ಹೊಸ ರೈತರಿಗೆ ಸಾಲ ನೀಡಿ

7
ಸಹಕಾರ ಸಂಸ್ಥೆ, ಬ್ಯಾಂಕ್‌ ಅಧಿಕಾರಿಗಳಿಗೆ ಸಚಿವ ಬಂಡೆಪ್ಪ ಕಾಶೆಂಪುರ ಸೂಚನೆ

ಹೊಸ ರೈತರಿಗೆ ಸಾಲ ನೀಡಿ

Published:
Updated:

ದಾವಣಗೆರೆ: ಖಾಸಗಿ ಲೇವಾದೇವಿದಾರರಿಂದ ರೈತರನ್ನು ಪಾರುಮಾಡಿ, ಅವರಿಗೆ ಸಹಕಾರ ಸಂಘ ಹಾಗೂ ಬ್ಯಾಂಕ್‌ಗಳಿಂದ ಸಾಲ ದೊರೆಯುವಂತೆ ನೊಡಿಕೊಳ್ಳಲಾಗುವುದು ಎಂದು ಸಹಕಾರಿ ಸಚಿವರಾದ ಬಂಡೆಪ್ಪ ಕಾಶೆಂಪುರ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಲಾಗಿದ್ದ ಸಹಕಾರ ಇಲಾಖೆ ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ‘ಮುಂದಿನ ವರ್ಷ 10 ಲಕ್ಷ ರೈತರಿಗೆ ಸಾಲ ನೀಡಲಾಗುವುದು. ಇದರಿಂದ ಅವರು ಖಾಸಗಿಯವರಿಂದ ಸಾಲ ಪಡೆಯುವುದನ್ನು ನಿಯಂತ್ರಿಸಲಾಗುವುದು’ ಎಂದರು.

ಪ್ರತಿವರ್ಷ ಶೇ 25ರಷ್ಟು ಹೊಸ ರೈತರಿಗೆ ಸಾಲ ಕೊಡಬೇಕು ಎಂದು ಬ್ಯಾಂಕ್ ನಿಯಾಮಾವಳಿಗಳು ಹೇಳುತ್ತವೆ. ಆದರೆ, ಕೇವಲ ಶೇ 5ರಿಂದ 10ರಷ್ಟು ರೈತರಿಗೆ ಮಾತ್ರವೇ ಹೊಸ ಸಾಲಗಳು ದೊರೆಯುತ್ತವೆ. ಈ ಪ್ರಮಾಣ ಹೆಚ್ಚಾಗಲು ಸಹಕಾರ ಸಂಘಗಳು ಶ್ರಮಿಸಬೇಕು ಎಂದು ತಿಳಿಸಿದರು.

ಸಹಕಾರ ಸಂಘಗಳ ಉಪ ನಿಬಂಧಕ ಎನ್. ಸುರೇಶ್, ‘2017–18ನೇ ಸಾಲಿನಲ್ಲಿ ಜಿಲ್ಲೆಯ 80,213 ರೈತರಿಗೆ ಸಾಲ ನೀಡಲಾಗಿದೆ. ಒಟ್ಟು ₹ 231 ಕೋಟಿ ಸಾಲ ನೀಡಲಾಗಿದೆ. ಅದರಲ್ಲಿ ₹ 222 ಕೋಟಿ ಸಾಲ ಮನ್ನಾ ಆಗಿದೆ. ಈ ಪೈಕಿ ಸರ್ಕಾರ ₹ 198 ಕೋಟಿ ನೀಡಿದ್ದು, ಇನ್ನೂ ₹ 31 ಕೋಟಿ ಬಾಕಿ ಬರಬೇಕಾಗಿದೆ. ವರ್ಷಕ್ಕೆ 4 ಬಾರಿ ಹೊಸ ಸಾಲಗಳನ್ನು ನೀಡಲಾಗುತ್ತದೆ. ಜನವರಿಯಲ್ಲಿ ಬೇಸಿಗೆ ಬೆಳೆಗಾಗಿ ಸಾಲ ನೀಡಲಾಗುತ್ತದೆ. ಮುಂಗಾರು ಹಂಗಾಮಿನಲ್ಲಿ ಹೆಚ್ಚಿನ ಸಾಲಕ್ಕೆ ಬೇಡಿಕೆ ಇದೆ’ ಎಂದು ಮಾಹಿತಿ ನೀಡಿದರು.

ಸಾಲ ಮನ್ನಾ ಯೋಜನೆ ದುರ್ಬಳಕೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ವರದಿಯಾಗಿರುತ್ತವೆ. ಮಂಡ್ಯದಲ್ಲಿ ಸಹಕಾರ ಸಂಘದ ಕಾರ್ಯದರ್ಶಿಯೊಬ್ಬ ಮೃತ ರೈತನ ಹೆಸರಿನಲ್ಲೂ ಸಾಲ ಮನ್ನಾ ಮಾಡಿ, ಹಣ ವಂಚಿಸಿದ್ದಾನೆ. ಈ ಬಗ್ಗೆ ಎಚ್ಚರವಹಿಸಬೇಕು. ಅಧಿಕಾರಿಗಳು ರೈತರ ಸಾಲದ ಖಾತೆಗಳೊಂದಿಗೆ ಆಧಾರ ಸಂಖ್ಯೆ ಲಿಂಕ್ ಮಾಡುವುದರಿಂದ ಇಂತಹ ಪ್ರಕರಣಗಳು ತಡೆಗಟ್ಟಬಹುದು ಎಂದು ಸಲಹೆ ನೀಡಿದರು.

89 ಸಾವಿರ ಕ್ವಿಂಟಾಲ್ ರಾಗಿ ಖರೀದಿ:

ಕನಿಷ್ಠ ಬೆಂಬಲ ಯೋಜನೆಯಡಿ 2017–18ನೇ ಸಾಲಿನಲ್ಲಿ 89 ಸಾವಿರ ಕ್ವಿಂಟಾಲ್ ರಾಗಿ ಖರೀದಿಸಲಾಗಿದೆ ಎಂದು ಎಪಿಎಂಸಿ ಕಾರ್ಯದರ್ಶಿ ಆನಂದ್ ತಿಳಿಸಿದರು.

ಜಿಲ್ಲೆಯಲ್ಲಿ ಮೆಕ್ಕೆಜೋಳ ಹಾಗೂ ಭತ್ತ ಹೆಚ್ಚಿನ ಉತ್ಪಾದನೆಯಾಗುತ್ತಿದ್ದು, ಮೆಕ್ಕಜೋಳಕ್ಕೆ ₹ 1,700 ಬೆಂಬಲ ಇದೆ. ಆದರೆ, ಬಿಹಾರದಿಂದ ₹ 1,200ಕ್ಕೆ ಮೆಕ್ಕೆಜೋಳ ಬರುತ್ತಿದೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ, ‘ಹೊರರಾಜ್ಯದಿಂದ ರಪ್ತಾಗುವ ಪದಾರ್ಥಗಳಿಗೆ ನಿಯಂತ್ರಣ ಇಲ್ಲವಾ’ ಎಂದು ಪ್ರಶ್ನಿಸಿದರು. ‘ಯಾವುದೇ ರಾಜ್ಯದಿಂದ ಬರುವ ಆಹಾರಧಾನ್ಯಗಳನ್ನು ರಾಜ್ಯ ನಿರ್ಬಂಧಿಸಲು ಸಾಧ್ಯವಿಲ್ಲ. ಆದರೆ, ಈ ಬಗ್ಗೆ ಕೇಂದ್ರ ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕು’ ಎಂದು ಅಧಿಕಾರಿಗಳು ಉತ್ತರಿಸಿದರು.

ಉಣ್ಣೆ ಮಾರಾಟ ಸಹಕಾರ ಸಂಘಗಳ ಆಧುನಿಕತೆಗೆ ತಕ್ಕಂತೆ ವಸ್ತ್ರಗಳನ್ನು ವಿನ್ಯಾಸಗೊಳಿಸಬೇಕು. ನಾವು ಹಳೆಯ ಕಾಲದ ಕಂಬಳಿ ನೇಯ್ದು ಕೊಂಡಿದ್ದರೆ ಸಾಲದು ಎಂದು ಕುರಿ ಉಣ್ಣೆ ಸಹಕಾರಿ ಸಂಘದ ಅಧಿಕಾರಿಗಳಿಗೆ ತಿಳಿಸಿದರು.

ಸಭೆಯಲ್ಲಿ ಸಹಕಾರ ಇಲಾಖೆ ಸಹಾಯಕ ನಿಬಂಧಕ ಎನ್. ದಕ್ಷಿಣಮೂರ್ತಿ, ಎಪಿಎಂಸಿ ಸಹಾಯಕ ನಿರ್ದೇಶಕಿ ಮಂಜುಳಾ ದೇವಿ, ಕೆಎಂಎಫ್‌ನ ಗುರುಶೇಖರನ್ ಉಪಸ್ಥಿತರಿದ್ದರು.

**
ಬೇರೆ ರಾಜ್ಯದಿಂದ ವರ್ತಕರು ಇಲ್ಲಿಗೆ ಆಹಾರ ಧಾನ್ಯ ತಂದು ಮಾರುವುದನ್ನು ಒಪ್ಪಲು ಸಾಧ್ಯವಿಲ್ಲ. ಇದರಿಂದ ನಮ್ಮ ಆಹಾರ ಬೆಳೆಗಳ ಬೆಲೆ ಕುಸಿಯುತ್ತದೆ. ಈ ಬಗ್ಗೆ ಚರ್ಚೆ ನಡೆಸಿ, ಪರಿಹಾರ ಕಂಡುಕೊಳ್ಳಲಾಗುವುದು.
–ಬಂಡೆಪ್ಪ ಕಾಶೆಂಪುರ, ಸಹಕಾರ ಮತ್ತು ಎಪಿಎಂಸಿ ಸಚಿವ

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !