ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಕಾಮಗಾರಿ ವಿಳಂಬಕ್ಕೆ ಸಂಸದ ಜಿ.ಎಂ. ಸಿದ್ದೇಶ್ವರ ಗರಂ

ಸಂಸದರ ಅನುದಾನದ ಕಾಮಗಾರಿಗಳ ಪ್ರಗತಿ ಪರಿಶೀಲಿಸಿದ ಸಿದ್ದೇಶ್ವರ
Last Updated 7 ಜನವರಿ 2022, 14:30 IST
ಅಕ್ಷರ ಗಾತ್ರ

ದಾವಣಗೆರೆ: 17ನೇ ಲೋಕಸಭಾ ಅವಧಿಯ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಅನುಮೋದನೆ ನೀಡಿದ ಹಲವು ಕಾಮಗಾರಿಗಳು ಇನ್ನೂ ಪೂರ್ಣಗೊಳ್ಳದೇ ಇರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಂಸದ ಜಿ.ಎಂ. ಸಿದ್ದೇಶ್ವರ, ಸಕಾಲಕ್ಕೆ ಅನುದಾನ ಬಳಕೆ ಮಾಡಿಕೊಳ್ಳದಿದ್ದರೆ ಹೊಸದಾಗಿ ಅನುದಾನ ಬಿಡುಗಡೆ ಮಾಡುವುದಿಲ್ಲ ಎಂಬ ಆತಂಕವನ್ನೂ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ‘ಒಂಬತ್ತು ತಿಂಗಳ ಹಿಂದೆಯೇ ಕಾಮಗಾರಿ ಕೈಗೊಳ್ಳಲು ಅನುಮೋದನೆ ನೀಡಲಾಗಿದೆ. ಹೀಗಿದ್ದರೂ ಇನ್ನೂ ಹಲವು ಕಾಮಗಾರಿಗಳು ಪೂರ್ಣಗೊಂಡಿಲ್ಲ. ಯಾವುದೇ ಕಾಮಗಾರಿ ಬಗ್ಗೆ ಕೇಳಿದರೂ ಇನ್ನೂ ಎರಡು–ಮೂರು ತಿಂಗಳಲ್ಲಿ ಪೂರ್ಣಗೊಳಿಸುತ್ತೇವೆ ಎನ್ನುತ್ತಿದ್ದೀರಿ. ಹಿಂದೆ ನೀಡಿದ್ದ ₹ 5 ಕೋಟಿ ಅನುದಾನವನ್ನು ಸಂಪೂರ್ಣವಾಗಿ ಬಳಕೆ ಮಾಡಿಕೊಳ್ಳದ ಹೊರತು ಹೊಸದಾಗಿ ಅನುದಾನ ನೀಡುವುದಿಲ್ಲ. ನೀವು ವಿಳಂಬ ಮಾಡುತ್ತಿರುವುದರಿಂದ ನಮಗೆ ತೊಂದರೆಯಾಗುತ್ತಿದೆ’ ಎಂದು ನಿರ್ಮಿತಿ ಕೇಂದ್ರದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

‘2024ರಲ್ಲಿ ಲೋಕಸಭಾ ಚುನಾವಣೆ ಬರಲಿದೆ. ಆ ವರ್ಷ ಜನವರಿಯಲ್ಲಿ ಕೆಲಸ ಮಾಡಿಕೊಡುವುದಾಗಿ ಜನರಿಗೆ ಭರವಸೆ ನೀಡಿ, ಅನುದಾನ ಹಂಚಿಕೆ ಮಾಡಿರುತ್ತೇನೆ. ಮುಂದೆ ಚುನಾವಣೆ ನಡೆದಾಗ ನಾನು ಗೆಲ್ಲುತ್ತೇನೋ ಗೊತ್ತಿಲ್ಲ. ನಿಮ್ಮ ಬೇಜವಾಬ್ದಾರಿಯಿಂದಾಗಿ ಕೆಲಸ ಆಗದಿದ್ದರೆ ಜನ ಏನು ಮಾಡಬೇಕು? ಯಾವುದೇ ಕಾರಣಕ್ಕೂ ಇನ್ನು ಮುಂದೆ ಕೆಲಸವನ್ನು ವಿಳಂಬ ಮಾಡಬಾರದು’ ಎಂದು ಸಂಸದರು ತಾಕೀತು ಮಾಡಿದರು.

‘ಕೆಲವು ಸಂಸದರು ಮುಂದೆ ಬರುವ ಅನುದಾನವನ್ನೂ ಲೆಕ್ಕ ಹಾಕಿ ಹಾಲಿ ಇರುವ ಅನುದಾನಕ್ಕಿಂತಲೂ ಹೆಚ್ಚುವರಿ ಮೊತ್ತದ ಕೆಲಸಗಳನ್ನು ಕೈಗೆತ್ತಿಕೊಳ್ಳುತ್ತಾರೆ. ನಾನು ಮಾತ್ರ ಬಂದ ಅನುದಾನದಷ್ಟೇ ಕೆಲಸಗಳನ್ನು ಕೈಗೆತ್ತಿಕೊಳ್ಳುತ್ತಿದ್ದೇನೆ. ಹೀಗಿದ್ದರೂ ಕೆಲಸ ಪೂರ್ಣಗೊಳಿಸಲು ಏನು ತೊಂದರೆ? ನನಗೆ ಈಗಾಗಲೇ 70 ವರ್ಷವಾಗಿದೆ. ಮುಂದೆ ಸಂಸದನಾಗಿ ಇರುತ್ತೆನೆಯೋ ಗೊತ್ತಿಲ್ಲ’ ಎಂದೂ ಹೇಳಿದರು.

9 ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ಮಾಣ ಕಾಮಗಾರಿಗೆ ತಲಾ ₹ 6 ಲಕ್ಷದಂತೆ ಅನುದಾನ ನೀಡಿರುವ ಕಾಮಗಾರಿ ಪೂರ್ಣಗೊಳ್ಳದಿರುವುದಕ್ಕೆ ಸಂಸದರು ಅಸಮಾಧಾನ ವ್ಯಕ್ತಪಡಿಸಿದರು.

2019–20ನೇ ಸಾಲಿಗೆ ಬಿಡುಗಡೆಯಾಗಿದ್ದ ₹ 5 ಕೋಟಿ ಅನುದಾನದಲ್ಲಿ ಕೈಗೆತ್ತಿಕೊಂಡಿರುವ ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಿದರು. ಶಾಲಾ ಕೊಠಡಿ, ಬಸ್‌ ತಂಗುದಾಣ, ಅಂಗನವಾಡಿ ಕಟ್ಟಡ, ಸಮುದಾಯ ಭವನ, ಸಭಾಭವನ... ಹೀಗೆ ಹಲವು ಕಾಮಗಾರಿಗಳು ಯಾವ ಹಂತದಲ್ಲಿವೆ ಎಂಬ ಮಾಹಿತಿಯನ್ನು ಸಂಸದರು ಅಧಿಕಾರಿಗಳಿಂದ ಪಡೆದರು.

ಇದಕ್ಕೂ ಮೊದಲು ಸಭೆಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ‘ಬಿಡುಗಡೆಯಾಗಿದ್ದ ₹ 5 ಕೋಟಿ ಅನುದಾನದಲ್ಲಿ ₹ 2.42 ಕೋಟಿ ಮೊತ್ತದ ಒಟ್ಟು 89 ಕಾಮಗಾರಿಗಳು ಪೂರ್ಣಗೊಂಡಿವೆ. ಅಂದಾಜು ₹ 3.03 ಕೋಟಿ ಮೊತ್ತದ 46 ಕಾಮಗಾರಿಗಳು ಪ್ರಗತಿಯಲ್ಲಿವೆ. ₹ 2.27 ಕೋಟಿ ಬಿಡುಗಡೆ ಮಾಡಲಾಗಿದ್ದು, ₹ 75.75 ಲಕ್ಷ ಮಾತ್ರ ಬಿಡುಗಡೆ ಮಾಡುವುದು ಬಾಕಿ ಇದೆ’ ಎಂದು ತಿಳಿಸಿದರು.

ಧೂಡಾ ಅಧ್ಯಕ್ಷ ದೇವರಮನೆ ಶಿವಕುಮಾರ್, ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್‌, ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್‌ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

‘ಕೇಂದ್ರ–ರಾಜ್ಯ ಸರ್ಕಾರದಿಂದ ಆದರ್ಶ ಗ್ರಾಮ ಅಭಿವೃದ್ಧಿ’

‘ಸಂಸದರ ಆದರ್ಶ ಗ್ರಾಮಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳಡಿ ಯಾವ ಯಾವ ಕೆಲಸಗಳನ್ನು ಕೈಗೊಳ್ಳಬೇಕು ಎಂದು ಪ್ರಧಾನಿ ಪಟ್ಟಿಯನ್ನು ಮಾಡಿ ಕಳುಹಿಸಿಕೊಟ್ಟಿದ್ದರೂ ಏಕೆ ಅವುಗಳನ್ನು ಕೈಗೊಂಡಿಲ್ಲ. ಕೇಂದ್ರ ಹಾಗೂ ರಾಜ್ಯದಲ್ಲಿ ನಮ್ಮದೇ ಸರ್ಕಾರ ಅಧಿಕಾರದಲ್ಲಿದ್ದರೂ ಏಕೆ ಕೆಲಸಗಳಾಗಿಲ್ಲ’ ಎಂದು ಸಂಸದ ಸಿದ್ದೇಶ್ವರ ಪ್ರಶ್ನಿಸಿದರು.

‘ಪ್ರಧಾನಿ ಕಳುಹಿಸಿಕೊಟ್ಟ ಮಾರ್ಗಸೂಚಿಯಂತೆ ನಡೆದುಕೊಳ್ಳದಿದ್ದರೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ನಿಮ್ಮ ಆಶಯದಂತೆ ಕಾಮಗಾರಿಗಳನ್ನು ನಡೆಸಲು ಸಹಕಾರ ನೀಡುತ್ತಿಲ್ಲ ಎಂದು ಪತ್ರ ಬರೆಯಬೇಕಾಗುತ್ತದೆ’ ಎಂದು ಎಚ್ಚರಿಸಿದರು.

‘ಆದರ್ಶ ಗ್ರಾಮದಲ್ಲಿ ಕುಡಿಯುವ ನೀರು ಕಲ್ಪಿಸಬೇಕು. ಶಾಲೆ ನಿರ್ಮಿಸಬೇಕು. ಎಲ್ಲರಿಗೂ ಮನೆ ಹಂಚಿಕೆ ಮಾಡಬೇಕು. ಜೀವ ವಿಮೆ ಮಾಡಿಸಬೇಕು. ಸರ್ಕಾರದ ಯೋಜನೆಗಳು ಅಲ್ಲಿನ ಜನರಿಗೆ ತಲುಪಿಸಿಕೊಡಬೇಕು. ಈ ನಿಟ್ಟಿಯಲ್ಲಿ ಪಿಡಿಒಗಳು ಹೆಚ್ಚು ಜವಾಬ್ದಾರಿಯಿಂದ ಕೆಲಸ ಮಾಡಬೇಕು’ ಎಂದು ಸಂಸದರು ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಡಾ.ವಿಜಯ ಮಹಾಂತೇಶ ದಾನಮ್ಮನವರ್‌, ‘ಜಗಳೂರು ತಾಲ್ಲೂಕಿನ ಮುಸ್ಟೂರು ಆದರ್ಶ ಗ್ರಾಮದಲ್ಲಿ ಒಟ್ಟು ₹ 38.42 ಕೋಟಿ ವೆಚ್ಚದಲ್ಲಿ 194 ಕಾಮಗಾರಿಗಳಿಗೆ ಕ್ರಿಯಾಯೋಜನೆ ಸಿದ್ಧಪಡಿಸಲಾಗಿತ್ತು. ಇದುವರೆಗೆ ₹ 35.63 ಕೋಟಿ ವೆಚ್ಚದಲ್ಲಿ ಒಟ್ಟು 167 ಕಾಮಗಾರಿಗಳು ಪೂರ್ಣಗೊಂಡಿವೆ. 22 ಕಾಮಗಾರಿಗಳು ಪ್ರಗತಿಯಲ್ಲಿವೆ. ಇನ್ನೂ ಐದು ಕಾಮಗಾರಿಗಳು ಆರಂಭಗೊಳ್ಳಬೇಕಾಗಿದೆ’ ಎಂದು ಮಾಹಿತಿ ನೀಡಿದರು.

ಚನ್ನಗಿರಿ ತಾಲ್ಲೂಕಿನ ಮಲ್ಲಾಪುರ ಗ್ರಾಮದಲ್ಲಿ ₹ 6.67 ಕೋಟಿ ವೆಚ್ಚದಲ್ಲಿ 191 ಕಾಮಗಾರಿಗಳಿಗೆ ಕ್ರಿಯಾಯೋಜನೆ ಸಿದ್ಧಪಡಿಸಲಾಗಿತ್ತು. ₹ 3.04 ಕೋಟಿ ಮೊತ್ತದಲ್ಲಿ 105 ಕಾಮಗಾರಿಗಳು ಪೂರ್ಣಗೊಂಡಿವೆ. ಕಳೆದ ಸಾಲಿನಲ್ಲಿ ಹೊನ್ನಾಳಿ ತಾಲ್ಲೂಕಿನ ಸೊರಟೂರು ಗ್ರಾಮದಲ್ಲಿ ಅಂದಾಜು ₹ 10.71 ಕೋಟಿ ಮೊತ್ತದಲ್ಲಿ 120 ಕಾಮಗಾರಿಗಳಿಗೆ ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ. ₹ 31 ಲಕ್ಷದಲ್ಲಿ 5 ಕಾಮಗಾರಿಗಳು ಪೂರ್ಣಗೊಂಡಿವೆ ಎಂದು ಸಿಇಒ ವಿವರಿಸಿದರು.

‘ನನ್ನ ಹೆಸರನ್ನೂ ದೊಡ್ಡದಾಗಿ ಬರೆಸಿ’

‘ಸಂಸದರ ನಿಧಿಯಲ್ಲಿ ಕೈಗೊಂಡಿರುವ ಕಾಮಗಾರಿ ನಾಮಫಲಕದಲ್ಲಿ ನನ್ನ ಹೆಸರನ್ನು ಚಿಕ್ಕದಾಗಿ ಬರೆಸಲಾಗುತ್ತಿದೆ. ಶಾಸಕರಾದ ಮಾಡಾಳ್‌ ವಿರೂಪಾಕ್ಷಪ್ಪ, ಎಂ.ಪಿ. ರೇಣುಕಾಚಾರ್ಯ, ರಾಮಪ್ಪ ಅವರು ತಮ್ಮ ಅನುದಾನದಲ್ಲಿ ಕೈಗೊಂಡಿರುವ ಕಾಮಗಾರಿಗಳ ಫಲಕದಲ್ಲಿ ದೊಡ್ಡದಾಗಿ ಹೆಸರು ಬರೆಸಿಕೊಳ್ಳುತ್ತಿದ್ದಾರೆ. ನಾನೇನು ನಿಮ್ಮ ವೈರಿನಾ? ನನ್ನ ಹೆಸರನ್ನೂ ಕಾಣುವಂತೆ ದೊಡ್ಡದಾಗಿ ಬರೆಯಿಸಿ ಹಾಕಿ’ ಎಂದು ಸಿದ್ದೇಶ್ವರ ಅವರು ನಿರ್ಮಿತಿ ಕೇಂದ್ರದ ಅಧಿಕಾರಿಗಳಿಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT