ಸಾಸ್ವೆಹಳ್ಳಿ: ‘ವ್ಯಕ್ತಿಗಿಂತ ವ್ಯಕ್ತಿತ್ವ ದೊಡ್ಡದು ಎಂಬುದನ್ನು ಸಾರಿದ ಹೊಟ್ಯಾಪುರದ ಲಿಂಗೈಕ್ಯ ಗಿರಿ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿಯವರು ಸಮಾಜದ ಏಳಿಗೆಗೋಸ್ಕರ ಎಳೆಗೌರಿ ಹಬ್ಬ ಆಚರಣೆಗೆ ತಂದಿದ್ದಾರೆ. ಇದು ನಾಡಹಬ್ಬವಾಗಬೇಕು’ ಎಂದು ಹುಣಸಘಟ್ಟ ಮಠದ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸಮೀಪದ ಲಿಂಗೈಕ್ಯ ಗಿರಿಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿಯ ಪ್ರಥಮ ವರ್ಷದ ಪುಣ್ಯಾರಾಧನೆ ಮತ್ತು ಎಳೆ ಗೌರಮ್ಮ ದೇವಿ ಹಬ್ಬದ ಪ್ರಯುಕ್ತ ನಡೆದ ಧರ್ಮಸಭೆಯಲ್ಲಿ ಗುರುವಾರ ಅವರು ಮಾತನಾಡಿದರು.
‘ಮಗಳಿಲ್ಲದ ಹಬ್ಬ ಮೆರುಗು ತರುವುದಿಲ್ಲ ಎಂಬುದನ್ನು ಅರಿತಿದ್ದ ಶ್ರೀಗಳು ಮನೆಗೆ ಮಗಳು ಬರುವ ಆಶಯ ಹೊಂದಿರುವ ಈ ಎಳೆಗೌರಿ ಹಬ್ಬವನ್ನು ಆಚರಣೆಗೆ ತಂದರು. ಆ ಮೂಲಕ ಈ ಭಾಗದಲ್ಲಿ ಸಾಮಾಜಿಕ ಕಾರ್ಯಗಳನ್ನು ಮಾಡುತ್ತ, ಹಲವು ಭಕ್ತರ ಸಮಸ್ಯೆಗಳನ್ನು ಬಗೆಹರಿಸುತ್ತಿದ್ದ ಶ್ರೀಗಳು ಭಕ್ತರ ಮಲಿನತೆಯನ್ನು ತೊಳೆದು ಭಕ್ತರನ್ನೇ ಆಸ್ತಿ ಮಾಡಿಕೊಂಡಿದ್ದಾರೆ’ ಎಂದರು.
ನಾಗವಂದ ಹೊರಗಿನ ಮಠದ ಶಿವಯೋಗಿ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಮಠದಲ್ಲಿರುವ ಗುರುಗಳು ತಾಯಿಯಂತೆ. ತಾಯಿ ಹೇಗೆ ಮಗು ಮಲಿನ ಮಾಡಿಕೊಂಡಿದ್ದನ್ನು ತೊಳೆದು ಶುಚಿ ಮಾಡುತ್ತಾರೆಯೋ ಹಾಗೆ ಮಠಾಧೀಶರು ಭಕ್ತರ ಮನಸ್ಸಿನಲ್ಲಿರುವ ಮಲಿನ ಭಾವವನ್ನು ತೊಳೆದು ಸಂಸ್ಕಾರ ನೀಡಿ, ಗುಣವಂತರನ್ನಾಗಿ ಮಾಡುತ್ತಾರೆ’ ಎಂದರು.
ಹೊನ್ನಾಳಿ ಹಿರೇಕಲ್ಮಠದ ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಶ್ರೀಗಳ ಕರ್ತೃ ಗದ್ದುಗೆ ಹಾಗೂ ಶಿಲಾಮಟಂಪವನ್ನು ನಿರ್ಮಾಣ ಮಾಡುವ ಮೂಲಕ ಅವರ ಕನಸನ್ನು ನನಸಾಗಿಸೋಣ’ ಎಂದರು.
ಚನ್ನಗಿರಿ ಹಿರೇಮಠದ ಕೇದಾರನಾಥ ಶಿವಶಾಂತ ಶಿವಾಚಾರ್ಯ ಸ್ವಾಮೀಜಿ, ಗೋವಿನಗೋವಿ ಶಿವಯೋಗಿ ಮಹಾಲಿಂಗ ಶಿವಾಚಾರ್ಯ ಸ್ವಾಮೀಜಿ, ನಂದಿಪುರ ಹಿರೇಮಠದ ನಂದೀಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು.
ಹೊಟ್ಯಾಪುರ ಹಿರೇಮಠದ ಓಂಕಾರ ಸ್ವಾಮಿ ಮರಿದೇವರು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎ.ಆರ್. ಚಂದ್ರಶೇಖರ್, ಬೇಡ ಜಂಗಮ ಸಮಾಜ ಸೇವ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬೈರನಹಳ್ಳಿ ಪಂಚಾಕ್ಷರಯ್ಯ, ಸಾಧು ವೀರಶೈವ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಎ. ಗದ್ದಿಗೇಶ್, ಹೊಟ್ಯಾಪುರ ಸಾಧು ವೀರಶೈವ ಸಮಾಜದ ಹಿರಿಯ ಮುಖಂಡ ವಾಮಣ್ಣ, ಎಂ.ಪಿ. ರಾಜು, ಕಂಚುಗಾರನಹಳ್ಳಿ ಪಟೇಲರು, ಸುಶೀಲಮ್ಮ, ಶ್ರೀನಿವಾಸ್, ಉಮೇಶ್, ಶಿವಕುಮಾರ್, ನೀಲಕಂಠಯ್ಯ, ಗ್ರಾಮದ ಮುಖಂಡರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.