ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳು ಜನಸ್ನೇಹಿ ಆಡಳಿತ ನೀಡಲಿ

ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ
Last Updated 22 ಏಪ್ರಿಲ್ 2022, 5:36 IST
ಅಕ್ಷರ ಗಾತ್ರ

ದಾವಣಗರೆ: ಸರ್ಕಾರಿ ನೌಕರರು ಇಲಾಖೆಗಳಿಂದ ಸಿಗುವ ಸೌಲಭ್ಯವನ್ನು ತೊಂದರೆ, ಅಡೆತಡೆಗಳಿಲ್ಲದೆ ಜನರಿಗೆ ದೊರಕಿಸುವಂತೆ ಕಾರ್ಯ ನಿರ್ವಹಿಸಬೇಕು. ಈ ಮೂಲಕ ಜನಸ್ನೇಹಿ ಆಡಳಿತ ನೀಡಲು ಎಲ್ಲ ಮಟ್ಟದ ಸರ್ಕಾರಿ ನೌಕರರು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.

ಗುರುವಾರ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ರಾಜ್ಯ ಸರ್ಕಾರಿ ನೌಕರರ
ಸಂಘದ ಆಶ್ರಯದಲ್ಲಿ ಆಯೋಜಿಸಲಾಗಿದ್ದ ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಹಾಗೂ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ನಮ್ಮ ಕೆಲಸವನ್ನು ಸಂತೋಷದಿಂದ ಮಾಡಿದಾಗ ಅದು ತೃಪ್ತಿ ನೀಡುತ್ತದೆ. ಕೇವಲ ಕರ್ತವ್ಯವೆಂದು ಮಾಡತೊಡಗಿದಾಗ ಬೇಸರ ಉಂಟುಮಾಡುತ್ತದೆ.

ಸರ್ಕಾರಿ ಕಚೇರಿಗಳಿಗೆ ಬರುವ ಜನರೊಂದಿಗೆ ಅಧಿಕಾರಿಗಳು ಸ್ಪಂದಿಸಿ ಉತ್ತಮ ಸಂವಹನ ನಡೆಸಬೇಕು. ಕಚೇರಿ ಬಿಟ್ಟು ಹೋದರೂ ಆ ಸ್ಥಳದಲ್ಲಿ ನಿಮ್ಮದೇ ಛಾಪು ಮೂಡಿರಬೇಕು. ಇತಿಹಾಸದ ಪುಟಗಳಲ್ಲಿ ಗೆದ್ದವರು
ಮತ್ತು ಸೋತವರು ಮಾತ್ರ ದಾಖಲಾಗಿದ್ದಾರೆ. ಆದರೆ ನೋಡಿಕೊಂಡು ನಕ್ಕವರು, ಆಡಿಕೊಂಡು ಮಾತನಾಡಿದವರು ಯಾರು ಕೂಡ ದಾಖಲಾಗಿಲ್ಲ. ಹಾಗಾಗಿ ನಾವುಗಳು ಕೂಡ ಚರಿತ್ರೆಯಲ್ಲಿ ಒಳ್ಳೆಯ ಹೆಸರಿನೊಂದಿಗೆ ದಾಖಲಾಗುವಂತಹ ಮಹತ್ಕಾರ್ಯಗಳನ್ನು ಮಾಡಬೇಕು’ ಎಂದು ಸಲಹೆ ನೀಡಿದರು.

ಉತ್ತಮ ಪುಸ್ತಕಗಳನ್ನು ಓದಿ ದೊಡ್ಡ ದೊಡ್ಡ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಉನ್ನತ ಹುದ್ದೆಯನ್ನು ಪಡೆದುಕೊಂಡ ನಂತರದಲ್ಲಿ ಎಲ್ಲವನ್ನು ಮರೆತು ಬೀಗುವಂತಾಗಬಾರದು’ ಎಂದು ಕಿವಿಮಾತು ಹೇಳಿದರು.

ಡಾ.ಮಲ್ಲಿಕಾರ್ಜುನ ಕಲಮರಹಳ್ಳಿ ಜನಸ್ನೇಹಿ ಆಡಳಿತದ ಕುರಿತು ಉಪನ್ಯಾಸ ನೀಡಿ, ‘ಕೋವಿಡ್ ಸಂದರ್ಭದಲ್ಲಿ ಸರ್ಕಾರಿ ನೌಕರರು ಸಲ್ಲಿಸಿದ ಸೇವೆ ಗಣನೀಯವಾದದ್ದು. ಕೊರೊನಾ ಪರಿಸ್ಥಿತಿಯಲ್ಲಿ ಸರ್ಕಾರಿ ನೌಕರರು ತುಸು ನೆಮ್ಮದಿಯಿಂದ ಬದುಕಲು ಭಾರತದ ಸಂವಿಧಾನ ಒದಗಿಸಿಕೊಟ್ಟ ಸೇವಾ ಭದ್ರತೆಯೇ ಕಾರಣ. ಸರ್ಕಾರಿ ನೌಕರರು ನಡತೆ ನಿಯಮಗಳಲ್ಲಿನ 38 ನಿಯಮಗಳನ್ನು ಅಳವಡಿಸಿಕೊಂಡರೆ ಸಾಕು ಜನಸ್ನೇಹಿ ಆಡಳಿತ ನೀಡಲು ಸಾಧ್ಯ. ಆಡಳಿತ ಮತ್ತು ಕುಟುಂಬ ಎರಡನ್ನೂ ಸಮಾನವಾಗಿ ನಿರ್ವಹಣೆ ಮಾಡಬೇಕು. ಆಡಳಿತದಲ್ಲಿ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಕುತೂಹಲ ನೌಕರರಿಗೆ ಇರಬೇಕು’ ಎಂದು ಹೇಳಿದರು.

ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಬಿ. ಫಾಲಾಕ್ಷಿ ಪ್ರಾಸ್ತಾವಿಕವಾಗಿ ಮಾತನಾಡಿ, ‘ಏ. 21 ರಾಜ್ಯ ಸರ್ಕಾರಿ ನೌಕರರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದ್ದು, ಕಳೆದ ವರ್ಷವೇ ಸಮಾರಂಭ ಆಯೋಜಿಸಬೇಕಾಗಿತ್ತು. ಆದರೆ ಕೋವಿಡ್ ಕಾರಣಕ್ಕಾಗಿ ಆಚರಿಸಲು ಸಾಧ್ಯವಾಗಲಿಲ್ಲ. ಅತ್ಯುತ್ತಮ ಸೇವೆ ಸಲ್ಲಿಸಿದ ಅಧಿಕಾರಿ, ಸಿಬ್ಬಂದಿಗೆ 2020-21 ಹಾಗೂ 21-22 ನೇ ಸಾಲಿಗೆ ಒಟ್ಟು 18 ಜನ ಅಧಿಕಾರಿ, ಸಿಬ್ಬಂದಿಗೆ ಸರ್ವೋತ್ತಮ ಸೇವಾ ಪ್ರಶಸ್ತಿಯನ್ನು ಈ ವರ್ಷ ನೀಡಲಾಗುತ್ತಿದೆ’ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ಮೇಯರ್ ಜಯಮ್ಮ ಆರ್. ಗೋಪಿನಾಯ್ಕ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎ. ಚನ್ನಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎ.ಆರ್ ಉಜ್ಜನಪ್ಪ ಅವರೂ ಇದ್ದರು.

ಸರ್ವೋತ್ತಮ ಪ್ರಶಸ್ತಿ ಪುರಸ್ಕೃತರು

ಕುಂಬಳೂರು ಸರ್ಕಾರಿ ಆಯುರ್ವೇದ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಚಂದ್ರಕಾಂತ್ ಎಸ್.ನಾಗಸಮುದ್ರ, ದಾವಣಗೆರೆ ಉತ್ತರ ಕ್ಷೇತ್ರ ಶಿಕ್ಷಣಾಧಿಕಾರಿ ಜಿ. ಕೊಟ್ರೇಶ್, ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಉಮೇಶ್ ಡಿ., ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಟಿ ಪ್ರಕಾಶ್, ಮಲೇಬೆನ್ನೂರು ಉಪ ತಹಶೀಲ್ದಾರ್ ಆರ್.ರವಿ, ಕೈದಾಳೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿದ್ಯಾವತಿ ಐ.ಸಿ., ಜಿಲ್ಲಾ ಸರ್ವೇಕ್ಷಣಾ ಘಟಕದ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಆರ್. ಲೋಕೇಶ್, ಚಿಗಟೇರಿ ಜಿಲ್ಲಾ ಆಸ್ಪತ್ರೆ ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ಸುಮಿತ್ರ ಎನ್.ಹೆಗಡೆ ಇವರುಗಳಿಗೆ 2020-21 ನೇ ಸಾಲಿನ ಸರ್ವೋತ್ತಮ ಸೇವಾ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

2021-22 ನೇ ಸಾಲಿನ ಸರ್ವೋತ್ತಮ ಸೇವಾ ಪ್ರಶಸ್ತಿಯನ್ನು ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ನಟರಾಜ ಕಕ್ಕುಪ್ಪಿ, ಚಿಗಟೇರಿ ಜಿಲ್ಲಾ ಆಸ್ಪತ್ರೆ ಶಸ್ತ್ರ ಚಿಕಿತ್ಸಾ ತಜ್ಞ ಡಾ.ಶಶಿಧರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ವಿಜಯ್‍ಕುಮಾರ್ ಕೆ.ಎಚ್., ಭೂದಾಖಲೆಗಳ ಕಚೇರಿಯ ಸಹಾಯಕ ನಿರ್ದೇಶಕ ಲೋಹಿತ್ ಟಿ.ಕೆ., ಜಿಲ್ಲಾಧಿಕಾರಿಗಳ ಕಚೇರಿ ದ್ವಿತೀಯ ದರ್ಜೆ ಸಹಾಯಕ ಎಂ. ಪ್ರಭಾಕರ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಚ್. ಉಮಾಪತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಶೀಘ್ರಲಿಪಿಗಾರರಾದ ರೇಖಾ ಎನ್., ಪ್ರಥಮ ದರ್ಜೆ ಸಹಾಯಕ ಕೇಶವಮೂರ್ತಿ ಎನ್., ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಶೀಘ್ರಲಿಪಿಗಾರರಾದ ಲಕ್ಷ್ಮೀದೇವಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಡಿ.ದರ್ಜೆ ನೌಕರ ಬಸವರಾಜಪ್ಪ ಬಿ.ಎಸ್. ಅವರಿಗೆ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT