ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಶಾನಕ್ಕೆ ಹೋಗುವ ರಸ್ತೆ ವಿವಾದ; ರಸ್ತೆಯಲ್ಲಿ ಶವವಿಟ್ಟು ಪ್ರತಿಭಟನೆ

Last Updated 23 ಜೂನ್ 2022, 14:22 IST
ಅಕ್ಷರ ಗಾತ್ರ

ದಾವಣಗೆರೆ: ಯರಗುಂಟೆ ಸ್ಮಶಾನಕ್ಕೆ ಹೋಗುವ ರಸ್ತೆಯನ್ನು ಬಂದ್‌ ಮಾಡಿದ್ದಾರೆ ಎಂದು ಆರೋಪಿಸಿ ಕರೂರು ಯರಗುಂಟೆಯ ಜನರು ಬುಧವಾರ ರಸ್ತೆಯಲ್ಲಿಯೇ ಶವವಿಟ್ಟು ಪ್ರತಿಭಟನೆ ನಡೆಸಿದರು. ಇದರಿಂದ ದಾವಣಗೆರೆ–ಕೊಂಡಜ್ಜಿ ರಸ್ತೆ ಸಂಚಾರಕ್ಕೆ ತೊಡಕುಂಟಾಯಿತು.

ಕೊಂಡಜ್ಜಿ ರಸ್ತೆಯಿಂದ ಯರಗುಂಟೆ ಸ್ಮಶಾನಕ್ಕೆ ಹೋಗುವ ರಸ್ತೆ ಮಾರಪ್ಪ–ಶಿವಣ್ಣ ಸಹೋದರರ ಖಾಸಗಿ ಜಮೀನಿನಲ್ಲಿ ಹಾದು ಹೋಗುತ್ತದೆ. ದಾಖಲೆಯಲ್ಲಿ ರಸ್ತೆ ಎಂಬುದು ಇಲ್ಲ ಎಂದು ವಾರದ ಹಿಂದೆ ರಸ್ತೆ ಬಂದ್‌ ಮಾಡಿದ್ದರು.

ಕರೂರು ಕ್ಯಾಂಪಿನ ದ್ಯಾಮಮ್ಮ (70) ಅನಾರೋಗ್ಯದಿಂದ ಮಂಗಳವಾರ ರಾತ್ರಿ ಮೃತಪಟ್ಟಿದ್ದರು. ಬೆಳಿಗ್ಗೆ ಸ್ಮಶಾನಕ್ಕೆ ಒಯ್ಯುವಾಗ ರಸ್ತೆ ಬಂದ್ ಆಗಿರುವುದನ್ನು ಕಂಡು ಗ್ರಾಮಸ್ಥರು ಪ್ರತಿಭಟನೆಗೆ ಇಳಿದರು. ಪಾಲಿಕೆ ಸದಸ್ಯ ಉದಯಕುಮಾರ್‌ ಕೂಡ ಭಾಗವಹಿಸಿದ್ದರು. ಕೊಂಡಜ್ಜಿ ರಸ್ತೆಯಲ್ಲಿಯೇ ಶವ ಇಟ್ಟು ಪ್ರತಿಭಟನೆ ಮಾಡಿದ್ದರಿಂದ ವಾಹನ ಸಂಚಾರ ಅಸ್ತವ್ಯಸ್ತವಾಯಿತು. ವಾಹನ ದಟ್ಟಣೆ ಉಂಟಾಗಿದ್ದರಿಂದ ಸ್ಥಳಕ್ಕೆ ಬಂದ ಪೊಲೀಸರು ವಾಹನಗಳನ್ನು ಸುತ್ತು ಬಳಸಿ ಹೋಗುವ ರಸ್ತೆಯಲ್ಲಿ ಕಳುಹಿಸಿದರು.

ಸ್ಮಶಾನಕ್ಕೆ ಹೋಗಲು ಇನ್ನೊಂದು ರಸ್ತೆ ಇರುವುದರಿಂದ ಅದರಲ್ಲಿ ಹೋಗುವಂತೆ ಪೊಲೀಸರು ಪ್ರತಿಭಟನಕಾರರಿಗೆ ಸೂಚಿಸಿದರು. ನೇರ ರಸ್ತೆಯನ್ನು ಮುಚ್ಚಿರುವುದರಿಂದ ಸುತ್ತುಬಳಸಿ ಹೋಗಬೇಕು. ಇಷ್ಟು ವರ್ಷ ಸಾಗುತ್ತಿದ್ದ ರಸ್ತೆಯನ್ನು ಬಂದ್‌ ಮಾಡುವುದು ಸರಿಯಲ್ಲ ಎಂದು ಪ್ರತಿಭಟನಕಾರರು ಆಕ್ಷೇಪಿಸಿದರು.

ಸ್ಥಳಕ್ಕೆ ಬಂದ ತಹಶೀಲ್ದಾರ್‌ ಬಸವರಾಜ ಕೋಟೂರ, ಗಾಂಧಿನಗರ ಪೊಲೀಸ್‌ ಠಾಣೆಯ ಪಿಎಸ್‌ಐಗಳಾದ ಸಮಿವುನ್ನೀಸಾ, ಪ್ರಮೀಳಾ ಮತ್ತು ಸಿಬ್ಬಂದಿ ಮಾತುಕತೆ ನಡೆಸಿ ಪ್ರತಿಭಟನೆಯನ್ನು ನಿಲ್ಲಿಸಿದರು. ಬಳಿಕ ವೃದ್ಧೆಯ ಅಂತ್ಯಕ್ರಿಯೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT