ಸೋಮವಾರ, ಮೇ 23, 2022
30 °C

ಕೋವಿಡ್ ಲಸಿಕೆ ಹಾಕಿಸಿಕೊಳ್ಳದಿದ್ದರೆ ಸರ್ಕಾರಿ ಸೌಲಭ್ಯ ಕಡಿತ : ಡಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕೋವಿಡ್ ಲಸಿಕೆಯನ್ನು ಇದುವರೆಗೂ ಹಾಕಿಸಿಕೊಳ್ಳದ ಆರೋಗ್ಯ ಕ್ಷೇತ್ರ ಹಾಗೂ ಮುಂಚೂಣಿ ಕ್ಷೇತ್ರದ ಫಲಾನುಭವಿಗಳು ಕೂಡಲೇ ಸಂಬಂಧಪಟ್ಟ ಲಸಿಕಾ ಕೇಂದ್ರಕ್ಕೆ ತೆರಳಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳಬೇಕು. ತಪ್ಪಿದಲ್ಲಿ ಅಂತಹವರಿಗೆ ಸರ್ಕಾರದಿಂದ ಯಾವುದೇ ಸೌಲಭ್ಯ ನೀಡಲಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಎಚ್ಚರಿಕೆ ನೀಡಿದ್ದಾರೆ.

ಕೋವಿಡ್ ಲಸಿಕೆ ಕಾರ್ಯಕ್ರಮದ ಪ್ರಗತಿ ಕುರಿತಂತೆ ಬುಧವಾರ ಆರೋಗ್ಯ ಇಲಾಖೆಯ ಆಯುಕ್ತರು ನಡೆಸಿದ ವಿಡಿಯೊ ಕಾನ್ಫರೆನ್ಸ್ ಬಳಿಕ ಜಿಲ್ಲಾಧಿಕಾರಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿದರು.

ಆರೋಗ್ಯ ಇಲಾಖೆ ಆಯುಕ್ತ ಡಾ. ತ್ರಿಲೋಕಚಂದ್ರ ಜಿಲ್ಲೆಯ ಪ್ರಗತಿ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಮೊದಲ ಹಂತದಲ್ಲಿ ಆರೋಗ್ಯ ಕ್ಷೇತ್ರದವರಿಗೆ ನೀಡಲಾದ ಕೋವಿಡ್ ಲಸಿಕೆ ಕಾರ್ಯಕ್ರಮದಲ್ಲಿ ಜಿಲ್ಲೆಯಲ್ಲಿ 18,920 ಫಲಾನುಭವಿಗಳಿಗೆ ಲಸಿಕೆ ನೀಡಬೇಕಿತ್ತು. 9,979 ಜನರು ಲಸಿಕೆ ಹಾಕಿಸಿಕೊಂಡಿದ್ದಾರೆ. ಶೇ 52.7 ಸಾಧನೆಯಾಗಿದೆ. ಎರಡನೇ ಹಂತದಲ್ಲಿ ಪೊಲೀಸ್, ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ, ನಗರಾಭಿವೃದ್ಧಿ ಇಲಾಖೆ ಅಧಿಕಾರಿ, ಸಿಬ್ಬಂದಿಗಳನ್ನು ಮುಂಚೂಣಿ ಕಾರ್ಯಕರ್ತರು ಎಂದು ಪರಿಗಣಿಸಿ ಕೋವಿಡ್ ಲಸಿಕೆ ನೀಡಲು ಸರ್ಕಾರ ನಿರ್ಧರಿಸಿತ್ತು. ಪೊಲೀಸ್ ಇಲಾಖೆಯ 2,076 ಮಂದಿಯಲ್ಲಿ 629 ಮಂದಿ ಮಾತ್ರ ಲಸಿಕೆ ಪಡೆದಿದ್ದಾರೆ. ಕಂದಾಯ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ 3,413 ಜನರ ಪೈಕಿ 408, ನಗರಾಭಿವೃದ್ಧಿ ಇಲಾಖೆಯ 1,644 ಮಂದಿಯಲ್ಲಿ 350 ಜನ ಮಾತ್ರ ಪಡೆದಿದ್ದಾರೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅಸಮಾಧಾನ ವ್ಯಕ್ತಪಡಿಸಿದರು.

ಸಂಬಂಧಪಟ್ಟ ಲಸಿಕಾ ಕೇಂದ್ರದಲ್ಲಿ ಕೂಡಲೇ ಲಸಿಕೆ ಪಡೆದುಕೊಳ್ಳಬೇಕು. ಕೋವಿಡ್ ಲಸಿಕೆ ಪಡೆಯದೇ ಇರುವ ಫಲಾನುಭವಿಗಳು ಸೋಂಕಿಗೆ ಒಳಗಾದಲ್ಲಿ ಸ್ವಂತ ಖರ್ಚಿನಿಂದಲೇ ಚಿಕಿತ್ಸಾ ವೆಚ್ಚ ಭರಿಸಬೇಕಾಗುತ್ತದೆ ಎಂದರು.

ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ. ಮೀನಾಕ್ಷಿ ‘ಯಾವುದೇ ಎಸ್‍ಎಂಎಸ್‍ಗೆ ಕಾಯಬಾರದು. ಯಾವುದಾದರೂ ಒಂದು ಗುರುತಿನ ಚೀಟಿ ತೆಗೆದುಕೊಂಡು ಹೋಗಿ ಲಸಿಕೆ ಪಡೆಯಬಹುದು. ದಾವಣಗೆರೆಯ ಚಿಗಟೇರಿ ಜಿಲ್ಲಾ ಆಸ್ಪತ್ರೆ, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ, ದಾವಣಗೆರೆ ಹಾಗೂ ಹರಿಹರ, ಜಗಳೂರು, ಹೊನ್ನಾಳಿ, ಚನ್ನಗಿರಿ ತಾಲ್ಲೂಕು ಆಸ್ಪತ್ರೆಗಳನ್ನು ಕೋವಿಡ್-19 ಲಸಿಕಾ ಕೇಂದ್ರಗಳು ಎಂದು ನಿಗದಿಪಡಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ವಿಡಿಯೊ ಸಂವಾದದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ಅವರೂ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು