ಶುಕ್ರವಾರ, ನವೆಂಬರ್ 22, 2019
23 °C
ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ

ಅನ್ಯ ಭಾಷಿಕರಿಗೆ ಹೆಚ್ಚಿನ ಉದ್ಯೋಗ

Published:
Updated:
Prajavani

ದಾವಣಗೆರೆ: ಕನ್ನಡಿಗರಿಗೆ ಹೆಚ್ಚಿನ ಕೌಶಲ ಇದ್ದರೂ ಅನ್ಯ ಭಾಷಿಕರಿಗೆ ನಮ್ಮ ನೆಲದಲ್ಲಿ ಉದ್ಯೋಗಾವಕಾಶ ದೊರೆಯುತ್ತಿರುವುದು ವಿಷಾದನೀಯ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.

ಜಿಲ್ಲಾಡಳಿತದಿಂದ ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ 64ನೇ ಕರ್ನಾಟಕ ರಾಜ್ಯೋತ್ಸವದಲ್ಲಿ ಅವರು ಮಾತನಾಡಿದರು.

‘ಕನ್ನಡಿಗರು ಉದಾರ ಮನಸ್ಸಿನವರು. ಎಲ್ಲರನ್ನೂ ಸ್ವೀಕರಿಸುವ ಮನೋಭಾವ ಹೊಂದಿದ್ದಾರೆ. ಅನ್ಯ ಭಾಷಿಕರನ್ನು ನಾವೇ ಸಂತುಷ್ಟಗೊಳಿಸುತ್ತಿದ್ದೇವೆ. ಇದರ ಪರಿಣಾಮ ನಾವು ಬಳಸುವ ಕನ್ನಡದಲ್ಲಿ ಶೇ 60ರಷ್ಟು ಇಂಗ್ಲಿಷ್ ಪದಗಳೇ ಸೇರಿರುವುದು ದುರಂತವೇ ಸರಿ’ ಎಂದರು.

ಕನ್ನಡ ರಾಜ್ಯ ಸರ್ಕಾರದ ಅಧಿಕೃತ ಭಾಷೆಯಾಗಿದ್ದರೂ ಉದ್ಯೋಗ ದೃಷ್ಟಿಯಲ್ಲಿರಿಸಿಕೊಂಡು ಇಂಗ್ಲಿಷ್ ಮಾಧ್ಯಮಕ್ಕೆ ಶರಣರಾಗುತ್ತಿದ್ದು, ಇದರ ಪರಿಣಾಮ ನಾಡಿನೆಲ್ಲೆಡೆ ಸಾವಿರಾರು ಕನ್ನಡ ಶಾಲೆಗಳು ಮುಚ್ಚುತ್ತಿವೆ. ಕನ್ನಡ ಭಾಷೆ ಬೆಳೆಯಬೇಕಾದರೆ ಅದರ ಮಹತ್ವವನ್ನು ಶಾಲಾ- ಕಾಲೇಜುಗಳಲ್ಲಿ ಮಕ್ಕಳಿಗೆ ತಿಳಿಸಿಕೊಡಬೇಕು. ಕನ್ನಡದಲ್ಲಿ ಮಾತನಾಡುವುದರಿಂದ ಆಗುವ ಲಾಭಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.

‘ನಮ್ಮ ಹಿಂದಿನವರು ಕಟ್ಟಿ ಬೆಳೆಸಿದ ನಾಡಿನ ಸಂಸ್ಕೃತಿಯನ್ನು ಇಂದಿನವರು ಮುಂದುವರೆಸಿಕೊಂಡು ಹೋಗುವ ಅವಶ್ಯಕತೆ ಇದ್ದು, ನಮ್ಮ ಭಾಷೆ, ಸಾಹಿತ್ಯದ ಅಭಿವೃದ್ಧಿಗೆ ಹಾಗೂ ನಾಡಿನ ಸರ್ವಾಂಗೀಣ ಬೆಳವಣಿಗಾಗಿ ನಾವೆಲ್ಲರೂ ಸಂಕಲ್ಪ ತೊಡಬೇಕಾಗಿದೆ’ ಎಂದು ಹೇಳಿದರು.

ಇಂಗ್ಲಿಷ್ ನಮಗೆ ಬೇಕು. ಆದರೆ ನಮ್ಮ ಭಾಷೆಯ ಬದಲಿಗೆ ಅಲ್ಲ. ಇಂಗ್ಲಿಷ್ ವ್ಯಾಮೋಹದ ಸೆಳೆತಕ್ಕೆ ಸಿಲುಕಿ ನಾವು ನಮ್ಮ ಸಂಸ್ಕೃತಿಯನ್ನು ನಾಶಗೊಳಿಸುತ್ತಿದ್ದೇವೆ. ಕನ್ನಡಿಗರಾದ ನಾವು ಅನ್ಯಭಾಷೆಗಳನ್ನು ಕಲಿಯುತ್ತಾ ಕನ್ನಡ ಭಾಷೆಯನ್ನು ಪ್ರೀತಿಸಿ ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಿಇಒ ಪದ್ಮ ಬಸವಂತಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಹಾಗೂ ಕನ್ನಡಪರ ಸಂಘಟನೆಗಳ ಮುಖಂಡರು ಹಾಜರಿದ್ದರು.

ತರಳಬಾಳು ಶಾಲೆ, ಗೋಲ್ಡನ್ ಪಬ್ಲಿಕ್‌ ಶಾಲೆ ಹಾಗೂ ಸೊಫ್ರೊಸಿಸ್ ಕಾನ್ವೆಂಟ್ ವಿದ್ಯಾರ್ಥಿಗಳು ಕನ್ನಡ ಗೀತೆಗಳಿಗೆ ನೃತ್ಯ ಪ್ರದರ್ಶಿಸಿದರು.

ಕಿರಣ್ ಕುಮಾರ್ ಅವರು ಕನ್ನಡದಲ್ಲೇ ಕವಾಯತು ನಡೆಸಿಕೊಟ್ಟರು.

ಪ್ರತಿಕ್ರಿಯಿಸಿ (+)