ಭಾನುವಾರ, ಅಕ್ಟೋಬರ್ 17, 2021
22 °C
ಗಾಂಧೀಜಿ, ಶಾಸ್ತ್ರೀಜಿ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ

ದಾವಣಗೆರೆ: ಹೋರಾಟಕ್ಕೆ ಅಹಿಂಸಾ ಮಾರ್ಗವೇ ಶ್ರೇಷ್ಠವೆಂದು ನಂಬಿದ್ದ ಗಾಂಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಸ್ವಾತಂತ್ರ್ಯ ಹೋರಾಟಕ್ಕೆ ಅಹಿಂಸೆಯ ದಾರಿಯೇ ಶ್ರೇಷ್ಠ ಎಂದು ತಿಳಿದು ಆ ದಾರಿಯಲ್ಲಿಯೇ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟವರು ಮಹಾತ್ಮ ಗಾಂಧೀಜಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಹೇಳಿದರು.

ನಗರದ ಶ್ರೀರಾಮನಗರದಲ್ಲಿರುವ ಗಾಂಧಿ ಭವನದಲ್ಲಿ ಶನಿವಾರ ಜಿಲ್ಲಾಡಳಿತ ಏರ್ಪಡಿಸಿದ್ದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ಆಚರಣೆಯನ್ನು ಚರಕದಲ್ಲಿ ನೂಲುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಸತ್ಯ, ಅಹಿಂಸೆ, ಉಪವಾಸ ಚಳುವಳಿಗಳೇ ಗಾಂಧೀಜಿಗೆ ಪ್ರಬಲ ಅಸ್ತ್ರಗಳಾಗಿದ್ದವು. ಸ್ವದೇಶಿ ವಸ್ತುಗಳ ಬಳಕೆಯಿಂದಲೇ ದೇಶ ಸ್ವಾವಲಂಬಿಯಾಗಲು ಸಾದ್ಯ ಎಂದು ಪ್ರತಿಪಾದಿಸಿದ್ದರು. ಗ್ರಾಮೀಣ ಪ್ರದೇಶಗಳಲ್ಲಿಯೇ ದೇಶದ ಉನ್ನತಿ ಹಾಗೂ ಅಭಿವೃದ್ಧಿ ಅಡಗಿದೆ ಎಂದು ಸಾರಿದ್ದರು. ಈ ಜಿಲ್ಲೆಗೂ ಗಾಂಧೀಜಿಯವರ ನಂಟಿದ್ದು, 1934ರಲ್ಲಿ ಬಂದಿದ್ದರು ಎಂದು ನೆನಪಿಸಿಕೊಂಡರು.

ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಕೂಡ ದೇಶದ ಹೆಮ್ಮೆ. ದೇಶದ ಅಭಿವೃದ್ಧಿಗೆ ಶಾಸ್ತ್ರೀಜಿ ಅವರ ಕೊಡುಗೆ ಅಪಾರ. ಅವರು ದೇಶಕ್ಕೆ ನೀಡಿದ ‘ಜೈ ಜವಾನ್, ಜೈ ಕಿಸಾನ್’ ಕರೆ ದೇಶವನ್ನು ಸ್ವಾವಲಂಬಿಯಾಗಿಸಲು ಪ್ರೇರಣೆಯಾಯಿತು ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಸ್.ಎ. ರವೀಂದ್ರನಾಥ್, ‘ಗಾಂಧೀಜಿಯವರ ಅಹಿಂಸಾತ್ಮಕ ಹೋರಾಟ, ತ್ಯಾಗ ಬಲಿದಾನದಿಂದಲೇ ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆಯಿತು. ಗಾಂಧಿ  ಬೇರೆ ದಾರಿ ಹಿಡಿದಿದ್ದರೆ ಬ್ರಿಟಿಷರು ಗುಂಡಿಟ್ಟು ಕೊಲ್ಲುತ್ತಿದ್ದರು’ ಎಂದು ತಿಳಿಸಿದರು.

ದೇಶ ಸಂಕಷ್ಟದಲ್ಲಿದ್ದಾಗ ಪ್ರತಿ ವಾರದಲ್ಲಿ ಒಂದು ದಿನ ಒಂದೊತ್ತಿನ ಊಟ ದೇಶಕ್ಕಾಗಿ ತ್ಯಜಿಸೋಣ ಎಂದು ಕರೆ ನೀಡಿ ದೇಶವನ್ನು ಅಭಿವೃದ್ಧಿ ಪಥದತ್ತ ಒಯ್ದಿದ್ದ ಲಾಲ್‌ ಬಹುದ್ದೂರು ಶಾಸ್ತ್ರಿ ಅವರ ಕೊಡುಗೆ ಕೂಡ ಬಹಳ ಎಂದರು.

ನಿವೃತ್ತ ಪ್ರಾಧ್ಯಾಪಕ ಡಾ. ಎ.ಬಿ. ರಾಮಚಂದ್ರಪ್ಪ ವಿಶೇಷ ಉಪನ್ಯಾಸ ನೀಡಿ, ‘ಗಾಂಧೀಜಿಯ ಚಿಂತನೆಗೆ ಪೂರಕವಾಗಿ ಬದುಕುವುದೇ ಅವರಿಗೆ ನಾವು ಸಲ್ಲಿಸುವ ಗೌರವ. ಅವರ ಅಹಿಂಸೆ, ಸರ್ವೋದಯ, ಸಮನ್ವಯತೆಯನ್ನು ಅರ್ಥ ಮಾಡಿಕೊಳ್ಳಬೇಕು. ಎಲ್ಲವು ಇದ್ದರೂ, ಏನೂ ಇಲ್ಲದಂತೆ ಬಡ ಸಂತನಾಗಿ ಗಾಂಧೀಜಿ ಬದುಕಿದ್ದರು. ದುಃಖ ರಹಿತ ಬಡತನಕ್ಕಾಗಿ ಹಪಹಪಿಸಿದ ಅವರ ಬದುಕೇ ಒಂದು ಆದರ್ಶ’ ಎಂದು ಬಣ್ಣಿಸಿದರು.

ಸರಳವಾಗಿ ಸಜ್ಜನಿಕೆಯಿಂದ ಸ್ವಾಭಿಮಾನದಿಂದ ಬದುಕಿದ ದೇಶದ ಏಕೈಕ ಪ್ರಧಾನಿ ಲಾಲ್‌ಬಹುದ್ದೂರು ಶಾಸ್ತ್ರಿ ಎಂದು ನೆನಪು ಮಾಡಿಕೊಂಡರು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪಂಚಾಯಿತಿ ಸಿಇಒ ಡಾ. ವಿಜಯ ಮಹಾಂತೇಶ್ ದಾನಮ್ಮನವರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ಧೂಡಾ ಅಧ್ಯಕ್ಷ ದೇವರಮನಿ ಶಿವಕುಮಾರ್, ಪಾಲಿಕೆ ಉಪಮೇಯರ್ ಶಿಲ್ಪಾ ಜಯಪ್ರಕಾಶ್, ಹೆಚ್ಚುವರಿ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಧೂಡಾ ಆಯುಕ್ತ ಕುಮಾರಸ್ವಾಮಿ, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಅವರೂ ಇದ್ದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರೌಢಶಾಲಾ ಶಿಕ್ಷಕರು ಗಾಂಧೀಜಿಯವರಿಗೆ ಪ್ರಿಯವಾಗಿದ್ದ ವೈಷ್ಣವಜನತೋ, ಸೇರಿದಂತೆ ಇತರೆ ಗೀತೆಗಳ ಸುಶ್ರಾವ್ಯ ಗಾಯನ ಪ್ರಸ್ತುತಪಡಿಸಿದರು. ಸಿದ್ದಗಂಗಾ ಸಂಸ್ಥೆಯ ವಿದ್ಯಾರ್ಥಿಗಳು ಸರ್ವಧರ್ಮ ಪ್ರಾರ್ಥನೆಯನ್ನು ಮಾಡಿದರು. ಗಾಂಧಿ ಭವನದ ಆವರಣದಲ್ಲಿ ಗಾಂಧೀಜಿ ಕಲಾಕೃತಿಗಳನ್ನು ನಿರ್ಮಿಸಿಕೊಟ್ಟ ಕಲಾವಿದ ಪರಶುರಾಮ ಅವರನ್ನು ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಗಳ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ಬೆವರು ಇಳಿಸಿದ ಸೂರ್ಯ
ಗಾಂಧಿ ಭವನದ ಬಯಲಲ್ಲಿ ಕಾರ್ಯಕ್ರಮ ಆಯೋಜಿಸಿದ್ದರಿಂದ ಸೂರ್ಯ ಎಲ್ಲರೂ ಬೆವರು ಸುರಿಸುವಂತೆ ಮಾಡಿದ್ದ. ಶುಕ್ರವಾರ ರಾತ್ರಿ ಮಳೆ ಸುರಿದಿದ್ದರಿಂದ ಶನಿವಾರ ಸೂರ್ಯ ಪ್ರಖರವಾಗಿದ್ದ.

‘ರೈತರ, ಕಾರ್ಮಿಕರ ಬೆವರಿನ ಶ್ರಮದ ಅರಿವಾಗಬೇಕಿದ್ದರೆ ಅಧಿಕಾರಿಗಳು, ಜನಪ್ರತಿನಿಧಿಗಳು ಈ ರೀತಿ ಬಿಸಿಲಲ್ಲಿ ಬೆವರು ಸುರಿಸಬೇಕು’ ಎಂದು ಉಪನ್ಯಾಸಕ ಡಾ. ಎ.ಬಿ. ರಾಮಚಂದ್ರ ಹೇಳಿದರು. ‘ಕೆಲವರಿಗೆ ಊಟ ಮಾಡುವಾಗ ಬೆವರು ಬರುತ್ತದೆ. ಕೆಲಸ ಮಾಡುವಾಗ ಬರುವುದಿಲ್ಲ. ಕೆಲಸ ಮಾಡುವಾಗ ಬೆವರು ಬರಬೇಕು. ಊಟ ನೆಮ್ಮದಿಯಾಗಿ ಮಾಡಬೇಕು’ ಎಂದು ಶಾಸಕ ಎಸ್‌.ಎ. ರವೀಂದ್ರನಾಥ ಬಣ್ಣಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.