ಮಂಗಳವಾರ, ನವೆಂಬರ್ 12, 2019
20 °C
ದಾವಣಗೆರೆ ತಾಲ್ಲೂಕು ಪಿಂಚಣಿ ಅದಾಲತ್

ಫಲಾನುಭವಿಗಳಿಗೆ ಸರ್ಕಾರವೇ ಸೌಲಭ್ಯ ತಲುಪಿಸುತ್ತೆ: ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ

Published:
Updated:
Prajavani

ದಾವಣಗೆರೆ: ಸರ್ಕಾರದ ವಿವಿಧ ಯೋಜನೆಗಳಡಿ ಸೌಲಭ್ಯ ಪಡೆಯಲು ಸಾರ್ವಜನಿಕರು ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದು ಬೇಡ. ಬದಲಾಗಿ ಅರ್ಹ ಫಲಾನುಭವಿಗಳಿಗೆ ನಾವೇ ಆ ಸೌಲಭ್ಯವನ್ನು ತಲುಪಿಸುತ್ತೇವೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.

ಸಾಮಾಜಿಕ ಭದ್ರತಾ ಯೋಜನೆಯಡಿ ವಿವಿಧ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಉದ್ದೇಶದಿಂದ ತಾಲ್ಲೂಕು ಕಚೇರಿಯಲ್ಲಿ ಮಂಗಳವಾರ ನಡೆದ ಪಿಂಚಣಿ ಅದಾಲತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಗ್ರಾಮ ಲೆಕ್ಕಿಗರು ಒಂದೊಂದು ಗ್ರಾಮ ಆಯ್ಕೆ ಮಾಡಿಕೊಂಡು ಆ ಗ್ರಾಮದಲ್ಲಿ ಸಾಮಾಜಿಕ ಭದ್ರತೆ ಯೋಜನೆಯಡಿ ಅರ್ಹ ಫಲಾನುಭವಿಗಳ ಕುರಿತು ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸಿ ಅರ್ಜಿ ಪಡೆಯುವಂತೆ ಕಳೆದ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ತಿಳಿಸಲಾಗಿತ್ತು. ಅದರಂತೆ ಮೊದಲ ಹಂತದಲ್ಲಿ ತಾಲ್ಲೂಕಿನಲ್ಲಿ 53 ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು 684 ಅರ್ಜಿಗಳನ್ನು ಸ್ವೀಕರಿಸಿದ್ದು, 595 ಫಲಾಭವಿಗಳಿಗೆ ವಿತರಿಸಲಾಗುವುದು’ ಎಂದರು.

‘ಸರ್ಕಾರಿ ಸೌಲಭ್ಯಗಳು ನಿಮ್ಮ ಹಕ್ಕು. ಇವುಗಳನ್ನು ಪಡೆಯಲು ನೀವು ಸರ್ಕಾರಿ ಕಚೇರಿಗಳಿಗೆ ಅಲೆದಾಡಿ, ತೊಂದರೆಗೀಡುಗುವುದು ಬೇಡ. ಸರ್ಕಾರಿ ಸೌಲಭ್ಯಗಳು ಸಾರ್ವಜನಿಕರಿಗೆ ಸುಗಮವಾಗಿ ಸಿಗಬೇಕು ಎಂದು ಈ ಅದಾಲತ್ ನಡೆಸಲಾಗುತ್ತಿದೆ. ಡಿಸೆಂಬರ್ 31ರೊಳಗೆ ತಾಲ್ಲೂಕಿನ ಎಲ್ಲಾ ಫಲಾನುಭವಿಗಳಿಗೆ ಸೌಲಭ್ಯ ತಲುಪಿಸುವ ಗುರಿ ನಿಗದಿಪಡಿಸಿದ್ದು, ಗ್ರಾಮ ಸೇವಕರು, ಗ್ರಾಮ ಲೆಕ್ಕಿಗರು, ಕಂದಾಯ ನಿರೀಕ್ಷಕರು, ಶಿರಸ್ತೇದಾರರು, ತಹಶೀಲ್ದಾರು ತಂಡದಂತೆ ಕೆಲಸ ನಿರ್ವಹಿಸಬೇಕು’ ಎಂದು ಸೂಚಿಸಿದರು.

ತಹಶೀಲ್ದಾರ್ ಸಂತೋಷ್‍ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ‘ಜಿಲ್ಲಾಧಿಕಾರಿ ಓಟಿಸಿ ಆಧಾರದಲ್ಲಿ ಫಲಾನುಭವಿ ಗುರುತಿಸಲು ನೀಡಿದ್ದ ಸಲಹೆ ಉತ್ತಮವಾಗಿದ್ದು, ಎರಡನೇ ಹಂತದಲ್ಲಿ ಬುಧವಾರದಿಂದಲೇ 53 ಗ್ರಾಮಗಳನ್ನು ಆಯ್ಕೆ ಮಾಡಿ ಫಲಾನುಭವಿಗಳ ಸಮೀಕ್ಷೆ ನಡೆಸಲಾಗುವುದು. ನವೆಂಬರ್ ಅಂತ್ಯದೊಳಗೇ ನಾವು  ತಲುಪುತ್ತೇವೆ’ ಎಂದು ಭರವಸೆ ನೀಡಿದರು.

25 ಫಲಾನುಭವಿಗಳಿಗೆ ವಿಧವಾ ವೇತನ, ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ, ಅಂಗವಿಕಲರ ವೇತನ ಸೇರಿ ವಿವಿಧ ಸೌಲಭ್ಯದ ಪತ್ರಗಳನ್ನು ಜಿಲ್ಲಾಧಿಕಾರಿಗಳು ವಿತರಿಸಿದರು. ಹಿರಿಯ ಫಲಾನುಭವಿಗಳೊಂದಿಗೆ ಸಾಮಾನ್ಯರಂತೆ ಬೆರೆತು ಸೌಲಭ್ಯಗಳ ಮಾಹಿತಿ ನೀಡಿದರು. ಅಲ್ಲದೇ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದ ಸಾರ್ವಜನಿಕರಿಂದ ಕುಂದುಕೊರತೆ ಅಹವಾಲುಗಳನ್ನು ಸ್ವೀಕರಿಸಿದರು.

ಸಭೆಯಲ್ಲಿ ತಹಶೀಲ್ದಾರ್ ಗ್ರೇಡ್-2 ದೇವರಾಜ್ ಇದ್ದರು. ಶಿರಸ್ತೇದಾರ್ ರವಿ ಸ್ವಾಗತಿಸಿದರು, ಶಿರಸ್ತೇದಾರ್ ಜಗನ್ನಾಥ್ ವಂದಿಸಿದರು.

ಪ್ರತಿಕ್ರಿಯಿಸಿ (+)