ಶನಿವಾರ, ಮೇ 28, 2022
31 °C

ಅಭಿವೃದ್ಧಿ ನಿಗಮಕ್ಕೆ ₹1500 ಕೋಟಿ ನೀಡಿ: ಎಚ್. ಹನುಮಂತಪ್ಪ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಸಫಾಯಿ ಕರ್ಮಚಾರಿಗಳಿಗೆ ಸೌಲಭ್ಯ ತಲುಪಿಸಿ ಅವರನ್ನು ಮುಖ್ಯವಾಹಿನಿಗೆ ತರಬೇಕಾದರೆ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮಕ್ಕೆ ರಾಜ್ಯ ಸರ್ಕಾರ ಮುಂದಿನ ಬಜೆಟ್‌ನಲ್ಲಿ ₹ 1,500ಕೋಟಿ ಅನುದಾನ ನೀಡಬೇಕು ಎಂದು ನಿಗಮದ ಅಧ್ಯಕ್ಷ ಎಚ್. ಹನುಮಂತಪ್ಪ ಆಗ್ರಹಿಸಿದರು.

‘ಈ ಹಿಂದೆ ಸರ್ಕಾರಗಳು ₹ 10 ಕೋಟಿಯಿಂದ ₹ 40 ಕೋಟಿ ನೀಡುತ್ತಿದ್ದು, ಆದರೆ ಇಷ್ಟು ಹಣ ಯಾವುದಕ್ಕೂ ಸಾಲದು. ಕಳೆದ ಬಾರಿ ಯಡಿಯೂರಪ್ಪ ಅವರು ನಿಗಮಕ್ಕೆ ₹ 66 ಕೋಟಿ ನೀಡಿದ್ದು, ಕೊರೊನಾ ಬಂದಿದ್ದರಿಂದ ಇದನ್ನು ಪ್ರಶ್ನಿಸಲು ಆಗುವುದಿಲ್ಲ. ರಾಜ್ಯ ಸರ್ಕಾರದಿಂದ ₹ 1 ಸಾವಿರ ಕೋಟಿ, ರಾಷ್ಟ್ರೀಯ ಸಫಾಯಿ ಕರ್ಮಚಾರಿಗಳ ಆರ್ಥಿಕ ಅಭಿವೃದ್ಧಿ ನಿಗಮದಿಂದ ₹ 500 ಕೋಟಿ ಕೊಡಬೇಕು. ಈ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಜೊತೆ ಚರ್ಚಿಸಿದ್ದೇನೆ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ರಾಜ್ಯದಲ್ಲಿ 3 ಲಕ್ಷಕ್ಕೂ ಹೆಚ್ಚು ಸಫಾಯಿ ಕಾರ್ಮಿಕರು ಇದ್ದು, ಅವರ ಅವಲಂಬಿತರು ಸೇರಿದರೆ ಈ ಸಂಖ್ಯೆ 30 ಲಕ್ಷ ದಾಟುತ್ತದೆ. ಸಮಾಜದ ಮುಖ್ಯವಾಹಿನಿಗೆ ತರಲು 5 ವರ್ಷಗಳ ಹಿಂದೆ ನಿಗಮ ರಚನೆಯಾಗಿದ್ದರೂ ಸರ್ಕಾರ ನಿಗಮಕ್ಕೆ ಸೌಲಭ್ಯ ಕೊಡುವ ನಿಟ್ಟಿನಲ್ಲಿ ತಲೆಕೆಡಿಸಿಕೊಂಡಿಲ್ಲ’ ಎಂದು ಆಪಾದಿಸಿದರು. 

‘ಸಫಾಯಿ ಕರ್ಮಚಾರಿಗಳಿಗೆ ಸಣ್ಣ ಪುಟ್ಟ ಸಾಲ ನೀಡುವ ಬದಲು ಅವರ ಮಕ್ಕಳಿಗೆ ಸ್ಥಿರವಾದ ಉದ್ಯೋಗ ಕಲ್ಪಿಸಲು ಸಣ್ಣ ಕೈಗಾರಿಕಾ ವಲಯದಲ್ಲಿ ಸಬ್ಸಿಡಿ ದರದಲ್ಲಿ ಸಾಲ ಸೌಲಭ್ಯ, ಪ್ರತಿಯೊಬ್ಬರಿಗೂ ಸೂರು, ಭೂ ಒಡೆತನ ಯೋಜನೆಯಡಿ ಒಂದು ಎಕರೆ ನೀರಾವರಿ ಭೂಮಿ, ಇಲ್ಲವೇ ಎರಡು ಎಕರೆ ಒಣಭೂಮಿ, ಸಫಾಯಿ ಕರ್ಮಚಾರಿಗಳ ಮಕ್ಕಳಿಗೆ ಉನ್ನತ ವ್ಯಾಸಂಗಕ್ಕೆ ಸೌಲಭ್ಯವನ್ನು ಉಚಿತವಾಗಿ ನೀಡುವ ಉದ್ದೇಶವಿದೆ’ ಎಂದು ಹೇಳಿದರು.

‘ಸಫಾಯಿ ಕರ್ಮಚಾರಿ ಸಮುದಾಯವನ್ನು ಮೇಲೆತ್ತಲು ಹೋರಾಡಿದ ಐ.ಪಿ.ಡಿ. ಸಾಲಪ್ಪ ಹೆಸರಿನಲ್ಲಿ ಪ್ರತಿ ಜಿಲ್ಲೆಯಲ್ಲಿ ₹ 3 ಕೋಟಿ ವೆಚ್ಚದಲ್ಲಿ ಸಮುದಾಯ ಭವನಗಳನ್ನು ನಿರ್ಮಿಸುವ ಉದ್ದೇಶವಿದ್ದು, ಈ ಯೋಜನೆಗಳು ಸಾಕಾರಗೊಳ್ಳಬೇಕಾದರೆ ಮುಂದಿನ ಆರ್ಥಿಕ ವರ್ಷದಲ್ಲಿ ₹ 1500 ಕೋಟಿ ಬೇಕಾಗುತ್ತದೆ. ಈ ಅನುದಾನ ನೀಡಿದರೆ ಎರಡು ವರ್ಷಗಳಲ್ಲಿ ಈ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ತರುತ್ತೇನೆ’ ಎಂದು ಭರವಸೆ
ನೀಡಿದರು.

‘ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರು, ಮ್ಯಾನ್ಯುವಲ್ ಸ್ಕ್ಯಾವೆಂಜರ್ಸ್ ಹಾಗೂ ಸಫಾಯಿ ಕರ್ಮಚಾರಿಗಳಿಗೆ ಸರ್ಕಾರಿ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ತಲುಪಿಸುವ ಕೆಲಸವಾಗಬೇಕು. ಇಲ್ಲವಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಲಾಗುವುದು. ಇವರಿಗೆ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಈ ತಿಂಗಳ ಅಂತ್ಯದೊಳಗೆ ಗುರುತಿನ ಚೀಟಿ ಮತ್ತು ಪ್ರಮಾಣಪತ್ರ ನೀಡಬೇಕು’ ಎಂದು ಆಗ್ರಹಿಸಿದರು.

‘ಒಳಚರಂಡಿ ಕೆಲಸ ಸೇರಿ ಸ್ವಚ್ಛತಾ ಕೆಲಸ ಮಾಡುವ ಎಲ್ಲ ಕಾರ್ಮಿಕರನ್ನೂ ನೇರ ಪಾವತಿ ವ್ಯವಸ್ಥೆಗೆ ಒಳಪಡಿಸಬೇಕು. ಎಲ್ಲ ಪೌರಕಾರ್ಮಿಕರ ಸೇವೆ ಕಾಯಂ ಆಗಬೇಕಿದೆ. ಈ ಕುರಿತು ಅಧಿಕಾರಿಗಳ ಸಭೆ ಕರೆದು ಚರ್ಚಿಸಲಾಗುವುದು’ ಎಂದು ಹೇಳಿದರು.

ಪಾಲಿಕೆ ಸದಸ್ಯ ಎಲ್.ಡಿ. ಗೋಣೆಪ್ಪ, ಮುಖಂಡರಾದ ನೀಲಗಿರಿಯಪ್ಪ, ಎಲ್.ಎಂ. ಹನುಮಂತಪ್ಪ, ಗಂಗಾಧರ ಜಿ.ವಿ, ಶಂಕರ್, ನಿರಂಜನಮೂರ್ತಿ ಇದ್ದರು.

ಸತ್ತಿದ್ದು 60 ಮಂದಿ, ಪರಿಹಾರ 3 ಮಂದಿಗೆ!
‘ರಾಜ್ಯದಲ್ಲಿ ಈವರೆಗೆ 60 ಹೆಚ್ಚು ಮ್ಯಾನ್ಯುಯಲ್ ಸ್ಕ್ಯಾವೆಂಜರ್‌ಗಳು ಕೆಲಸದ ವೇಳೆ ಮೃತಪಟ್ಟಿದ್ದಾರೆ. ಆದರೆ ಈವರೆಗೆ ಕೇವಲ ಮೂರರಿಂದ ನಾಲ್ಕು ಮಂದಿಗೆ ಮಾತ್ರ ಪರಿಹಾರ ಸಿಕ್ಕಿದೆ. ಇತ್ತೀಚಿಗೆ ಕಲಬುರ್ಗಿಯಲ್ಲಿ ಇಬ್ಬರು  ಮೃತಪಟ್ಟಿದ್ದಾರೆ. ಮ್ಯಾನ್ಯುಯಲ್ ಸ್ಕ್ಯಾವೆಂಜರ್‌ಗಳ ಬಗ್ಗೆ ಅಧಿಕಾರಿಗಳು ತಪ್ಪು ಮಾಹಿತಿ ನೀಡುತ್ತಿದ್ದಾರೆ’ ಎಂದು ಎಚ್. ಹನಮಂತಪ್ಪ ಬೇಸರ ವ್ಯಕ್ತಪಡಿಸಿದರು.

ಸಫಾಯಿ ಕರ್ಮಚಾರಿಗಳ ಮರು ಸಮೀಕ್ಷೆ
‘ಸಫಾಯಿ ಕರ್ಮಚಾರಿಗಳು ಸ್ಥಳೀಯ ಸಂಸ್ಥೆಗಳೊಂದರಲ್ಲೇ ಕೆಲಸ ಮಾಡುತ್ತಿಲ್ಲ. ಬದಲಾಗಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಅವರನ್ನು ಗುರುತಿಸುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ಮರು ಸಮೀಕ್ಷೆ ಮಾಡಿ ಈ ಬಗ್ಗೆ ಸಮಗ್ರ ಸಮೀಕ್ಷೆ ನಡೆಸಿ ವರದಿ ನೀಡಲು ರಾಷ್ಟ್ರೀಯ ಕಾನೂನು ಶಾಲೆಗೆ ವಹಿಸಲಾಗಿದೆ. ಬಳ್ಳಾರಿ ಮತ್ತು ಮೈಸೂರು ಜಿಲ್ಲೆಗಳಲ್ಲಿ ಪೈಲಟ್ ಯೋಜನೆ ಕೈಗೆತ್ತಿಕೊಳ್ಳಲಾಗಿದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು