ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಬಲ ಬೆಲೆಯಲ್ಲಿ ಭತ್ತ ಖರೀದಿಗೆ ಸಿದ್ಧತೆ ಕೈಗೊಳ್ಳಿ

ಅಧಿಕಾರಿಗಳಿಗೆ ಮಹಾಂತೇಶ ಬೀಳಗಿ ಸೂಚನೆ
Last Updated 6 ನವೆಂಬರ್ 2020, 12:57 IST
ಅಕ್ಷರ ಗಾತ್ರ

ದಾವಣಗೆರೆ: ಪ್ರಸಕ್ತ ಸಾಲಿನಲ್ಲಿ ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿಸಲು ಸರ್ಕಾರ ಆದೇಶ ನೀಡಿದೆ. ರೈತರು ಮತ್ತು ಅಕ್ಕಿ ಗಿರಣಿಗಳ ನೋಂದಣಿ ಹಾಗೂ ಖರೀದಿ ಕೇಂದ್ರ ಪ್ರಾರಂಭಕ್ಕೆ ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅಧಿಕಾರಿಗಳಿಗೆ ಸೂಚಿಸಿದರು.

ಭತ್ತ ಹಾಗೂ ಶೇಂಗಾ ಖರೀದಿ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಜಿಲ್ಲಾ ಕಾರ್ಯಪಡೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಾಮಾನ್ಯ ಭತ್ತ ಪ್ರತಿ ಕ್ವಿಂಟಲ್‍ಗೆ ₹ 1,868 ಹಾಗೂ ಗ್ರೇಡ್-ಎ ಭತ್ತಕ್ಕೆ ₹ 1, 888 ಬೆಂಬಲ ಬೆಲೆ ಘೋಷಿಸಲಾಗಿದೆ. ಸಾಮಾನ್ಯ ಭತ್ತ ಪ್ರತಿ ರೈತರಿಂದ ಗರಿಷ್ಠ 40 ಕ್ವಿಂಟಲ್‌ (ಪ್ರತಿ ಎಕರೆಗೆ 16 ಕ್ವಿಂಟಲ್‌ನಂತೆ) ಖರೀದಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ರೈತರು ಕೃಷಿ ಇಲಾಖೆಯ ಫ್ರೂಟ್ಸ್ (FRUITS) ದತ್ತಾಂಶದಲ್ಲಿ ತಮ್ಮ ಹೆಸರು ನೋಂದಣಿ ಮಾಡಿಸಿರಬೇಕು. ಫ್ರೂಟ್ಸ್‌ನಲ್ಲಿ ನೋಂದಣಿ ಆಗಿರದ ರೈತರಿಂದ ಖರೀದಿಗೆ ಅವಕಾಶವಿಲ್ಲ. ಇದುವರೆಗೂ ನೋಂದಣಿ ಮಾಡಿಸದೇ ಇರುವ ರೈತರು ರೈತ ಸಂಪರ್ಕ ಕೇಂದ್ರದಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು. ಜಿಲ್ಲೆಯ ಅಕ್ಕಿ ಗಿರಣಿಗಳನ್ನು ಭತ್ತ ಖರೀದಿ ಕಾರ್ಯಕ್ಕೆ ನೋಂದಾಯಿಸಿಕೊಳ್ಳಬೇಕಿದ್ದು, ನ. 20ರಿಂದ 25ರ ವರೆಗೆ ನೋಂದಣಿ ಮಾಡಿಕೊಳ್ಳಬೇಕು.ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿಗೆ ನೋಂದಣಿ ಕಾರ್ಯ ನ. 30ರಿಂದ ಡಿಸೆಂಬರ್‌ 30ರ ವರೆಗೆ ನಡೆಯಲಿದೆ ಎಂದು ಹೇಳಿದರು.

16 ಹೋಬಳಿ ಕೇಂದ್ರಗಳಲ್ಲಿ ಖರೀದಿ ಕೇಂದ್ರ:ಕಳೆದ ಬಾರಿ ತಾಲ್ಲೂಕು ಕೇಂದ್ರಗಳಲ್ಲಿ ಖರೀದಿ ಕೇಂದ್ರ ಪ್ರಾರಂಭಿಸಲಾಗಿತ್ತು. ಈ ಬಾರಿ ಜಗಳೂರು ತಾಲ್ಲೂಕು ಹೊರತುಪಡಿಸಿ ಉಳಿದ ಎಲ್ಲ ತಾಲ್ಲೂಕುಗಳ ಒಟ್ಟು 16 ಹೋಬಳಿ ಕೇಂದ್ರಗಳಲ್ಲಿಯೂ ಭತ್ತ ಖರೀದಿ ಕೇಂದ್ರ ತೆರೆಯಲು ಸಿದ್ಧತೆ ಮಾಡಿಕೊಳ್ಳಬೇಕು. ಸಿಬ್ಬಂದಿ ಕೊರತೆಯಾದಲ್ಲಿ ಜಿಲ್ಲಾಡಳಿತದಿಂದಲೇ ಸಿಬ್ಬಂದಿ ನಿಯೋಜಿಸಲಾಗುವುದು. ಭತ್ತ ಖರೀದಿ ಬಗ್ಗೆ ವ್ಯಾಪಕ ಪ್ರಚಾರ ಆಗಬೇಕು ಎಂದು ಜಿಲ್ಲಾಧಿಕಾರಿ ತಾಕೀತು ಮಾಡಿದರು.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿನಿರ್ದೇಶಕ ಮಂಟೇಸ್ವಾಮಿ, ‘ಸದ್ಯ ಭತ್ತಕ್ಕೆ ಮಾರುಕಟ್ಟೆಯಲ್ಲಿ ಬೆಂಬಲ ಬೆಲೆಗಿಂತಲೂ ಕಡಿಮೆ ಬೆಲೆ ಇದೆ. ಫ್ರೂಟ್ಸ್ ದತ್ತಾಂಶ ವ್ಯವಸ್ಥೆಯಿಂದ ರೈತರಿಗೆ ತ್ವರಿತವಾಗಿ ಹಣ ಪಾವತಿ ಆಗುತ್ತಿದೆ. ಕಳೆದ ಬಾರಿ ಬೆಂಬಲ ಬೆಲೆ ಯೋಜನೆಯಡಿ 40 ಸಾವಿರ ಕ್ವಿಂಟಲ್‌ ಭತ್ತ ಖರೀದಿ ಆಗಿತ್ತು’ ಎಂದು ವಿವರಿಸಿದರು.

ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್, ‘ಈ ಬಾರಿ ಜಿಲ್ಲೆಯ 66,450 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದ್ದು, 3.30 ಲಕ್ಷ ಟನ್ ಭತ್ತ ಉತ್ಪಾದನೆಯಾಗುವ ನಿರೀಕ್ಷೆ ಇದೆ. ಭತ್ತದ ಮಾದರಿ ಗುಣಮಟ್ಟ ಪರಿಶೀಲನೆಗೆ ಖರೀದಿ ಕೇಂದ್ರಕ್ಕೆ ಗ್ರೇಡರ್‌ಗಳನ್ನು ನಿಯೋಜಿಸಲಾಗುವುದು’ ಎಂದರು.

ಬೆಂಬಲ ಬೆಲೆಯಲ್ಲಿ ಶೇಂಗಾ ಖರೀದಿ:ಜಗಳೂರಿನಲ್ಲಿ ಶೇಂಗಾ ಖರೀದಿ ಕೇಂದ್ರ ತೆರೆಯಲಾಗುವುದು. ಶೇಂಗಾ ಬೆಳೆಗೆ ಪ್ರತಿ ಕ್ವಿಂಟಲ್‍ಗೆ ₹ 5,275 ಬೆಂಬಲ ಬೆಲೆ ನಿಗದಿಪಡಿಸಲಾಗಿದೆ. ಎಕರೆಗೆ 3 ಕ್ವಿಂಟಲ್‌ನಂತೆ ಗರಿಷ್ಠ 15 ಕ್ವಿಂಟಲ್‌ ಶೇಂಗಾ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ರೈತರು ನೋಂದಣಿ ಮಾಡಿಸಲು ನ. 21 ಕೊನೆಯ ದಿನ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಸಭೆಯಲ್ಲಿ ಕೆಒಎಫ್ ವ್ಯವಸ್ಥಾಪಕ ಹನುಮಂತ ನಾಯಕ್ ಸೇರಿ ಕೃಷಿ ಇಲಾಖೆ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT