ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣಿಗೆ–ದಾವಣಗೆರೆಯಲ್ಲಿ ಪೊಲೀಸ್‌ ಬಿಗಿ ಬಂದೋಬಸ್ತ್‌

7

ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣಿಗೆ–ದಾವಣಗೆರೆಯಲ್ಲಿ ಪೊಲೀಸ್‌ ಬಿಗಿ ಬಂದೋಬಸ್ತ್‌

Published:
Updated:

ದಾವಣಗೆರೆ: ನಗರದ ಹೈಸ್ಕೂಲ್‌ ಮೈದಾನದಲ್ಲಿ ಇದೇ ಮೊದಲ ಬಾರಿಗೆ ಪ್ರತಿಷ್ಠಾಪಿಸಿದ್ದ ಹಿಂದೂ ಮಹಾಗಣಪತಿ ಮೂರ್ತಿಯ ಭವ್ಯ ವಿಸರ್ಜನಾ ಮೆರವಣಿಗೆ ಶನಿವಾರ (ಅ. 6) ನಡೆಯಲಿದ್ದು, ನಗರದಾದ್ಯಂತ ಪೊಲೀಸ್‌ ಬಿಗಿ ಬಂದೋಬಸ್ತ್‌ ಮಾಡಲಾಗಿದೆ.

ವಿಸರ್ಜನಾ ಮೆರವಣಿಗೆ ಸಾಗುವ ಮಾರ್ಗದುದ್ದಕ್ಕೂ ಈಗಾಗಲೇ ‘ಕೇಸರಿ ತೋರಣ’ ಕಂಗೊಳಿಸುತ್ತಿದೆ. ಆಯಕಟ್ಟಿನ ಜಾಗಗಳಲ್ಲಿ ಶುಕ್ರವಾರ ಸಂಜೆಯಿಂದಲೇ ಪೊಲೀಸ್‌ ಸಿಬ್ಬಂದಿ ಭದ್ರತಾ ಕಾರ್ಯದಲ್ಲಿ ತೊಡಗಿದ್ದು, ಎಲ್ಲೆಡೆ ‘ಖಾಕಿ ಖದರ್‌’ ಎದ್ದು ಕಾಣುತ್ತಿದೆ.

‘ಬೆಳಿಗ್ಗೆ 10.30ಕ್ಕೆ ಹೈಸ್ಕೂಲ್‌ ಮೈದಾನದಲ್ಲಿ ಪೂಜೆ ನೆರವೇರಿಸಿ 11ಕ್ಕೆ ಮೆರವಣಿಗೆ ಆರಂಭಿಸಲಾಗುವುದು. ಜಿಲ್ಲೆಯ ಎಲ್ಲ ಶಾಸಕರು, ಸಂಸದರು ಹಾಗೂ ಸ್ವಾಮೀಜಿಗಳನ್ನು ಆಹ್ವಾನಿಸಲಾಗಿದೆ. ಚೆಂಡೆ ಕುಣಿತ, ಗೊಂಬೆ ಕುಣಿತ, ನಂದಿಕೋಲು, ಡೊಳ್ಳು, ಡ್ರಮ್ಸ್‌ ಸೇರಿ 200ಕ್ಕೂ ಹೆಚ್ಚು ಜನಪದ ಕಲಾವಿದರು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮೆರವಣಿಗೆಗೆ ಪಕ್ಕದ ಚಿತ್ರದುರ್ಗ, ಶಿವಮೊಗ್ಗ, ಹಾವೇರಿ ಜಿಲ್ಲೆಗಳಿಂದಲೂ ಅಪಾರ ಸಂಖ್ಯೆಯಲ್ಲಿ ಜನ ಬರಲಿದ್ದಾರೆ’ ಎಂದು ಹಿಂದೂ ಮಹಾಗಣಪತಿ ಗೆಳೆಯರ ಬಳಗದ ಡಿ.ಕೆ. ಕುಮಾರ್‌ ತಿಳಿಸಿದರು.

ಬಿಗಿ ಬಂದೋಬಸ್ತ್‌:

‘ಮೆರವಣಿಗೆ ವೇಳೆ ಯಾವುದೇ ಅನಾಹುತ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ನಗರದಲ್ಲಿ ಪೊಲೀಸ್‌ ಬಿಗಿ ಬಂದೋಬಸ್ತ್‌ ಮಾಡಿದ್ದೇವೆ. 4 ಡಿಎಸ್‌ಪಿ, 14 ಸಿಪಿಐ, 38 ಪಿಎಸ್‌ಐ, 80 ಎ.ಎಸ್‌.ಐ, 510 ಕಾನ್‌ಸ್ಟೆಬಲ್‌ಗಳು, 330 ಹೋಮ್‌ ಗಾರ್ಡ್‌ಗಳು, 5 ಕೆ.ಎಸ್‌.ಆರ್‌.ಪಿ ತುಕಡಿ, 7 ಡಿಎಆರ್‌ ತುಕಡಿಗಳನ್ನು ಬಳಸಿಕೊಳ್ಳಲಾಗುತ್ತಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌. ಚೇತನ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಮೆರವಣಿಗೆ ಸಾಗುವ ಮಾರ್ಗದುದ್ದಕ್ಕೂ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಜೊತೆಗೆ ವಿಡಿಯೊಗ್ರಾಫರ್‌ಗಳಿಂದ ಮೆರವಣಿಗೆಯ ದೃಶ್ಯಗಳನ್ನು ಚಿತ್ರೀಕರಣ ಮಾಡುವ ಮೂಲಕ ಕಿಡಿಗೇಡಿಗಳ ಮೇಲೆ ಕಣ್ಣಿಡಲಾಗುವುದು. ಬೆಳಿಗ್ಗೆ 11ರಿಂದ ರಾತ್ರಿ 7ರವರೆಗೆ ಮೆರವಣಿಗೆ ನಡೆಸಲು ಪರವಾನಗಿ ನೀಡಲಾಗಿದೆ’ ಎಂದು ಅವರು ತಿಳಿಸಿದರು.

ಮೆರವಣಿಗೆ ಮಾರ್ಗ

ಎವಿಕೆ ಕಾಲೇಜು ರಸ್ತೆ, ಚೇತನಾ ಹೋಟೆಲ್‌ ಕ್ರಾಸ್‌, ಕೆ.ಇ.ಬಿ ವೃತ್ತ, ಜಯದೇವ ವೃತ್ತ, ಲಾಯರ್‌ ರಸ್ತೆ, ಪಿ.ಬಿ. ರಸ್ತೆ, ಗಾಂಧಿ ವೃತ್ತ, ಮಹಾನಗರ ಪಾಲಿಕೆ ರಸ್ತೆ, ಪಿ.ಜೆ. ಕ್ರಾಸ್‌, ಅರುಣ ವೃತ್ತ, ಕೋರ್ಟ್‌ ಸರ್ಕಲ್‌, ರಿಂಗ್‌ ರಸ್ತೆ, ಜಿ.ಎಂ.ಐ.ಟಿ ಕಾಲೇಜಿನ ಬಳಿ ಮೆರವಣಿಗೆ ಮುಕ್ತಾಯಗೊಳ್ಳಲಿದೆ. ಬಳಿಕ ಮೂರ್ತಿಯನ್ನು ಹರಿಹರದ ಹೊಳೆಗೆ ಒಯ್ದು ಬಿಡಲಾಗುತ್ತದೆ.

ಮದ್ಯ ಮಾರಾಟ ನಿಷೇಧ

ಗಣಪತಿ ಮೂರ್ತಿ ವಿಸರ್ಜನಾ ಮೆರವಣಿಗೆ ಇರುವುದರಿಂದ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಯ್ದುಕೊಳ್ಳುವ ಸಲುವಾಗಿ ಅಕ್ಟೋಬರ್‌ 6ರಂದು ಬೆಳಿಗ್ಗೆ 6ರಿಂದ ಅ. 7ರ ಬೆಳಿಗ್ಗೆ 6ರವರೆಗೆ ದಾವಣಗೆರೆ ನಗರದಲ್ಲಿ ಮದ್ಯ ಮಾರಾಟ ಮತ್ತು ಸರಬರಾಜನ್ನು ನಿಷೇಧಿಸಿ ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌ ಆದೇಶಿಸಿದ್ದಾರೆ.

ಈ ಆದೇಶವು ಕೆ.ಎಸ್‌.ಬಿ.ಸಿ.ಎಲ್‌ ಅವರಿಗೆ ಸಗಟನ್ನು ದಾವಣಗೆರೆ ನಗರದ ವ್ಯಾಪ್ತಿಯಲ್ಲಿ ಹೊರತುಪಡಿಸಿ ಉಳಿದ ಕಡೆ ಮದ್ಯ ಸರಬರಾಜು ಮಾಡಲು ಅನ್ವಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !