿಸಾಡಿ ಎಂದರೆ ಬಿಸಾಡುತ್ತಿದ್ದೆವು. ಕ್ವಿಟ್‌ ಇಂಡಿಯಾ ಚಳವಳಿ ಸಂದರ್ಭದಲ್ಲಿ ಹಿರಿಯ ಹೋರಾಟಗಾರರ ಜತೆಗೆ ನಮ್ಮನ್ನೂ ಬಂಧಿಸಿದ್ದರು. ಆದರೆ ಮಕ್ಕಳು ಎಂಬ ಕಾರಣಕ್ಕೆ ನಮ್ಮನ್ನು ಒಂದು ದಿನ ಮಾತ್ರ ಜೈಲಲ್ಲಿ ಇಟ್ಟು ಬಿಡುಗಡೆ ಮಾಡಿದರು’ ಎಂದು ಬೂದಿಹಾಳ್‌ ರಸ್ತೆ ಗರಬೇರ ಕಣದ ನಿವಾಸಿ 93ರ ಹರೆಯದ ಬಿ. ಹಾಲಪ್ಪ, ಮತ್ತೊಬ್ಬ ಹೋರಾಟಗಾರ ಹಳೇಬಿಸಲೇರಿಯ ಬಿ.ಎನ್‌. ಚನ್ನಬಸಪ್ಪ ನೆನಪಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT