ಶಿಕ್ಷಣ, ಸಂಸ್ಕೃತಿ ಅಭಿವೃದ್ಧಿಗೆ ಶ್ರಮಿಸಿ

7
ಸಂಗೊಳ್ಳಿ ರಾಯಣ್ಣ ಯುವಕ ಸಂಘ ಉದ್ಘಾಟಿಸಿದ ಕಾಗಿನೆಲೆ ಶ್ರೀ

ಶಿಕ್ಷಣ, ಸಂಸ್ಕೃತಿ ಅಭಿವೃದ್ಧಿಗೆ ಶ್ರಮಿಸಿ

Published:
Updated:
Prajavani

ಬಸವಾಪಟ್ಟಣ: ದೇಶದ ಸರ್ವತೋಮುಖ ಅಭಿವೃದ್ಧಿಗೆ ಮಾರಕವಾಗಿರುವ ಅನಕ್ಷರತೆಯನ್ನು ಹೋಗಲಾಡಿಸುವ ಮೂಲಕ ಸುಸಂಸ್ಕೃತ ಸಮಾಜದ ನಿರ್ಮಾಣಕ್ಕೆ ನಿರಂತರ ಶ್ರಮಿಸಬೇಕು ಎಂದು ಕಾಗಿನೆಲೆ ಕನಕಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಯುವ ಜನರಿಗೆ ಕರೆ ನೀಡಿದರು.

ಸಮೀಪದ ಬೆಳಲಗೆರೆಯಲ್ಲಿ ಭಾನುವಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವಕ ಸಂಘದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ವೃದ್ಧ ತಾಯಿ ತಂದೆಯರನ್ನು ಕಡೆಗಣಿಸುವ ಕೆಟ್ಟ ಸಂಸ್ಕೃತಿ ಸಮಾಜದಲ್ಲಿ ಬೇರೂರುತ್ತಿದೆ. ವೃದ್ಧರ ಸೇವೆಯೇ ದೇವರ ಸೇವೆ ಎಂಬುದನ್ನು ಅರಿತು, ಕೊನೆಯವರೆಗೂ ಅವರನ್ನು ಕಾಪಾಡಬೇಕು. ಸಾಮಾಜಿಕ ಸಮಾನತೆ, ಏಕತೆ ಕಾಪಾಡುವ ದೊಡ್ಡ ಜವಾಬ್ದಾರಿ ಯುವಕರ ಮೇಲಿದೆ. ಸಂಗೊಳ್ಳಿ ರಾಯಣ್ಣನ ಹೆಸರಿನಲ್ಲಿ ಸಂಘಟಿತರಾಗಿರುವ ಯುವಕರು, ರಾಯಣ್ಣನ ಆದರ್ಶಗಳನ್ನು ಪಾಲಿಸಿ, ಗುಣವಂತರಾಗಬೇಕು ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಕಾಗಿನೆಲೆ ಕನಕಗುರುಪೀಠ ಹೊಸದುರ್ಗ ಶಾಖಾಮಠದ ಈಶ್ವರಾನಂದಪುರಿ ಸ್ವಾಮೀಜಿ, ‘ಕೇವಲ ಧನ ಸಂಪಾದನೆ ಕಡೆಗೆ ಗಮನ ನೀಡದೇ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಳ್ಳಲು ಯುವಕರು ಮುಂದಾಗಬೇಕು. ಗುರು ಹಿರಿಯರ ಮಾರ್ಗದರ್ಶನದಲ್ಲಿ ಸಂಘವನ್ನು ಮುನ್ನಡೆಸಿ, ಇತರರಿಗೆ ಮಾದರಿಯಾಗುವಂತೆ ನಡೆಯಿರಿ’ ಎಂದರು.

ಡಯಟ್‌ ಉಪನ್ಯಾಸಕ ಕೆ. ಗೋವಿಂದಪ್ಪ, ‘ಸಂಗೊಳ್ಳಿ ರಾಯಣ್ಣನ ವೀರತ್ವ, ಮಾತೃಭೂಮಿಯ ಸೇವೆ ಮಾಡುವ ಗುಣ, ಸಮಾಜಕ್ಕಾಗಿ ಅರ್ಪಿಸಿಕೊಳ್ಳುವಂಥ ಮೌಲ್ಯಗಳು ಯುವಕರಲ್ಲಿ ಬೆಳೆಯಬೇಕು’ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಜಿ.ಸಿ. ನಿಂಗಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯ ಬಿ.ಕೆ. ಹನುಮಂತಪ್ಪ, ಕೆ. ಸತೀಶ್, ನಿಕಿತ್‌ರಾಜ್‌ ಮಾತನಾಡಿದರು.

ಕುರುಬ ಸಮಾಜದ ಮುಖಂಡರಾದ ಡಿ. ಶಿವಣ್ಣ, ಎಚ್‌. ಲೋಕೇಶಪ್ಪ, ಕೆ. ಮಾದಪ್ಪ, ಕೆ. ಕರಿಬಸಪ್ಪ , ಬಿ.ಎಚ್‌. ಹಾಲಪ್ಪ ಭಾಗವಹಿಸಿದ್ದರು.

12 ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೆ ಮುನ್ನ ಗುರುದ್ವಯರನ್ನು ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು.

ಬೆಳಲಗೆರೆ ಸೇರಿದಂತೆ ಸುತ್ತಲಿನ ಗ್ರಾಮಗಳ ಕುರುಬ ಸಮುದಾಯದ ಸಹಸ್ರಾರು ಮಂದಿ ಪಾಲ್ಗೊಂಡಿದ್ದರು. ಕೆ. ದೇವೇಂದ್ರಪ್ಪ ಸ್ವಾಗತಿಸಿದರು. ಕೆ.ಪಿ.ಜಯಪ್ಪ ನಿರೂಪಿಸಿದರು. ಕಿರಣ್‌ಕುಮಾರ್‌ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !