ಬುಧವಾರ, ಅಕ್ಟೋಬರ್ 23, 2019
27 °C
ದ್ವೇಷ ಅಳಿಸಿ ಪ್ರೀತಿ ಬೆಳೆಸುವುದೇ ವಿಜಯದಶಮಿ: ರಂಭಾಪುರಿ ಶ್ರೀಗಳ

ವೈಭವದ ಅಡ್ಡಪಲ್ಲಕ್ಕಿ ಮಹೋತ್ಸವ

Published:
Updated:
Prajavani

ದಾವಣಗೆರೆ: ಬಾಳೆಹೊನ್ನೂರು ರಂಭಾಪುರಿ ಶ್ರೀಗಳ ಶರನ್ನವರಾತ್ರಿ ದಸರಾ ಮಹೋತ್ಸವದ ಕೊನೇ ದಿನ ಮಂಗಳವಾರ ಭಕ್ತಿ ಭಾವದಿಂದ ಅಡ್ಡಪಲ್ಲಕ್ಕಿ ಮಹೋತ್ಸವ ಜರುಗಿತು.

ರಂಭಾಪುರಿ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಅವರನ್ನು ಅಡ್ಡಪಲ್ಲಕ್ಕಿಯಲ್ಲಿ ಕೂರಿಸಿ ರೇಣುಕ ಮಂದಿರದಿಂದ ಉತ್ಸವ ಆರಂಭಗೊಂಡಿತು. ಪಿ.ಬಿ. ರಸ್ತೆ, ಪ್ರವಾಸಿ ಮಂದಿರ ರಸ್ತೆ, ಜಯದೇವ ವೃತ್ತ, ಅಂಬೇಡ್ಕರ್ ವೃತ್ತ, ಜನತಾಬಜಾರ್ ರಸ್ತೆಯ ಮೂಲಕ ಸರ್ಕಾರಿ ಪ್ರೌಢಶಾಲಾ ಮೈದಾನಕ್ಕೆ ತಲುಪಿತು. ಜನಪದ ವಾದ್ಯ ವೈಭವ ಮೇಳ, ಕಳಸ-ಕನ್ನಡಿ, ಭಕ್ತರ ಜಯಘೋಷಗಳು ಉತ್ಸವಕ್ಕೆ ಮೆರುಗು ನೀಡಿತು.

ಶಮೀಸಿಮೋಲ್ಲಂಘನ: ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ವಿಶೇಷವಾಗಿ ನಿರ್ಮಿಸಲಾಗಿದ್ದ ಶಮೀವೃಕ್ಷದ ಕಟ್ಟೆಯಲ್ಲಿ ಬನ್ನಿ ವೃಕ್ಷಕ್ಕೆ ವಿಧಿವತ್ತಾಗಿ ಪೂಜೆ ನೆರವೇರಿಸಿದ ರಂಭಾಪುರಿ ಸ್ವಾಮೀಜಿ ಶಮೀಸಿಮೋಲ್ಲಂಘನ ನೆರವೇರಿಸಿದರು.

ಪ್ರಶಸ್ತಿ ಪ್ರದಾನ: ಎಡೆಯೂರು ಕ್ಷೇತ್ರದ ಬಾಳೆಹೊನ್ನೂರು ಖಾಸಾ ಶಾಖಾಮಠದ ರೇಣುಕ ಶಿವಾಚಾರ್ಯ ಸ್ವಾಮೀಜಿಗೆ ಶಿವಾದ್ವೈತ ಸುಧಾ ಸಿಂಧು, ಆವರಗೊಳ್ಳ ಪುರವರ್ಗ ಹಿರೇಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿಗೆ ಧರ್ಮ ಸೇವಾ ವಿಭೂಷಣ, ಶ್ರೀಮದ್ವೀರಶೈವ ಸದ್ಬೋಧನಾ ಸಂಸ್ಥೆಯ ಜಿಲ್ಲಾ ಘಟಕದ ಅಧ್ಯಕ್ಷ ದೇವರಮನೆ ಶಿವಕುಮಾರ್ ಅವರಿಗೆ ಸಂಸ್ಕೃತಿ ಸಂವರ್ಧನ ರತ್ನ, ಲೆಕ್ಕಪರಿಶೋಧಕ ಅಥಣಿ ವೀರಣ್ಣಗೆ ಧರ್ಮ ಸಮನ್ವಯ ಚಿಂತಕ ಹಾಗೂರೇಣುಕ ಸಾಂಸ್ಕೃತಿಕ ಸಂಘಕ್ಕೆ ಆಚಾರ್ಯ ಸೇವಾನಿಷ್ಠ ಸಂಕುಲ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.

ರಂಭಾಪುರಿ ಶ್ರೀಗಳು ಮಾತನಾಡಿ, ‘ಬೇಕು-ಬೇಡಗಳ ದ್ವಂದ್ವಗಳನ್ನು ಮೀರಿ ಮುಕ್ತ ನೆಲೆಯಲ್ಲಿ ಯುಕ್ತ ಜೀವನ ವಿಧಾನವನ್ನು ರೂಢಿಸಿಕೊಳ್ಳುವುದು. ದ್ವೇಷ ಅಳಿಸಿ ಪ್ರೀತಿ ಬೆಳೆಸುವುದೇ ವಿಜಯದಶಮಿ ಪರ್ವಕಾಲದ ವಿಶೇಷ’ ಎಂದು ಅಭಿಪ್ರಾಯಪಟ್ಟರು.

ಇಂದು ಎಲ್ಲೆಡೆ ವ್ಯಷ್ಟಿಯೇ ವಿಜೃಂಭಿಸುತ್ತಿದೆ. ವ್ಯಷ್ಟಿಯ ತೀಕ್ಷಣವಾದ ವಿದ್ಯಮಾನಗಳು ಮನುಕುಲದ ಬದುಕಿನ ಪ್ರೀತಿಯನ್ನೇ ಹೊಸಕಿ ಹಾಕಿವೆ. ಪ್ರೀತಿಯನ್ನು ಕಳೆದುಕೊಂಡ ಬದುಕು ಯಾರಿಗೂ ಅರ್ಥವಾಗುವದಿಲ್ಲ. ವಿಜಯದಶಮಿಯ ಪರ್ವಕಾಲದ ಕ್ಷಣಗಳು ವ್ಯಷ್ಟಿಯನ್ನು ಹೊರನೂಕಿ ಎಲ್ಲೆಡೆ ಸಮಷ್ಟಿಯೇ ಪಲ್ಲವಿಸಿ ಹೆಮ್ಮರವಾಗಿ ಬೆಳೆಯಲು ಮಾರ್ಗದರ್ಶನ ಮಾಡುತ್ತವೆ ಎಂದರು.

ದೇವರಮನೆ ಶಿವಕುಮಾರ್ ಸ್ವಾಗತಿಸಿದರು. ಪೀಠದ ಆಡಳಿತಾಧಿಕಾರಿ ಎಸ್. ಬಿ. ಹಿರೇಮಠ, ಹಲಗೂರು, ಕುಪ್ಪೂರು, ಮಳಲಿ, ಸಂಗೊಳ್ಳಿ, ಸೂಡಿ, ಚನ್ನಗಿರಿ, ಹರಪನಹಳ್ಳಿ, ಬೇರುಗಂಡಿ, ಕಪಿಲಾಧಾರ, ಬೀಳಕಿ, ಕಾರ್ಜುವಳ್ಳಿ, ಮಾದಿಹಳ್ಳಿ, ತಾವರೆಕೆರೆ, ಉಕ್ಕಡಗಾತ್ರಿ, ಪುಣ್ಯಕೋಟಿಮಠ ಒಳಗೊಂಡಂತೆ ಅನೇಕ ಮಠಗಳ ಶ್ರೀಗಳು ಪಾಲಗೊಂಡಿದ್ದರು. ವಾರ್ತಾ ಸಂಯೋಜನಾಧಿಕಾರಿ ಸಿ.ಎಚ್. ಬಾಳನಗೌಡ್ರ, ವಾರ್ತಾ ಕಾರ್ಯದರ್ಶಿ ಗುರುಮೂರ್ತಿ ಯರಗಂಬಳಿಮಠ ಪ್ರಶಸ್ತಿ ವಾಚನ ಮಾಡಿದರು. ಸವಣೂರಿನ ಡಾ.ಗುರುಪಾದಯ್ಯ ಸಾಲಿಮಠ ಮತ್ತು ಶಿವಮೊಗ್ಗದ ಶಾಂತಾ ಆನಂದ ನಿರೂಪಿಸಿದರು.

ಬೇಲೂರಿನಲ್ಲಿ ಮುಂದಿನ ದಸರಾ

ರಂಭಾಪುರಿ ಪೀಠದ 2020ನೇ ಸಾಲಿನ  ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನವು ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕು ಕೇಂದ್ರದಲ್ಲಿ ಜರುಗಲಿದೆ.

ಬೇಲೂರಿನ ಶಾಸಕ ಕೆ. ಎಸ್. ಲಿಂಗೇಶ್, ಹಾಸನ ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಬಿ. ಪಿ. ಐಸಾಮಿಗೌಡ್ರ ಹಾಗೂ ತಾಲ್ಲೂಕು ವೀರಶೈವ ಸಮಾಜದ ಅಧ್ಯಕ್ಷ ಕೊರಟಗೆರೆ ಪ್ರಕಾಶ ಒಳಗೊಂಡಂತೆ 300ಕ್ಕೂ ಹೆಚ್ಚು ಮಂದಿ ಈ ಸಮ್ಮೇಳನಕ್ಕೆ ಆಹ್ವಾನ ನೀಡಿದರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)