ಭಾನುವಾರ, ಆಗಸ್ಟ್ 25, 2019
28 °C
ಹರಿಹರ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಶ್ರೀದೇವಿ ಮಂಜಪ್ಪ ಮನವಿ

ಅಭಿವೃದ್ಧಿಗೆ ಮತ್ತೊಮ್ಮೆ ಅವಕಾಶ ನೀಡಿ

Published:
Updated:

ದಾವಣಗೆರೆ: ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದು, ಹೆಚ್ಚಿನ ಅನುದಾನ ತಂದು ತಾಲ್ಲೂಕನ್ನು ಅಭಿವೃದ್ಧಿಪಡಿಸಲು ಜೆಡಿಎಸ್‌ ಒಪ್ಪಂದವನ್ನು ಮುಂದುವರೆಸುವ ಮೂಲಕ ಮತ್ತೊಮ್ಮೆ ಅವಕಾಶ ನೀಡಿ ಎಂದು ಹರಿಹರ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಶ್ರೀದೇವಿ ಮಂಜಪ್ಪ ಮನವಿ ಮಾಡಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಕಾಂಗ್ರೆಸ್–ಜೆಡಿಎಸ್‌ ಹೊಂದಾಣಿಕೆ ಮಾಡಿಕೊಂಡು ಇದೇ 6ರಂದು ನನ್ನ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ತೀರ್ಮಾನಿಸಿವೆ. ತಾಲ್ಲೂಕು ಪಂಚಾಯಿತಿ ಸದಸ್ಯೆಯರ ನಡುವೆ ಹೊಂದಾಣಿಕೆ ಇದೆ. ಆದ್ದರಿಂದ ಇನ್ನೂ ಹೆಚ್ಚಿನ ಸೇವೆ ಮಾಡಲು ಅಧಿಕಾರದಲ್ಲಿ ಮುಂದುವರೆಯುವಂತೆ ಮಾಡಿ’ ಎಂದು ಮನವಿ ಮಾಡಿದರು.

‘ನಾನು ಅಧಿಕಾರದಲ್ಲಿ ಇದ್ದಾಗ ಸ್ಥಾಯಿ ಸಮಿತಿ ಸಭೆ ಮಾಡಲಿಲ್ಲ. ಕ್ಷೇತ್ರದ ಕೆಲಸಗಳಿಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿ ಅನುಮೋದನೆ ಪಡೆಯಲು ಶ್ರಮಿಸಲಿಲ್ಲ ಎಂದು ಹೊಳೆ ಸಿರಿಗೆರೆ ಕ್ಷೇತ್ರದ ಸದಸ್ಯ ಕೊಟ್ರೇಶ್‌ಗೌಡ ಅವರ ಹೇಳಿಕೆ ಸತ್ಯಕ್ಕೆ ದೂರ. ತಾಲ್ಲೂಕು ಪಂಚಾಯಿತಿ ಸದಸ್ಯರ ಗಮನಕ್ಕೆ ಬಾರದೇ ನಾನು ಯಾವುದೇ ಕಾಮಗಾರಿಯಾಗಲಿ ಅಥವಾ ಸಭೆ ಸಮಾರಂಭಗಳನ್ನು ಮಾಡಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ತಾಲ್ಲೂಕು ಪಂಚಾಯಿತಿ ಅಧ್ಯಕ್ಷರ ಒಕ್ಕೂಟದ ಸದಸ್ಯೆಯಾಗಿ ಗ್ರಾಮೀಣಾಭಿವೃದ್ಧಿ ಸಚಿವ ಎಚ್‌.ಕೆ. ಪಾಟೀಲ್ ಅವರಿಗೆ ಅನುದಾನ ಮತ್ತು ಗೌರವ ಧನಕ್ಕಾಗಿ ಮನವಿ ಸಲ್ಲಿಸಿದ್ದೆ. ಅದರ ಫಲವಾಗಿ ₹1 ಕೋಟಿ ಇದ್ದ ಅನುದಾನ ₹ 2 ಕೋಟಿಯಾಗಿದೆ. ನನ್ನ ಕ್ಷೇತ್ರವಾದ ಬನ್ನಿಕೋಡುವಿಗೆ ₹40 ಲಕ್ಷ ವೆಚ್ಚದಲ್ಲಿ ಕಾಮಗಾರಿ ಮಾಡಿ ಅಭಿವೃದ್ಧಿಪಡಿಸಿದ್ದೇನೆ’ ಎಂದರು.

‘ತಾಲ್ಲೂಕು ಪಂಚಾಯಿತಿಗೆ ಇದುವರೆವಿಗೂ ಬಂದಿರುವ ಅನುದಾನದಲ್ಲಿ 15 ಕ್ಷೇತ್ರಗಳಿಗೆ ಸಮಾನವಾಗಿ ಹಂಚಿದ್ದೇನೆ. ಮಾಜಿ ಶಾಸಕ ಬಿ.ಪಿ. ಹರೀಶ್ ಗೌಡ ಅವರು ₹900 ಕೋಟಿಗಿಂತಲೂ ಹೆಚ್ಚಿನ ಅನುದಾನ ತಂದು ತಾಲ್ಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಚುನಾವಣೆ ಬಂದಾಗ ಭೈರನಪಾದ ಯೋಜನೆಯ ವಿಷಯ ಎತ್ತುತ್ತಾರೆ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯರೊಬ್ಬರು ಹೇಳಿಕೆ ನೀಡಿದ್ದು, ಆ ಹೇಳಿಕೆಯನ್ನು ಹಿಂಪಡೆಯಬೇಕು’ ಎಂದು ಆಗ್ರಹಿಸಿದರು.

‘ಯಾವುದೂ ಚುನಾವಣೆಯ ಗಿಮಿಕ್‌ ಅಲ್ಲ. ಜೆಡಿಎಸ್‌ನವರು ಮಾತು ತಿರುಚುವುದು ಪಕ್ಷದ ಹಿರಿಯರು ಕೊಟ್ಟ ಬಳುವಳಿಯಾಗಿದ್ದು, ಮಾಜಿ ಶಾಸಕ ಎಸ್‌. ಶಿವಶಂಕರ್ ಅವರು ತಮ್ಮ ಬೆಂಬಲಿತ ಜೆಡಿಎಸ್‌ ಸದಸ್ಯರಿಗೆ ಒಪ್ಪಂದದಂತೆ ಮುಂದುವರೆಯಲು ಸೂಚಿಸಬೇಕು’ ಎಂದು ಮನವಿ ಮಾಡಿದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಆರ್‌.ಬಿ. ಆರ್‌.ಬಿ. ರೆಹಮನ್‌ಖಾನ್, ನಗರಸಭಾ ಸದಸ್ಯ ರಜನೀಕಾಂತ್‌, ಬಿಜೆಪಿ ಎಸ್‌ಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಪಿ.ಹನುಮಂತಪ್ಪ, ಮುಖಂಡ ಕೊಟ್ರೇಶಪ್ಪ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಹರಿಹರ ತಾ.ಪಂ. ಕ್ಷೇತ್ರದ ಬಲಾಬಲ

ಬಿಜೆಪಿ–5

ಕಾಂಗ್ರೆಸ್‌–4

ಜೆಡಿಎಸ್–6

ಒಟ್ಟು–15

 

Post Comments (+)