ಶನಿವಾರ, ಸೆಪ್ಟೆಂಬರ್ 18, 2021
21 °C
ಹಿರಿಯ ನಾಗರಿಕರ ರಕ್ಷಣೆಗಾಗಿ ರಾಷ್ಟ್ರೀಯ ಕಾರ್ಯಕ್ರಮದಡಿ ಆರಂಭ

ದಾವಣಗೆರೆ: ಸಿ.ಜಿ. ಆಸ್ಪತ್ರೆಯಲ್ಲಿ ‘ಜಿರಿಯಾಟ್ರಿಕ್’ ವಾರ್ಡ್

ಡಿ.ಕೆ.ಬಸವರಾಜು Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಹಿರಿಯ ನಾಗರಿಕರ ರಕ್ಷಣೆಗಾಗಿ ರಾಷ್ಟ್ರೀಯ ಕಾರ್ಯಕ್ರಮ (ಎನ್‌ಪಿಎಚ್‌ಸಿಇ) ದಡಿ ಹಿರಿಯರಿಗೆ ವಿಶೇಷ ಚಿಕಿತ್ಸೆ ನೀಡಲು ನಗರದ ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್ (ಜಿರಿಯಾಟ್ರಿಕ್ ವಾರ್ಡ್) ಆರಂಭಿಸಲು ಸಿದ್ಧತೆ ನಡೆದಿದೆ.

‘60 ವರ್ಷ ಮೇಲ್ಪಟ್ಟವರಿಗೆ ಆದ್ಯತೆಯ ಮೇರೆಗೆ ಚಿಕಿತ್ಸೆ ನೀಡುವ ಉದ್ದೇಶದಿಂದ ಇದನ್ನು ತೆರೆಯಲಾಗಿದೆ. ಇವರು ಸರತಿ ಸಾಲಿನಲ್ಲಿ ನಿಂತು ಚಿಕಿತ್ಸೆ ಪಡೆಯುವುದು ಕಷ್ಟ. ಏಕೆಂದರೆ ದೀರ್ಘಕಾಲೀನ ಕಾಯಿಲೆಗಳಾದ ಅಧಿಕ ರಕ್ತದೊತ್ತಡ, ಮಧುಮೇಹ, ಪಾರ್ಶ್ವವಾಯುಗಳಿಂದ ಇವರು ಬಳಲುತ್ತಿರುತ್ತಾರೆ. ವೃದ್ಧರಿಗೆ ಪ್ರತ್ಯೇಕ ಸಾಲು ತೆರೆಯಲಾಗುವುದು’ ಎಂದು ಜಿಲ್ಲಾ ಆಸ್ಪತ್ರೆಯ ಸರ್ವೇಕ್ಷಣಾ ಅಧಿಕಾರಿ ಜಿ.ಡಿ. ರಾಘವನ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ವಾರ್ಡ್‌ನಲ್ಲಿ ಪುನರ್ವಸತಿ ಕೇಂದ್ರ ಆರಂಭಿಸಿ, ಹಿರಿಯರ ವಿಶೇಷ ಕಾಳಜಿ ವಹಿಸಲಾಗುವುದು. ಶೌಚಾಲಯಕ್ಕೆ ಹೋಗಲು ಹಿರಿಯರಿಗೆ ನೆರವಾಗುವ ಉಪಕರಣಗಳನ್ನು ಖರೀದಿಸಲಾಗುತ್ತದೆ. ಪಾರ್ಶ್ವವಾಯು ಪೀಡಿತರ ಆರೈಕೆಗಾಗಿ ಉಪಕರಣಗಳನ್ನು ಅಳವಡಿಸಲಿದ್ದು, ಆ ಮೂಲಕ ಅವರಿಗೆ ಚಿಕಿತ್ಸೆ ನೀಡಲಾಗುವುದು’ ಎಂದು ಹೇಳಿದರು.

‘ಆಸ್ಪತ್ರೆಯಲ್ಲಿ ಔಷಧ ವಿಭಾಗದ ಪಕ್ಕ ಜಾಗ ಗುರುತಿಸಿದ್ದು, ಅದರಲ್ಲಿ ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕ ವಾರ್ಡ್‌ ತೆರೆಯಲಾಗುವುದು. ಒಂದು ವಾರ್ಡ್‌ನಲ್ಲಿ ತಲಾ 5 ಬೆಡ್‌ಗಳನ್ನು ಅಳವಡಿಸಲಾಗುವುದು. ಮುಂದಿನ ದಿನಗಳಲ್ಲಿ ಹೊಸ ಕಟ್ಟಡ ನಿರ್ಮಾಣವಾಗಲಿದ್ದು, ಆನಂತರ ಅಲ್ಲಿಗೆ ಸ್ಥಳಾಂತರಿಸಲಾಗುವುದು’ ಎಂದು ರಾಘವನ್ ಮಾಹಿತಿ ನೀಡಿದರು.

‘ರಾಷ್ಟ್ರೀಯ ಕಾರ್ಯಕ್ರಮ 2019–20ನೇ ಸಾಲಿನ ಕಾರ್ಯಕ್ರಮವಾಗಿದ್ದು, ಅಕ್ಟೋಬರ್‌ನಲ್ಲಿ ಅನುದಾನ ಬಿಡುಗಡೆಯಾಗಿದೆ. ಸಾಮಾನ್ಯ ರೋಗಿಗಳ ಜೊತೆ ವೃದ್ಧರನ್ನು ಸೇರಿಸುವುದಿಲ್ಲ. ದಾಖಲಾತಿ ಮಾಡುವಾಗಲೇ ಅವರನ್ನು ‘ಜೆರಿಯಾಟ್ರಿಕ್ ವಾರ್ಡ್‌’ ಎಂದು ಹೇಳಿ ನೋಂದಾಯಿಸಿಕೊಂಡು ಚಿಕಿತ್ಸೆ ನೀಡಲಾಗುವುದು. ಇಷ್ಟರಲ್ಲೇ ಕಾರ್ಯಕ್ರಮ ಅನುಷ್ಠಾನವಾಗಲಿದ್ದು, ಆರೋಗ್ಯ ಕಾರ್ಯಕರ್ತರು ವೈದ್ಯರಿಗೆ ತರಬೇತಿ ನೀಡಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

‘ವೃದ್ಧರ ಸಂಖ್ಯೆ ಹೆಚ್ಚುತ್ತಿದ್ದು, ಕಾಯಿಲೆಗಳು ಅವರನ್ನು ಬಾಧಿಸುತ್ತಿವೆ. ಹೀಗಾಗಿ ಎಲ್ಲಾ ಕಾಯಿಲೆಗಳನ್ನು ಪರೀಕ್ಷೆ ಮಾಡುತ್ತೇವೆ’ ಎಂದು ಹೇಳುತ್ತಾರೆ.

ಫಿಸಿಯೋಥೆರಪಿ ವಿಭಾಗ ಆರಂಭ: ‘ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ಫಿಸಿಯೋಥೆರಪಿ ವಿಭಾಗವೂ ಆರಂಭವಾಗುವ ಹಂತದಲ್ಲಿದೆ. ಪುರುಷರು, ಮಹಿಳೆಯರು ಸೇರಿ ಎಲ್ಲಾ ವರ್ಗದವರಿಗೂ ಇಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕ ವಾರ್ಡ್ ಇರಲಿದ್ದು, ₹ 1.50 ಲಕ್ಷ ಅನುದಾನ ಬಂದಿದೆ. ಈ ಅನುದಾನದಲ್ಲಿ ಉಪಕರಣಗಳನ್ನು ಖರೀದಿ ಮಾಡಲಾಗುತ್ತದೆ. ಇದರಲ್ಲಿ ಪುರುಷರಿಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕ ವಾರ್ಡ್‌ ಇರುತ್ತದೆ’ ಎಂದು ರಾಘವನ್ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು