ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಲಸ ಮಾಡಿದ ನಾಯಕರಿಗೆ ಕೂಲಿ ಕೊಡಿ: ಸಿದ್ದರಾಮಯ್ಯ ಮನವಿ

ಮೈತ್ರಿ ಅಭ್ಯರ್ಥಿ ಮಂಜಪ್ಪ ಪರ ಪ್ರಚಾರ ಸಭೆ
Last Updated 20 ಏಪ್ರಿಲ್ 2019, 13:15 IST
ಅಕ್ಷರ ಗಾತ್ರ

ತ್ಯಾವಣಿಗೆ (ದಾವಣಗೆರೆ ಜಿಲ್ಲೆ): ‘ನಾವು ಎಲ್ಲಾ ಜನಾಂಗದವರಿಗೂ ಹಲವು ಭಾಗ್ಯಗಳು ಹಾಗೂ ಜನಪರ ಯೋಜನೆಗಳನ್ನು ರೂಪಿಸಿದ್ದೇವೆ. ಹೀಗಿದ್ದರೂ ವಿಧಾನಸಭೆ ಚುನಾವಣೆಯಲ್ಲಿ ನಮ್ಮನ್ನು ಏಕೆ ಕೈಬಿಟ್ಟಿರಿ? ಈಗಲೂ ನಮ್ಮ ಕೈ ಬಿಡುತ್ತೀರಾ’ ಎಂದು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಕಾರ್ಯಕರ್ತರನ್ನು ಪ್ರಶ್ನಿಸಿದರು.

ಕಾಂಗ್ರೆಸ್‌–ಜೆಡಿಎಸ್ ಪಕ್ಷಗಳ ಮೈತ್ರಿ ಅಭ್ಯರ್ಥಿ ಎಚ್‌.ಬಿ. ಮಂಜಪ್ಪ ಪರ ತ್ಯಾವಣಿಗೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರಚಾರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು ಹಾಗೂ ಜನಪರ ಯೋಜನೆಗಳನ್ನು ಪಟ್ಟಿ ಮಾಡುತ್ತ ಹೋದ ಅವರು, ‘ಇಷ್ಟೆಲ್ಲ ಕೆಲಸ ಮಾಡಿದ ನಮ್ಮ ಕೈ ಬಿಡುತ್ತೀರಾ? ಕೆಲಸ ಮಾಡಿದವರಿಗೆ ಕೂಲಿ ಕೊಡಬೇಕಲ್ಲವಾ’ ಎಂದು ಅವರು ಪ್ರಶ್ನಿಸಿದಾಗ, ‘ಕೈಬಿಡಲ್ಲ’ ಎಂದು ಜನ ಘೋಷಣೆ ಹಾಕಿದರು.

‘ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆಗಳನ್ನು ಯಾರು ಮಾಡಿದರು? ಸಂಸದ ಜಿ.ಎಂ. ಸಿದ್ದೇಶ್ವರ ಮಾಡಿಸಿದರಾ? ಚನ್ನಗಿರಿ ಕ್ಷೇತ್ರಕ್ಕೆ ₹ 2,000 ಕೋಟಿಗೂ ಹೆಚ್ಚು ಅನುದಾನ ಕೊಟ್ಟಿದ್ದೇವೆ. ಜಗಳೂರಿಗೆ ಕುಡಿಯುವ ನೀರಿನ ಯೋಜನೆ ಮಂಜೂರು ಮಾಡಿದ್ದೇವೆ. ಎಸ್‌.ಎಸ್‌. ಮಲ್ಲಿಕಾರ್ಜುನ ಎಷ್ಟೊಂದು ಕೆಲಸ ಮಾಡಿದ್ದರು. ಕೆಲಸ ಮಾಡುವವರ ಕೈ ಬಿಟ್ಟರೆ ನಾವು ಏನು ಮಾಡಬೇಕು? ಹಿಂದಿನ ಎರಡು ಲೋಕಸಭೆ ಚುನಾವಣೆಗಳಲ್ಲೂ ಅಲ್ಪ ಮತಗಳಿಂದ ಸೋತಿದ್ದ ಮಲ್ಲಿಕಾರ್ಜುನ ಬೇಸರಗೊಂಡಿದ್ದಾರೆ. ವಿಧಾನಸಭೆಯಲ್ಲೂ ಸೋತಿದ್ದರಿಂದ ಈ ಬಾರಿ ಚುನಾವಣೆಗೆ ನಿಲ್ಲಲು ಒಪ್ಪಲಿಲ್ಲ. ಅವರಿಗೆ ಫೋನ್‌ ಮಾಡಿದರೂ ಸಿಗುತ್ತಿರಲಿಲ್ಲ’ ಎಂದ ಸಿದ್ದರಾಮಯ್ಯ, ಮತದಾರರ ತೀರ್ಪಿಗೆ ಬೇಸರ ವ್ಯಕ್ತಪಡಿಸಿದರು.

ಮೋದಿಗೆ ಸವಾಲು: ‘ನನ್ನ ಐದು ವರ್ಷಗಳ ಆಡಳಿತದ ಸಾಧನೆ ಹಾಗೂ ಬಿಜೆಪಿಯ ಕೇಂದ್ರ ಸರ್ಕಾರದ ಐದು ವರ್ಷಗಳ ಸಾಧನೆಯ ಬಗ್ಗೆ ನರೇಂದ್ರ ಮೋದಿ ಚರ್ಚೆಗೆ ಬರಲಿ’ ಎಂದು ಸಿದ್ದರಾಮಯ್ಯ ಸವಾಲು ಹಾಕಿದರು. ‘ಮನ್‌ಕಿ ಬಾತ್‌ ಬೇಡ ಕಾಮ್‌ ಕಿ ಬಾತ್‌’ ಮಾಡಿ ಎಂದು ಮೋದಿಗೆ ಸಲಹೆಯನ್ನೂ ನೀಡಿದರು.

‘ಸೊಸೈಟಿಗಳಲ್ಲಿದ್ದ ರೈತರ ಸಾಲವನ್ನು ನಾವು ಮನ್ನಾ ಮಾಡುತ್ತೇವೆ; ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲ ಮನ್ನಾ ಮಾಡಿ ಎಂದು ಮೋದಿ ಬಳಿಗೆ ಸರ್ಪ ಪಕ್ಷದ ನಿಯೋಗ ಒಯ್ದಾಗ ಅವರು ಒಪ್ಪಲಿಲ್ಲ. ಆಗ ರಾಜ್ಯದ ಬಿಜೆಪಿ ನಾಯಕರು ತುಟಿ ಪಿಟಕ್‌ ಎನ್ನಲಿಲ್ಲ. ಹಸಿರು ಶಾಲು ಹಾಕಿಕೊಂಡು ಪ್ರಮಾಣ ವಚನ ಸ್ವೀಕರಿಸಿದ್ದ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ರೈತರ ಸಾಲ ಮನ್ನಾ ಮಾಡಲಿಲ್ಲ. ಆದರೆ, ನಾನು ಮುಖ್ಯಮಂತ್ರಿಯಾಗಿದ್ದಾಗ ₹ 8,165 ಕೋಟಿ ಸಾಲಮನ್ನಾ ಮಾಡಿದ್ದೆ. ಈ ಗಿರಾಕಿಗಳು ರೈತರ ಪರವಾಗಿಲ್ಲ’ ಎಂದು ಮೋದಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ, ‘ಪ್ರಾಮಾಣಿಕ ವ್ಯಕ್ತಿಯನ್ನು ಗೆಲ್ಲಿಸುತ್ತೇವೆ ಎಂಬುದಕ್ಕೆ ದಾವಣಗೆರೆ ಉದಾಹರಣೆಯಾಗಲಿ. ಕಾರ್ಯಕರ್ತರು ಒಂದಗೂಡಿ ಗೆಲ್ಲಿಸಬೇಕು. ಮಂಜಪ್ಪ ಸಾಮಾಜಿಕ ನ್ಯಾಯ ಎತ್ತಿಹಿಡಿಯುವ ಕೆಲಸ ಮಾಡುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಧಾನ ಪರಿಷತ್‌ ಸದಸ್ಯ ಪ್ರಸನ್ನಕುಮಾರ್‌, ಅಬ್ದುಲ್‌ ಜಬ್ಬಾರ್‌, ಮಾಜಿ ಸದಸ್ಯೆ ಜಲಜಾ ನಾಯ್ಕ, ಕೆಪಿಸಿಸಿ ಕಾರ್ಯದರ್ಶಿ ಡಿ. ಬಸವರಾಜ್‌, ಕಾಂಗ್ರೆಸ್‌ ಜಿಲ್ಲಾ ವೀಕ್ಷಕಿ ಬಲ್ಕಿಶ್‌ ಬಾನು, ಮಾಜಿ ಶಾಸಕ ಕೆ. ಶಿವಮೂರ್ತಿ, ಶೀಲಾ ನಾಯ್ಕ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಕೆ.ಎಸ್‌. ಬಸವಂತಪ್ಪ, ಕೆ.ಎಚ್‌. ಓಬಳಪ್ಪ ಅವರೂ ಇದ್ದರು.

‘ಬಿಜೆಪಿಯವರಿಗೆ ಸುಳ್ಳೇ ಬಂಡವಾಳ’

‘ದಾವಣಗೆರೆ ಮೊದಲಿನಿಂದಲೂ ಕಾಂಗ್ರೆಸ್‌ನ ಭದ್ರಕೋಟೆ. ಆದರೆ, ಬಿಜೆಪಿಯ ಸುಳ್ಳು ಮಾತುಗಳಿಗೆ ಜನ ದಾರಿ ತಪ್ಪುತ್ತಿದ್ದಾರೆ. ಬಿಜೆಪಿಯವರಿಗೆ ಸುಳ್ಳೇ ಬಂಡವಾಳವಾಗಿದೆ’ ಎಂದು ಸಿದ್ದರಾಮಯ್ಯ ಆರೋಪಿಸಿದರು.

‘ಕಳೆದ ಚುನಾವಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಭ್ರಮಾಲೋಕ ಸೃಷ್ಟಿಸಿದ್ದರಿಂದ ದೇಶದ ಜನ ಅವರಿಗೆ ಅವಕಾಶ ಮಾಡಿಕೊಟ್ಟರು. ಆದರೆ, ಐದು ವರ್ಷಗಳಲ್ಲಿ ಯಾವುದೇ ಭರವಸೆಗಳನ್ನೂ ಅವರು ಈಡೇರಿಸಿಲ್ಲ. ಜನರಿಗೆ ನಂಬಿಕೆ ದ್ರೋಹ ಮಾಡಿದರು. ನನ್ನ 40 ವರ್ಷಗಳ ರಾಜಕೀಯ ಜೀವನದಲ್ಲಿ ಮೋದಿಯಷ್ಟು ಸುಳ್ಳು ಹೇಳಿದ ಪ್ರಧಾನಿಯನ್ನು ನೋಡಿಲ್ಲ’ ಎಂದು ವಾಗ್ದಾಳಿ ನಡೆಸಿದರು.

ಸಿದ್ದೇಶ್ವರ ಅಸಮರ್ಥ ಸಂಸದ: ಟೀಕೆ

‘ರಾಜ್ಯದ ಎಂಟು ಲಿಂಗಾಯತ ಸಂಸದರ ಪೈಕಿ ಸಿದ್ದೇಶ್ವರರಿಗೆ ಮಾತ್ರ ಕೇಂದ್ರ ಸಚಿವ ಸ್ಥಾನ ನೀಡಲಾಗಿತ್ತು. ಆದರೆ, ಅಸಮರ್ಥ ಎಂಬ ಕಾರಣಕ್ಕೆ ಅವರನ್ನು ಸಚಿವ ಸ್ಥಾನದಿಂದ ಕೈಬಿಡಲಾಯಿತು. ಮೂರು ಬಾರಿ ಆಯ್ಕೆಯಾಗಿರುವ ಅವರು ಸಂಸದರಾಗಿಯೂ ಯಾವುದೇ ಕೆಲಸ ಮಾಡಲಿಲ್ಲ. ಯಾವುದೇ ಹೆಜ್ಜೆ ಗುರುತು ಮೂಡಿಸಿಲ್ಲ’ ಎಂದು ಸಿದ್ದರಾಮಯ್ಯ ಹೇಳಿದರು.

‘ಮೋದಿ ಮುಖ ನೋಡಿ ಮತ ಹಾಕಿ ಎಂದು ಸಿದ್ದೇಶ್ವರ ಕೇಳುತ್ತಿದ್ದಾರೆ. ನಾನು 14 ಚುನಾವಣೆಗಳನ್ನು ಎದುರಿಸಿದ್ದೇನೆ. ಎಂದಿಗೂ ಬೇರೆಯವರ ಮುಖ ನೋಡಿ ಮತ ಹಾಕಿ ಎಂದು ಕೇಳಿಲ್ಲ. ಇದು ರಾಜಕಾರಣದ ವಿಪರ್ಯಾಸ’ ಎಂದರು.

‘ನನ್ನ ಮುಖ ನೋಡಿ ಮಂಜಪ್ಪಗೆ ಮತ ಹಾಕಿ ಎಂದು ಕೇಳುವುದಿಲ್ಲ. ಸಾಮಾನ್ಯ ಕಾರ್ಯಕರ್ತನಾಗಿರುವ ಮಂಜಪ್ಪನ ಮುಖ ನೋಡಿಯೇ ಮತ ಕೊಡಿ. ಏಕೆಂದರೆ, ನಾಳೆ ನಮ್ಮ ನಾಯಕ ರಾಹುಲ್‌ ಗಾಂಧಿ ಅಥವಾ ಅವರ ನಾಯಕ ನರೇಂದ್ರ ಮೋದಿ ಇಲ್ಲಿಗೆ ಬಂದು ಕೆಲಸ ಮಾಡುವುದಿಲ್ಲ. ನಿಮ್ಮ ಕೆಲಸ ಮಾಡಿಕೊಡಬೇಕಾದವರೂ ಇವರೇ ಆಗಿದ್ದಾರೆ’ ಎಂದು ಹೇಳಿದರು.

ರೈತನಿಂದ ಕಂಬಳಿ ಕೊಡುಗೆ

ಸಭಿಕರ ನಡುವೆ ಇದ್ದ ರೈತರೊಬ್ಬರು ಪೊಲೀಸರ ಭದ್ರತೆಯನ್ನೂ ಲೆಕ್ಕಿಸದೆ ವೇದಿಕೆಯನ್ನೇರಿ ಸಿದ್ದರಾಮಯ್ಯ ಅವರಿಗೆ ಕಂಬಳಿ ಹೊದೆಸಿ ಗೌರವಿಸಿದರು.

ಕುರುಬ ಸಮಾಜದ ಮುಖಂಡರಾಗಿರುವ ಸಿದ್ದರಾಮಯ್ಯ ಅವರೂ ಸಂತೋಷದಿಂದಲೇ ರೈತನ ಸತ್ಕಾರವನ್ನು ಸ್ವೀಕರಿಸಿದರು.

ಯಾರು ಏನೆಂದರು?

* ಬಡವರ, ಶೋಷಿತ ವರ್ಗದವರ ಹಿತ ಕಾಪಾಡಿದ ಸಿದ್ದರಾಮಯ್ಯ ನಿಜವಾದ ಚೌಕಿದಾರ. ಮೊಸಳೆ ಕಣ್ಣೀರಿನ ಕಥೆ ಹೇಳುವ ನರೇಂದ್ರ ಮೋದಿಯನ್ನು ಈ ಬಾರಿ ಸೋಲಿಸಬೇಕು.

– ಎಚ್‌. ಆಂಜನೇಯ, ಮಾಜಿ ಸಚಿವ

* ಈ ಬಾರಿ ಕುರುಬರು–ನಾಯಕರು ಒಂದಾಗಿ ಮತ ಚಲಾಯಿಸುವ ಮೂಲಕ ಮೈತ್ರಿ ಪಕ್ಷದ ಅಭ್ಯರ್ಥಿ ಮಂಜಪ್ಪ ಗೆಲ್ಲುವ ಅವಕಾಶವನ್ನು ತಪ್ಪಿಸಿಕೊಳ್ಳಬಾರದು.

– ಹೊದಿಗೆರೆ ರಮೇಶ್‌, ಜೆಡಿಎಸ್‌ ಎಸ್‌.ಟಿ ರಾಜ್ಯ ಘಟಕದ ಅಧ್ಯಕ್ಷ

* ಮೋದಿ ಅಭಿವೃದ್ಧಿ ಬಗ್ಗೆ ಮಾತನಾಡದೆ ಭ್ರಮೆ ಮೂಡಿಸುತ್ತಿದ್ದಾರೆ. ಬಡತನ, ನಿರುದ್ಯೋಗ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಕಾಂಗ್ರೆಸ್‌ ಅಭ್ಯರ್ಥಿ ಬೆಂಬಲಿಸಬೇಕು. ಸಾಮಾನ್ಯ ಕಾರ್ಯಕರ್ತ ಮಂಜಪ್ಪ ಅವರನ್ನು ಗೆಲ್ಲಿಸಿದರೆ ಮತದಾರರಿಗೂ ಘನತೆ ಬರಲಿದೆ.

– ಟಿ.ಬಿ. ಜಯಚಂದ್ರ, ಮಾಜಿ ಸಚಿವ

* ಮೋದಿ ಸರ್ಕಾರ 2 ಕೋಟಿ ಉದ್ಯೋಗ ಸೃಷ್ಟಿಸಿದೆಯೋ ಗೊತ್ತಿಲ್ಲ; ಆದರೆ, ಹೊಸ ಇತಿಹಾಸಕಾರರು ಹಾಗೂ ಆರ್ಥಿಕ ತಜ್ಞರನ್ನು ಮಾತ್ರ ಸೃಷ್ಟಿಸಿದೆ. ಇತಿಹಾಸವನ್ನು ತಿರುಚುವ ಹಾಗೂ ತಮಗೆ ತಿಳಿದಂತೆ ಆರ್ಥಿಕತೆಯ ವಿಶ್ಲೇಷಣೆ ಮಾಡುವವರನ್ನು ಕೊಟ್ಟಿದೆ.

– ತೇಜಸ್ವಿ ಪಟೇಲ್‌, ರೈತ ಮುಖಂಡ

* ರಾಮನ ಹೆಸರು ಜಪಿಸುತ್ತಿದ್ದ ಬಿಜೆಪಿಯವರಿಂದ 25 ವರ್ಷಗಳಾದರೂ ಮಂದಿರ ನಿರ್ಮಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಈಗ ರಾಮಜನ್ಮಭೂಮಿ ಬಿಟ್ಟು ಕೇರಳದ ಅಯ್ಯಪ್ಪ ಸ್ವಾಮಿಯನ್ನು ಹಿಡಿದುಕೊಂಡಿದ್ದಾರೆ.

– ವಡ್ನಾಳ್‌ ರಾಜಣ್ಣ, ಮಾಜಿ ಶಾಸಕ

* ಬಿಜೆಪಿಯವರು ವ್ಯವಸ್ಥಿತವಾಗಿ ಜನರಿಗೆ ‘ಮಕಮಲ್‌’ ಟೋಪಿ ಹಾಕುತ್ತಿದ್ದಾರೆ. ಈ ಬಾರಿ ಮತದಾರರು ಟೋಪಿ ಹಾಕಿಸಿಕೊಳ್ಳಬಾರದು.

– ಡಿ.ಜಿ. ಶಾಂತನಗೌಡ, ಮಾಜಿ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT