ಹೊನ್ನಾಳಿ: ನವದೆಹಲಿಯ ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಯ ಆಶ್ರಯದಲ್ಲಿ ಬೆಂಗಳೂರಿನ ಸಿದ್ಧಗಂಗಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ನಡೆದ ಸಿಬಿಎಸ್‍ಇ ವಲಯ– 8 ರಾಜ್ಯಮಟ್ಟದ ಕೊಕ್ಕೊ ಟೂರ್ನಿಯ 14 ವರ್ಷದ ಒಳಗಿನ ಬಾಲಕಿಯರ ವಿಭಾಗದಲ್ಲಿ ಹೊನ್ನಾಳಿಯ ಶ್ರೀ ಸಾಯಿಗುರುಕುಲ ವಿದ್ಯಾಸಂಸ್ಥೆಯ ಬಾಲಕಿಯರು ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಸಾಯಿಗುರುಕುಲ ಸಂಸ್ಥೆಯ ಅಧ್ಯಕ್ಷ ಹಾಗೂ ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.
ಶನಿವಾರ ವಿಜೇತ ಬಾಲಕಿಯರ ತಂಡಕ್ಕೆ ಅಭಿನಂದನೆ ಸಲ್ಲಿಸಿ ಸನ್ಮಾನಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.
ಅದೇ ರೀತಿ 17 ವರ್ಷದ ಒಳಗಿನ ವಿಭಾಗದಲ್ಲಿ ಶಾಲೆಯ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದಿದ್ದಾರೆ. ಟೂರ್ನಿಯಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳ 53 ತಂಡಗಳು, ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದರು ಎಂದು ಹೇಳಿದರು.
ಅ. 14ರಂದು ಹರಿಯಾಣದಲ್ಲಿ ರಾಷ್ಟ್ರಮಟ್ಟದ ಪಂದ್ಯ: ರಾಷ್ಟ್ರಮಟ್ಟದ ಕೊಕ್ಕೊ ಟೂರ್ನಿ ಹರಿಯಾಣದ ಕರ್ನಾಲ್‌ನಲ್ಲಿ ನಡೆಯಲಿದೆ.
‘ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಉತ್ತಮ ಸೌಲಭ್ಯಗಳನ್ನು ಕೊಟ್ಟು ಕ್ರೀಡಾಪಟುಗಳಿಗೆ ತರಬೇತಿ ನೀಡುತ್ತಾರೆ. ಆದರೆ, ಗ್ರಾಮೀಣ ಭಾಗದ ಈ ವಿದ್ಯಾರ್ಥಿಗಳ ಸಾಧನೆ ಶ್ಲಾಘನೀಯ. ಅವರಿಗೆ ತರಬೇತಿ ನೀಡಿದ ಕೆ.ಮಧುಕುಮಾರ್, ತಿಪ್ಪೇಸ್ವಾಮಿ ಹಾಗೂ ಶಾಂತಮ್ಮ ಅವರು ಅಭಿನಂದನೆಗೆ ಅರ್ಹರು’ ಎಂದು ಹೇಳಿದರು.
ಸಂಸ್ಥೆಯ ಕಾರ್ಯದರ್ಶಿ ಸೌಮ್ಯಾ ಪ್ರದೀಪ್, ಡಿ.ಎಸ್.ಪ್ರದೀಪ್, ಆಡಳಿತಾಧಿಕಾರಿ ಡಿ.ಎಸ್.ಅರುಣ್, ಪ್ರಾಂಶುಪಾಲ ದರ್ಶನ್, ಮೋಹನ್, ಸೋಮಶೇಖರ್ ಹಾಗೂ ಸಂಯೋಜಕರಾದ ಹರೀಶ್‍ಕುಮಾರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.