ಭಾನುವಾರ, ಜೂನ್ 26, 2022
29 °C

ತೊಗರಿ ಅಂತರ ಬೆಳೆ ಬೆಳೆಯಿರಿ: ಪ್ರೊ. ಲಿಂಗಣ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ರೈತರು ಪ್ರತಿ ವರ್ಷ ಮೆಕ್ಕೆಜೋಳವನ್ನು ಏಕಬೆಳೆಯಾಗಿ ಬೆಳೆಯುತ್ತಿದ್ದಾರೆ. ಬೆಳೆ ಪರಿವರ್ತನೆ ಮಾಡದೇ ಇರುವುದು ಸರಿಯಲ್ಲ. ಮೆಕ್ಕೆಜೋಳದೊಂದಿಗೆ ಮಿಶ್ರ ಬೆಳೆ ಅನುಸರಿಸಬೇಕು ಎಂದು ಮಾಯಕೊಂಡ ಶಾಸಕ ಪ್ರೊ. ಲಿಂಗಣ್ಣ ತಿಳಿಸಿದರು.

ಮಾಯಕೊಂಡ ಹೋಬಳಿ ಹಿಂಡಸಘಟ್ಟ ಗ್ರಾಮದಲ್ಲಿ ಕೃಷಿ ಇಲಾಖೆಯಿಂದ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ರೈತರಿಗೆ ಉಚಿತವಾಗಿ ತೊಗರಿ ಕಿರುಚೀಲ ವಿತರಿಸಿ ಅವರು ಮಾತನಾಡಿದರು.

ಕೋವಿಡ್-19 ಸಂಕಷ್ಟದ ನಡುವೆಯಲ್ಲಿ ಪ್ರತಿ ಗ್ರಾಮಕ್ಕೆ ಭೇಟಿ ನೀಡಿ ರೈತರಿಗೆ, ಸಾಮಾನ್ಯ ಜನರಿಗೆ ತೊಂದರೆಯಾಗದಂತೆ ಸರ್ಕಾರದ ಯೋಜನೆಗಳನ್ನು, ಸೌಲಭ್ಯ ವಿವರಗಳನ್ನು ನೀಡಲಾಗುತ್ತಿದೆ. ತಾಲ್ಲೂಕಿನಲ್ಲಿ 29,000 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಅಣಬೇರು ಜೀವನಮೂರ್ತಿ, ‘ಈ ಭಾಗದ ರೈತರು ಮೊದಲಿನಿಂದಲೂ ಶೇಂಗಾ, ಅವರೆ, ರಾಗಿ, ಅಲಸಂದೆ, ಹತ್ತಿ ಬೆಳೆಗಳನ್ನು ಬೆಳೆಯುತ್ತಿದ್ದರು. ಅವುಗಳನ್ನೇ ಮುಖ್ಯ ಆಹಾರದ ಭಾಗವಾಗಿ ಮಾಡಿಕೊಂಡಿದ್ದರು. ರೋಗರಹಿತ, ಒತ್ತಡ ರಹಿತ ಜೀವನ ನಡೆಸುತ್ತಿದ್ದರು. ಆಧುನಿಕ ಬೇಸಾಯ ಪದ್ಧತಿಯಿಂದ ಏಕಬೆಳೆ, ಕೇವಲ ರಾಸಾಯನಿಕ ಗೊಬ್ಬರ ಬಳಕೆ, ಅತಿಯಾದ ಕೀಟನಾಶಕ ಬಳಕೆ ಮಾಡುತ್ತಿರುವುದರಿಂದ ಇಂದು ರೋಗಯುಕ್ತ, ಒತ್ತಡಯುಕ್ತ ಜೀವನ ಹಾಗೂ ಸಾಲದ ಸುಳಿಯಲ್ಲಿ ಸಿಲುಕಿಕೊಂಡಿದ್ದಾರೆ’ ಎಂದು ವಿಶ್ಲೇಷಿಸಿದರು.

ಉಪ ಕೃಷಿ ನಿರ್ದೇಶಕ ತಿಪ್ಪೇಸ್ವಾಮಿ ಮಾತನಾಡಿ, ‘ಈ ಹಂಗಾಮಿನಲ್ಲಿ ಬೆಳೆದು ಅದೇ ಬೀಜಗಳನ್ನು ಮುಂದಿನ ಮೂರು ಹಂಗಾಮಿಗೆ ಬಳಕೆ ಮಾಡಿಕೊಳ್ಳಬಹುದು. ಇದರಿಂದ ಬಿತ್ತನೆ ಬೀಜಕ್ಕಾಗಿ ಇಲಾಖೆ ಅಥವಾ ಅಂಗಡಿಗಳ ಬಾಗಿಲಿಗೆ ಅಲೆದಾಡುವುದನ್ನು ತಪ್ಪಿಸಬಹುದು. ಮೆಕ್ಕೆಜೋಳದ ಜತೆಗೆ ಹೆಚ್ಚುವರಿಯಾಗಿ ಪ್ರತಿ ಎಕರೆಗೆ 2 ರಿಂದ 3 ಕ್ವಿಂಟಲ್ ತೊಗರಿ ಉತ್ಪಾದನೆಯಾಗುತ್ತದೆ. ಸುಮಾರು ₹ 12 ಸಾವಿರ ಹೆಚ್ಚುವರಿ ಆದಾಯ ಬರುತ್ತದೆ. ಮಣ್ಣಿನ ಫಲವತ್ತತೆಯೂ ಉಳಿಯುತ್ತದೆ’ ಎಂದು ವಿವರ ನೀಡಿದರು.

ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ನಾಗರಾಜ, ಮುಖಂಡ ದೇವೇಂದ್ರಪ್ಪ, ಸಹಾಯಕ ಕೃಷಿ ನಿರ್ದೇಶಕ ರೇವಣಸಿದ್ದನ ಗೌಡ ಎಚ್.ಕೆ., ಕೃಷಿ ಅಧಿಕಾರಿ ಆರ್.ವಿ. ತೇಜವರ್ಧನ್ ಅವರೂ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು