ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಶುಪಾಲನಾ ಕೇಂದ್ರಗಳಿಗೆ ಉತ್ತಮ ಸ್ಪಂದನೆ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಉದ್ಯೋಗಸ್ಥ ಮಹಿಳೆಯರ ಮಕ್ಕಳ ‘ಡೇ ಕೇರ್‌’
Last Updated 7 ಅಕ್ಟೋಬರ್ 2022, 5:53 IST
ಅಕ್ಷರ ಗಾತ್ರ

ದಾವಣಗೆರೆ: ಉದ್ಯೋಗಸ್ಥ ಮಹಿಳೆಯರ ಚಿಕ್ಕಮಕ್ಕಳ ಪಾಲನೆಗೆ ತೆರೆದಿರುವ ಶಿಶುಪಾಲನಾ ಕೇಂದ್ರಗಳಿಗೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಕೆಲಸಕ್ಕೆ ತೆರಳುವ ಮಹಿಳೆಯರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಜಿಲ್ಲೆಯಲ್ಲಿ 4 ಕೇಂದ್ರಗಳನ್ನು ತೆರೆಯಲಾಗಿದ್ದು, ಪಾಲಕರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ.

‘ಡೇ ಕೇರ್‌’ ಮಾದರಿಯ ಈ ಶಿಶುಪಾಲನಾ ಕೇಂದ್ರಗಳು ಚಿಕ್ಕ ಅಂಗನವಾಡಿಯಂತಿವೆ. ಮಕ್ಕಳ ಪಾಲನೆ ಹಾಗೂ ಕಲಿಕೆಗೆ ಪೂರಕವಾದ ವಾತಾವರಣ ಸೃಷ್ಟಿಸಲಾಗಿದೆ. ಆಟ, ಊಟ ಹಾಗೂ ಕಲಿಕೆ ಒಂದೆಡೆ ಸಿಗುವುದರಿಂದ ಉದ್ಯೋಗಸ್ಥ ಮಹಿಳೆಯರಿಗೂ ಇಷ್ಟವಾಗುತ್ತಿದೆ.

ನಗರದ ಜಿಲ್ಲಾ ಪಂಚಾಯಿತಿ, ಮಹಿಳಾಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಹರಿಹರದ ರಾಮಮಂದಿರದ ಬಳಿಯ ಮಹಾತ್ಮಗಾಂಧಿ ಕೊಳಚೆ ಪ್ರದೇಶ, ಚನ್ನಗಿರಿಯ ಗದಿಗೆಮಠ ರಸ್ತೆಯ ಆಶ್ರಯ ಬಡಾವಣೆಯಲ್ಲಿ ಕೇಂದ್ರಗಳನ್ನು ತೆರೆಯಲಾಗಿದೆ.

ಸರ್ಕಾರಿ ನೌಕರರ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಶಿಶುಪಾಲನಾ ಕೇಂದ್ರಗಳನ್ನು 2021ರಲ್ಲಿ ರೂಪಿಸಲಾಯಿತು. ಸರ್ಕಾರಿ ನೌಕರರು ಹೆಚ್ಚಾಗಿರುವ ಸ್ಥಳವನ್ನೇ ಇದಕ್ಕೆ ಆಯ್ಕೆ ಮಾಡಿಕೊಳ್ಳಲಾಗುತ್ತಿತ್ತು. ಈಚೆಗೆ ಸರ್ಕಾರ ಇದರ ರೂಪುರೇಷೆ ಬದಲಿಸಿದ್ದು, ಖಾಸಗಿ ಕಂಪನಿ ಸಿಬ್ಬಂದಿಯೂ ಒಳಗೊಂಡಂತೆ ವಿವಿಧ ಕ್ಷೇತ್ರಗಳಲ್ಲಿ ದುಡಿಯುವ ಮಹಿಳೆಯರ ಮಕ್ಕಳಿಗೂ ಅವಕಾಶ ಕಲ್ಪಿಸಲಾಗಿದೆ. ಸೇವೆ ಉಚಿತ.

ಮಹಿಳಾ ಕೂಲಿಕಾರ್ಮಿಕರ ಮಕ್ಕಳೂ ಇಲ್ಲಿಗೆ ಬರುತ್ತಿರುವುದು ವಿಶೇಷ.

ನಿತ್ಯ ಬೆಳಿಗ್ಗೆ 9.30ರಿಂದ ಸಂಜೆ 6ವರೆಗೆ ಕಾರ್ಯ ನಿರ್ವಹಿಸುವ ಕೇಂದ್ರದಲ್ಲಿ 6ತಿಂಗಳಿಂದ 6 ವರ್ಷದ ವಯಸ್ಸಿನ ಮಕ್ಕಳಿದ್ದಾರೆ. ಅವರಿಗೆ ಹಾಲು, ಮಾಲ್ಟ್‌, ಊಟ ನೀಡಲಾಗುತ್ತದೆ. ಮಕ್ಕಳ ಕಲಿಕೆಗೆ ಪೂರಕವಾದ ಹಾಗೂ ದೈಹಿಕ, ಮಾನಸಿಕ ಬೆಳವಣಿಗೆಗೆ ಅಗತ್ಯವಾದ ಚಟುವಟಿಕೆಯನ್ನು ನಡೆಸಲಾಗುತ್ತದೆ.

ದಾವಣಗೆರೆಯ ಶಿಶುಪಾಲನಾ ಕೇಂದ್ರಗಳ ಜವಾಬ್ದಾರಿಯನ್ನು ವನಿತಾ ಸಮಾಜ ಹೊತ್ತಿದೆ. ಹರಿಹರದ ಕೇಂದ್ರವನ್ನು ಮೆಬಲ್‌ ಕಿಡ್ಸ್‌ ಪೂರ್ವ ಪ್ರಾಥಮಿಕ ಚಾರಿಟಬಲ್‌ ಟ್ರಸ್ಟ್‌ ಹಾಗೂ ದಾವಣಗೆರೆಯ ಸುಲ್ತಾನಿಪುರದ ಭಾಗ್ಯಜ್ಯೋತಿ ಮಹಿಳಾ ಮಂಡಳಿ ಚನ್ನಗಿರಿ ಕೇಂದ್ರದ ಉಸ್ತುವಾರಿ ಹೊತ್ತಿದೆ.ಒಬ್ಬ ಶಿಕ್ಷಕಿ ಹಾಗೂ ಇಬ್ಬರು ಸಹಾಯಕಿಯರು ಮಕ್ಕಳನ್ನು ನೋಡಿಕೊಳ್ಳುತ್ತಾರೆ.

‘ಪಾಲಕರಿಂದ ಉತ್ತಮ ಸ್ಪಂದನೆ ಇದೆ. ಶಾಲೆಯ ಮಾದರಿಯಲ್ಲೇ ಇಲ್ಲೂ ಮಕ್ಕಳಿಗೆ ಪಠ್ಯೇತರ ಚಟುವಟಿಕೆ ಇದೆ. ಚಿಕ್ಕ ಮಕ್ಕಳಾದ್ದರಿಂದ ಮನೆಯವರಂತೆಯೇ ನೋಡಿಕೊಳ್ಳುತ್ತೇವೆ. ಒಂದೂವರೆ ವರ್ಷದೊಳಗಿನ ಮಕ್ಕಳಿಗೆ ಸಹಾಯಕರೇ ಊಟ ಮಾಡಿಸುವುದರಿಂದ ಮಕ್ಕಳು ನಮ್ಮನ್ನು ಹಚ್ಚಿಕೊಂಡಿದ್ದಾರೆ’ ಎಂದರು ಹರಿಹರದ ಶಿಶುಪಾಲನಾ ಕೇಂದ್ರದ ಉಸ್ತುವಾರಿ ಹೊತ್ತಿರುವಮೆಬಲ್‌ ಕಿಡ್ಸ್‌ ಪೂರ್ವ ಪ್ರಾಥಮಿಕ ಚಾರಿಟಬಲ್‌ ಟ್ರಸ್ಟ್‌ ಅಧ್ಯಕ್ಷೆ ನಾಗಶ್ರೀ ಕೆ.

‘ಕೂಲಿಗೆ ಹೋಗುವ ತಾಯಂದಿರೇ ಹೆಚ್ಚಾಗಿ ಇಲ್ಲಿ ಮಕ್ಕಳನ್ನು ಬಿಟ್ಟು ಹೋಗುತ್ತಾರೆ. ಬೇಕರಿಯಲ್ಲಿ ಕೆಲಸ ಮಾಡುವವರು, ಮನೆಗೆಲಸದವರು ಸೇರಿ ಸರ್ಕಾರಿ ನೌಕರ ಮಹಿಳೆಯರ ಮಕ್ಕಳೂ ಇಲ್ಲಿಗೆ ಬರುತ್ತಾರೆ. ಕಲಿಕೆಯ ಪೂರಕ ವಾತಾವರಣದಿಂದ ಹೆಚ್ಚು ಮಹಿಳೆಯರು ಈಗ ಮಕ್ಕಳನ್ನು ಬಿಡಲು ಬರುತ್ತಾರೆ’ ಎಂದು ಸಂತಸ ಹಂಚಿಕೊಂಡರು ಅವರು.

‘ಕೆಲಸಕ್ಕೆ ಹೋಗುವ ಕಾರಣ ಮಕ್ಕಳನ್ನು ಎಲ್ಲಿ ಬಿಟ್ಟು ಹೋಗುವುದು ಎಂಬ ಚಿಂತೆ ಮೊದಲು ಇತ್ತು. ಈಗ ಶಿಶುಪಾಲನಾ ಕೇಂದ್ರದಲ್ಲಿ ಬಿಟ್ಟು ಹೋಗುತ್ತಿದ್ದೇನೆ. ಮನೆಯ ವಾತಾವರಣ ಇರುವ ಕಾರಣ ಮಗು ಸುಮ್ಮನಿರುತ್ತದೆ. ಇದರಿಂದ ಅನುಕೂಲವಾಗಿದೆ’ ಎಂದು ಉದ್ಯೋಗಿ ಗೀತಾ ಹೇಳಿದರು.

*

ಜಿಲ್ಲೆಯಲ್ಲಿ 4 ಕೇಂದ್ರಗಳನ್ನು ತೆರೆಯಲಾಗಿದ್ದು, ಉತ್ತಮ ಪ್ರತಿಕ್ರಿಯೆ ಇದೆ. ಎಲ್ಲ ವರ್ಗದ ದುಡಿಯುವ ಮಹಿಳೆಯರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಇದನ್ನು ತೆರೆಯಲಾಗಿದೆ. ಮಕ್ಕಳಿಗೆ ಪೌಷ್ಟಿಕ ಆಹಾರವನ್ನೂ ನೀಡಲಾಗುತ್ತಿದೆ.
–ವಾಸಂತಿ ಉಪ್ಪಾರ್‌, ಉಪ ನಿರ್ದೇಶಕಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT