ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಜಾ ಮಾರಾಟ ಗುಪ್ತಗಾಮಿನಿ

ಮಾರಾಟ ಜಾಲದ ಮೂಲ ಭೇದಿಸಲು ಕಟ್ಟುನಿಟ್ಟಿನ ಕ್ರಮ; ಜಾಗೃತಿ ಅಭಿಯಾನ
Last Updated 8 ಆಗಸ್ಟ್ 2022, 4:55 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲೆಯಲ್ಲಿ ಗಾಂಜಾ ಬೆಳೆ ಮತ್ತು ಮಾರಾಟ ಜಾಲ ಗುಪ್ತಗಾಮಿನಿಯಾಗಿದ್ದು, ಗಾಂಜಾ ಪಿಡುಗಿನ ನಿರ್ಮೂಲನೆಗೆ ಪೊಲೀಸ್‌ ಇಲಾಖೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದೆ.

ಜಿಲ್ಲಾ ಪೊಲೀಸ್‌ ಇಲಾಖೆ ಮಾಹಿತಿಯಂತೆ 2011ರಿಂದ ಇಲ್ಲಿಯವರೆಗೆ ಒಟ್ಟು 114 ಪ್ರಕರಣಗಳು ವರದಿಯಾಗಿದ್ದು, 60 ಪ್ರಕರಣಗಳ ವಿಚಾರಣೆ ನಡೆಯುತ್ತಿದೆ. 21 ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆಯಾಗಿದೆ. 19 ಪ್ರಕರಣಗಳಲ್ಲಿ ಆರೋಪಿಗಳ ಬಿಡುಗಡೆಯಾಗಿದ್ದು, 13 ಪ್ರಕರಣಗಳ ತನಿಖೆ ನಡೆಯುತ್ತಿದೆ.

ಅಂತರರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನದ ಅಂಗವಾಗಿ ಒಂದು ವರ್ಷದಲ್ಲಿ 11 ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ 25 ಕೆ.ಜಿ. 800 ಗ್ರಾಂ ಗಾಂಜಾವನ್ನು ಪೊಲೀಸ್‌ ಅಧಿಕಾರಿಗಳು ನ್ಯಾಯಾಲಯದ ಅನುಮತಿ ಪಡೆದು ನಗರದ ಹೊರವಲಯದಲ್ಲಿ ಈಚೆಗೆ ನಾಶಪಡಿಸಿದರು. ಇದು ಜಿಲ್ಲೆಯಲ್ಲಿ ಗಾಂಜಾ ಮಾರಾಟ ಜಾಲ ಕ್ರಿಯಾಶೀಲವಾಗಿರುವುದಕ್ಕೆ ನಿದರ್ಶನವಾಗಿದೆ.

ಗಾಂಜಾ ದುಷ್ಪರಿಣಾಮ: ಗಾಂಜಾ ಗಿಡದ ಒಣಗಿದ ಎಲೆಗಳು, ಹೂವುಗಳು, ಕಾಂಡ, ಬೀಜ ಸೇರಿ ಗಿಡದ ಪ್ರತಿ ಭಾಗವೂ ಉನ್ಮಾದ ತರಬಲ್ಲ ರಾಸಾಯನಿಕವನ್ನು ಒಳಗೊಂಡಿರುತ್ತವೆ. ಗಾಂಜಾ ಸೇವಿಸಿದಾಗ ಈ ರಾಸಾಯನಿಕವು ನೇರವಾಗಿ ವ್ಯಕ್ತಿಯ ಮೆದುಳಿನ ಕ್ರಿಯೆ ಮೇಲೆ ನಿಯಂತ್ರಣ ಸಾಧಿಸುತ್ತದೆ. ಹೀಗಾಗಿ ವ್ಯಕ್ತಿ ಉನ್ಮಾದಲ್ಲಿ ತೇಲುತ್ತಾನೆ. ಗಾಂಜಾ ಸೇವನೆ ಹೆಚ್ಚಾದರೆ ಮೆದುಳುಕ್ರಮೇಣ ನಿಷ್ಕ್ರಿಯವಾಗಿ ವ್ಯಕ್ತಿಯು ಆಲೋಚನಾ ಶಕ್ತಿಯನ್ನೇ ಕಳೆದುಕೊಳ್ಳುತ್ತಾನೆ. ಬಹುತೇಕ ಸಂದರ್ಭಗಳಲ್ಲಿ ಗಾಂಜಾ ವ್ಯಸನಿಗಳು ಖಿನ್ನತೆಗೆ ಒಳಗಾಗಿ ತಮ್ಮ ಕೈಯಾರೆ ಜೀವ ತೆಗೆದುಕೊಳ್ಳುವ ಸಾಧ್ಯತೆಯೂ ಹೆಚ್ಚಿರುತ್ತದೆ.

ಗಾಂಜಾ ಬೆಳೆ: ಗ್ರಾಮೀಣಪ್ರದೇಶಗಳಲ್ಲಿ ಹೊಲಗಳಲ್ಲಿ ಬಿತ್ತನೆ ಮಾಡುವ ಬೆಳೆಗಳ ಮಧ್ಯೆ, ತೋಟಗಳು, ಮನೆಗಳ ಹಿತ್ತಲಿನಲ್ಲಿ ಗಾಂಜಾ ಗಿಡ ಬೆಳೆಯುವುದು ಸಾಮಾನ್ಯ. ಈಚೆಗೆ ಚನ್ನಗಿರಿ ತಾಲ್ಲೂಕಿನ ಹಿರೇಕೊಗಲೂರು ಗ್ರಾಮದ ಮನೆಯೊಂದರ ಹಿತ್ತಲಿನಲ್ಲಿ ಗಾಂಜಾ ಬೆಳೆಸಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿ, ₹ 15,000 ಮೌಲ್ಯದ 2 ಕೆ.ಜಿ. 900 ಗ್ರಾಂ ಗಾಂಜಾ ಗಿಡಗಳನ್ನು ವಶಪಡಿಸಿಕೊಂಡಿದ್ದರು. ಇತ್ತೀಚಿನ ದಿನಗಳಲ್ಲಿ ಮನೆಗಳ ತಾರಸಿಯ ಮೇಲೆ ಪಾಟ್‌ಗಳಲ್ಲಿ ಗಾಂಜಾ ಗಿಡಗಳನ್ನು ಬೆಳೆಯುತ್ತಿರುವುದೂ ಬೆಳಕಿಗೆ ಬಂದಿದೆ.

ಹೊನ್ನಾಳಿ ತಾಲ್ಲೂಕಿನ ಕತ್ತಿಗೆ ಗ್ರಾಮದ ವ್ಯಕ್ತಿಯೊಬ್ಬರು ತಮ್ಮ ಮನೆಯ ತಾರಸಿಯಲ್ಲಿ ಹೂವಿನ ಕುಂಡಗಳಲ್ಲಿ ಗಾಂಜಾ ಗಿಡಗಳನ್ನು ಬೆಳೆಸಿದ್ದರು. ಖಚಿತ ಮಾಹಿತಿ ಮೇರೆಗೆ ಮನೆಯ ಮೇಲೆ ಪೊಲೀಸರು ದಾಳಿ ನಡೆಸಿದಾಗ ಬರೋಬ್ಬರಿ 52 ಗಾಂಜಾ ಗಿಡಗಳು ಪತ್ತೆಯಾಗಿದ್ದವು. ಮಹಾನಗರಗಳಲ್ಲಿ ವಿದೇಶ ಅಥವಾ ಅನ್ಯ ರಾಜ್ಯಗಳಿಂದ ಬಂದವರು
ಗಾಂಜಾ ಪೆಡ್ಲರ್‌ಗಳಾಗಿರುತ್ತಾರೆ. ಆದರೆ, ದಾವಣಗೆರೆಯಂತಹ ಜಿಲ್ಲೆ ಅಥವಾ ಸಣ್ಣ ನಗರಗಳಲ್ಲಿ ಸ್ಥಳೀಯರೇ ದಂಧೆಯಲ್ಲಿ ಭಾಗಿಯಾಗಿರುವುದು ಪ್ರಕರಣಗಳಿಂದ ತಿಳಿದುಬಂದಿದೆ.

ವ್ಯಾಪಕವಾಗಿಲ್ಲ, ಕದ್ದುಮುಚ್ಚಿ ಮಾರಾಟ: ಪಶ್ಚಿಮಘಟ್ಟದ ದಟ್ಟ ಅರಣ್ಯದಲ್ಲಿ ಗಾಂಜಾ ಬೆಳೆಯುತ್ತಿದ್ದರು. ಈಚೆಗೆ ಡ್ರೋಣ್‌ ಸರ್ವೆ ಮುಖಾಂತರ ಕಂದಾಯ, ಅರಣ್ಯ ಮತ್ತು ಪೊಲೀಸ್‌ ಇಲಾಖೆಯಿಂದ ಕಾರ್ಯಾಚರಣೆ ನಡೆಸಿ ನಾಶಪಡಿಸಲಾಗಿದೆ.
ಹಾಗಾಗಿ ಸುತ್ತಮುತ್ತಲಿನಿಂದ ಗಾಂಜಾ ಸಿಗುತ್ತಿಲ್ಲ. ಜಾರ್ಖಂಡ್‌, ಬಿಹಾರ, ಮಹಾರಾಷ್ಟ್ರ ಮುಂತಾದೆಡೆಯಿಂದ ಸರಬರಾಜಾಗುತ್ತಿದೆ.
ಆದರೆ, ಮೊದಲಿನಂತೆ ವ್ಯಾಪಕವಾಗಿಲ್ಲ. ಕದ್ದುಮುಚ್ಚಿ ಮಾರಾಟ ಮಾಡಲಾಗುತ್ತಿದೆ. ಈ ಬಗ್ಗೆ ಮಾಹಿತಿ ಸಿಕ್ಕ ಕೂಡಲೇ ದಾಳಿ ನಡೆಸಿ ಆರೋಪಿ ಗಳನ್ನು ಬಂಧಿಸುತ್ತಿದ್ದೇವೆ. ಹೀಗಾಗಿ ಸಮಸ್ಯೆ ನಿಯಂತ್ರಣದಲ್ಲಿದೆ ಎನ್ನುತ್ತಾರೆ ಡಿಎಸ್‌ಆರ್‌ಬಿ ಡಿವೈಎಸ್‌ಪಿ ಬಿ.ಎಸ್. ಬಸವರಾಜ್.

ಜಾಗೃತಿ ಅಭಿಯಾನ: ಗಾಂಜಾ, ಅಫೀಮು, ಚರಸ್‌ ಇತ್ಯಾದಿ ಮಾದಕ ವಸ್ತುಗಳ ಸೇವನೆ ತುಂಬಾ ಅಪಾಯಕಾರಿ. ಈ ಬಗ್ಗೆ ಶಾಲಾ–ಕಾಲೇಜು, ಹಾಸ್ಟೆಲ್‌ಗಳು, ಬಸ್‌ ಮತ್ತು ರೈಲು ನಿಲ್ದಾಣಗಳು ಮುಂತಾದೆಡೆ ಕರಪತ್ರಗಳ ಮೂಲಕ
ಜಾಗೃತಿ ಮೂಡಿಸಲಾಗುತ್ತಿದೆ. ಪ್ರಕರಣಗಳಲ್ಲಿ ಗಾಂಜಾದ ಪ್ರಮಾಣದ ಆಧಾರದಲ್ಲಿ ಗರಿಷ್ಠ
20 ವರ್ಷಗಳ ಕಠಿಣ ಜೈಲು ಶಿಕ್ಷೆ, ₹ 2 ಲಕ್ಷದವರೆಗೆ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶ
ಇದೆ ಎನ್ನುತ್ತಾರೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್‌.

ಎನ್‌ಡಿಪಿಎಸ್‌ ಕಾಯ್ದೆಯಿಂದ ಜಾಲದ ಮೂಲ ಪತ್ತೆ

ಈ ಮೊದಲು ಗಾಂಜಾ ಬೆಳೆಯುವವರು, ಮಾರಾಟ ಮಾಡುವವರ ವಿರುದ್ಧ ಮಾತ್ರ ಪ್ರಕರಣ ದಾಖಲಿಸಲಾಗುತ್ತಿತ್ತು. ಎನ್‌ಡಿಪಿಎಸ್‌ ಕಾಯ್ದೆ ಪ್ರಕಾರ ಮಾದಕವಸ್ತುಗಳನ್ನು ಸೇವಿಸುವವರನ್ನೂ ವಿಚಾರಣೆಗೆ ಒಳಪಡಿಸಬಹುದಾಗಿದೆ. ಮಾದಕವಸ್ತು ಸೇವಿಸುವ ಶಂಕಿತರ ರಕ್ತ, ಕೂದಲು, ಬಾಯಿಯ ಜೊಲ್ಲಿನ ಮಾದರಿಗಳನ್ನು ಸಂಗ್ರಹಿಸಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸುತ್ತೇವೆ. ಮಾದಕ ವಸ್ತು ಸೇವಿಸಿರುವುದು ದೃಢಪಟ್ಟರೆ, ಅವರ ಮೂಲಕ ಮೂಲ ಸರಬರಾಜುದಾರರ ಮಾಹಿತಿ ಪಡೆಯಲು ಸಾಧ್ಯವಿದೆ ಎನ್ನುತ್ತಾರೆ ಡಿವೈಎಸ್‌ಪಿ ಬಿ.ಎಸ್. ಬಸವರಾಜ್.

ಗಾಂಜಾ ಜಾಲಕ್ಕೆ ಯುವಕರ ಬಲಿ

ಜಗಳೂರು: ಪಟ್ಟಣ ಮತ್ತು ಗ್ರಾಮೀಣ ಪ್ರದೇಶದಲ್ಲಿ ಹದಿಹರೆಯ ವಯಸ್ಸಿನ ಯುವಕರು ಸಿಗರೇಟ್, ಕುಡಿತ ಮಾತ್ರವಲ್ಲದೆ ಗಾಂಜಾ ಸೇವನೆಯಂತಹ ಅಪಾಯಕಾರಿ ವ್ಯಸನಗಳಿಗೆ ಬಲಿಯಾಗುತ್ತಿರುವುದು ಪೋಷಕರಲ್ಲಿ ಆತಂಕ ಮೂಡಿಸಿದೆ.

ನಾಲ್ಕು ವರ್ಷಗಳ ಹಿಂದೆ ಪಟ್ಟಣದ ಖಾಸಗಿ ಪ್ರೌಢಶಾಲೆಯಲ್ಲಿ ಹದಿಹರೆಯ ವಿದ್ಯಾರ್ಥಿಗಳಿಗೆ ಗಾಂಜಾ ಸರಬರಾಜು ಮಾಡುತ್ತಿರುವ ಸುದ್ದಿ ವ್ಯಾಪಕವಾಗಿ ಹರಡಿತ್ತು. ಇದರ ಬೆನ್ನಲ್ಲೇ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಯೊಬ್ಬ ಗಾಂಜಾ ವ್ಯಸನದಿಂದ ಖಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದ ಘಟನೆ ಪಟ್ಟಣದ ಜನತೆಯನ್ನು ಬೆಚ್ಚಿಬೀಳಿಸಿತ್ತು. ನಂತರದಲ್ಲಿ ಪಟ್ಟಣದ ಪೊಲೀಸರು ಗಾಂಜಾ ಸರಬರಾಜು ಆರೋಪದ ಮೇರೆಗೆ ಹಲವು ಮೊಕದ್ದಮೆಗಳನ್ನು ದಾಖಲಿಸಿದ್ದಾರೆ.

‘ಸಿಗರೇಟ್‌ಗಳಲ್ಲಿ ಗಾಂಜಾ ಪುಡಿ ತುಂಬಿಸಿ ಯುವಕರು ಸೇದುತ್ತಾರೆ. ಪಕ್ಕದ ಕೂಡ್ಲಿಗಿ ತಾಲ್ಲೂಕಿನ ಖಾನಾ ಹೊಸಳ್ಳಿ ಹಾಗೂ ಚಿತ್ರದುರ್ಗ ತಾಲ್ಲೂಕಿನಿಂದ ತಾಲ್ಲೂಕಿಗೆ ಗಾಂಜಾ ಸರಬರಾಜು ಆಗುತ್ತಿರುವ ಬಗ್ಗೆ ಮಾಹಿತಿ ಇದ್ದು, ಶೀಘ್ರವೇ ಜಾಲವನ್ನು ಭೇದಿಸಿ ಆರೋಪಿಗಳನ್ನು ಬಂಧಿಸಲಾಗುವುದು’ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಮಾರಾಟ ಮೂಲ ಪತ್ತೆ ಅಗತ್ಯ

ಹರಿಹರ: ನಗರದಲ್ಲಿ ಗಾಂಜಾ ಬಿತ್ತನೆ ಪ್ರಕರಣಗಳಿಲ್ಲದಿದ್ದರೂ ಗಾಂಜಾ ಮಾರಾಟ ದೃಷ್ಟಿಯಿಂದ ಪ್ರಮುಖ ಸ್ಥಳವಾಗಿ ಗುರುತಿಸಿಕೊಂಡಿದೆ.

ಭೌಗೋಳಿವಾಗಿ ರಾಜ್ಯದ ಮಧ್ಯ ಭಾಗದಲ್ಲಿರುವ ಈ ಪ್ರದೇಶ ರಸ್ತೆ, ರೈಲು ಮಾರ್ಗದ ಜಂಕ್ಷನ್ ಸ್ಥಳವಾಗಿದೆ. ಬೇರೆ ಮಹಾನಗರಗಳಿಂದ ಇಲ್ಲಿಗೆ ಗಾಂಜಾ ತರಿಸಿ, ವ್ಯಸನಿಗಳಿಗೆ ಮಾರಾಟ ಮಾಡುವ ಗುಪ್ತ ಜಾಲ ಇಲ್ಲಿದೆ. ಗಾಂಜಾ ಮಾರಾಟ ಮಾಡುವ ಮೂಲ ಜಾಲವನ್ನು ನಿರ್ನಾಮ ಮಾಡಿದರೆ ಈ ಭಾಗದ ಯುವಜನರು ಈ ವ್ಯಸನದಿಂದ ಮುಕ್ತರಾಗಲು ಸಾಧ್ಯ ಎಂದು ತಮ್ಮ ಹೆಸರು ಬಹಿರಂಗಪಡಿಸಲು ಇಚ್ಛಿಸದ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗಾಂಜಾ ಮಾರಾಟ, ಸೇವನೆ ಕಂಡುಬಂದಲ್ಲಿ ಕಂಟ್ರೋಲ್‌ ರೂಂ–100/112 ಸಿಇಎನ್‌ ಪೊಲೀಸ್‌ ಠಾಣೆ ಅಥವಾ ಹತ್ತಿರದ ಪೊಲೀಸ್‌ ಠಾಣೆಗೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ. ಸಮಸ್ಯೆ ನಿರ್ಮೂಲನೆಗೆ ಇಲಾಖೆ ಜತೆ ಎಲ್ಲರೂ ಕೈಜೋಡಿಸಬೇಕು.

- ಸಿ.ಬಿ. ರಿಷ್ಯಂತ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ದಾವಣಗೆರೆ.

ಸಹವಾಸ ದೋಷದಿಂದಾಗಿ ಕೆಲ ಯುವಕರು, ಶಾಲೆ ತೊರೆದವರು, ಕೂಲಿ–ಕಾರ್ಮಿಕರು ಗಾಂಜಾ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ. ಶಾಲಾ–ಕಾಲೇಜು–ಹಾಸ್ಟೆಲ್‌ಗಳ ಮೇಲೆ ಕಣ್ಗಾವಲು ಇರಿಸುವ ಮೂಲಕ ವಿದ್ಯಾರ್ಥಿಗಳು ಗಾಂಜಾ ವ್ಯಸನಕ್ಕೆ ತುತ್ತಾಗದಂತೆ ಕ್ರಮ ವಹಿಸುತ್ತಿದ್ದೇವೆ. ಬಿ. ಮಂಜುನಾಥ್‌, ಸಿಪಿಐ, ಸಿಇಎನ್‌ ಪೊಲೀಸ್‌ ಠಾಣೆ, ದಾವಣಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT