ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪದವೀಧರ ಕ್ಷೇತ್ರ ಚುನಾವಣೆ: ಶೇ 62.55 ಮತದಾನ

ನಿಧಾನವಾಗಿ ಕಳೆಗಟ್ಟಿದ ಪ್ರಕ್ರಿಯೆ * ಗೊಂದಲಗಳಿಲ್ಲದೇ ಮುಗಿದ ಚುನಾವಣೆ
Last Updated 29 ಅಕ್ಟೋಬರ್ 2020, 4:11 IST
ಅಕ್ಷರ ಗಾತ್ರ

ದಾವಣಗೆರೆ: ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಮತ ಚಲಾಯಿಸಲು ಬಿಸಿಲೇರಿದ ಮೇಲೆ ಪದವೀಧರರು ಹೊರಗೆ ಬರಲು ಮನಸ್ಸು ಮಾಡಿದ್ದರಿಂದ ಬೆಳಿಗ್ಗೆ ಕಂಡುಬಂದ ನೀರಸ ಪ್ರತಿಕ್ರಿಯೆಯನ್ನು ಮೀರಿ ಶೇ 62.55ರಷ್ಟು ಮತದಾನವಾಗಿದೆ.

ಬೆಳಿಗ್ಗೆ 8 ಗಂಟೆಗೆ ಮತದಾನ ಆರಂಭಗೊಂಡಿತ್ತು. 10 ಗಂಟೆಯಾದರೂ ಶೇ 5 ದಾಟಿರಲಿಲ್ಲ. ಆದರೆ ಬಳಿಕ ಒಂದಷ್ಟು ಉತ್ತಮ ಪ್ರತಿಕ್ರಿಯೆ ಕಂಡುಬಂತು. ಮೊದಲ ನಾಲ್ಕು ಗಂಟೆಗಳಲ್ಲಿ ಶೇ 19.54ರಷ್ಟು ಮಾತ್ರ ಮತದಾನವಾಗಿದ್ದರೆ ಕೊನೆಯ ನಾಲ್ಕು ಗಂಟೆಗಳಲ್ಲಿ 43.01ರಷ್ಟು ಮತ ಚಲಾವಣೆಯಾಯಿತು.

ಮಲೇಬೆನ್ನೂರಿನ ಎರಡನೇ ಬೂತ್‌ನಲ್ಲಿ ಅತಿ ಹೆಚ್ಚು ಅಂದರೆ ಶೇ 85.64 ಮಂದಿ ಹಕ್ಕು ಚಲಾಯಿಸಿದ್ದಾರೆ. ಜಗಳೂರು ತಾಲ್ಲೂಕಿನ ಸೊಕ್ಕೆ (ಶೇ 83. 93) ಮಲೇಬೆನ್ನೂರು ಒಂದನೇ ಬೂತ್‌ (ಶೇ 83.67), ಜಗಳೂರು (83.59) ಇವು ಶೇ 80 ಮತದಾನ ದಾಟಿದ ಇತರ ಬೂತ್‌ಗಳಾಗಿವೆ.

ದಾವಣಗೆರೆ ಡಯೆಟ್‌ ಕಾಲೇಜಿನಲ್ಲಿದ್ದ 13ನೇ ಬೂತ್‌ನಲ್ಲಿ ಅತಿ ಕನಿಷ್ಠ (ಶೇ 42.56) ಮಂದಿ ಮತ ಚಲಾಯಿಸಿದ್ದಾರೆ. ಜಗಳೂರು ತಾಲ್ಲೂಕಿನ ಬಿಳಿಚೋಡು (ಶೇ 46.35), ಮೋತಿವೀರಪ್ಪ ಕಾಲೇಜಿನ 1ನೇ ಕೊಠಡಿಯಲ್ಲಿದ್ದ 15ನೇ ಬೂತ್‌ (ಶೇ 47.50), ಡಯಟ್‌ನಲ್ಲಿದ್ದ 14ನೇ ಬೂತ್‌ (ಶೇ 48.84) ಶೇ 50ಕ್ಕಿಂತ ಕಡಿಮೆ ಮತದಾನ ಕಂಡ ಬೂತ್‌ಗಳಾಗಿವೆ.

ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 12,877 ಮತದಾರರಿದ್ದು, 7,037 ಮಂದಿ (ಶೇ 54.64) ಮತ ಚಲಾಯಿಸಿದ್ದಾರೆ. ದಾವಣಗೆರೆ ಗ್ರಾಮಾಂತರದಲ್ಲಿ ಇದ್ದ 2076 ಮತದಾರರಲ್ಲಿ 1,528 ಮಂದಿ (ಶೇ 73.60) ಹಕ್ಕು ಚಲಾಯಿಸಿದ್ದಾರೆ. ಹರಿಹರ ತಾಲ್ಲೂಕಿನ 4,074 ಮಂದಿಯಲ್ಲಿ 3,152 ಮಂದಿ (77.39) ಮತದಾನ ಮಾಡಿದ್ದಾರೆ. ಜಗಳೂರು ತಾಲ್ಲೂಕಿನ 1,944 ಮಂದಿಯಲ್ಲಿ 1,394 ಮಂದಿ (ಶೇ 71.70) ವೋಟ್‌ ಮಾಡಿದ್ದಾರೆ.

ಪಕ್ಷಗಳ ಮೇಲಾಟ: ದಾವಣಗೆರೆಯ ಹೈಸ್ಕೂಲ್ ಫೀಲ್ಡ್‌ನಲ್ಲಿ ಮಾತ್ರ ಜನಜಂಗುಳಿ ನೆರೆದಿತ್ತು. ಡಯೆಟ್‌ ಬಿಲ್ಡಿಂಗ್‌ನಲ್ಲಿ ಮೂರು, ಹೈಸ್ಕೂಲ್‌ನಲ್ಲಿ ನಾಲ್ಕು ಹೀಗೆ 7 ಬೂತ್‌ಗಳು ಒಂದೇ ಕಡೆ ಅಕ್ಕಪಕ್ಕದಲ್ಲಿ ಇದ್ದಿದ್ದು ಜನಸಂದಣಿಗೆ ಕಾರಣವಾಗಿತ್ತು. ಪಟಾಕಿ ಅಂಗಡಿಗಳ ತರಹ ಮೈದಾನದಲ್ಲಿ ಸಾಲು ಸಾಲಾಗಿ ವಿವಿಧ ಪಕ್ಷಗಳ ಮತ್ತು ಪಕ್ಷೇತರ ಅಭ್ಯರ್ಥಿಗಳ ಪರ ಶಾಮಿಯಾನ ಹಾಕಿ ಕುಳಿತಿದ್ದರು. ಬ್ಯಾರಿಕೇಡ್‌ ದಾಟಿ ಮತ ಚಲಾಯಿಸಲು ಬರುವವರಿಗೆ ‘ಕಾಂಗ್ರೆಸ್‌ಗೆ ಹಾಕಿ’, ‘ಬಿಜೆಪಿಗೆ ಹಾಕಿ’ ಎಂದು ಎರಡೂ ಪಕ್ಷಗಳ ಕಾರ್ಯಕರ್ತರು ಒಂದೇ ಸಮನೆ ಹೇಳ ತೊಡಗಿದರು. ಯಾರ ಧ್ವನಿ ಹೆಚ್ಚು ಎಂಬ ಸ್ಪರ್ಧೆಗೆ ಇಳಿದಂತೆ ಅಕ್ಕಪಕ್ಕದಲ್ಲಿ ನಿಂತುಕೊಂಡು ಮತದಾರರನ್ನು ಒಲಿಸಿಕೊಳ್ಳಲು ಪ್ರಯತ್ನಿಸುತ್ತಿದ್ದುದು ಗೊಂದಲಕ್ಕೆ ಕಾರಣವಾಯಿತು. ಒಂದು ಹಂತದಲ್ಲಿ ಇವರ ಮೇಲಾಟದಲ್ಲಿ ಮತದಾರರಿಗೆ ದಾಟಲು ಜಾಗವೇ ಇಲ್ಲದಂತಾಗಿತ್ತು. ಕೊರೊನಾ ಭೀತಿಯಾಗಲಿ, ಪರಸ್ಪರ ಅಂತರವಾಗಲಿ ಕಂಡುಬರಲಿಲ್ಲ.

ಮತದಾರರು ಬರಲು ಜಾಗ ಬಿಡಿಸಲು ಪೊಲೀಸರು ಪ್ರಯತ್ನಿಸಿದಾಗ ಮೊದಲು ಎರಡೂ ಕಡೆಯವರು ಹಿಂದಕ್ಕೆ ಸರಿಯಲು ತಯಾರಾಗದೇ ಪರಸ್ಪರ ದೂಷಣೆಗೆ ತೊಡಗಿದರು. ಎರಡೂ ಪಕ್ಷಗಳ ಬೆಂಬಲಿಗರ ನಡುವೆ ವಾಗ್ವಾದ ಜೋರಾಗಿ ನಡೆಯಿತು. ಕೂಡಲೇ ಹೆಚ್ಚಿನ ಸಂಖ್ಯೆಯಲ್ಲಿ ಬಂದ ಪೊಲೀಸರು ಎರಡೂ ಪಕ್ಷಗಳವರನ್ನು ಹಿಂದಕ್ಕೆ ಕಳುಹಿಸಿದರಲ್ಲದೇ ಯಾರೂ ಈ ಗೆರೆ ಮೀರಿ ಬರಬಾರದು ಎಂದು ಎರಡೂ ಕಡೆಗಳಲ್ಲಿ ಬ್ಯಾರಿಕೇಡ್‌ ಅಳವಡಿಸಿ ಗೊಂದಲ ತಿಳಿಗೊಳಿಸಿದರು.

ಹಲವರ ಭೇಟಿ: ಸಂಸದ ಜಿ.ಎಂ. ಸಿದ್ದೇಶ್ವರ, ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ, ಶಾಸಕರಾದ ಎಸ್‌.ಎ. ರವೀಂದ್ರನಾಥ, ಪ್ರೊ.ಎನ್‌. ಲಿಂಗಣ್ಣ, ಎಸ್‌.ವಿ. ರಾಮಚಂದ್ರ, ಮಾಜಿ ಶಾಸಕ ಎಚ್‌.ಎಸ್‌. ಶಿವಶಂಕರ್‌ ಸಹಿತ ವಿವಿಧ ಮುಖಂಡರು ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿದರು.

ಜಗಳೂರು ವರದಿ: ಒಟ್ಟು 4 ಮತದಾನ ಕೇಂದ್ರಗಳಲ್ಲಿ ಪದವೀಧರ ಕ್ಷೇತ್ರದ ಚುನಾವಣೆ ಸುಗಮವಾಗಿ ನಡೆಯಿತು ಎಂದು ತಹಶೀಲ್ದಾರ್ ಡಾ. ನಾಗವೇಣಿ ತಿಳಿಸಿದರು.

ಶಾಸಕ ಎಸ್.ವಿ. ರಾಮಚಂದ್ರ ಹಾಗೂ ತಾಲ್ಲೂಕು ಬಿಜೆಪಿ ಅಧ್ಯಕ್ಷ ಎಚ್.ಪಿ ಮಹೇಶ್, ಮುಖಂಡ ಎಚ್. ನಾಗರಾಜ್ ಭೇಟಿ ನೀಡಿ ಪರಿಶೀಲಿಸಿದರು., ಮಾಜಿ ಶಾಸಕ ಎಚ್.ಪಿ. ರಾಜೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಶೀರ್ ಅಹ್ಮದ್, ಡಿಡಿಸಿಸಿ ಬ್ಯಾಂಕ್ ನಿರ್ದೇಶಕ ವೇಣುಗೋಪಾಲರೆಡ್ಡಿ ಪಟ್ಟಣದ ಮಿನಿ ವಿಧಾನಸೌಧದ ಕೇಂದ್ರದಲ್ಲಿ ಮತದಾನ ಮಾಡಿದರು.

ಮಾಯಕೊಂಡ ವರದಿ: ಮಾಯಕೊಂಡ, ಆನಗೋಡು ಮತಗಟ್ಟೆಗಳ ಬಳಿ ನಿಗದಿತ ಪರಿಧಿಯಾಚೆಗೆ ಪಕ್ಷದ ಕಾರ್ಯಕರ್ತರು ಮತದಾರರಲ್ಲಿ ತಮ್ಮ ಅಭ್ಯರ್ಥಿಗಳಿಗೆ ಮತ ನೀಡಲು ಮನವಿ ಮಾಡುತ್ತಿದ್ದರು.

ಶಾಸಕ ಪ್ರೊ.ಲಿಂಗಣ್ಣ, ಬಿಜೆಪಿ ಕ್ಷೇತ್ರ ಘಟಕದ ಅಧ್ಯಕ್ಷ ದೇವೇಂದ್ರಪ್ಪ ಜಿಲ್ಲಾ ಪಂಚಾಯಿತಿ ಸದಸ್ಯ ಬಸವಂತಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಟಿ. ಹನುಮಂತಪ್ಪ, ಜೆಡಿಎಸ್ ಮುಖಂಡ ಅನಿಲ್ ಕುಮಾರ್ ಮತಗಟ್ಟೆಗೆ ಭೇಟಿ ನೀಡಿ ಪರಿಶೀಲಿಸಿದರು.

ಮಲೇಬೆನ್ನೂರು: ಪಟ್ಟಣದಲ್ಲಿ ಬುಧವಾರ ಪದವೀಧರ ಮತದಾರರಿಗೆ ಶಾಮಿಯಾನ ವ್ಯವಸ್ಥೆ ಮಾಡಿಲ್ಲ ಎಂದು ನಿಟ್ಟೂರಿನ ಮತದಾರರಾದ ರೂಪ ಪಾಟೀಲ್ ಅವರು ಶಾಸಕ ಎಸ್. ರಾಮಪ್ಪನವರಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಎಳೆಹೊಳೆ ಗ್ರಾಮದಿಂದ ಮೂರು ತಿಂಗಳ ಎಳೆಕೂಸಿನೊಂದಿಗೆ ಬಂದ ಬಾಣಂತಿ ವಾಣಿ ಮತದಾನ ಮಾಡಿದರು.

ಸರ್ಕಾರಿ ಪದವಿ ಪೂರ್ವ ಕಿರಿಯ ಮಹಾವಿದ್ಯಾಲಯದಲ್ಲಿನ ಮೂರು ಮತಗಟ್ಟೆಗಳಿಗೆ ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್, ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ಶಾಸಕ ಎಸ್. ರಾಮಪ್ಪ ಭೇಟಿ ನೀಡಿದ್ದರು.

ಹೆಬ್ಬೆಟ್ಟಿಗೂ ಅವಕಾಶ!

ಮತ ಚಲಾಯಿಸುವ ಮೊದಲು ಮತದಾರರು ಸಹಿ ಹಾಕಲು ಒಳಗೆ ವ್ಯವಸ್ಥೆ ಇರುತ್ತದೆ. ಅಲ್ಲಿ ಸಹಿ ಇಲ್ಲವೇ
ಎಡಗೈ ಹೆಬ್ಬೆಟ್ಟು ಒತ್ತಲು ಅವಕಾಶ ನೀಡಲು ನೀಡಲಾಗಿತ್ತು. ಪದವೀಧರ ಕ್ಷೇತ್ರಕ್ಕೆ ಚುನಾವಣೆ ಅಂದರೆ ಎಲ್ಲರೂ ವಿದ್ಯಾವಂತರೇ ಇರುತ್ತಾರೆ. ಮತ್ಯಾಕೆ ಹೆಬ್ಬೆಟ್ಟಿಗೆ ಅವಕಾಶ ಎಂಬ ಪ್ರಶ್ನೆ ಎದುರಾಯಿತು.

ಬ್ಯಾಲೇಟ್‌ ಪೇಪರ್‌ ತೆಗೆದುಕೊಳ್ಳಲು ನಾನು ಸಹಿ ಮಾಡಲು ಹೋದಾಗ ಹೆಬ್ಬೆಟ್ಟಿಗೂ ಅವಕಾಶ ನೀಡಿರುವುದನ್ನು ಕಂಡು ಆಶ್ಚರ್ಯವಾಯಿತು. ಪದವೀಧರ ಕ್ಷೇತ್ರಕ್ಕೆ ಮತ ಚಲಾಯಿಸಲು ಅನಕ್ಷರಸ್ಥರು ಬರುತ್ತಾರಾ ಎಂಬ ಮಿಲಿಯನ್‌ ಡಾಲರ್‌ ಪ್ರಶ್ನೆ ಮೂಡಿತು. ಇಂಥ ವಿಪರ್ಯಾಸವನ್ನು ಚುನಾವಣಾ ಆಯೋಗ ಮಾಡಿದೆ’ ಎಂದು ಮತದಾರ ಎಂ.ಕೆ. ಬಕ್ಕಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು. ಮುಂದಿನ ಬಾರಿ ಇಂಥ ಆಭಾಸ ಆಗದ ಹಾಗೆ ಎಚ್ಚರಿಕೆ ವಹಿಸಬೇಕು ಎಂದು ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ಒತ್ತಾಯಿಸಿದರು.

ಸ್ವಚ್ಛತೆಗೆ ಆದ್ಯತೆ

ಮತದಾನದ ಮುನ್ನ ಪ್ರತಿ ಮತಗಟ್ಟೆಗಳಲ್ಲಿ ಆಶಾ ಕಾರ್ಯಕರ್ತೆಯರು ಮತ್ತು ಸಿಬ್ಬಂದಿ ಮತದಾರರಿಗೆ ಥರ್ಮಲ್ ಸ್ಕ್ಯಾನಿಂಗ್‌, ಸ್ಯಾನಿಟೈಸರ್, ಪಲ್ಸ್ ಆಕ್ಸಿಮೀಟರ್ ಹಾಗೂ ಕೈಗವಸು ನೀಡಿ ಸ್ಕ್ರೀನಿಂಗ್ ನಡೆಸಿದರು.

ಡಿಮಸ್ಟರಿಂಗ್‌ ನಂತರ ಬೆಂಗಳೂರಿಗೆ ಬ್ಯಾಲೆಟ್‌ ಬಾಕ್ಸ್‌

ದಾವಣಗೆರೆ ಮಹಾನಗರ ಪಾಲಿಕೆ, ದಾವಣಗೆರೆ, ಜಗಳೂರು ಮತ್ತು ಹರಿಹರ ತಾಲ್ಲೂಕು ಕಚೇರಿ ಹೀಗೆ ನಾಲ್ಕು ಕಡೆಗಳಲ್ಲಿ ಮಂಗಳವಾರ ಮಸ್ಟರಿಂಗ್‌ ನಡೆದಿತ್ತು. ಆದರೆ ಡಿಮಸ್ಟರಿಂಗ್‌ ಅಂದರೆ ಬ್ಯಾಲೆಟ್‌ ಬಾಕ್ಸ್‌ ಮತ್ತು ಇತರ ಪರಿಕರಗಳನ್ನು ವಾಪಸ್ ನೀಡುವ ಪ್ರಕ್ರಿಯೆ ನಾಲ್ಕು ಕಡೆಗಳಲ್ಲಿ ನಡೆಯದೇ ಮಹಾನಗರ ಪಾಲಿಕೆ ಆವರಣದಲ್ಲಿ ಮಾತ್ರ ನಡೆಯಿತು.

‘ಪಾಲಿಕೆಯಲ್ಲಿ ಡಿಮಸ್ಟರಿಂಗ್‌ ನಡೆದ ಬಳಿಕ ಬಿಗಿ ಪೊಲೀಸ್‌ ಬಂದೋಬಸ್ತಿನಲ್ಲಿ ಒಂದು ಕ್ಯಾಂಟರ್‌ ಮೂಲಕ ಬೆಂಗಳೂರಿಗೆ ಕಳುಹಿಸಲಾಯಿತು. ಸಿಇಒ, ಕಮಿಷನರ್‌, ತಹಶೀಲ್ದಾರ್‌ಗಳು ಮುಂತಾದ ಅಧಿಕಾರಿಗಳನ್ನೂ ಜತೆಗೆ ಕಳುಹಿಸಲಾಗಿದೆ. ಅವರು ಬೆಂಗಳೂರಿನಲ್ಲಿ ಸ್ಟ್ರಾಂಗ್‌ರೂಂನಲ್ಲಿ ಅವುಗಳನ್ನು ಇಟ್ಟು ಸೀಲ್‌ ಮಾಡಿ ಬರುತ್ತಾರೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಉದ್ಯೋಗಕ್ಕೆ ಒತ್ತು ನೀಡಿ

ಹಿಂದಿನ ಬಾರಿ ಪದವೀಧರ ಕ್ಷೇತ್ರಕ್ಕೆ ಮತ ಚಲಾಯಿಸಬೇಕು ಎಂದು ಹೆಸರು ನೋಂದಾಯಿಸಿದ್ದೆ. ಆದರೆ ಅದರಲ್ಲಿ ಹೆಸರು ತಪ್ಪಾಗಿದ್ದರಿಂದ ಅವಕಾಶ ಸಿಕ್ಕಿರಲಿಲ್ಲ. ಈ ಬಾರಿ ಒಳ್ಳೆಯ ಅಭ್ಯರ್ಥಿಗೆ ಮತ ಚಲಾಯಿಸಿದ್ದೇನೆ. ಅವರು ಗೆದ್ದು ಬಂದು ನಿರುದ್ಯೋಗ ಸಮಸ್ಯೆ ಇತ್ಯರ್ಥ ಮಾಡುತ್ತಾರೆ ಎಂಬ ಭರವಸೆ ನನಗಿದೆ.

ರಘು ಕೆ.ಜಿ. ದೊಡ್ಡಬಾತಿ, ಮೆಡಿಕಲ್‌ ರೆಪ್‌


ಮೊದಲ ಬಾರಿ ಮತ ಚಲಾಯಿಸಿರುವುದು ಖುಷಿಯಾಗಿದೆ. ವಿದ್ಯಾರ್ಥಿಗಳ ಸಮಸ್ಯೆ ಸರಿ ಮಾಡಬೇಕು. ಕಲಿತ ಎಲ್ಲರಿಗೂ ಉದ್ಯೋಗ ಸಿಗಬೇಕು. ಅಂಥ ಅಭ್ಯರ್ಥಿ ಆಯ್ಕೆಯಾಗಲಿ ಎಂದು ಮತ ಚಲಾಯಿಸಿದ್ದೇನೆ.

ವೀಣಾ, ಎಸ್‌ಒಜಿ ಕಾಲೊನಿ, ಅಕೌಂಟೆಂಟ್‌


ನಿರುದ್ಯೋಗ ಸಮಸ್ಯೆ ಎಲ್ಲ ಕಡೆ ಕಾಡುತ್ತಿದೆ. ಕೊರೊನಾ ಬಂದ ಮೇಲೆ ಇನ್ನಷ್ಟು ಜಾಸ್ತಿಯಾಗಿದೆ. ಯುವಜನರಿಗೆ ಉದ್ಯೋಗ ಸೃಷ್ಟಿಸಲು ನೆರವಾಗಲಿ ಎಂಬ ಉದ್ದೇಶ ಇಟ್ಟುಕೊಂಡು ಹಕ್ಕು ಚಲಾಯಿಸಿದ್ದೇನೆ.

ನಾಗರಾಜ್‌, ಅಕೌಂಟೆಂಟ್‌

‘ಹಣ ಹಂಚಿಕೆ ಸುಳ್ಳು’

ಪಾಲಿಕೆ ಸದಸ್ಯರು ಸೇರಿದಂತೆ ಬಿಜೆಪಿಯವರು ಕೆಲವು ವಾರ್ಡ್‌ಗಳಲ್ಲಿ ಹಣ ಹಂಚಿದ್ದಾರೆ ಎಂದು ಕಾಂಗ್ರೆಸ್‌ನವರು ಆರೋಪಿಸಿದರೆ, ಬಿಜೆಪಿಯವರು ನಿರಾಕರಿಸಿದ್ದಾರೆ.

‘ಕೈಮುಗಿದು ಮತ ಕೇಳುವುದು ಬಿಟ್ಟರೆ ಮತ್ತೇನನ್ನೂ ಬಿಜೆಪಿ ಮಾಡುವುದಿಲ್ಲ’ ಎಂದು ಸಂಸದ ಜಿ.ಎಂ. ಸಿದ್ದೇಶ್ವರ
ತಿಳಿಸಿದರು.

‘ಬಿಜೆಪಿಗೆ ಕೆಟ್ಟ ಹೆಸರು ತರಲು ವಿರೋಧಿಗಳು ಈ ರೀತಿ ಮಾಡಿರಬೇಕು. ನಾವು ಯಾರಿಗೂ ಹಣ ಹಂಚಿಲ್ಲ’ ಎಂದು ಶಾಸಕ ಎಸ್‌.ಎ. ರವೀಂದ್ರನಾಥ್‌ ಮಾಧ್ಯಮದವರಿಗೆ ತಿಳಿಸಿದರು.

ಜಿಲ್ಲೆಯ ಅಂಕಿ ಅಂಶ

12,813

ಒಟ್ಟು ಪುರುಷ ಮತದಾರರು

8641

ಮತ ಚಲಾಯಿಸಿದ ಪುರುಷ ಮತದಾರರು

8149

ಒಟ್ಟು ಮಹಿಳಾ ಮತದಾರರು

4471

ಮತ ಚಲಾಯಿಸಿದ ಮಹಿಳಾ ಮತದಾರರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT